ಸೋಮವಾರ, ಆಗಸ್ಟ್ 8, 2022
22 °C

ದಳಪತಿ ವಿಜಯ್‌ಗೆ ರಶ್ಮಿಕಾ ನಾಯಕಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ರಶ್ಮಿಕಾ ಮಂದಣ್ಣ- ಚಿತ್ರ:ರಾಘವ್

ತಮಿಳು ನಟ ವಿಜಯ್‌ ಅಭಿನಯದ ಹೊಸ ಚಿತ್ರವೊಂದನ್ನು ಎ.ಆರ್‌.ಮುರುಗದಾಸ್‌ ನಿರ್ದೇಶಿಸಲಿದ್ದಾರೆ. ಇದು ವಿಜಯ್‌ ಅವರ 65ನೇ ಚಿತ್ರ. ಈ ಚಿತ್ರಕ್ಕೆ ‘ದಳಪತಿ 65‘ ಎಂಬ ಟೈಟಲ್ ಇಡಬಹುದೆಂದು ಹೇಳಲಾಗುತ್ತಿದೆ. ಈ ಚಿತ್ರದ ನಾಯಕಿಯಾಗಿ ನಟಿ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.  

ಈ ಹಿಂದೆ ವಿಜಯ್‌ ಅಭಿನಯದ ‘ಮಾಸ್ಟರ್‌’ ಚಿತ್ರದಲ್ಲಿ ನಟಿಸುವಂತೆ ನಿರ್ದೇಶಕರು ರಶ್ಮಿಕಾರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರಂತೆ. ಕೆಲ ಕಾರಣಗಳಿಂದಾಗಿ ಆ ಸಿನಿಮಾದಲ್ಲಿ ರಶ್ಮಿಕಾ ನಟಿಸಲು ಸಾಧ್ಯವಾಗಿರಲಿಲ್ಲ. ಈ ಅವಕಾಶ ಕಳೆದುಕೊಂಡಿದ್ದಕ್ಕೆ ರಶ್ಮಿಕಾ ಬೇಸರ ವ್ಯಕ್ತಪಡಿಸಿದ್ದರು. ‘ಮುಂದೆ ಯಾವಾಗಲಾದರೂ ವಿಜಯ್ ಸಿನಿಮಾದಲ್ಲಿ ನಟಿಸುತ್ತೇನೆ‘ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಅವರ ಆಸೆ ಕೈಗೂಡುವಂತೆ ಕಾಣುತ್ತಿದೆ.

‘ಈ ಬಾರಿ ರಶ್ಮಿಕಾ ವಿಜಯ್‌ ಚಿತ್ರದಲ್ಲಿ ನಟಿಸುವ ಅವಕಾಶ ಕಳೆದುಕೊಳ್ಳುವುದಿಲ್ಲ‘ ಎಂಬುದು ಟಾಲಿವುಡ್‌ನ ಅಂಗಳದ ಮಾತಾದರೂ, ಇನ್ನೊಂದೆಡೆ ಈ ಹೊಸ ಸಿನಿಮಾದ ನಾಯಕಿಯ ಸ್ಥಾನಕ್ಕೆ ಕಾಜಲ್‌ ಅಗರ್‌ವಾಲ್‌ ಹಾಗೂ ಪೂಜಾ ಹೆಗ್ಡೆ ಹೆಸರುಗಳೂ ಕೇಳಿಬರುತ್ತಿವೆ. ಇನ್ನೂ ಯಾವುದೂ ಖಚಿತವಾಗಿಲ್ಲ.

ನಿರ್ದೇಶಕ ಎ.ಆರ್‌. ಮುರುಗದಾಸ್‌ ಈಗಾಗಲೇ ಹೊಸ ಚಿತ್ರದ ಸಿದ್ಧತೆ ಆರಂಭಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಆರಂಭವಾಗಬೇಕು. ಆದರೆ ಕೊರೊನಾ ವೈರಸ್‌ ಸೋಂಕು ಭಯ ಹಾಗೂ ಲಾಕ್‌ಡೌನ್‌ನಿಂದಾಗಿ ಪ್ಲಾನ್‌ಗಳು ಏನೇನಾಗುತ್ತವೋ ಗೊತ್ತಿಲ್ಲ ಎನ್ನುತ್ತಿದೆ ಚಿತ್ರತಂಡ. 

ಅಂದ ಹಾಗೆ, ಈ ಚಿತ್ರದಲ್ಲಿ ನಟಿ ಮಡೋನಾ ಸೆಬಾಸ್ಟಿನ್‌ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಸನ್‌ ಪಿಕ್ಚರ್ಸ್‌ ಇದಕ್ಕೆ ಬಂಡವಾಳ ಹೂಡುತ್ತಿದೆ. ಎಸ್‌.ಥಮನ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ತುಂಬಾ ಸ್ಕ್ರಿಪ್ಟ್‌ಗಳು ಬಂದಿವೆ. ಆದರೆ ಅವರು ಯಾವ ಹೊಸ ಸಿನಿಮಾವನ್ನು ಒಪ್ಪಿಕೊಂಡಿಲ್ಲವಂತೆ. ಕಾರ್ತಿ ಅಭಿನಯದ ‘ಸುಲ್ತಾನ್’‌ ಹಾಗೂ ಅಲ್ಲು ಅರ್ಜುನ್‌ ನಾಯಕ ನಟನಾಗಿರುವ ‘ಪುಷ್ಪ’ ಸದ್ಯ ರಶ್ಮಿಕಾ ಮಂದಣ್ಣ ಕೈಯಲ್ಲಿರುವ ಸಿನಿಮಾಗಳು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು