ಬುಧವಾರ, ಜನವರಿ 29, 2020
24 °C

ರಮೇಶ್‌ ಅರವಿಂದ್‌ | ಶಿವರಾತ್ರಿಗೆ ಶಿವಾಜಿಯ ಪತ್ತೇದಾರಿ ಕೆಲಸ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ರಮೇಶ್ ಅರವಿಂದ್‌ ಕಳೆದ ಎರಡು ವರ್ಷದಲ್ಲಿ ನಟನೆ ಮತ್ತು ನಿರ್ದೇಶನದಲ್ಲಿ ಸಾಕಷ್ಟು ತೊಡಗಿಸಿಕೊಂಡಿದ್ದಾರೆ. ಆದರೆ, ಅವರೇ ಆ್ಯಕ್ಷನ್‌ ಕಟ್‌ ಹೇಳಿರುವ ಮತ್ತು ನಟನೆಯ ಯಾವೊಂದು ಸಿನಿಮಾವೂ ಬಿಡುಗಡೆಯಾಗಿಲ್ಲ. ಹಿಂದಿಯ ‘ಕ್ವೀನ್ಸ್‌’ ಸಿನಿಮಾ ಕನ್ನಡದಲ್ಲಿ ‘ಬಟರ್‌ ಫ್ಲೈ’ ಮತ್ತು ತಮಿಳಿನಲ್ಲಿ ‘ಪ್ಯಾರಿಸ್‌ ಪ್ಯಾರಿಸ್‌’ ಆಗಿ ರಿಮೇಕ್‌ ಆಗಿದೆ. ಇದನ್ನು ಅವರೇ ನಿರ್ದೇಶಿಸಿದ್ದಾರೆ.

ಟೈಟಲ್‌ನಿಂದಲೇ ತೀವ್ರ ಕುತೂಹಲ ಹೆಚ್ಚಿಸಿರುವ ‘100’ ಸಿನಿಮಾ ನಿರ್ದೇಶಿಸಿರುವುದೂ ಅವರೇ. ಇದರ ಚಿತ್ರೀಕರಣವೂ ಮುಗಿದಿದೆ. ಬಹುನಿರೀಕ್ಷಿತ ‘ಶಿವಾಜಿ ಸುರತ್ಕಲ್’ ಚಿತ್ರದಲ್ಲಿ ಅವರು ಪತ್ತೇದಾರಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದಹಾಗೆ ಇದು ಅವರ 101ನೇ ಸಿನಿಮಾ. ಫೆ. 21ರ ಶಿವರಾತ್ರಿ ಹಬ್ಬದಂದು ಈ ಸಿನಿಮಾ ತೆರೆ ಕಾಣಲಿದೆ.

ರಮೇಶ್‌ ಅರವಿಂದ್‌ ಅವರು ಚಿತ್ರರಂಗ ಪ್ರವೇಶಿಸಿ ಮೂರು ದಶಕ ಉರುಳಿದೆ. ಈ ಚಿತ್ರದಲ್ಲಿ ಅವರದು ವಿಭಿನ್ನ ಪಾತ್ರ. ‘ಇಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲು ಮೊದಲಿನಿಂದಲೂ ಆಸೆ ಇತ್ತು. ಆಕಾಶ್ ಶ್ರೀವತ್ಸ ಅವರ ಮೂಲಕ ಇದು ಈಡೇರಿದೆ. ಟೀಸರ್‌ನಲ್ಲಿ ಕುತೂಹಲ ಮೂಡಿಸಿದ ಎಲ್ಲಾ ವಿಷಯಗಳಿಗೆ ಶೀಘ್ರವೇ ಉತ್ತರ ಸಿಗಲಿದೆ’ ಎನ್ನುತ್ತಾರೆ ಅವರು.

ಈ ಸಿನಿಮಾ ನಿರ್ದೇಶಿಸಿರುವುದು ಆಕಾಶ್‌ ಶ್ರೀವತ್ಸ. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಜಯಂತ ಕಾಯ್ಕಿಣಿ, ಕೆ. ಕಲ್ಯಾಣ್ ಮತ್ತು ಆಕಾಶ್ ಶ್ರೀವತ್ಸ ಸಾಹಿತ್ಯ ರಚಿಸಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. 

ಗುರುಪ್ರಸಾದ್ ಎಂ.ಜಿ. ಅವರ ಛಾಯಾಗ್ರಹಣವಿದೆ. ರೇಖಾ ಕೆ.ಎನ್. ಮತ್ತು ಅನುಪ್ ಗೌಡ ಬಂಡವಾಳ ಹೂಡಿದ್ದಾರೆ. ಮಡಿಕೇರಿ, ಮೈಸೂರು ಹಾಗೂ ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ಶೀಘ್ರವೇ, ಚಿತ್ರದ ಟ್ರೇಲರ್ ಮತ್ತು ಆಡಿಯೊ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು