ಶನಿವಾರ, ಡಿಸೆಂಬರ್ 14, 2019
24 °C

ನಾನು ಕನ್ನಡ ಚಿತ್ರರಂಗ ತೊರೆಯುವುದಿಲ್ಲ: ರಾಧಿಕಾ ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ನಾನು ಕನ್ನಡ ಚಿತ್ರರಂಗದಲ್ಲಿಯೇ ಮುಂದುವರಿಯಲು ನಿರ್ಧರಿಸಿದ್ದೇನೆ. ನನ್ನ ಅಭಿಮಾನಿಗಳ ಪ್ರೀತಿಯೇ ಇದಕ್ಕೆ ಕಾರಣ’ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ನವರಸನ್‌ ನಿರ್ದೇಶನದ ‘ದಮಯಂತಿ’ ಚಿತ್ರದ ಆಡಿಯೊ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ವೃತ್ತಿಬದುಕಿನ ಎರಡನೇ ಇನ್ನಿಂಗ್ಸ್‌ನಲ್ಲಿ ‘ದಮಯಂತಿ’ ಚಿತ್ರ ವಿಶೇಷವಾದುದು. ಈ ಸಿನಿಮಾದ ಕಥೆ, ಪಾತ್ರದ ಬಗ್ಗೆ ಹೇಳಿದಾಗ ನನಗೆ ನಿಜಕ್ಕೂ ಭಯವಾಯಿತು. ಇಂತಹ ಪಾತ್ರಕ್ಕೆ ನಾನು ಜೀವ ತುಂಬಲು ಸಾಧ್ಯವೇ ಎಂಬ ಅಳುಕು ಕಾಡುತ್ತಿತ್ತು. ಆದರೆ, ನನ್ನ ಮನಸ್ಸಿನ ಮೂಲೆಯಲ್ಲಿ ಇಂತಹ ಪಾತ್ರ ಮಾಡಬೇಕೆಂಬ ಆಸೆಯೂ ಇತ್ತು. ಅದು ಈ ದಮಯಂತಿಯ ಮೂಲಕ ಈಡೇರಿಸಿದೆ’ ಎಂದು ಖುಷಿ ಹಂಚಿಕೊಂಡರು.

‘ಚಿತ್ರದ ಹಾಡುಗಳು ಚೆನ್ನಾಗಿ ಮೂಡಿಬಂದಿವೆ. ಇದಕ್ಕೆ ಚಿತ್ರತಂಡ ಪರಿಶ್ರಮವೇ ಕಾರಣ. ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಅವರು ಆಡಿಯೊ ಬಿಡುಗಡೆ ಮಾಡಿರುವುದು ಖುಷಿ ನೀಡಿದೆ. ಆ ಮೂಲಕ ‘ಡಿಬಾಸ್‌’ ನನ್ನ ಹುಟ್ಟುಹಬ್ಬಕ್ಕೆ ದೊಡ್ಡ ಗಿಫ್ಟ್‌ ನೀಡಿದ್ದಾರೆ. ನಾನು ಅವರೊಟ್ಟಿಗೆ ‘ಅನಾಥರು’ ಮತ್ತು ’ಮಂಡ್ಯ’ ಚಿತ್ರದಲ್ಲಿ ನಟಿಸಿದ್ದೇನೆ. ಹಲವು ವರ್ಷದ ಬಳಿಕ ಅವರೊಟ್ಟಿಗೆ ವೇದಿಕೆ ಹಂಚಿಕೊಂಡಿರುವುದು ಖುಷಿ ನೀಡಿದೆ’ ಎಂದರು.

ನನಗಿಂತಲೂ ರಾಧಿಕಾ ಸೀನಿಯರ್‌ ಎಂದ ದರ್ಶನ್‌

‘ರಾಧಿಕಾ ಅವರು ನನ್ನ ಸೀನಿಯರ್‌. ನನಗಿಂತಲೂ ಮೊದಲೇ ಅವರು ಬೆಳ್ಳಿತೆರೆ ಪ್ರವೇಶಿಸಿದ್ದಾರೆ. ಅವರು ‘ನೀಲ ಮೇಘ ಶ್ಯಾಮ’ ಚಿತ್ರ ಮಾಡಿದ ಬಳಿಕ ನಾನು ‘ಮೆಜೆಸ್ಟಿಕ್‌’ ಸಿನಿಮಾ ಮಾಡಿದೆ ಎಂದು ಹೇಳಿದರು ದರ್ಶನ್‌.

‘ದಮಯಂತಿ’ ಚಿತ್ರದ ಟ್ರೇಲರ್‌ ನೋಡಿದೆ. ಇಂತಹ ಪಾತ್ರ ಮಾಡಲು ಗಟ್ಟಿಯಾದ ಪ್ರತಿಭೆ ಇರಬೇಕು. ಅವರೊಟ್ಟಿಗೆ ಚಿತ್ರರಂಗ ಪ್ರವೇಶಿಸಿದ ಹಲವು ನಟಿಯರು ಈಗ ನಟಿಸುತ್ತಿಲ್ಲ. ಆದರೆ, ರಾಧಿಕಾ ಅವರು ಇಂದಿಗೂ ಚಿತ್ರರಂಗದಲ್ಲಿ ಇದ್ದಾರೆ ಎಂದರೆ ಅವರಲ್ಲಿನ ಪ್ರತಿಭೆಯೇ ಇದಕ್ಕೆ ಸಾಕ್ಷಿ’ ಎಂದು ಹೊಗಳಿದರು.

ಪ್ರತಿಕ್ರಿಯಿಸಿ (+)