ಬುಧವಾರ, ಜುಲೈ 28, 2021
29 °C

35ನೇ ವರ್ಷಕ್ಕೆ ಕಾಲಿಟ್ಟ ರಣವೀರ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಭಿನ್ನ ಲುಕ್‌ ಮತ್ತು ಮ್ಯಾನರಿಸಂಗಳಿಂದ ಸದಾ ಸುದ್ದಿಯಲ್ಲಿರುವ ‘ಗಲ್ಲಿಬಾಯ್‌’ ಖ್ಯಾತಿಯ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಇಂದು 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಕೊರೊನಾದಿಂದಾಗಿ ಸರಳವಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಅವರಿಗೆ ಪತ್ನಿ ದೀಪಿಕಾ ಪಡುಕೋಣೆ, ಸಹೋದರಿ ಅನೀಷಾ ಪಡುಕೋಣೆ ಸೇರಿದಂತೆ ಸಾವಿರಾರು ಅಭಿಮಾನಿಗಳು, ಬಾಲಿವುಡ್‌ ಮಂದಿ ಶುಭ ಕೋರಿದ್ದಾರೆ. 

ರಣವೀರ್‌ ಸಿಂಗ್ ಸದ್ಯ‌ ಬಾಲಿವುಡ್‌ನ ‘ಮೋಸ್ಟ್‌‌ ಟ್ರೆಂಡಿಂಗ್’ ನಾಯಕ ನಟ.‌ ವಿಭಿನ್ನ ಪಾತ್ರಗಳಿಂದ ಗಮನ ಸೆಳೆಯುತ್ತಿರುವ ಚಾರ್ಮಿಂಗ್‌ ನಟ, ಯುವ ಪೀಳಿಗೆಯ ಇತರ ನಟರಗಿಂತ ಕೋಮಚ ವಿಭಿನ್ನ. 

ಉಳಿದ ನಟರಿಗೆ ಹೋಲಿಸಿದರೆ ರಣವೀರ್‌ ಸಿಂಗ್‌ ಬಾಲಿವುಡ್‌ ಎಂಟ್ರಿ ಭರ್ಜರಿಯಾಗಿತ್ತು. ಸಿನಿಮಾ ಕುಟುಂಬದ ಹಿನ್ನೆಲೆ ಇಲ್ಲದಿದ್ದರೂ ‘ಯಶ್ ರಾಜ್‌ ಫಿಲ್ಮ್ಸ್’ ನಂತಹ‌  ದೊಡ್ಡ ಬ್ಯಾನರ್‌ ಮೂಲಕ ಬಾಲಿವುಡ್‌ ಪ್ರವೇಶೀಸುವ ಅವಕಾಶ ಸಿಕ್ಕಿತು. ಅಷ್ಟರಮಟ್ಟಿಗೆ ಆತ ಅದೃಷ್ಟವಂತ ನಟ. ಆ ಅದೃಷ್ಟ ಇದುವರೆಗೂ ಒಂದಿಲ್ಲ, ಒಂದು ರೂಪದಲ್ಲಿ ಆತನಿಗೆ ಸಾಥ್‌ ನೀಡುತ್ತದೆ.    

2010ರಲ್ಲಿ ಯಶ್ ರಾಜ್‌ ಫಿಲ್ಮ್ಸ್‌ ನಿರ್ಮಿಸಿದ ‘ಬ್ಯಾಂಡ್‌ ಬಾಜಾ ಭಾರಾತ್‌’ ಸಿನಿಮಾದ ವೆಡ್ಡಿಂಗ್‌ ಪ್ಲಾನರ್‌ ಪಾತ್ರದ ಮೂಲಕ ಇಂಡಸ್ಟ್ರಿಗೆ ಹೊಸ ನಟನೊಬ್ಬನ ಪ್ರವೇಶವಾಗಿತ್ತು. ಈ ಚಿತ್ರದಲ್ಲಿ ರಣವೀರ್‌ಗೆ ಅನುಷ್ಕಾ ಶರ್ಮಾ ಸಾಥ್‌ ನೀಡಿದ್ದರು. ಆ ಸಿನಿಮಾ ಹಿಟ್‌ ಆಗಿತ್ತು. 

2013ರಲ್ಲಿ ರಣವೀರ್‌ ನಟಿಸಿದ ‘ಲೂಟೆರಾ’ ಚಿತ್ರ ಬಿಡುಗಡೆಯಾಗಿ ಇದೇ ಜುಲೈ 5ಕ್ಕೆ ಏಳು ವರ್ಷ.  ಇಂಡಸ್ಟ್ರಿಯಲ್ಲಿಯೇ ಅತ್ಯಂತ ವಾಚಾಳಿ ಎಂದು ಗುರುತಿಸಿಕೊಂಡಿರುವ ‘ಎನರ್ಜಿಟಿಕ್‌’‌ ನಟ, ಚಿತ್ರದಲ್ಲಿ ಮಿತಭಾಷಿಯಾಗಿ ಅದ್ಭುತವಾಗಿ ನಟಿಸಿದ್ದಾರೆ. ಬರೀ ಕಣ್ಣು ಹಾಗೂ ಆಂಗಿಕ ಭಾಷೆಯಲ್ಲಿ ಸಂವಹನ ನಡೆಸುವ ಪಾತ್ರ ಎಲ್ಲರ ಗಮನ ಸೆಳೆದಿತ್ತು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸೋತರೂ, ಹಾಡುಗಳು ಈಗಲೂ ಫೇಮಸ್‌. 

‘ಲೂಟೆರಾ’ ಚಿತ್ರದ ಕೆಲವು ದೃಶ್ಯಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ದೀಪಿಕಾ ಪಡುಕೋಣೆ, ಪತಿಗೆ ವಿಭಿನ್ನವಾಗಿ ಜನ್ಮದಿನದ ಶುಭ ಕೋರಿದ್ದಾರೆ. ‘ನಿನ್ನ ಅದ್ಭುತ ನಟನೆಗಳಲ್ಲೊಂದು’ ಎಂದು ‘ಲೂಟೆರಾ’ ವಿಡಿಯೊ ತುಣುಕು ಪೋಸ್ಟ್‌ ಮಾಡಿದ್ದಾರೆ. 

ರಾಸ್‌ಲೀಲಾದಲ್ಲಿ ಜತೆಯಾದ ದೀಪಿಕಾ

2013ರಲ್ಲಿ ಬಿಡುಗಡೆಯಾದ ‘ಗೋಲಿಯೋಂಕಿ ರಾಸ್‌ಲೀಲಾ’ ಚಿತ್ರದಲ್ಲಿ ರಣವೀರ್‌, ರಾಮ್‌ ಪಾತ್ರದಲ್ಲಿ ಮಿಂಚಿದ್ದರು. ಆತನ ಒರಟು ವ್ಯಕ್ತಿತ್ವದ ಪಾತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಕಟ್ಟುಮಸ್ತಾದ ಮೈಕಟ್ಟು ಹಾಗೂ ಗುಜರಾತಿ ವೇಷಭೂಷಣ ನಟನೆಗೆ ಮತ್ತಷ್ಟು ಶೋಭೆ ತಂದುಕೊಟ್ಟಿದ್ದವು. ಇದರಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದರು. ‘ದೇವದಾಸ್‘‌ ನಂತರ ಸಂಜಯ್‌ ಲೀಲಾ ಬನ್ಸಾಲಿ ಅವರಿಗೆ ಭಾರಿ ದೊಡ್ಡ ಯಶಸ್ಸು‌ ತಂದುಕೊಟ್ಟ ಚಿತ್ರವಿದು.

ಸ್ಟಾರ್‌ ಪಟ್ಟ

ರಣವೀರ್‌ ನಟಿಸಿದ ಕೆಲ ಸಿನಿಮಾಗಳು ಅವರನ್ನು ಸ್ಟಾರ್‌ ಪಟ್ಟಕ್ಕೆ ಏರಿಸಿದವು. 2015ರಲ್ಲಿ ಬಿಡುಗಡೆಯಾದ ‘ಬಾಜೀರಾವ್‌ ಮಸ್ತಾನಿ’ ಅದರಲ್ಲೊಂದು. ಮರಾಠ ನಾಯಕ ಪೇಶ್ವೆ ಬಾಜೀರಾವ್‌ ಪಾತ್ರಕ್ಕಾಗಿ ತಲೆ ಬೋಳಿಸಿಕೊಂಡಿದ್ದ ರಣವೀರ್ ಅಕ್ಷರಶಃ ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು.‌  

ಖಿಲ್ಜಿ ತಂದ ಯಶಸ್ಸು

2018ರ ‘ಪದ್ಮಾವತ್’‌ನಲ್ಲಿ ಅಲ್ಲಾವುದ್ದೀನ್‌ ಖಿಲ್ಜಿ ಪಾತ್ರ ರಣವೀರ್‌ ಸಿಂಗ್‌ಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಅವರದ್ದು‌ ನೆಗೆಟಿವ್ ಪಾತ್ರ. ರಾಣಿ ಪದ್ಮಾವತಿಗಾಗಿ ಹಾತೊರೆಯುವ ವಿಕೃತ ರಾಜ ಖಿಲ್ಜಿ ಪಾತ್ರದಲ್ಲಿ ರಣವೀರ್‌ ಅಬ್ಬರಿಸಿದ್ದರು. ವಿವಾದಕ್ಕೆ ಗುರಿಯಾದ ಚಿತ್ರ ಬಾಕ್ಸ್‌ ಆಫೀಸ್‌ನಲ್ಲೂ ಒಳ್ಳೆಯ ಹಣ ಗಳಿಸಿತ್ತು.  

ರ‍್ಯಾಪ್‌ ಸಿಂಗರ್‌ ಕತೆ 

ಇನ್ನು 2019ರಲ್ಲಿ ಬಿಡುಗಡೆಯಾದ ‘ಗಲ್ಲಿಬಾಯ್’‌ ಚಿತ್ರದಲ್ಲಿ ರಣವೀರ್‌ ಸಿಂಗ್‌ ರ್‍ಯಾಪ್‌ ಸಿಂಗರ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಂಬೈನ ಕೊಳೆಗೇರಿಯ ಮಹತ್ವಾಕಾಂಕ್ಷಿ ಯುವಕನೊಬ್ಬ ರ‍್ಯಾಪ್‌ ಲೋಕಕ್ಕೆ ಕಾಲಿಡುವ ಕತೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಸಾಮಾನ್ಯ ಯುವಕನ ಪಾತ್ರದಲ್ಲಿ ರಣವೀರ್‌ ಎಲ್ಲರ ಮೆಚ್ಚುಗೆ ಗಳಿಸಿದ್ದರು.

ಕಪಿಲ್‌ ಪಾತ್ರಕ್ಕೆ ನ್ಯಾಯ

ಸದ್ಯ ರಣವೀರ್‌ ಸಿಂಗ್‌ ಕೈಯಲ್ಲಿ ‘83’ ಸಿನಿಮಾವಿದೆ. ಇದು ಕ್ರಿಕೆಟ್ ದಂತಕತೆ ಕಪಿಲ್ ದೇವ್ ಅವರ ಜೀವನ ಆಧರಿಸಿದ ಚಿತ್ರ. ಭಾರತ ಕ್ರಿಕೆಟ್ ತಂಡ 1983ರಲ್ಲಿ ವಿಶ್ವಕಪ್ ಗೆದ್ದ ಕ್ಷಣಗಳನ್ನು ನಿರ್ದೇಶಕ ಕಬೀರ್‌ ಖಾನ್‌ ಬೆಳ್ಳಿಪರದೆಯಲ್ಲಿ ತೋರಿಸಲು ಸಜ್ಜಾಗಿದ್ದಾರೆ. ದೀಪಿಕಾ ಪಡುಕೋಣೆ ಕಪಿಲ್‌ ದೇವ್ ಪತ್ನಿ ರೋಮಿ ಪಾತ್ರ ನಿರ್ವಹಿಸುತ್ತಿದ್ದಾರೆ. 

ಕಳೆದ ವರ್ಷ ರಣವೀರ್‌ 34ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭ ಈ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ ರಣವೀರ್‌ ಥೇಟ್‌ ಕಪಿಲ್‌ ಪಡಿಯಚ್ಚಿನಂತೆ ಕಾಣುತ್ತಾರೆ. ಬಿಳಿ ಜೆರ್ಸಿಯಲ್ಲಿ ಪೊದೆ ಮೀಸೆ, ವಿಭಿನ್ನ ಕೇಶವಿನ್ಯಾಸದ ರಣವೀರ್ ಚೆಂಡು ಸ್ಪಿನ್ ಮಾಡುವ‌ ಫಸ್ಟ್‌ಲುಕ್‌ಗೆ ಕಪಿಲ್‌ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದೆ. ಬಿಡುಗಡೆ ಬಗ್ಗೆ ಚಿತ್ರತಂಡ ಏನೂ ಹೇಳಿಲ್ಲ. 

ಅಕ್ಷಯ್‌ ಕುಮಾರ್‌ ಜತೆ ‘ಸೂರ್ಯವಂಶಿ’ ಚಿತ್ರದಲ್ಲಿ ರಣವೀರ್‌ ನಟಿಸಿದ್ದು, ಇಬ್ಬರನ್ನೂ ಒಟ್ಟಿಗೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರದ ಶೂಟಿಂಗ್‌ ಕೂಡ ಮುಗಿದಿದ್ದು, ತೆರೆಗೆ ಬರುವೊಂದೇ ಬಾಕಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು