ಬುಧವಾರ, ಆಗಸ್ಟ್ 4, 2021
23 °C

ರಜನಿ–ಕಮಲ್‌ ಸಿನಿಮಾ ಸ್ಥಗಿತಗೊಂಡಿಲ್ಲ- ರಾಜ್‌ಕಮಲ್‌ ಫಿಲ್ಮ್ಸ್ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷ ಸೂಪರ್‌ಸ್ಟಾರ್‌ಗಳಾದ ರಜನಿಕಾಂತ್‌ ಹಾಗೂ ಕಮಲಹಾಸನ್‌ ಅವರು ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ ಲೋಕೆಶ್‌ ಕನಕರಾಜ್‌ ನಿರ್ದೇಶನದ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಅದಾದ ಬಳಿಕ ಆ ಚಿತ್ರದ ಬಗ್ಗೆ ಯಾವ ಮಾಹಿತಿಯೂ ಹೊರಬಿದ್ದಿರಲಿಲ್ಲ. 

ಎರಡು ತಿಂಗಳುಗಳಿಂದೀಚೆಗೆ ಈ ಚಿತ್ರ ಸೆಟ್ಟೇರುವುದಿಲ್ಲ. ಸಿನಿಮಾದ ಕೆಲಸಗಳು ಸ್ಥಗಿತಗೊಂಡಿವೆ ಎಂಬ ಸುದ್ದಿಗಳು ಹರಿದಾಡಿದವು. ಜತೆಗೆ ರಜನಿಕಾಂತ್‌ ಅವರು ರಾಜಕೀಯದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದರಿಂದ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ಮಾತುಗಳು ಕೇಳಿಬಂತು.

‘ಆದರೆ, ಈ ಸುದ್ದಿಗಳು ಸುಳ್ಳು. ಸಿನಿಮಾ ಸೆಟ್ಟೇರುವುದು ಖಚಿತವಾಗಿದೆ. ಈ ವರ್ಷದ ಅಂತ್ಯದಲ್ಲಿ ಚಿತ್ರದ ಶೂಟಿಂಗ್‌ ಆರಂಭವಾಗಲಿದೆ. ಯಾವುದೇ ಕಾರಣಕ್ಕೂ ಚಿತ್ರವನ್ನು ಸ್ಥಗಿತಗೊಳಿಸಿಲ್ಲ. ಕೊರೊನಾ ಸಂಕಟ ದೂರವಾಗುತ್ತಿದ್ದಂತೆ ಈ ಸಿನಿಮಾದ ಕೆಲಸಗಳು ಆರಂಭಗೊಳ್ಳುತ್ತವೆ’ ಎಂದು ಈ ಚಿತ್ರ ನಿರ್ಮಾಣ ಮಾಡುತ್ತಿರುವ ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಸ್ಪಷ್ಟಪಡಿಸಿದೆ. 

ಈ ಸಿನಿಮಾ ನಿರ್ಮಾಣ ಕುರಿತು ಏಪ್ರಿಲ್‌ ತಿಂಗಳಲ್ಲಿ ಘೋಷಣೆ ಮಾಡಲು ಚಿತ್ರತಂಡ ಫ್ಲ್ಯಾನ್ ಮಾಡಿತ್ತಂತೆ. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಗಿದೆ. ಹಾಗೇ ರಜನಿಕಾಂತ್‌ ಅವರೂ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದು, ಅವರ ಡೇಟ್ಸ್‌ ಅಂತಿಮವಾಗಬೇಕಿದೆ. ನವೆಂಬರ್ ತಿಂಗಳಲ್ಲಿ ಚಿತ್ರ ನಿರ್ಮಾಣದ ಬಗ್ಗೆ ಘೋಷಣೆ ಮಾಡುವ ಸಾಧ್ಯತೆ ಇದೆ. 

ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕಮಲ ಹಾಸನ್. ಈ ಚಿತ್ರದಲ್ಲಿ ರಜನಿಕಾಂತ್‌ ಜತೆಗೆ ಕಮಲಹಾಸನ್‌ ಕೂಡ ತೆರೆ ಹಂಚಿಕೊಳ್ಳಲಿದ್ದಾರೆಯೇ ಎಂಬ ಬಗ್ಗೆ ಚಿತ್ರತಂಡ ಯಾವ ಮಾಹಿತಿಯನ್ನೂ ಬಿಟ್ಟುಕೊಟ್ಟಿಲ್ಲ. 

ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಕಮಲ ಹಾಸನ್‌ ಹಾಗೂ ರಜನಿಕಾಂತ್‌ ಸುಮಾರು 16 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರು. ಈ ಇಬ್ಬರು ಶ್ರೇಷ್ಠ ನಟರು 1985ರಲ್ಲಿ ಬಿಡುಗಡೆಯಾದ ‘ಗಿರಫ್ತಾರ್‌’ ಚಿತ್ರದಲ್ಲಿ ನಟಿಸಿದ್ದರು. ಇದೇ ಇವರಿಬ್ಬರು ಜೊತೆಯಾಗಿ ನಟಿಸಿದ ಕೊನೆಯ ಚಿತ್ರ. ಈಗ ಈ ಸಿನಿಮಾ ಆರಂಭವಾದರೆ, 35 ವರ್ಷಗಳ ನಂತರ ರಜನಿಕಾಂತ್‌, ಕಮಲಹಾಸನ್‌ ಒಂದೇ ಸಿನಿಮಾದಲ್ಲಿ ನಟಿಸಿದಂತಾಗುತ್ತದೆ.

ಕೊರೊನಾ ಲಾಕ್‌ಡೌನ್‌ ಮುಗಿದು, ಚಿತ್ರೀಕರಣ ಆರಂಭವಾದರೆ ರಜನಿಕಾಂತ್‌ ಅವರು ಮೊದಲು ಸಿರುತೈ ಶಿವ ನಿರ್ದೇಶನದ ‘ಅಣ್ಣಾತೆ’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಚಿತ್ರದ ಪ್ರಮುಖ ದೃಶ್ಯಗಳ ಬಹುಭಾಗ ಚಿತ್ರೀಕರಣ ಮುಗಿದಿದ್ದು, ಇನ್ನು ಕೆಲ ಸಣ್ಣಪುಟ್ಟ ದೃಶ್ಯಗಳ ಶೂಟಿಂಗ್ ಅಷ್ಟೇ ಬಾಕಿಯಿರುವುದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು