‘ಗಿಲ್ಲಿ’ಯಿಂದ ಸಿನಿಮಾ ಹೆದ್ದಾರಿಗೆ ರಕುಲ್‌

7
ಚೆಲುವಿನ ಚಿತ್ತಾರ

‘ಗಿಲ್ಲಿ’ಯಿಂದ ಸಿನಿಮಾ ಹೆದ್ದಾರಿಗೆ ರಕುಲ್‌

Published:
Updated:
Deccan Herald

ಆ ಚೆಲುವೆ ದಕ್ಷಿಣ ಭಾರತೀಯ ಚಿತ್ರರಂಗದ ಹೆಬ್ಬಾಗಿಲು ಪ್ರವೇಶಿಸಿದ್ದು ಕನ್ನಡದ ‘ಗಿಲ್ಲಿ’ ಚಿತ್ರದ ಮೂಲಕ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಿಗುವುದಕ್ಕಿಂತ ಹೆಚ್ಚಿನ ದುಡ್ಡು ಸಿಗುತ್ತದೆ, ಪಾಕೆಟ್‌ ಮನಿ ಸ್ವಲ್ಪ ಜಾಸ್ತಿ ಖರ್ಚು ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಆ ಚಿತ್ರಕ್ಕೆ ಆಕೆ ಸಹಿ ಮಾಡಿದ್ದರು. ಆದರೆ ಚಿತ್ರ ಸೆಟ್ಟೇರಿ ಅಲ್ಲಿ ಇಲ್ಲಿ ಫೋಟೊ ಕಾಣಿಸಿಕೊಳ್ಳತೊಡಗಿದಾಗಿನಿಂದ ಚಿತ್ರರಂಗದಲ್ಲಿ ಆಕೆಯ ಬಗ್ಗೆ ಮಾತನಾಡಲು ಶುರುವಾದಾಗ ಆಕೆಗೆ ಅಚ್ಚರಿಯಾಗಿತ್ತು. ಯಾಕೆಂದರೆ, ದಕ್ಷಿಣ ಭಾರತೀಯ ಚಿತ್ರರಂಗದ ಆಳ ವಿಸ್ತಾರದ ಅರಿವೇ ಇರಲಿಲ್ಲ.

ಪಂಜಾಬಿ ಚೆಲುವೆ ರಕುಲ್‌ ಪ್ರೀತ್‌ ಸಿಂಗ್‌ ಈಗ ಅದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ, ಹಿಂದಿಯಲ್ಲೂ ಬೇಡಿಕೆಯ ನಟಿ. ಆದರೆ ಆರಂಭದ ದಿನಗಳಲ್ಲಿ ಆಕೆ ಎಷ್ಟು ಮುಗ್ಧೆಯಾಗಿದ್ದರು ಎಂಬುದಕ್ಕೆ ನಿದರ್ಶನಗಳಿವು.

ಪ್ರಾಥಮಿಕ ಶಾಲೆಯಲ್ಲಿದ್ದಾಗ ‘ಮುಂದೆ ನೀನು ಏನಾಗುತ್ತೀಯಾ’ ಎಂದು ಕೇಳಿದರೆ ಥಟ್‌ ಅಂತ ಹೇಳುತ್ತಿದ್ದುದು ‘ಹೀರೋಯಿನ್‌ ಆಗುತ್ತೇನೆ’ ಎಂದು. 18ರ ಹರೆಯದಲ್ಲಿ ರೂಪದರ್ಶಿಯಾದಾಗ ಓದು ಮತ್ತು ರ‍್ಯಾಂಪ್‌ ಎರಡನ್ನೂ ಸಂಭಾಳಿಸಲು ಕಲಿತರು. ಅಸಲಿಗೆ, ಮಾಡೆಲಿಂಗ್‌ ಮತ್ತು ರ‍್ಯಾಂಪ್‌ನಲ್ಲಿ ಕ್ಯಾಮೆರಾ, ಲೈಟ್ಸ್‌ ಎದುರಿಸುವುದನ್ನು ನಟನೆಯ ತಾಲೀಮು ಎಂದೇ ಅವರು ಪರಿಗಣಿಸಿದ್ದರು. 

ರಕುಲ್‌ ಲೆಕ್ಕಾಚಾರ ತಪ್ಪಲು ಸಾಧ್ಯವೇ ಇಲ್ಲ. ಎಷ್ಟೆಂದರೂ ಗಣಿತದ ಮೇಧಾವಿ ವಿದ್ಯಾರ್ಥಿ ಅಲ್ಲವೇ? 2009ರಲ್ಲಿ ‘ಗಿಲ್ಲಿ’ ಮೂಲಕ ಒಂದಷ್ಟು ನಿರ್ದೇಶಕರು ಮತ್ತು ನಿರ್ಮಾಪಕ ಕಣ್ಣಿಗೆ ಬಿದ್ದರೂ ತಕ್ಷಣ ಅವಕಾಶ ಸಿಗಲಿಲ್ಲ. 2011ರಲ್ಲಿ ರಕುಲ್‌ ರೂಪದರ್ಶಿ ಜಗತ್ತಿನಲ್ಲಿ ಮತ್ತೆ ಸುದ್ದಿಯಾದರು. ಇದಕ್ಕೆ ಕಾರಣ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಐದು ವಿಭಾಗಗಳಲ್ಲಿನ ಗೆಲುವು. ಅದೇ ವರ್ಷ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ನಂತರ ಹಿಂತಿರುಗಿ ನೋಡಲೇ ಇಲ್ಲ. ವರ್ಷಕ್ಕೆ ಕನಿಷ್ಠ ಎರಡು ಸಿನಿಮಾಗಳಲ್ಲಿ ರಕುಲ್‌ ನಟಿಸುತ್ತಿದ್ದಾರೆ.

ಇದೀಗ ರಕುಲ್‌ ಅವರ ಸಮಕಾಲೀನ ನಟಿಯರು ತಿರುಗಿ ನೋಡುಂತಾಗಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ದಿವಂಗತ ಎನ್.ಟಿ.ರಾಮರಾವ್‌ ಅವರ ಜೀವನಚರಿತ್ರೆ ಆಧರಿತ ‘ಎನ್.ಟಿ.ಆರ್’ ಸಿನಿಮಾದ ಪ್ರಮುಖ ಪಾತ್ರಕ್ಕೆ ರಕುಲ್‌ ಆಯ್ಕೆಯಾಗಿರುವುದು ಇದಕ್ಕೆ ಕಾರಣ. ಈ ಪಾತ್ರಕ್ಕೆ ಮೂವರು ನಟಿಯರ ಹೆಸರು ಕೇಳಿಬಂದಿತ್ತು. ಎನ್‌ಟಿಆರ್ ಜೊತೆ 14 ಚಿತ್ರಗಳಲ್ಲಿ ನಟಿಸಿದ್ದ ದಿವಂಗತ ಶ್ರೀದೇವಿ ಅವರ ಪಾತ್ರಕ್ಕಾಗಿ ರಕುಲ್‌ ಬಣ್ಣ ಹಚ್ಚಲಿದ್ದಾರೆ. ಇದು ತಮ್ಮ ವೃತ್ತಿಜೀವನದ ಮಹತ್ವದ ಅವಕಾಶ ಎಂದು ರಕುಲ್‌ ಬಣ್ಣಿಸಿದ್ದಾರೆ.

ರಕುಲ್‌ ಈಗ ಸಹಿ ಹಾಕಿರುವ ಚಿತ್ರಗಳ ಸಂಖ್ಯೆ ಐದು. ಇನ್ನಷ್ಟು ನಿರ್ದೇಶಕರು, ನಿರ್ಮಾಪಕರು ರಕುಲ್‌ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದಾರೆ.

ಸೌಂದರ್ಯದ ಒಳಗುಟ್ಟು

ನಾವು ನಮ್ಮೊಳಗಿನ ಸೌಂದರ್ಯದ ಬಗ್ಗೆ ಕಾಳಜಿ ವಹಿಸಿದರೆ ಅದು ಬಾಹ್ಯ ಸೌಂದರ್ಯವಾಗಿ ಹೊರಹೊಮ್ಮುತ್ತದೆ ಎಂಬುದು ರಕುಲ್‌ ನಂಬಿಕೆ. ಅದಕ್ಕಾಗಿ ದೇಹ ಮತ್ತು ಮನಸ್ಸಿನ ತಾದಾತ್ಮ್ಯ ಕಾಯ್ದುಕೊಳ್ಳುವುದು ಮುಖ್ಯ ಎನ್ನುತ್ತಾರೆ ಈ ಸುಂದರಿ.

ಹೊಸ ಅವಕಾಶಗಳನ್ನು ನಿರೀಕ್ಷಿಸಬೇಕಾದರೆ ತಾನು ಮೈಮಾಟ ಕಾಯ್ದುಕೊಳ್ಳಬೇಕು ಎಂಬ ಶಿಸ್ತು ರಕುಲ್‌ ಅವರದು. ‘ಅನಗತ್ಯ ಕೊಬ್ಬು ನಿವಾರಣೆಗೆ ಚೆನ್ನಾಗಿ ಬೆವರಿದರೆ ಸಾಕು. ಹಾಗಾಗಿ ವಾರದ ಆರು ದಿನ ನಿಯಮಿತವಾಗಿ ಕಠಿಣ ವ್ಯಾಯಾಮಗಳನ್ನು ಮಾಡಿ ಬೆವರಿಳಿಸುತ್ತೇನೆ. ಆಹಾರದ ಆಯ್ಕೆ ವೇಳೆ ಬಾಯಿ ಚಪಲಕ್ಕಿಂತ ದೇಹಕ್ಕೆ ಅದು ಎಷ್ಟು ಅಗತ್ಯ ಎಂದು ಯೋಚಿಸಿ ತಿನ್ನುತ್ತೇನೆ. ಮೈದಾದಿಂದ ತಯಾರಿಸಿದ ಆಹಾರ ಸೇವನೆ ನನಗಿಷ್ಟವಿಲ್ಲ. ಮನೆಯ ಆಹಾರ ನನ್ನ ಆದ್ಯತೆ. ಸಾಧ್ಯವಾದಷ್ಟೂ ಪೊಟ್ಟಣಗಳಲ್ಲಿ ಸಿಗುವ ಸಿದ್ಧ ಆಹಾರಗಳನ್ನು ದೂರವಿಡುತ್ತೇನೆ. ಗೋಧಿ ಹಿಟ್ಟಿನಿಂದ ಮಾಡಿದ ಆಲೂ ಪರಾಠ ನನಗೆ ಫೇವರಿಟ್‌. ಎಲ್ಲಾ ಬಗೆಯ ಪೋಷಕಾಂಶಯುಕ್ತ ಆಹಾರಗಳನ್ನೇ ಸೇವಿಸುತ್ತೇನೆ. ಇವೆಲ್ಲದರಿಂದ ನನ್ನ ಅಂದ ಹೆಚ್ಚುತ್ತದೆ’ ಎಂದು ರಕುಲ್‌ ವಿವರಿಸುತ್ತಾರೆ.


ರಕುಲ್‌ ಪ್ರೀತ್‌ ಸಿಂಗ್‌

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !