ಮಂಗಳವಾರ, ಸೆಪ್ಟೆಂಬರ್ 22, 2020
22 °C

ರಘು ಆಲ್ಬಂನಲ್ಲಿ ಬೇಂದ್ರೆ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಎನರ್ಜಿ’ ತುಂಬಿರುವ ಹಾಡುಗಳಿಗೆ ಪ್ರಸಿದ್ಧರು ರಘು ದೀಕ್ಷಿತ್. ಅವರ ಹಾಡುಗಳನ್ನು ಕೇಳುತ್ತಿದ್ದರೆ ಸಂಗೀತ ಪ್ರೇಮಿಗಳಿಗೆ ಹುಚ್ಚೆದ್ದು ಕುಣಿಯಬೇಕೆಂಬ ಮನಸ್ಸು ಬರುವುದು ಖಂಡಿತ. ಅವರು ಈಗ ಬೇಂದ್ರೆಯವರ ಪದ್ಯವೊಂದನ್ನು ಜೋಶ್‌ ಭರಿತವಾಗಿ ಹಾಡಲು ಮುಂದಾಗಿದ್ದಾರೆ. ಅದು ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದ್ದಾರೆ.

***

‘ನಿನ್ನ ಪೂಜೆಗೆ ಬಂದೆ ಮಾದೇಶ್ವರ’ ಎಂದು ಭಕ್ತಿಯ ಹಾಡನ್ನು, ಜೋಶ್‌ ಮೂಡಿಸುವ ಹಾಡನ್ನಾಗಿ ಪರಿವರ್ತಿಸಿದ ಗಾಯಕ ರಘು ದೀಕ್ಷಿತ್‌ ಹೊಸ ಆಲ್ಬಂ ತರಲು ಸಿದ್ಧತೆ ನಡೆಸಿದ್ದಾರೆ. ಇದು ಸೆಪ್ಟೆಂಬರ್‌ ವೇಳೆಗೆ ಸಂಗೀತ ಪ್ರಿಯರಿಗೆ ಲಭ್ಯವಾಗುವ ನಿರೀಕ್ಷೆ ಇದೆ.

ಇದನ್ನು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಹೊರತರಲು ರಘು ಕೆಲಸ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಆಲ್ಬಂ ಬಿಡುಗಡೆ ಆಗಲಿದೆ. ‘ಹತ್ತು ಹಾಡುಗಳು ಇದರಲ್ಲಿ ಇರಲಿವೆ. ಆಲ್ಬಂಗೆ ಇನ್ನೂ ಹೆಸರು ಇರಿಸಿಲ್ಲ’ ಎಂದು ‘ಸಿನಿಮಾ ಪುರವಣಿ’ ಜೊತೆ ಮಾತಿಗೆ ಸಿಕ್ಕಿದ್ದ ರಘು ತಿಳಿಸಿದರು.

ಈ ಆಲ್ಬಂನಲ್ಲಿ ದ.ರಾ. ಬೇಂದ್ರೆ ಅವರ ಪದ್ಯ, ಶಿಶುನಾಳ ಷರೀಫರ ಗೀತೆ ಕೂಡ ಇರಲಿದೆಯಂತೆ. ‘ಆದರೆ, ಗೀತೆಯ ಸಾಹಿತ್ಯವನ್ನು ಯಥಾನುವಾದ ಮಾಡುವ ಕೆಲಸಕ್ಕೆ ಹೋಗಿಲ್ಲ. ಗೀತೆಗಳ ಭಾವವನ್ನು ಅನುವಾದದ ಮೂಲಕ ಬೇರೆ ಭಾಷೆಗಳಿಗೆ ತಲುಪಿಸುವ ಕೆಲಸ ಇದು. ಈ ಆಲ್ಬಂ ಮೂಲಕ ಬೇರೆ ಬೇರೆ ಭಾಷೆಗಳಿಗೆ ಪ್ರವೇಶ ಪಡೆಯುವ ಬಯಕೆ ನನ್ನದು’ ಎಂದರು ರಘು. ‘ಬೇಂದ್ರೆ ಅವರ ಸಾಲುಗಳನ್ನು ಬೇರೆ ಭಾಷೆಗಳಿಗೆ ಅನುವಾದ ಮಾಡುವುದು ಸುಲಭದ ಮಾತೇ’ ಎಂಬ ಪ್ರಶ್ನೆ ಇಟ್ಟು, ಮುಗುಳ್ನಕ್ಕರು.

ಈ ಆಲ್ಬಂನ ಒಂದು ಹಾಡಿನಲ್ಲಿ, ಕರ್ನಾಟಕದ ಎಲ್ಲ ಭಾಷೆಗಳು ಇರಲಿವೆ. ‘ಕೊಡವ, ತುಳು, ಕೊಂಕಣಿ ಮತ್ತು ಕನ್ನಡದ ಮಿಶ್ರಣ ಇರುವ ಹಾಡು ಅದು’ ಎನ್ನುತ್ತಾರೆ ಅವರು. ‘ಕನ್ನಡದಲ್ಲಿ ಆಲ್ಬಂ ಮಾಡುವುದು ಒಂದು ವ್ಯವಸ್ಥಿತ ಉದ್ಯಮವಾಗಿ ಬೆಳೆದಿಲ್ಲ’ ಎನ್ನುವುದು ರಘು ಅಭಿಪ್ರಾಯ. ‘ಆಲ್ಬಂ ಮಾಡುತ್ತಿದ್ದೇನೆ’ ಎಂದ ರಘು ಅವರಲ್ಲಿ, ‘ಆಲ್ಬಂ ಮಾಡುವುದು ಉದ್ಯಮವಾಗಿ ಬೆಳೆದಿದೆಯಾ’ ಎಂದು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಅದಾಗಿತ್ತು.

‘ಆದರೆ, ಸಂಗೀತಗಾರನಿಗೆ ಲೈವ್‌ ಕಾನ್ಸರ್ಟ್‌ ನೀಡುವುದಕ್ಕೆ ಅಗತ್ಯವಿರುವ ಪ್ರಚಾರವನ್ನು ಈ ಆಲ್ಬಂಗಳು ನೀಡುತ್ತವೆ. ವಾಸ್ತವದಲ್ಲಿ, ಸಂಗೀತಗಾರನಿಗೆ ಲೈವ್‌ ಕಾನ್ಸರ್ಟ್‌ಗಳೇ ದೊಡ್ಡ ಆರ್ಥಿಕ ಚೈತನ್ಯ ನೀಡಬಲ್ಲವು. ಮೊದಲು ಹಾಡುಗಳ ಸಿ.ಡಿ. ಮಾರಾಟ ಒಂದು ಆದಾಯ ಮೂಲವಾಗಿತ್ತು. ಆದರೆ, ಈಗ ಅಂತಹ ಸ್ಥಿತಿ ಇಲ್ಲ’ ಎನ್ನುವುದು ಅವರು ನೀಡಿದ ವಿವರಣೆ.

ಕನ್ನಡದಲ್ಲಿ ಸಂಗೀತ ನಿರ್ದೇಶನ ಕ್ಷೇತ್ರದ ಲಾಭ–ನಷ್ಟಗಳ ಬಗ್ಗೆ ಪ್ರಶ್ನಿಸಿದಾಗ, ‘ನಾನು ನನ್ನ ಸಂಗೀತ ಕೆಲಸಗಳ ಹಕ್ಕುಗಳನ್ನು ಯಾರಿಗೂ ಕೊಡುತ್ತಿಲ್ಲ. ಅವುಗಳನ್ನು ನನ್ನ ಬಳಿಯೇ ಇರಿಸಿಕೊಳ್ಳುತ್ತಿದ್ದೇನೆ’ ಎಂದರು.

‘ಒಂದು ಸಿನಿಮಾಕ್ಕಾಗಿ ನಾವು ಆರು ತಿಂಗಳು ಸಮಯ ವಿನಿಯೋಗ ಮಾಡಿರುತ್ತೇವೆ. ನಾವು ಮಾಡಿರುವ ಕೆಲಸಕ್ಕೆ ಕಡಿಮೆ ಮೌಲ್ಯ ನಿಗದಿ ಮಾಡಿ, ಮಾರಾಟ ಮಾಡುವ ಪ್ರಕ್ರಿಯೆ ನನಗೆ ಇಷ್ಟವಾಗುವುದಿಲ್ಲ. ನಮ್ಮ ಕೆಲಸದ ಮೌಲ್ಯವನ್ನು ನಿರ್ಧರಿಸುವುದು ಎಲ್ಲರಿಂದ ಸಾಧ್ಯವೂ ಇಲ್ಲ’ ಎಂದರು.

‘ಲವ್‌ ಮಾಕ್‌ಟೇಲ್‌, ನಿನ್ನ ಸನಿಹಕೆ ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. ಆರ್ಕೆಸ್ಟ್ರಾ ಎಂಬ ಸಿನಿಮಾಕ್ಕೆ ಸಂಗೀತ ಕೊಟ್ಟಿದ್ದೇನೆ. ಇದಕ್ಕೆ ಧನಂಜಯ (ಡಾಲಿ) ಅವರು ಒಂಬತ್ತು ಹಾಡು ಬರೆದಿದ್ದಾರೆ. ಈ ಸಿನಿಮಾ ಇರುವುದೇ ಸಂಗೀತದ ಬಗ್ಗೆ. ಇದು ರಸ್ತೆ ಬದಿಯಲ್ಲಿ ಆರ್ಕೆಸ್ಟ್ರಾ ನಡೆಸುವವರ ಜೀವನದ ಕುರಿತ ಸಿನಿಮಾ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು