ಶುಕ್ರವಾರ, ಜನವರಿ 22, 2021
28 °C
ಸರಸ್ವತಿಪುರಂ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್

ಸಾಧು ಕೋಕಿಲ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪ: ಹೈಕೋರ್ಟ್‌ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಟ ಸಾಧು ಕೋಕಿಲ ಅವರು ಮೈಸೂರಿನ ಸಲೂನ್‌ನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತಂದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಸರಸ್ವತಿಪುರಂ ಪೊಲೀಸ್‌ ಠಾಣಾಧಿಕಾರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

‘ದೋಷಾರೋಪ ಪಟ್ಟಿಯಿಂದ ನನ್ನ ಹೆಸರು ಕೈಬಿಡಬೇಕು’ ಎಂದು ಕೋರಿ ಸಾಧು ಕೋಕಿಲ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಬಿ.ಭಜಂತ್ರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸಾಧು ಕೋಕಿಲ ಪರ ವಕೀಲ ಎಚ್.ಎಸ್.ಚಂದ್ರಮೌಳಿ, ‘ಅರ್ಜಿದಾರರ ವಿರುದ್ಧದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ. ಇದು ಅವರ ತೇಜೋವಧೆ ಮಾಡುವ ಯತ್ನವಾಗಿದೆ. ಆದ್ದರಿಂದ ಈ ಕುರಿತಂತೆ ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು’ ಎಂದು ಕೋರಿದರು.

ನ್ಯಾಯಪೀಠವು, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದ್ದು, ವಿಚಾರಣೆ ಮುಂದೂಡಿದೆ.

ಪ್ರಕರಣವೇನು?: ‘ಸರಸ್ವತಿ ಪುರಂ ಪೊಲೀಸ್‌ ಠಾಣೆ ಸರಹದ್ದಿನ ಬೋಗಾದಿ ರಿಂಗ್ ರೋಡ್ ಬಳಿಯ ಸ್ವಾಮಿ ಆರ್ಕೇಡ್‌ ಕಟ್ಟಡದಲ್ಲಿನ ಲೈಕ್ ಟ್ರೆಂಡ್‌ ಫ್ಯಾಮಿಲಿ ಸಲೂನ್‌ನಲ್ಲಿ ಅದರ ಮಾಲೀಕರು ಹುಡುಗಿಯರನ್ನು ಇಟ್ಟುಕೊಂಡು ಮಸಾಜ್‌ ಮಾಡುವ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ’ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2017ರ ಡಿಸೆಂಬರ್ 20ರಂದು ಸಲೂನ್‌ ಮೇಲೆ ದಾಳಿ ನಡೆಸಿದ್ದರು.

ದಾಳಿ ವೇಳೆ ಸಲೂನ್‌ ಮಾಲೀಕ ರಾಜೇಶ್ ಹಾಗೂ ಒಬ್ಬ ಮಹಿಳಾ ಸಿಬ್ಬಂದಿ ಇದ್ದರು. ಮಹಿಳಾ ಸಿಬ್ಬಂದಿ ವಿಚಾರಣೆ ನಡೆಸಿದಾಗ ಆಕೆ ನೀಡಿದ ಹೇಳಿಕೆಯನ್ನು ದಾಖಲಿಸಿಕೊಂಡು ಸಾಧು ಕೋಕಿಲ ವಿರುದ್ಧ ದೂರು ದಾಖಲಿಸಿದ್ದರು.

ಹೇಳಿಕೆಯಲ್ಲೇನಿತ್ತು?: ‘ಪಾರ್ಲರ್‌ಗೆ ಬಂದಂತಹ ಪುರುಷರ ಗುಪ್ತ ಅಂಗಗಳಿಗೆ ಮಸಾಜ್‌ ಮಾಡಲು ನನಗೆ ಹೇಳಿದರು. ಆ ಪಾರ್ಲರ್‌ನಲ್ಲಿ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್‌ ಅವರ ಗುಪ್ತ ಅಂಗಗಳಿಗೂ ಮಸಾಜ್‌ ಮಾಡಬೇಕಾಗಿತ್ತು’ ಎಂದು ಮಹಿಳೆ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು