ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ.31ಕ್ಕೆ ನಟ ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ತೆರೆಗೆ

Last Updated 12 ಮಾರ್ಚ್ 2021, 12:19 IST
ಅಕ್ಷರ ಗಾತ್ರ

ಬೆಂಗಳೂರು: ಹೇಮಂತ್‌ ಎಂ.ರಾವ್‌ ನಿರ್ದೇಶನದ, ನಟ ರಕ್ಷಿತ್‌ ಶೆಟ್ಟಿ ಅಭಿನಯಿಸಲಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಮುಹೂರ್ತ ಶುಕ್ರವಾರ ಬನಶಂಕರಿಯ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆದಿದೆ.

ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್‌ ಅವರು ನಟಿಸಲಿದ್ದು, ತಿಂಗಳಾಂತ್ಯಕ್ಕೆ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದ ಕುರಿತು ಮಾತನಾಡಿದ ರಕ್ಷಿತ್‌ ಶೆಟ್ಟಿ, ‘ಇದು ದಶಕದ ಹಿಂದೆ ನಡೆಯುವ ಪ್ರೇಮಕಥೆ. ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. 70 ದಿನ ಚಿತ್ರೀಕರಣವಿರಲಿದ್ದು, ಈ ತಿಂಗಳ ಅಂತ್ಯಕ್ಕೆ ಪ್ರಾರಂಭವಾದರೆ, ಮೇ 15 ಒಳಗೆ ಮೊದಲ ಶೆಡ್ಯೂಲ್‌ ಮುಗಿಯುತ್ತದೆ. ಜೂನ್‌.15ಗೆ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಜುಲೈ ಅಂತ್ಯಕ್ಕೆ ಚಿತ್ರೀಕರಣ ಮುಗಿಯಲಿದೆ. ಕಿರಿಕ್‌ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರದಂತೆ ಸಪ್ತ ಸಾಗರದಾಚೆ ಎಲ್ಲೋ ಡಿಸೆಂಬರ್‌ ಕೊನೆಯ ಶುಕ್ರವಾರ ಬಿಡುಗಡೆಯಾಗಲಿದೆ’ ಎಂದರು.

‘ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದೆ. ಮೊದಲಾರ್ಧದ ಪಾತ್ರಕ್ಕಾಗಿ ಸುಮಾರು 10 ಕೆ.ಜಿ ತೂಕ ಇಳಿಸಿಕೊಂಡಿದ್ದೇನೆ. ಇನ್ನೂ ನಾಲ್ಕೈದು ಕೆ.ಜಿ ತೂಕ ಇಳಿಸಿಕೊಳ್ಳಬೇಕು. ನಂತರದ ಪಾತ್ರಕ್ಕೆ ದಪ್ಪ ಆಗಬೇಕು. ತೆಳ್ಳಗಾದ ನಂತರ ಗಡ್ಡ ತೆಗೆದೆ, ಕೆಟ್ಟದಾಗಿ ಕಾಣಿಸಿದ ಕಾರಣ ಮತ್ತೆ ಮೂರ್ನಾಲ್ಕು ಕೆ.ಜಿ ತೂಕ ಹೆಚ್ಚಿಸಿಕೊಂಡೆ’ ಎಂದು ನಕ್ಕರು.

‘ಚಾರ್ಲಿ ಚಿತ್ರವು ಸೆಪ್ಟೆಂಬರ್‌ ಮೊದಲ ವಾರದಲ್ಲಿ ತೆರೆಯ ಮೇಲೆ ಬರಲಿದ್ದು, ಹಿಂದಿ ಸೇರಿದಂತೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಡಬ್‌ ಆಗಲಿದೆ. ಸಪ್ತ ಸಾಗರದಾಚೆ ಎಲ್ಲೋ ಕನ್ನಡಕ್ಕಷ್ಟೇ ಸೀಮಿತ’ ಎಂದರು.

ಮುಂದಿನ ವರ್ಷ ಕಿರಿಕ್‌ ಪಾರ್ಟಿ–2?

‘ಕಿರಿಕ್‌ ಪಾರ್ಟಿ–2 ಚಿತ್ರದ ಸ್ಕ್ರಿಪ್ಟ್‌ ತಯಾರಾಗುತ್ತಿದ್ದು, ಚಿತ್ರೀಕರಣವೂ ಇದೇ ವರ್ಷ ಪೂರ್ಣಗೊಳ್ಳಲಿದೆ. ಮುಂದಿನ ವರ್ಷ ಚಿತ್ರವು ತೆರೆಯ ಮೇಲೆ ಬರಲಿದೆ. ಕರ್ಣ ಸೇರಿದಂತೆ ಚಿತ್ರದ ಅದೇ ಪಾತ್ರಗಳು ಮತ್ತೆ ಕಾಣಿಸಿಕೊಳ್ಳಲಿದ್ದು, ಕಾಲೇಜಿನ ನಂತರದ ಜೀವನವು ಇದರಲ್ಲಿರಲಿದೆ. ರಿಷಬ್‌ ಶೆಟ್ಟಿ ಅವರೇ ಚಿತ್ರವನ್ನು ನಿರ್ದೇಶಿಸಲಿದ್ದು, ನಾಯಕಿಯರಷ್ಟೇ ಬದಲಾಗಿರಲಿದ್ದಾರೆ. ಪ್ರಸ್ತುತ ಪುಣ್ಯಕೋಟಿ ಬರೆಯುತ್ತಿದ್ದೇನೆ. ಜೊತೆಗೆ ಪ್ರತಿ ಭಾನುವಾರ ಕೂತು ಕಿರಿಕ್‌ ಪಾರ್ಟಿ–2 ಚಿತ್ರಕಥೆ ಬರೆಯುತ್ತಿದ್ದೇವೆ’ ಎಂದು ರಕ್ಷಿತ್‌ ಹೇಳಿದರು.

‘ನಾನು ಸಿನಿಮಾ ಮಾಡಲು ಸಮಯ ತೆಗೆದುಕೊಳ್ಳುತ್ತಿದ್ದೇನೆ. ಕಳೆದ ನಾಲ್ಕು ವರ್ಷದಲ್ಲಿ ಮೂರು ಸಿನಿಮಾ ಮಾಡಿದ್ದೇನೆ. ಹೊಸ ಸಿನಿಮಾಗಳು ಬಂದೂ ನಾಲ್ಕೈದು ಸಿನಿಮಾಗಳು ನನ್ನ ಮುಂದಿದೆ. ಅದರ ನಂತರವಷ್ಟೇ ಇತರೆ ನಿರ್ದೇಶಕರಿಗೆ ಸಮಯ ಕೊಡಲು ಸಾಧ್ಯ. ನೀವು ಸಿನಿಮಾ ಮುಗಿಸೋಕೆ ನಾಲ್ಕೈದು ವರ್ಷ ಆಗುತ್ತದೆ ಎಂದು ಅವರು ಹೋಗುತ್ತಾರೆ. ನಮ್ಮೊಳಗಿರುವ ಕಥೆ ಮುಗಿಸಲು ಸಮಯ ಬೇಕು’ ಎಂದರು.

‘ಪರಂವಃ ಸ್ಟೂಡಿಯೋಸ್‌ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಹೊಸ ನಿರ್ದೇಶಕರಿಗಾಗಿ ಪರಂವಃ ಸ್ಪಾಟ್‌ಲೈಟ್‌, ಹೊಸ ಪ್ರತಿಭೆಗಳನ್ನು ಗುರುತಿಸಲು ಪರಂವಃ ಪಿಕ್ಚರ್ಸ್‌, ಪ್ರಾದೇಶಿಕ ಸೊಗಡು ಎತ್ತಿಹಿಡಿಯಲು ಪರಂವಃ ಮ್ಯೂಸಿಕ್‌ ಆರಂಭಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT