ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಬಿಗ್‌ ಬಜೆಟ್‌ ಸಿನಿಮಾ ಸದ್ಯಕ್ಕಿಲ್ಲ‌ ರಿಲೀಸ್,ಕಾರಣ ಗೊತ್ತೆ?

Last Updated 18 ಅಕ್ಟೋಬರ್ 2020, 6:19 IST
ಅಕ್ಷರ ಗಾತ್ರ

ಚಿತ್ರಮಂದಿರಗಳ ಬಾಗಿಲು ತೆರೆದರೂ ಸ್ಟಾರ್‌ ನಟರ ಬಿಗ್‌ ಬಜೆಟ್‌ ಸಿನಿಮಾಗಳ ಬಿಡುಗಡೆಗೆ ನಿರ್ಮಾಪಕರು ಯಾಕೆ ಮುಂದೆ ಬರುತ್ತಿಲ್ಲ ಗೊತ್ತಾ? ಕೋವಿಡ್‌ ಕಾರಣದಿಂದ ಚಿತ್ರೋದ್ಯಮವನ್ನು ಆವರಿಸಿರುವ ಅನಿಶ್ಚಿತ ಪರಿಸ್ಥಿತಿಯೇ ಇದಕ್ಕೆ ಮೂಲಕ ಕಾರಣ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದರ ಜತೆಗೆ ಮತ್ತೊಂದು ಪ್ರಮುಖ ಕಾರಣವೂ ಇದೆ; ಅದು ಬಿಗ್‌ ಬಜೆಟ್‌ ಚಿತ್ರಗಳು ಒಟಿಟಿ, ಟಿ.ವಿ ಹಾಗೂ ಡಬ್ಬಿಂಗ್‌ ರೈಟ್ಸ್‌ಗಳಿಗೆ ಭಾರೀ ಮೊತ್ತಕ್ಕೆ ಮಾರಾಟವಾಗಿರುವುದು!

ಕೋವಿಡ್‌ ಲಾಕ್‌ಡೌನ್‌ನಿಂದ ಸ್ಥಗಿತಗೊಂಡಿದ್ದ ಕನ್ನಡ ಚಿತ್ರೋದ್ಯಮದ ಚಟುವಟಿಕೆಗಳನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳು ಆರಂಭವಾಗಿವೆ. ಇದರ ಭಾಗವಾಗಿ ಮೊದಲಿಗೆ ಸುರಕ್ಷತಾ ಕ್ರಮಗಳೊಂದಿಗೆ ಚಿತ್ರೀಕರಣ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಆರಂಭಿಸಲು ಅನ್‌ಲಾಕ್‌ 1.0 ಅವಧಿಯಲ್ಲೇ ಅನುಮತಿ ನೀಡಲಾಗಿತ್ತು. ಈಗ ಅನ್‌ಲಾಕ್‌ 5.0 ಅವಧಿಯಲ್ಲಿ ಚಿತ್ರಮಂದಿರಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕುಳಿತಿರುವ ಪ್ರೇಕ್ಷಕರನ್ನು ಸಿನಿಮಾ ಮಂದಿರದತ್ತ ಕರೆತರಲು ಲಾಕ್‌ಡೌನ್‌ ವೇಳೆ ಪ್ರದರ್ಶನ ಸ್ಥಗಿತಗೊಂಡು ನಷ್ಟ ಅನುಭವಿಸಿದ್ದ ಚಿತ್ರಗಳನ್ನು ಮರು ಬಿಡುಗಡೆ ಮಾಡಲಾಗಿದೆ.

‘ಶಿವಾರ್ಜುನ’, ‘ಶಿವಾಜಿ ಸುರತ್ಕಲ್‌‘, ‘ಲವ್‌ ಮಾಕ್ಟೇಲ್‌‘, ‘ಕಾಣದಂತೆ ಮಾಯವಾದನು‘, ‘ಮಾಯಾ ಬಜಾರ್‌‘, ‘5 ಅಡಿ 7 ಅಂಗುಲ‘, ‘ಥರ್ಡ್‌ ಕ್ಲಾಸ್‌’ ಚಿತ್ರಗಳು ಮರು ಬಿಡುಗಡೆಯಾಗಿವೆ. ಹೊಸದೊಂದು ಹಾಡು ಸೇರಿಸಿರುವ ಮತ್ತು ಕ್ಲೈಮ್ಯಾಕ್ಸ್‌ ಬದಲಿಸಿರುವ ‘ದಿಯಾ’ ಚಿತ್ರವನ್ನು ಇದೇ 23ರಂದು ಮರುಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಸುರಕ್ಷತೆ ಮತ್ತು ಪರಸ್ಪರ ಅಂತರಕ್ಕಾಗಿ ಚಿತ್ರಮಂದಿರಗಳಲ್ಲಿ ಸದ್ಯ ಶೇ 50ರಷ್ಟು ಆಸನಗಳಿಗೆ ಅವಕಾಶ ನೀಡಿದ್ದರೂ ಅಷ್ಟೂ ಆಸನಗಳು ಭರ್ತಿಯಾದ ಪ್ರದರ್ಶನಗಳು ಯಾವ ಚಿತ್ರಮಂದಿರದಲ್ಲೂ ಕಾಣಿಸುತ್ತಿಲ್ಲ. ಒಮ್ಮೆ ಬಿಡುಗಡೆಯಾದ ಚಿತ್ರಗಳಾಗಿದ್ದರೂ, ಒಟಿಟಿ ಮತ್ತು ಟಿ.ವಿ ವಾಹಿನಿಗಳಲ್ಲಿ ಪ್ರಸಾರವಾಗಿದ್ದರೂ ಈ ಚಿತ್ರಗಳನ್ನು ವೀಕ್ಷಿಸಲು ಕೆಲವು ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿರುವುದು ನಿರ್ಮಾಪಕರು, ವಿತರಕರು, ಪ್ರದರ್ಶಕರಲ್ಲಿ ಒಂದಿಷ್ಟು ಆಶಾಭಾವನೆ ಮೂಡಿಸಿರುವುದಂತೂ ನಿಜ.

ಚಿತ್ರಮಂದಿರದಲ್ಲಿ ಒಮ್ಮೆ ಬಿಡುಗಡೆಯಾದ ಚಿತ್ರಗಳನ್ನೇ ಮತ್ತೆ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆ ಎನ್ನುವ ನಿರೀಕ್ಷೆ ಚಿತ್ರವಿತರಕರು, ಚಿತ್ರಮಂದಿರಗಳ ಮಾಲೀಕರು, ಪ್ರದರ್ಶಕರು, ನಿರ್ಮಾಪಕರಿಗೂ ಅಷ್ಟಾಗಿ ಇರಲಿಲ್ಲ. ‘ಪ್ರೇಕ್ಷಕರು ಮತ್ತೆ ಚಿತ್ರಮಂದಿರದತ್ತ ಬರುವಂತೆ ಮಾಡಲು ಚಿತ್ರಗಳ ಮರುಬಿಡುಗಡೆಯ ಪ್ರಯೋಗ ನಡೆಸಿ ನೋಡೋಣ ಎನ್ನುವ ಪ್ರಯತ್ನ ಆರಂಭಿಸಿದ್ದೆವು. ಸಂಪೂರ್ಣ ಚಟುವಟಿಕೆಯೇ ಸ್ಥಗಿತಗೊಂಡ ಅವಧಿಯಲ್ಲಿ ಈಗ ಒಂದಿಷ್ಟಾದರೂ ಚುಟುವಟಿಕೆ ಶುರುವಾಗಿರುವುದು ಕೊಂಚ ನೆಮ್ಮದಿ ನೀಡುವಂತಿದೆ. ಎರಡು ದಿನಗಳಿಂದ ‘ಶಿವಾರ್ಜುನ’ ಚಿತ್ರದ ಪ್ರದರ್ಶನ ಚೆನ್ನಾಗಿಯೇ ನಡೆಯುತ್ತಿದೆ. ಆದರೆ, ಜನರಲ್ಲಿ ಕೊರೊನಾ ಭಯ ಸಂಪೂರ್ಣ ನಿವಾರಣೆಯಾಗಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಸ್ಟಾರ್‌ ನಟರ ಸಿನಿಮಾಗಳು ಬಿಡುಗಡೆಯಾಗುವವರೆಗೂ ಪ್ರೇಕ್ಷಕರು ಮೊದಲಿನಂತೆ ಚಿತ್ರಮಂದಿರಕ್ಕೆ ಲಗ್ಗೆ ಇಡುವುದು ಅನುಮಾನ’ ಎನ್ನುವುದು ‘ಶಿವಾರ್ಜುನ’ ಚಿತ್ರದ ನಿರ್ಮಾಪಕ ಶಿವಾರ್ಜುನ ಅವರ ಅನಿಸಿಕೆ.

ಬಿಗ್‌ ಬಜೆಟ್‌ ಸಿನಿಮಾಗಳು ಸದ್ಯಕ್ಕಿಲ್ಲ ಬಿಡುಗಡೆ

ಯಶ್‌ ನಟನೆಯ ‘ಕೆಜಿಎಫ್‌ ಚಾಪ್ಟರ್‌ 2’, ಪುನೀತ್‌ ನಟನೆಯ ‘ಯುವರತ್ನ’, ದರ್ಶನ್‌ ನಟನೆಯ ‘ರಾಬರ್ಟ್‌’, ಸುದೀಪ್‌ ನಟನೆಯ ‘ಕೋಟಿಗೊಬ್ಬ 3’, ದುನಿಯಾ ವಿಜಯ್‌ ನಟನೆಯ ‘ಸಲಗ’,ಧ್ರುವ ಸರ್ಜಾ ನಟನೆಯ ‘ಪೊಗರು’ ಇಂತಹ ಬಿಗ್‌ ಬಜೆಟ್‌ ಚಿತ್ರಗಳೆಲ್ಲವೂ ಬಿಡುಗಡೆಯ ಹೊಸ್ತಿಲಿನಲ್ಲಿವೆ. ಅದರಲ್ಲೂ ‘ರಾಬರ್ಟ್‌’, ‘ಪೊಗರು’, ‘ಕೋಟಿಗೊಬ್ಬ 3’ ಸಿನಿಮಾಗಳಂತೂ ಯಾವ ದಿನಬೇಕಾದರೂ ಬಿಡುಗಡೆ ಮಾಡಬಹುದು ಎನ್ನುವ ಹಂತದಲ್ಲಿವೆ. ಆದರೆ, ಈ ಸಿನಿಮಾಗಳು ಈ ವರ್ಷ ಅಂದರೆ ಡಿಸೆಂಬರ್‌ನ ಕ್ರಿಸ್‌ಮಸ್‌ ಅಥವಾ ಜನವರಿಯ ಸಂಕ್ರಾಂತಿಯವರೆಗೆ ಬಿಡುಗಡೆಯಾಗುವುದು ಅನುಮಾನ.

ಈ ಮೊದಲೇ ದೊಡ್ಡ ಬಜೆಟ್‌ ಸಿನಿಮಾಗಳು ಒಟಿಟಿ, ಟಿ.ವಿ ಹಾಗೂ ಡಬ್ಬಿಂಗ್‌ ರೈಟ್ಸ್‌ಗಳಿಗೆ ಭಾರೀ ಮೊತ್ತಕ್ಕೆ ಮಾರಾಟವಾಗಿವೆ. ಹಾಗಂತ ಈ ಮೊತ್ತದಿಂದಲೇ ಚಿತ್ರಕ್ಕೆ ಹೂಡಿಕೆ ಮಾಡಿರುವ ಬಂಡವಾಳ ನಿರ್ಮಾಪಕರಿಗೆ ವಾಪಸ್‌ ಸಿಗುವುದಿಲ್ಲ. ಇವರು ಚಿತ್ರದ ಮೇಲೆ ಹಾಕಿರುವ ಬಹುಪಾಲು ಭಾಗ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿನ ಕಲೆಕ್ಷನ್‌ ಮೂಲಕವೇ ದಕ್ಕಬೇಕು. ಸ್ಟಾರ್‌ ನಟರನ್ನು ಹಾಕಿಕೊಂಡು ಬಹುಕೋಟಿಗಳ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಿರುವ ಚಿತ್ರಗಳೆಲ್ಲವೂ ಕನಿಷ್ಠ 50 ದಿನಗಳು, ಶತದಿನೋತ್ಸವ ಕಾಣಲಿವೆ ಎನ್ನುವ ನಿರೀಕ್ಷೆ ನಿರ್ಮಾಪಕರದ್ದಾಗಿರುತ್ತದೆ. ಬಿಗ್‌ ಬಜೆಟ್‌ಗಳ ಚಿತ್ರಗಳ ಬಿಡುಗಡೆಯನ್ನು ಕೆಲವರು 2021ಕ್ಕೆ ಮುಂದೂಡಿರುವುದು ಚಿತ್ರೋದ್ಯಮದ ಸದ್ಯದ ಅನಿಶ್ಚಿತತೆಯ ಕಾರಣಕ್ಕೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

ಈಗಿನ ಅನಿಶ್ಚಿತ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿ ಎರಡು ವಾರಗಳೂ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಾಣದೆ, ಚಿತ್ರಮಂದಿರಗಳಿಂದ ಎತ್ತಂಗಡಿಯಾದರೆ, ಮರು ಬಿಡುಗಡೆ ಮಾಡಲೂ ಆಗದ ಸ್ಥಿತಿ. ಜತೆಗೆ ಆ ಚಿತ್ರಗಳು ಮೊದಲೇ ಕರಾರು ಮಾಡಿಕೊಂಡಂತೆ ಒಟಿಟಿ ಮತ್ತು ಟಿ.ವಿ.ಗಳಲ್ಲಿ ಪ್ರಸಾರ ಕೂಡ ಆಗಿಬಿಡುತ್ತವೆ ಎನ್ನುವ ಆತಂಕ ಬಿಗ್‌ ಬಜೆಟ್‌ ಸಿನಿಮಾಗಳ ನಿರ್ಮಾಪಕರದ್ದು. ‘ಇದು ವಾಸ್ತವ ಕೂಡ ಹೌದು’ ಎನ್ನುವ ಮಾತು ಸೇರಿಸುತ್ತಾರೆ ಜಯಣ್ಣ ಕಂಬೈನ್ಸ್‌ ಮುಖ್ಯಸ್ಥ, ಚಿತ್ರ ನಿರ್ಮಾಪಕ ಹಾಗೂ ಪ್ರದರ್ಶಕ ಜಯಣ್ಣ.

ಚಿತ್ರಮಂದಿರಗಳು ಬಾಗಿಲು ತೆರೆದರೂ ಶೇ 50 ಆಸನಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ದೊಡ್ಡ ಮೊತ್ತವನ್ನು ಹೂಡಿ ಸಿನಿಮಾ ಮಾಡಿರುವವರಿಗೆ ಚಿತ್ರಗಳನ್ನು ಬಿಡುಗಡೆ ಮಾಡಲು ಇದು ಕೂಡ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ. ಇನ್ನು ಆದಾಯದಲ್ಲಿ ಪರ್ಸಂಟೇಜ್‌ ಹಂಚಿಕೆ ವ್ಯವಸ್ಥೆ ಇರುವಾಗ ಶೇ 50 ಆಸನಗಳ ಅವಕಾಶದಲ್ಲಿ ಆದಾಯ ಗಳಿಸುವುದು ಹೇಗೆ? ಮತ್ತು ಕೊರೊನಾ ಆತಂಕದಲ್ಲಿ ಜನರು ಧೈರ್ಯವಾಗಿ ಚಿತ್ರಮಂದಿರಗಳತ್ತ ಬಾರದ ಪರಿಸ್ಥಿತಿ ಇರುವಾಗ ಯಾವ ಧೈರ್ಯದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಹೇಳಿ ಎನ್ನುವ ಪ್ರಶ್ನೆ ಮುಂದಿಡುವ ಕೆಲವು ನಿರ್ಮಾಪಕರು, ಸಿನಿಮಾ ಬಿಡುಗಡೆಗೆ ಒಟಿಟಿಯತ್ತ ಮುಖ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬೇಕಿದ್ದ ‘ಭೀಮಸೇನಾ ನಳಮಹಾರಾಜ’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಪ್ರಕಟಿಸಿದ್ದಾರೆ.

ಅ.15ರಿಂದಲೇ ಮಲ್ಟಿಪ್ಲೆಕ್ಸ್‌ ಮತ್ತು ಚಿತ್ರಮಂದಿರಗಳು ಬಾಗಿಲು ತೆರೆದಿದ್ದರೂ ನಿರೀಕ್ಷೆಯಂತೆ ಪ್ರೇಕ್ಷಕರು ಚಿತ್ರಮಂದಿರಗಳತ್ತ ಬಂದಿಲ್ಲ. ಆರಂಭದಲ್ಲಿ ಕೊರೊನಾ ಭಯ ನಿವಾರಣೆಯಾಗಬೇಕಿದೆ, ಜತೆಗೆ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆಯ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕಿದೆ. ಇದರ ಜತೆಯಲ್ಲೇ ಸ್ಟಾರ್‌ ನಟರು, ನಿರ್ಮಾಪಕರು, ನಿರ್ದೇಶಕರು ಹೀಗೆ ಚಿತ್ರರಂಗದವರೆಲ್ಲರೂ ಸೇರಿ ಪ್ರೇಕ್ಷಕರನ್ನು ಪುನಃ ಚಿತ್ರಮಂದಿರದತ್ತ ಸೆಳೆದು ತರುವ ಕೆಲಸ ಮಾಡಬೇಕಿದೆ. ಇಷ್ಟಾದರೂ ಡಿಸೆಂಬರ್‌ ಅಥವಾ ಜನವರಿಯವರೆಗೂ ಯಾವುದೇ ದೊಡ್ಡ ಸಿನಿಮಾಗಳು ಬಿಡುಗಡೆಯಾಗುವುದು ಅನುಮಾನ ಎನ್ನುತ್ತಾರೆ ‘ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT