ಮಂಗಳವಾರ, ಜನವರಿ 31, 2023
27 °C

‘ಗಂಧದಗುಡಿ’ಯಲ್ಲಿ ಪುನೀತ ಹೆಜ್ಜೆ; 250ಕ್ಕೂ ಅಧಿಕ ಪರದೆಗಳಲ್ಲಿ ಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗಂಧದಗುಡಿ’ ಚಿತ್ರದ ಮೂಲಕ ಕೊನೆಯ ಬಾರಿಗೆ ಬೆಳ್ಳಿ ಪರದೆಯ ಮೇಲೆ ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಕಾಣಿಸಿ ಕೊಳ್ಳಲಿದ್ದಾರೆ. ನೆಚ್ಚಿನ ನಟನನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳೂ ಸಜ್ಜಾಗಿದ್ದಾರೆ. ‘ಗಂಧದಗುಡಿ’ ಶುಕ್ರವಾರ (ಅ.28) ರಾಜ್ಯದಲ್ಲಿ 250ಕ್ಕೂ ಅಧಿಕ ಪರದೆಗಳಲ್ಲಿ ತೆರೆಕಂಡಿದೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣ ಗೊಂಡಿರುವ ಈ ಡಾಕ್ಯೂಫಿಲ್ಮ್‌ ಅನ್ನು ಅಮೋಘವರ್ಷ ನಿರ್ದೇಶಿಸಿದ್ದಾರೆ.
ಕರುನಾಡಿನ ವನ್ಯಲೋಕ, ಪ್ರಕೃತಿ ಸೌಂದರ್ಯವನ್ನು ಸೆರೆಹಿಡಿದಿರುವ ಈ ಚಿತ್ರದಲ್ಲಿ ‘ಪವರ್‌ಸ್ಟಾರ್‌’ ಎಂಬ ಪಟ್ಟವನ್ನು ಕೆಳಗಿಟ್ಟು ನೈಜವಾಗಿ ಹೆಜ್ಜೆ ಹಾಕಿದ್ದಾರೆ ಪುನೀತ್‌. ಭಾರತವಷ್ಟೇ ಅಲ್ಲದೆ ಅಮೆರಿಕ, ಯುಎಇ, ಸಿಂಗಪುರ ಹೀಗೆ ವಿದೇಶದ ನೂರಾರು ಪರದೆಗಳಲ್ಲೂ ಗಂಧದ ಘಮಲು ಹರಡಿದೆ. ಪುನೀತ್‌ ಅವರ ಅಕಾಲಿಕ ನಿಧನದ ಬಳಿಕ ತೆರೆಕಂಡಿದ್ದ ‘ಜೇಮ್ಸ್‌’ ಹಾಗೂ ‘ಲಕ್ಕಿಮ್ಯಾನ್‌’ ಸಿನಿಮಾವನ್ನು ಅಭಿಮಾನಿಗಳು ಅದ್ಧೂರಿಯಾಗಿ ಬರಮಾಡಿಕೊಂಡಿದ್ದರು. ‘ಜೇಮ್ಸ್‌’ ಬಾಕ್ಸ್‌ ಆಫೀಸ್‌ನಲ್ಲಿ ನೂರು ಕೋಟಿ ಕ್ಲಬ್‌ ಕೂಡ ಸೇರಿತ್ತು. ಇದೇ ವಾತಾವರಣ ‘ಗಂಧದಗುಡಿ’ ಬಿಡುಗಡೆ ವೇಳೆಯೂ ಇದೆ. ಸಾಮಾಜಿಕ ಮಾಧ್ಯಮಗಳಲ್ಲೂ ‘ಗಂಧದಗುಡಿ’ ಟ್ರೆಂಡಿಂಗ್‌ನಲ್ಲಿದೆ.

ಗುರುವಾರ ರಾಜ್ಯದಾದ್ಯಂತ ನಡೆದ ಸಿನಿಮಾದ 30ಕ್ಕೂ ಅಧಿಕ ಪ್ರೀಮಿಯರ್‌ ಪ್ರದರ್ಶನ ಸಂಪೂರ್ಣ ಭರ್ತಿಯಾಗಿತ್ತು. ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೊ ಸುತ್ತಲೂ ಪುನೀತ್‌ ಅವರ 75 ಕಟೌಟ್‌ಗಳನ್ನು ಅಭಿಮಾನಿಗಳು ನಿಲ್ಲಿಸಿದ್ದಾರೆ.

ಗೀತನಮನ: ಪುನೀತ್‌ ಅವರ ಮೊದಲ ಪುಣ್ಯಸ್ಮರಣೆ ಅಂಗವಾಗಿ ಕಂಠೀರವ ಸ್ಟುಡಿಯೊದಲ್ಲಿ 24 ಗಂಟೆ ಸಂಗೀತ ನಮನ ಕಾರ್ಯಕ್ರಮ ನಡೆಯಲಿದೆ. ಅ.28ರಂದು ರಾತ್ರಿ 12ರಿಂದ ಅ.29ರ ರಾತ್ರಿ 12 ಗಂಟೆಯವರೆಗೂ ಈ ಕಾರ್ಯಕ್ರಮ ನಡೆಯಲಿದ್ದು, ನಟರಾದ ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಅವರೂ ಇಲ್ಲಿ ಗೀತನಮನ ಸಲ್ಲಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು