ಶುಕ್ರವಾರ, ಜನವರಿ 27, 2023
27 °C

25 ದಿನಗಳಲ್ಲೇ ಕೆಜಿಎಫ್ ದಾಖಲೆ ಪುಡಿಗಟ್ಟಿದ ಕಾಂತಾರ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕಾಂತಾರದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಚಿತ್ರ ತೆರೆಗೆ ಬಂದು ತಿಂಗಳು ಸಮೀಪಿಸಿದರೂ ಚಿತ್ರದ ಕುರಿತಾಗಿನ ಕ್ರೇಜ್‌ ಕಡಿಮೆಯಾಗುತ್ತಿಲ್ಲ. 25 ದಿನಗಳಲ್ಲಿರಾಜ್ಯದಲ್ಲಿ 77 ಲಕ್ಷ ಟಿಕೆಟ್‌ ಮಾರಾಟವಾಗಿದೆ. ಈವರೆಗೆ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ‘ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ’ ಎಂಬ ಹೆಗ್ಗಳಿಕೆ ಕಾಂತಾರ ಪಾತ್ರವಾಗಿದೆ. ಈ ಮೂಲಕ ರಾಜ್ಯದಲ್ಲಿ ದೊಡ್ಡ ಹವಾ ಸೃಷ್ಟಿಸಿದ್ದ ಕೆಜಿಎಫ್‌, ಕೆಜಿಎಫ್‌–2, ರಾಜ್‌ಕುಮಾರ ಚಿತ್ರದ ದಾಖಲೆಗಳನ್ನು ಮುರಿದಿದೆ.

ಈ ಕುರಿತು ಅಧಿಕೃತ ಹೇಳಿಕೆ ನೀಡಿರುವ ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು, ತಮ್ಮ ಸಂಸ್ಥೆ ನಿರ್ಮಾಣದ ಚಿತ್ರಗಳಲ್ಲಿ ಕಾಂತಾರ ಅತ್ಯಂತ ಹೆಚ್ಚು ವೀಕ್ಷಿಸಿದ ಚಿತ್ರ ಎಂದಿದ್ದಾರೆ. ಕರ್ನಾಟಕದಲ್ಲಿ 25 ದಿನಗಳಲ್ಲಿ 77 ಲಕ್ಷ ಮಂದಿ ಸಿನಿಮಾಪ್ರಿಯರು ಕಾಂತಾರ ವೀಕ್ಷಿಸಿರುವುದು ಹೊಸ ದಾಖಲೆಯಾಗಿದೆ. ಇನ್ನಷ್ಟು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿದೆ. ನಿಮ್ಮ ಪ್ರೋತ್ಸಾಹಕ್ಕೆ ನಾವು ಸದಾ ಋಣಿ ಎಂದು ಟ್ವೀಟ್‌ ಮಾಡಿದ್ದಾರೆ.

ಹೊಂಬಾಳೆ ಫಿಲಮ್ಸ್ ನಿರ್ಮಿಸಿ 2017 ರಲ್ಲಿ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸಿ, ಸಂತೋಷ್ ಆನಂದ್ ರಾಮ್ ನಿರ್ದೇಶಿಸಿದ್ದ ಚಿತ್ರ ‘ ರಾಜಕುಮಾರ’ಸೂಪರ್ ಹಿಟ್ ಚಿತ್ರವಾಗಿತ್ತು. ಈ ಚಲನಚಿತ್ರವನ್ನು 65 ಲಕ್ಷ ಜನರು ವೀಕ್ಷಿಸಿ ದಾಖಲೆ ನಿರ್ಮಾಣವಾಗಿತ್ತು.
2018 ರಲ್ಲಿ ಹೊಂಬಾಳೆ ನಿರ್ಮಿಸಿದ ಮತ್ತೊಂದು ಸೂಪರ್ ಹಿಟ್ ಚಿತ್ರ ಕೆಜಿಎಫ್. ರಾಕಿಂಗ್ ಸ್ಟಾರ್ ಯಶ್ ಅಭಿನಯಿಸಿ, ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವನ್ನು ಈವರೆಗೆ ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿದ್ದರು. 2022 ರಲ್ಲಿ ಬಿಡುಗಡೆಯಾದ ‘ಕೆಜಿಎಫ್–2’ಚಿತ್ರವನ್ನು 72 ಲಕ್ಷ ಸಿನಿಮಾಪ್ರಿಯರು ವೀಕ್ಷಿಸಿದ್ದರು.

ಹಿಂದಿ ವಲಯದಲ್ಲಿಯೂ ಕಾಂತಾರ ಕ್ರೇಜ್‌ ಕಡಿಮೆಯಾಗಿಲ್ಲ. ಬಾಲಿವುಡ್‌ ಸೇರಿದಂತೆ ತಮಿಳು, ತೆಲುಗಿನ ಅನೇಕ ನಟ,ನಟಿಯರು, ನಿರ್ದೇಶಕರು ಈಗಾಗಲೇ ಕಾಂತಾರವನ್ನು ಮೆಚ್ಚಿ ಟ್ವೀಟ್‌ ಮಾಡಿದ್ದಾರೆ. ‘ಕಾಂತಾರ’, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಘರ್ಷದ ಕಥೆಯಾಗಿದ್ದು, ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಿಷಬ್‌ ಶೆಟ್ಟಿ ಜೊತೆಗೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಹೊಂಬಾಳೆ ಫಿಲಂಸ್‌ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ.

ದೊಡ್ಡ ಸಿನಿಮಾಗಳ ಪಟ್ಟಿಯೇ ಇದೆ:
ಕನ್ನಡ ಚಿತ್ರರಂಗವನ್ನು ಜಗತ್ತೊಮ್ಮೆ ತಿರುಗಿ ನೋಡುವಂತೆ ಮಾಡಿದ್ದು ಹೊಂಬಾಳೆ ಫಿಲಂಸ್‌. ಅದಕ್ಕೆ ಕಾರಣ ಕನ್ನಡದಲ್ಲಿಯೇ ಬೃಹತ್‌ ಬಜೆಟ್‌ನ ಕೆಜಿಎಫ್‌. ವಿಶ್ವದಾದ್ಯಂತ ಸುಮಾರು 10 ಸಾವಿರ ಸ್ಕ್ರೀನ್‌ಗಳಲ್ಲಿ ಕೆಜಿಎಫ್‌–2 ಚಿತ್ರವನ್ನು ಬಿಡುಗಡೆಗೊಳಿಸಿ ದಾಖಲೆ ಬರೆದಿತ್ತು. ಕನ್ನಡ ಚಿತ್ರವೊಂದು ಮೊದಲ ಸಲ ₹1000 ಕೋಟಿ ಗಳಿಕೆ ಕಂಡಿತ್ತು. ಇದೀಗ ಕಾಂತಾರವನ್ನು ₹ 500 ಕೋಟಿ ಕ್ಲಬ್‌ ಸೇರಿಸುತ್ತಿದೆ.

ದೊಡ್ಡ ಸ್ಟಾರ್‌ ನಟರು, ಜನಪ್ರಿಯ ನಿರ್ದೇಶಕರ ಸಿನಿಮಾ ನಿರ್ಮಾಣದ ಪಟ್ಟಿಯೇ ಹೊಂಬಾಳೆ ಬಳಿಯಿದೆ. ಕೆಜಿಎಫ್‌–2 ಚಿತ್ರದ ನಂತರ ‘ಕಾಂತಾರ’ ಹೊಂಬಾಳೆಗೆ ಅತ್ಯಂತ ಯಶಸ್ವಿ ಚಿತ್ರವಾಗಿದೆ. ಪ್ರಭಾಸ್‌ ನಟನೆಯ ‘ಸಲಾರ್‌’ ಚಿತ್ರ ಮುಂದಿನ ವರ್ಷ ಬಿಡುಗಡೆಗಿದೆ. ಲೂಸಿಯಾ ಪವನ್‌ ನಿರ್ದೇಶನದಲ್ಲಿ ಮಲಯಾಳದಲ್ಲಿ ಫಹಾದ್‌ ಫಾಸಿಲ್‌ಗೆ ಧೂಮಂ ಚಿತ್ರವನ್ನು ಘೋಷಿಸಿದೆ. ಸುದೀಪ್‌ ಜತೆ ಸಿನಿಮಾ ನಿರ್ಮಾಣದ ತಯಾರಿಯಲ್ಲಿದೆ.

ಸಂತೋಷ್‌ ಆನಂದ್‌ರಾಮ್‌ ನಿರ್ದೇಶಿಸಿ, ಜಗ್ಗೇಶ್‌ ನಟಿಸಿರುವ ರಾಘವೇಂದ್ರ ಸ್ಟೋರ್ಸ್‌ ಬಿಡುಗಡೆಗೆ ಸಿದ್ಧವಾಗಿದೆ. ರಕ್ಷಿತ್‌ ಶೆಟ್ಟಿ ಜೊತೆಗೆ ರಿಚರ್ಡ್‌ ಆಂಟನಿ ಸಿನಿಮಾ ಘೋಷಿಸಿದೆ. ಡಾಲಿ ಧನಂಜಯ್‌ ಜೊತೆಗೆ ಹೊಂಬಾಳೆ-ಕೆಆರ್‌ಜಿ ನಿರ್ಮಾಣದ 5 ಸಿನಿಮಾಗಳಿಗೆ ಸಹಿ ಹಾಕಿದೆ ಎನ್ನುತ್ತಿವೆ ಮೂಲಗಳು. ಕನ್ನಡದ ದೊಡ್ಡ ನಾಯಕರು, ದೊಡ್ಡ ನಿರ್ದೇಶಕರನ್ನು ಹೊಂಬಾಳೆ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಈ ಹಿಂದೆ ಹೊಂಬಾಳೆ ನಿರ್ಮಿಸಿದ್ದ ನಿನ್ನಿಂದಲೇ, ಮಾಸ್ಟರ್‌ಪೀಸ್‌, ರಾಜ್‌ಕುಮಾರ್‌ ಚಿತ್ರಗಳು ಕೂಡ ಯಶಸ್ವಿಯಾಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು