ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಂದು ‘ಪುಟಾಣಿ ಪವರ್’ ಪ್ರದರ್ಶನ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಂದೇಶ
Last Updated 3 ಮೇ 2019, 4:45 IST
ಅಕ್ಷರ ಗಾತ್ರ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವು ಜಾಗೃತಿ ಮೂಡಿಸಿದರೂ, ಇಂದಿಗೂ ಸಂಪೂರ್ಣ ನಿರ್ಮೂಲನೆ ಆಗಿಲ್ಲ. ಈ ಅಮಾನವೀಯ ಪದ್ಧತಿಯಿಂದ ಮುಗ್ಧ ಮಕ್ಕಳನ್ನು ರಕ್ಷಿಸಿ, ಕಸಿಯಲಾಗುತ್ತಿರುವ ಅವರ ಹಕ್ಕುಗಳನ್ನು ಅವರಿಗೆ ಮರಳಿಸಲು ಕೈಜೋಡಿಸುವ ನಿಟ್ಟಿನಲ್ಲಿ ನಿರ್ಮಾಣವಾದ ಮಕ್ಕಳ ಚಿತ್ರ ‘ಪುಟಾಣಿ ಪವರ್’.

ಎಸ್‌.ವಿ. ಕ್ರಿಯೇಶನ್‌ ಲಾಂಛನದ ಅಡಿಯಲ್ಲಿ ನಿರ್ಮಾಣಗೊಂಡ ಈ ಚಿತ್ರವನ್ನು ಎಂ. ಗಜೇಂದ್ರ ನಿರ್ದೇಶಿಸಿದ್ದಾರೆ. ಸಾಮಾಜಿಕ ಕಳಕಳಿಯ, ಅದರಲ್ಲಿಯೂ ಕಡಿಮೆ ವೀಕ್ಷಕ ವರ್ಗ ಹೊಂದಿರುವ ಮಕ್ಕಳ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿರುವುದು ವಿಶೇಷ.

‘ಎಷ್ಟೇ ಸಂದೇಶಗಳನ್ನು ಎಲ್ಲಾ ಮಾಧ್ಯಮಗಳ ಮೂಲಕ ನೀಡಿದರೂ ಜಗತ್ತಿನಲ್ಲಿ ಇನ್ನೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿದೆ. ನಮ್ಮ ದೇಶದಲ್ಲಿಯೂ ಹೆಚ್ಚಿದೆ. ಬಾಲಕಾರ್ಮಿಕ ಮಕ್ಕಳ ಜೆತೆ ವ್ಯವಹಾರ ನಡೆಸುವುದನ್ನು ಬಿಟ್ಟು ಅವರನ್ನು ಪ್ರಶ್ನೆ ಮಾಡುವ ಸಾಮಾನ್ಯ ಕಾಳಜಿಯನ್ನು ಜನರು ಇಟ್ಟುಕೊಂಡರೆ ನಿಧಾನವಾಗಿ ಇಂತಹ ಸಮಸ್ಯೆಯನ್ನು ನಿವಾರಿಸಬಹುದು. ನಮ್ಮ ದೇಶ ಬಾಲಕಾರ್ಮಿಕ ಮುಕ್ತ ದೇಶ ಆಗಬೇಕು ಎಂಬ ನಿಟ್ಟಿನಲ್ಲಿ, ಮಕ್ಕಳ ಮೂಲಕವೇ ಸಂದೇಶ ಒದಗಿಸಲು ಈ ಚಿತ್ರಕ್ಕೆ ಕೈ ಹಾಕಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಗಜೇಂದ್ರ.

‘ಬಾಲಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುವ ಅಂಗಡಿ, ಹೋಟೆಲ್‌ ಮಾಲೀಕರು, ಹೆಚ್ಚು ಜನರ ಗಮನಕ್ಕೆ ಬರದಂತೆ ಎಚ್ಚರ ವಹಿಸುತ್ತಾರೆ. ಬೆಂಗಳೂರಿನ ಹಲವು ಕಡೆಗಳಲ್ಲಿ ಇಂದಿಗೂ ಬಾಲಕಾರ್ಮಿಕರು ದುಡಿಯುತ್ತಿರುವುದನ್ನು ಕಾಣಬಹುದು. ಜಗತ್ತಿನಾದ್ಯಂತ ಇಂದು ಸುಮಾರು 15ರಿಂದ 20 ಕೋಟಿ ಬಾಲಕಾರ್ಮಿಕರಿದ್ದಾರೆ. ವಿಶ್ವಸಂಸ್ಥೆಯ ನೇತೃತ್ವದಲ್ಲಿ 1989ರಲ್ಲಿ ಸುಮಾರು 61 ರಾಷ್ಟ್ರಗಳು ನಮ್ಮ ದೇಶದಲ್ಲಿರುವ ಮಕ್ಕಳನ್ನು ನಾವು ರಕ್ಷಿಸುತ್ತೇವೆ ಎಂದು ಒಂದು ಒಡಂಬಡಿಕೆ ಮಾಡಿದ್ದು, ಈ ಒಡಂಬಡಿಕೆಗೆ ಭಾರತ 1992ರ ಡಿಸೆಂಬರ್‌ 11ರಂದು ಸಹಿ ಹಾಕಿದೆ. ಬಳಿಕ 175 ರಾಷ್ಟ್ರಗಳು ಸಹಿ ಹಾಕಿದ್ದು, ಇಷ್ಟು ದೊಡ್ಡ ಪ್ರಮಾಣದ ಒಡಂಬಡಿಕೆ ಇಲ್ಲಿಯವರೆಗೆ ಬೇರೆ ಯಾವುದರಲ್ಲಿಯೂ ಆಗಿಲ್ಲ’ ಎನ್ನುವುದು ನಿರ್ದೇಶಕರ ಅಭಿಪ್ರಾಯ.

‘ಮಜಾ ಭಾರತ ಖ್ಯಾತಿಯ ಬಾಲನಟಿ, ನಿರೂಪಕಿ ಆರಾಧನಾ ಭಟ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಹಿರಿಯ ಸಾಹಿತಿ, ಚಿತ್ರಗೀತೆ ರಚನೆಕಾರ ದೊಡ್ಡರಂಗೇಗೌಡ ಚಿತ್ರದಲ್ಲಿ ನಟಿಸಿದ್ದು, ಹೆಡ್‌ ಮಾಸ್ಟರ್‌ ಪಾತ್ರವನ್ನು ನಿಭಾಯಿಸಿದ್ದಾರೆ. ಉಳಿದಂತೆ ಐಶ್ವರ್ಯಾ, ಪ್ರೀತಿ ರಾಜ್, ಅಕ್ಷಯ, ಶ್ರೀ ರಕ್ಷಾ, ಮನೋಜ್, ಮಹೇಂದ್ರ ಮನ್ನೋತ್, ಬದ್ರಿ, ಹರಿಣಿ ಶ್ರೀಕಾಂತ್ ಚಿತ್ರದಲ್ಲಿದ್ದಾರೆ. ಎಲ್ಲರೂ ಬಹುತೇಕ ಬೆಂಗಳೂರಿನ ಪ್ರತಿಭೆಗಳೇ ಇದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಅವರು.

ನಿರ್ಮಾಪಕ ರಾಜಶೇಖರ್ ಎಂ. ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜೀವ ಅಂತೋನಿ ಅವರ ಛಾಯಾಗ್ರಹಣ ಇದೆ. 5 ಹಾಡುಗಳಿದ್ದು, ಎಲ್ಲ ಹಾಡುಗಳೂ ಈಗಾಗಲೇ ಯೂಟ್ಯೂಬ್‌ನಲ್ಲಿ ಜನಪ್ರಿಯವಾಗಿವೆ. ಸುನೀಲ್ ಹರದೂರು, ರಂಗನಾಥ್ ಎನ್. ಸಾಹಿತ್ಯ ರಚಿಸಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ಶ್ರೀ ಜವಳಿ ಸಂಕಲನ ಮಾಡಿದ್ದಾರೆ. ಸಂಪೂರ್ಣ ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಚಿತ್ರವು ಇದೇ 24ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಆರಾಧನಾ ಭಟ್ ಆಕರ್ಷಣೆ:

ತನ್ನ ಅಚ್ಚ ಕನ್ನಡದ ನಿರೂಪಣೆ, ವಾಕ್ಚಾತುರ್ಯ ಹಾಗೂ ಅಭಿನಯದ ಮೂಲಕ ಎಲ್ಲರ ಮನೆಮಾತಾಗಿರುವ ಬಾಲನಟಿ ಆರಾಧನಾ ಭಟ್ ನಿಡ್ಡೋಡಿ ಈ ಚಿತ್ರದ ನಾಯಕಿ.

ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಚಿತ್ರದ ನಾಯಕಿ ನಡೆಸುವ ಪ್ರಯತ್ನಗಳೇ ಚಿತ್ರದುದ್ದಕ್ಕೂ ಮುಖ್ಯವಾಗುತ್ತದೆ. ಇದು ಆರಾಧನಾ ಅವರ 9ನೇ ಚಿತ್ರ ಆಗಿದ್ದು, ಈ ಚಿತ್ರದ ಮೂಲಕ ಸಿನಿರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಕನಸು ಅವರದ್ದು. ನೃತ್ಯ, ನಿರೂಪಣೆ, ಭರತನಾಟ್ಯ, ಅಭಿನಯ, ಹಾಡುಗಾರಿಕೆ ಎಲ್ಲ ಕಲೆಗಳನ್ನೂ ತನಗೆ ಬೇಕಾದಂತೆ ಒಲಿಸಿಕೊಂಡಿರುವ ಈ ಕಲಾಕುವರಿಗೆ ಈಗಲೇ ರಾಜ್ಯದ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳಿದ್ದಾರೆ.

ನಿರೂಪಣೆ, ನಗೆ ಹಬ್ಬ ಎಂಬ ಕಾರ್ಯಕ್ರಮದ ಮೂಲಕ ಹೆಚ್ಚು ಜನರನ್ನು ತಲುಪುವ ಆರಾಧನಾ, ‘ಆರದಿರಲಿ ಬದುಕು’ ಎಂಬ ಸಹಾಯ ಹಸ್ತದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಾಮಾಜಿಕ ಕಾಳಜಿಯ ಹೊಣೆಯನ್ನು ತನಗೆ ತಾನೇ ಹೊರಿಸಿಕೊಂಡಿದ್ದು ಮಹತ್ವದ ಸಂಗತಿ. ಪ್ರತಿ ತಿಂಗಳ ಕೊನೆಯ ಭಾನುವಾರ ಆರಾಧನಾ ಕಟ್ಟಿದ ಈ ತಂಡದ ವತಿಯಿಂದ ಸಾಧ್ಯವಾದಷ್ಟು ಹಣ ಸಂಗ್ರಹಿಸಿ ಅಶಕ್ತರಿಗೆ, ಅನಾರೋಗ್ಯಪೀಡಿತರಿಗೆ ನೀಡಲಾಗುತ್ತದೆ. ಸುಮಾರು ₹25 ಸಾವಿರದವರೆಗೂ ಹಣ ನೀಡಿರುವ ಉದಾಹರಣೆ ಆರಾಧನಾ ಅವರ ಪಟ್ಟಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT