ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ‘ಸಲಗ’ ಸವಾರಿ

ದುನಿಯಾ ವಿಜಯ್‌ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಅಭಿಮಾನಿಗಳು
Last Updated 4 ಏಪ್ರಿಲ್ 2021, 16:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಲಗ ಸಿನಿಮಾದ ಪ್ರಚಾರಕ್ಕಾಗಿ ವಾಣಿಜ್ಯ ನಗರಿಗೆ ಭಾನುವಾರ ಬಂದಿದ್ದ ನಟ ದುನಿಯಾ ವಿಜಯ್‌ ಹಾಗೂ ಅವರ ತಂಡದವರು ದಿನಪೂರ್ತಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ನಗರದ ದುರ್ಗಾ ಡೆವಲಪರ್ಸ್, ಪ್ರಮೋಟರ್ಸ್‌ ಮತ್ತು ದುರ್ಗಾ ಸ್ಪೋರ್ಟ್ಸ್ ಅಕಾಡೆಮಿಗೆ ಬಂದ ಕಲಾವಿದರು ಅಕಾಡೆಮಿಯ ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡರು. ವಿಜಯ್ ಜೊತೆ ಫೋಟೊಕ್ಕಾಗಿ ಅಕಾಡೆಮಿಯ ಪ್ರವೇಶದ್ವಾರದ ಬಳಿ ನೂರಾರು ಜನ ಮಕ್ಕಳು, ಯುವತಿಯರು ಕಾಯುತ್ತ ನಿಂತಿದ್ದರೂ; ಸೋಂಕು ಹರಡುವ ಭೀತಿಯ ಕಾರಣದಿಂದ ಸೀಮಿತ ಜನರಿಗಷ್ಟೇ ಒಳಗೆ ಪ್ರವೇಶ ನೀಡಲಾಯಿತು.

ಶಿರೂರು ಲೇ ಔಟ್‌ನಲ್ಲಿರುವ ಬಾಣಜಿ ಡಿ ಕಿಮ್ಜಿ ಕ್ರೀಡಾಂಗಣದಲ್ಲಿ ಸಂಜೆ ಸಲಗ ತಂಡದವರು ದುರ್ಗಾ ಸ್ಪೋರ್ಟ್ಸ್‌ ಮತ್ತು ಹುಬ್ಬಳ್ಳಿ ಪತ್ರಕರ್ತರ ತಂಡದ ಜೊತೆ ಕ್ರಿಕೆಟ್ ಪಂದ್ಯವಾಡಿ ಎರಡರಲ್ಲಿಯೂ ಗೆಲುವಿನ ಸವಾರಿ ಮಾಡಿದರು. ವಿಜಯ್‌, ಸಿನಿಮಾದಲ್ಲಿರುವ ಸಹನಟ ಡಾಲಿ ಧನಂಜಯ, ನಾಗಭೂಷಣ, ನಿರ್ಮಾಪಕ ಕೆ.ಪಿ. ಶ್ರೀಕಾಂತ್, ಸೇರಿದಂತೆ ಹಲವರು ಕ್ರೀಸ್‌ಗೆ ಬಂದಾಗ ಅಭಿಮಾನಿಗಳು ಚಪ್ಪಾಳೆಯ ಸ್ವಾಗತ ನೀಡಿದರು. ವಿಜಯ್‌ ಬೌಂಡರಿ ಬಾರಿಸಿದಾಗಲಂತೂ ಕೇಕೆ ಹೊಡೆದು ಸಂಭ್ರಮಿಸಿದರು.

ಕ್ಷೇತ್ರರಕ್ಷಣೆಗಾಗಿ ಬೌಂಡರ್‌ ಲೈನ್‌ ಗೆರೆಯ ಬಳಿ ನಿಂತಾಗ ಅಭಿಮಾನಿಗಳು ವಿಜಯ್‌ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಸಿನಿಮಾ ಕಲಾವಿದರು ಕ್ರಿಕೆಟ್‌ ಆಡುವುದನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಮೈದಾನದ ಬಳಿ ಬಂದರೂ ಕೋವಿಡ್‌ ಕಾರಣಕ್ಕೆ ಬಹಳಷ್ಟು ಜನರನ್ನು ಒಳಗೆ ಬಿಡಲಿಲ್ಲ. ಬಲವಂತವಾಗಿ ಮೈದಾನದೊಳಕ್ಕೆ ಬರುತ್ತಿದ್ದ ಜನರನ್ನು ತಡೆದು ಪೊಲೀಸರು ವಾಪಸ್‌ ಕಳುಹಿಸುತ್ತಿದ್ದ ಚಿತ್ರಣ ಸಾಮಾನ್ಯವಾಗಿತ್ತು. ಇದರಿಂದ ನಿರಾಸೆಗೆ ಒಳಗಾದ ಅಭಿಮಾನಿಗಳು ಮೈದಾನದ ಹೊರಗಿನಿಂದಲೇ ಪಂದ್ಯದ ಖುಷಿ ಕಣ್ತುಂಬಿಕೊಂಡರು.

ಸೋಂಕು ಚಿತ್ರಮಂದಿರಕ್ಕಷ್ಟೇ ಅಂಟಿಕೊಳ್ಳುತ್ತದೆಯೇ?: ವಿಜಯ್‌

ಹುಬ್ಬಳ್ಳಿ: ‘ಕೋವಿಡ್‌ ಸೋಂಕು ಬಹಳ ಚಾಣಾಕ್ಷ; ಜಿಮ್‌ ಹಾಗೂ ಚಿತ್ರಮಂದಿರಗಳಿಗೆ ಬರುವ ಜನರಿಗೆ ಮಾತ್ರ ಅಂಟಿಕೊಳ್ಳುತ್ತದೆ. ರಾಜಕೀಯ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಮಾರಂಭಗಳತ್ತ ಸೋಂಕು ಸುಳಿಯುವುದಿಲ್ಲ’ ಎಂದು ನಟ ದುನಿಯಾ ವಿಜಯ್‌ ಲೇವಡಿ ಮಾಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಚಿತ್ರ ಮಂದಿರಗಳಲ್ಲಿ ಏ. 7ರ ತನಕ ಮಾತ್ರ ಶೇ 100ರಷ್ಟು ಜನರಿಗೆ ಅವಕಾಶ ನೀಡಲಾಗುವುದು ಎಂದು ಹೇಳಿರುವ ಸರ್ಕಾರದ ನಿರ್ಧಾರದಿಂದ ಆಘಾತವಾಗಿದೆ. ಸರ್ಕಾರದಿಂದ ಆದ ಈ ಅನ್ಯಾಯವನ್ನು ಸರ್ಕಾರವೇ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರದ ಲೆಕ್ಕಾಚಾರದ ಹಿಂದೆ ಯಾವುದೇ ತರ್ಕವಿಲ್ಲ. ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ ಕೊಟ್ಟರೆ ಒಂದೂವರೆ ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ರಂಗ ಹಾಗೂ ಕಲಾವಿದರು ಬದುಕಿಕೊಳ್ಳುತ್ತಾರೆ. ಇಂಥ ಸಂದರ್ಭದಲ್ಲಿಯೇ ಸರ್ಕಾರ ನಿರ್ಬಂಧ ಹೇರುವುದು ಸರಿಯೇ?’ ಎಂದು ಪ್ರಶ್ನಿಸಿದರು.

’ಸಲಗ’ ಸಿನಿಮಾದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮಾತನಾಡಿ ‘ಸಿನಿಮಾದ ಚಿತ್ರೀಕರಣ ಹಾಗೂ ಉಳಿದ ಕೆಲಸಗಳು ಪೂರ್ಣಗೊಂಡು ವರ್ಷ ಕಳೆದಿದೆ. ಆದರೆ, ಸರ್ಕಾರದ ಆದೇಶದಿಂದ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕಲಾಗುತ್ತಿದ್ದು, ಶೇ 100ರಷ್ಟು ಸೀಟುಗಳ ಭರ್ತಿಗೆ ಅವಕಾಶ ಕೊಟ್ಟರಷ್ಟೇ ‘ಸಲಗ’ ಬಿಡುಗಡೆ ಮಾಡಲಾಗುವುದು’ ಎಂದ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT