ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಮಾಯಣ’ ಸಿನಿಮಾಗೆ ಯಶ್‌ ಬಂಡವಾಳ

Published 12 ಏಪ್ರಿಲ್ 2024, 7:51 IST
Last Updated 12 ಏಪ್ರಿಲ್ 2024, 7:51 IST
ಅಕ್ಷರ ಗಾತ್ರ

ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದ ಚಿತ್ರೀಕರಣ ಪ್ರಾರಂಭವಾಗಿದ್ದು, ಇದೇ ಸಂದರ್ಭದಲ್ಲಿ ಚಿತ್ರತಂಡ ಹೊಸ ಸುದ್ದಿ ನೀಡಿದೆ. ‘ರಾಮಾಯಣ’ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಾಗೂ ನಮಿತ್ ಮಲ್ಹೋತ್ರಾ ಕೈ ಜೋಡಿಸಿದ್ದಾರೆ.

‘ದಂಗಲ್’ ಸಿನಿಮಾ ಖ್ಯಾತಿಯ ನಿರ್ದೇಶಕ ನಿತೀಶ್ ತಿವಾರಿ ‘ರಾಮಾಯಣ’ ಸಿನಿಮಾವನ್ನು ಬಹಳ ಅದ್ದೂರಿಯಾಗಿ ದೃಶ್ಯ ರೂಪಕ್ಕೆ ಇಳಿಸುವುದಕ್ಕೆ ಸಜ್ಜಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಲಿದ್ದು, ಚಿತ್ರದಲ್ಲಿ ಯಶ್‌ ಕೂಡಾ ನಟಿಸಲಿದ್ದಾರೆ ಎನ್ನುವ ಗಾಳಿಸುದ್ದಿ ಇತ್ತು. ಆದರೆ ಯಶ್‌ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎನ್ನುವುದನ್ನು ಚಿತ್ರತಂಡವೇ ಘೋಷಿಸಿದೆ. ಯಶ್ ಒಡೆತನದ ಮಾನ್‌ಸ್ಟರ್‌ಮೈಂಡ್‌ ಕ್ರಿಯೇಷನ್ ಹಾಗೂ ನಮಿತ್ ಮಲ್ಹೋತ್ರಾ ಸಾರಥ್ಯದ ಪ್ರೈಮ್ ಫೋಕಸ್ ಸ್ಟುಡಿಯೊ ‘ರಾಮಾಯಣ’ ಸಿನಿಮಾವನ್ನು ನಿರ್ಮಿಸುತ್ತಿದೆ.

ತಮ್ಮ ಮುಂದಿನ ಚಿತ್ರ, ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಸಿನಿಮಾವನ್ನೂ ಮಾನ್‌ಸ್ಟರ್‌ಮೈಂಡ್‌ ಕ್ರಿಯೇಷನ್‌ನಡಿ ನಿರ್ಮಾಣ ಮಾಡುತ್ತಿದ್ದಾರೆ ಯಶ್‌. ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ಮಾನ್‌ಸ್ಟರ್‌ಮೈಂಡ್‌ ಕೂಡ ‘ಟಾಕ್ಸಿಕ್’ ಸಿನಿಮಾದ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿದೆ. ಇದೇ ಬ್ಯಾನರ್‌ನಡಿ ‘ರಾಮಾಯಣ’ ಸಿನಿಮಾಗೂ ಯಶ್ ಬಂಡವಾಳ ಹೂಡುತ್ತಿದ್ದಾರೆ.  

‘ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವಂತಹ ಸಿನಿಮಾವೊಂದನ್ನು ನಿರ್ಮಾಣ ಮಾಡಬೇಕು ಎನ್ನುವ ಆಕಾಂಕ್ಷೆಯನ್ನು ಬಹಳ ವರ್ಷಗಳಿಂದ ಹೊಂದಿದ್ದೆ. ಇತ್ತೀಚೆಗೆ ಲಾಸ್‌ಏಂಜಲಿಸ್‌ನಲ್ಲಿರುವ ಒಂದು ಖ್ಯಾತ ವಿಎಫ್‌ಎಕ್ಸ್‌ ಸ್ಟುಡಿಯೊ ಜೊತೆ ಮಾತುಕತೆಗೆ ತೆರಳಿದ್ದಾಗ, ಆ ಸ್ಟುಡಿಯೊ ಹಿಂದಿನ ಪ್ರೇರಕ ಶಕ್ತಿಯಾಗಿ ಒಬ್ಬ ಭಾರತೀಯರಿದ್ದರು. ನಮಿತ್‌ ಜೊತೆ ಹಲವು ಪ್ರಾಜೆಕ್ಟ್ಸ್‌ ಬಗ್ಗೆ ಚರ್ಚೆ ನಡೆಸುವ ಸಂದರ್ಭದಲ್ಲಿ ರಾಮಾಯಣ ವಿಷಯ ಮುನ್ನೆಲೆಗೆ ಬಂತು. ರಾಮಾಯಣ ನಮ್ಮ ಜೀವನದ ಭಾಗವಾಗಿದೆ. ಅದರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಎಂದುಕೊಂಡರೂ, ಪ್ರತಿ ಬಾರಿ ರಾಮಾಯಣದೊಳಗೆ ಹೊಕ್ಕಾಗ ಹೊಸ ಜ್ಞಾನ, ಭಿನ್ನವಾದ ದೃಷ್ಟಿಕೋನ ಲಭಿಸುತ್ತದೆ. ಈ ಕಾಲಾತೀತ ಮಹಾಕಾವ್ಯವನ್ನು ಅದ್ದೂರಿಯಾಗಿ ಬೆಳ್ಳಿತೆರೆಗೆ ತರುವುದು ನಮ್ಮ ಉದ್ದೇಶ. ನಮಿತ್‌ ಜೊತೆ ಈ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿ, ವಿಶ್ವದಾದ್ಯಂತ ಇರುವ ಪ್ರೇಕ್ಷಕರಿಗೆ ಅತ್ಯುತ್ತಮ ಅನುಭವ ನೀಡುವ ಭಾರತೀಯ ಸಿನಿಮಾವೊಂದನ್ನು ನೀಡಲಿದ್ದೇವೆ’ ಎಂದಿದ್ದಾರೆ ಯಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT