ಸೋಮವಾರ, ಸೆಪ್ಟೆಂಬರ್ 20, 2021
22 °C

ಮಲೆನಾಡಿನಲ್ಲಿ ‘ಸಲಗ’ದ ಡ್ಯುಯೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದುನಿಯಾ’ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಸಲಗ’. ಕಳೆದ ಮಾರ್ಚ್‌ನಲ್ಲಿಯೇ ಇದು ಬಿಡುಗಡೆಯಾಗಬೇಕಿತ್ತು. ಕೋವಿಡ್‌–19 ಪರಿಣಾಮ ಬಿಡುಗಡೆಯ ದಿನಾಂಕ ಮುಂದೂಡಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದಲೂ ವಿಜಯ್‌ ನಟನೆಯ ಯಾವುದೇ ಸಿನಿಮಾ ತೆರೆ ಕಂಡಿಲ್ಲ. ಹಾಗಾಗಿ, ಇದರ ಮೇಲೆ ನಿರೀಕ್ಷೆ ದುಪ್ಪಟ್ಟುಗೊಂಡಿದೆ.

ಲಾಕ್‌ಡೌನ್‌ಗೂ ಮುನ್ನವೇ ಒಂದು ಹಾಡು ಹೊರತುಪಡಿಸಿದರೆ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿತ್ತು. ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಸಿದ್ದ ಚಿತ್ರತಂಡವು ಸರ್ಕಾರದ ಮಾರ್ಗಸೂಚಿ ಅನ್ವಯ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಮತ್ತು ಹಾಸನದ ಸಕಲೇಶಪುರಕ್ಕೆ ತೆರಳಿ ಅಲ್ಲಿನ ಸುಂದರ ಪರಿಸರದಲ್ಲಿ ಡ್ಯುಯೆಟ್‌ ಸಾಂಗ್‌ ಅನ್ನು ಚಿತ್ರೀಕರಿಸಿಕೊಂಡು ಬೆಂಗಳೂರಿಗೆ ಹಿಂದಿರುಗಿದೆ.

ಕೋವಿಡ್ ನಡುವೆಯೂ ಸರ್ಕಾರದ ಎಲ್ಲಾ ಸೂಚನೆಗಳನ್ನು ಪಾಲಿಸಿ ನಾಯಕ ಹಾಗೂ ನಾಯಕಿ ಸೇರಿದಂತೆ 12 ಮಂದಿ ತಂತ್ರಜ್ಞರ ತಂಡ ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿತ್ತಂತೆ. ಚರಣ್ ರಾಜ್ ಸಂಗೀತ ಸಂಯೋಜನೆಯ ‘ಮಳೆಯೇ ಮಳೆಯೇ ಅಂಬೆಗಾಲೊಡುತ್ತಾ ಸುರಿಯೇ...’ ಎನ್ನುವ ರೊಮ್ಯಾಂಟಿಕ್ ಹಾಡನ್ನು ಸಾಹಿತ್ಯಕ್ಕೆ ತಕ್ಕಂತೆಯೇ ಜಡಿ‌ಮಳೆಯಲ್ಲಿ ಚಿತ್ರೀಕರಿಸಿರುವುದು ವಿಶೇಷ.

ವಿಜಯ್ ಮತ್ತು ನಾಯಕಿ ಸಂಜನಾ ಆನಂದ್ ನಡುವಿನ ಈ ಪ್ರಣಯ ಗೀತೆ ಇದಾಗಿದೆ. ಎಡಬಿಡದೇ ಸುರಿಯುತ್ತಿದ್ದ ಮಳೆ, ಚಳಿಯನ್ನು ಲೆಕ್ಕಿಸದೆ ಶೂಟಿಂಗ್‌ ಮಾಡಲಾಗಿದೆ. ಛಾಯಾಗ್ರಾಹಕ ಶಿವಸೇನ ಕೆಲ‌ವು ದೃಶ್ಯಗಳನ್ನು ಮಳೆಯಲ್ಲಿಯೇ ಚಿತ್ರೀಕರಿಸಿದ್ದಾರೆ. ಜಡಿಮಳೆಯ ಒಂದು ಶಾಟ್‌ಗಾಗಿ ನಾಲ್ಕೈದು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಚಿತ್ರತಂಡ ಹೇಳಿದೆ.

ಕೆ.ಪಿ. ಶ್ರೀಕಾಂತ್‌ ಇದಕ್ಕೆ ಬಂಡವಾಳ ಹೂಡಿದ್ದಾರೆ. ‘ಡಾಲಿ’ ಖ್ಯಾತಿಯ ಧನಂಜಯ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಪಾತಕಲೋಕ, ಪೊಲೀಸ್‌ ಮತ್ತು ವ್ಯವಸ್ಥೆಯ ಸುತ್ತ ಇದರ ಚಿತ್ರಕಥೆ ಹೆಣೆಯಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು