ಭಾನುವಾರ, ಜುಲೈ 25, 2021
25 °C

ತೆರೆ ಕಾಣಲು ‘ರಿಯಲ್‌ ಎಸ್ಟೇಟ್‌’ ಚಿತ್ರ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ನಡೆಯುವ ನೈಜ ಘಟನೆಗಳನ್ನೇ ಆಧಾರವಾಗಿಟ್ಟುಕೊಂಡು ‘ರಿಯಲ್‌ ಎಸ್ಟೇಟ್‌’ ಚಿತ್ರ ಮಾಡಿದ್ದಾರೆ ಸಾಮಾಜಿಕ ಹೋರಾಟಗಾರ ಹಾಗೂ ನಿರ್ಮಾಪಕ ಎನ್‌.ರಾಮಕೃಷ್ಣಪ್ಪ.

ಕಥೆ, ಚಿತ್ರಕಥೆ ಹೆಣೆದಿರುವ ರಾಮಕೃಷ್ಣಪ್ಪ ವಾಸ್ತವದಲ್ಲಿ ತಾವು ನಿಭಾಯಿಸುತ್ತಿರುವ ಹೋರಾಟಗಾರನ ಪಾತ್ರವನ್ನೇ ಚಿತ್ರದಲ್ಲೂ ನಿರ್ವಹಿಸಿದ್ದಾರಂತೆ. ‘ಬಹುತೇಕ ಎಲ್ಲ ಸಿನಿಮಾಗಳಲ್ಲಿ ತಾಯಿ ಪ್ರೀತಿ ಮತ್ತು ಭಾವುಕತೆಯನ್ನು ಪ್ರಧಾನವಾಗಿರುತ್ತದೆ. ನನ್ನ ಕಥೆಯಲ್ಲಿ ತಂದೆಯ ಪ್ರೀತಿ ಮತ್ತು ಭಾವುಕತೆಯನ್ನು ಪ್ರಧಾನವಾಗಿ ತೋರಿಸಲಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಕ್ಷೇತ್ರದಲ್ಲಿ ನಡೆಯುವ ವಂಚನೆಯ ಮುಖಗಳನ್ನು ಇದರಲ್ಲಿ ಅನಾವರಣಗೊಳಿಸಿದ್ದೇನೆ’ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಆಗಿರುವ ರಾಮಕೃಷ್ಣಪ್ಪ.

ತಮ್ಮ ಪುತ್ರನನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿರುವ ಸಂಭ್ರಮದಲ್ಲಿರುವ ಅವರು, ಈ ಚಿತ್ರಕ್ಕಾಗಿ ಸುಮಾರು ಒಂದೂವರೆ ಕೋಟಿ ರೂಪಾಯಿ ಬಂಡವಾಳ ಹೂಡಿದ್ದಾರಂತೆ. ತಮ್ಮದೇ ಆದ ಎನ್‌ಆರ್‌ಕೆ ಸಿನಿಮಾಸ್‌ ಬ್ಯಾನರ್‌ನಡಿ ಪ್ರತಿ ವರ್ಷ ಎರಡು ಸದಭಿರುಚಿಯ ಮತ್ತು ಸಾಮಾಜಿಕ ಸಂದೇಶವುಳ್ಳ ಚಿತ್ರಗಳನ್ನು ನಿರ್ಮಿಸುವ ಇರಾದೆಯನ್ನು ಅವರು ಹೊಂದಿದ್ದಾರೆ.

ನಟಿ ಸುಷ್ಮಾ ರಾಜ್‌ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಇವರಿಗೆ ನಾಲ್ಕನೇ ಸಿನಿಮಾ. ಈ ಚಿತ್ರ ತಮ್ಮ ವೃತ್ತಿ ಜೀವನಕ್ಕೆ ಒಂದು ಬ್ರೇಕ್‌ ತಂದುಕೊಡಲಿದೆ ಎನ್ನುವುದು ಸುಷ್ಮಾ ನಿರೀಕ್ಷೆ.

ಈ ಚಿತ್ರಕ್ಕೆ ಸಂಜೀವ್‌ ಗಾವಂಡಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಮಕೃಷ್ಣ ಅವರ ಪುತ್ರ ಆರ್‌. ಗುರುರಾಜ್‌ ಮೊದಲಬಾರಿಗೆ ನಾಯಕನಾಗಿ ನಟಿಸಿದ್ದು, ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. 

50 ದಿನಗಳ ಚಿತ್ರೀಕರಣ ನಡೆದಿದ್ದು, ಬೆಂಗಳೂರು, ದೇವನೂರು ಹಾಗೂ ಚಿಕ್ಕಬಳ್ಳಾಪುರ ಭಾಗದಲ್ಲಿ ಚಿತ್ರದ ಬಹುತೇಕ ಭಾಗ ಚಿತ್ರೀಕರಿಸಲಾಗಿದೆ. ನಾಲ್ಕು ಹಾಡುಗಳಿವೆ. ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕೃತ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಕೊರೊನಾ ಲಾಕ್‌ಡೌನ್‌ ಘೋಷಣೆಯಾಗದಿದ್ದರೆ ಈ ಚಿತ್ರ ಮಾರ್ಚ್‌ನಲ್ಲೇ ತೆರೆಕಾಣಬೇಕಿತ್ತು. ಚಿತ್ರ ಬಿಡುಗಡೆ ಮಾಡಲು ಲಾಕ್‌ಡೌನ್‌ ತೆರವಾಗಿ, ಚಿತ್ರಮಂದಿರಗಳ ಬಾಗಿಲು ತೆರೆಯುವುದನ್ನು ಚಿತ್ರತಂಡ ಎದುರು ನೋಡುತ್ತಿದೆ.

ಈ ಚಿತ್ರಕ್ಕೆ ಎನ್‌.ಟಿ.ಎ. ವೀರೇಶ್‌ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಕಾರ್ತಿಕ್‌ ವೆಂಕಟೇಶ್, ವಿಕ್ರಮ್‌ ನೇಪಾಳಿ (ರಾಕೇಟ್‌)‌ ಅವರದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.