ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ನಿರ್ದೇಶಕರ ನಟಿ...: ಇದು ‘ಸಲಗ’ ಸಿನಿಮಾ ನಟಿ ಸಂಜನಾ ಮನದ ಮಾತು

Last Updated 11 ಸೆಪ್ಟೆಂಬರ್ 2020, 4:36 IST
ಅಕ್ಷರ ಗಾತ್ರ

‘ಕೆಮಿಸ್ಟ್ರಿ ಆಫ್‌ ಕರಿಯಪ್ಪ‍’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟವರು ನಟಿ ಸಂಜನಾ ಆನಂದ್‌. ಇದರಲ್ಲಿ ಅವರದು ಕರಿಯಪ್ಪನ ಸೊಸೆ ಪಾತ್ರ. ತೆರೆಗೆ ಸಿದ್ಧವಾಗಿರುವ ‘ಸಲಗ’ ಸಿನಿಮಾದಲ್ಲಿ ಭೂಗತಲೋಕದ ಸೆಳೆತಕ್ಕೆ ಸಿಲುಕಿದ ನಾಯಕನಿಗೆ ನೆರವಾಗುವ ಬೋಲ್ಡ್‌ ಹುಡುಗಿ ಪಾತ್ರ. ‘ಶೋಕಿವಾಲ’ದಲ್ಲಿ ಅಪ್ಪಟ ಹಳ್ಳಿ ಹುಡುಗಿ. ‘ವಿಂಡೊಸೀಟ್‌’ ಚಿತ್ರದಲ್ಲಿ ಪಕ್ಕದ ಮನೆಯ ಹುಡುಗಿ. ಹೀಗೆ ವೃತ್ತಿಬದುಕಿನ ಎರಡು ವರ್ಷದ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ ಖುಷಿ ಅವರಲ್ಲಿದೆ.

ಸಂಜನಾ ಬಣ್ಣದಲೋಕದ ಸೆಳೆತಕ್ಕೆ ಸಿಲುಕಿದ್ದು ಆಕಸ್ಮಿಕ. ಮೂಲತಃ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದ ಅವರಿಗೆ ಸ್ನೇಹಿತರು ನಿರ್ಮಿಸಿದ್ದ ಕಿರುಚಿತ್ರವೇ ಬೆಳ್ಳಿತೆರೆ ಪ್ರವೇಶಿಸಲು ರಹದಾರಿಯಾಯಿತು. ಅದೃಷ್ಟ ಪರೀಕ್ಷೆಗೆ ಇಳಿದ ಅವರಿಗೆ ಸಿನಿಮಾದಲ್ಲಿ ಅವಕಾಶ ಸಿಗುವುದೇ ಅಪರೂಪ; ಬದ್ಧತೆ ಇದ್ದರಷ್ಟೇ ಇಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬ ಸತ್ಯದ ಅರಿವಾಗಲು ಬಹುಕಾಲ ಹಿಡಿಯಲಿಲ್ಲ.

‘ದುನಿಯಾ’ ವಿಜಯ್‌ ನಿರ್ದೇಶಿಸಿ, ನಾಯಕನಾಗಿರುವ ‘ಸಲಗ’ ಚಿತ್ರಕ್ಕೆ ಅವರೇ ನಾಯಕಿ. ಸಕಲೇಶಪುರದ ಮಳೆಯಲ್ಲಿ ಮಿಂದೆದ್ದು ಚಿತ್ರೀಕರಿಸಿರುವ ಈ ಚಿತ್ರದ ‘ಮಳೆಯೇ ಮಳೆಯೇ...’ ಹಾಡಿಗೆ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದು ಸಂಜನಾ ಅವರ ಖುಷಿಯನ್ನೂ ಹೆಚ್ಚಿಸಿದೆ.

ಅವರು ಎಂದಿಗೂ ಅಷ್ಟೊಂದು ಮಳೆಯಲ್ಲಿ ಮಿಂದೆದ್ದಿರಲಿಲ್ಲವಂತೆ. ‘ಮೇಕಪ್‌ ಕಲಾವಿದರು, ಸಹಾಯಕರು ಇಲ್ಲದೆಯೇ ಈ ಸಾಂಗ್‌ನ ಶೂಟಿಂಗ್‌ಗೆ ಸಕಲೇಶಪುರಕ್ಕೆ ಹೋಗಿದ್ದೆವು. ದಟ್ಟಕಾಡು, ಬೆಟ್ಟ, ಮಳೆ ಎಲ್ಲವೂ ಮಹಾಕಾವ್ಯವನ್ನೇ ಸೃಷ್ಟಿಸಿತ್ತು.ನಾನು ಮೊದಲ ಬಾರಿಗೆ ಮಳೆಯಲ್ಲಿ ಮಿಂದೆದ್ದಿದ್ದು ಅಲ್ಲಿಯೇ. ಈ ಹಾಡಿಗೆ ತೊಯ್ದು ಹೋದೆ. ಮುಂದೆ ನಾನು ಇಂತಹ ಮಳೆಯಲ್ಲಿ ತೊಯ್ಯುತ್ತೇನೆ ಎಂಬುದು ನನಗೆ ಗೊತ್ತಿಲ್ಲ’ ಎಂದು ನೆನಪಿಸಿಕೊಳ್ಳತೊಡಗಿದರು.

ಸಂಜನಾ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಾತ್ರಗಳಲ್ಲಿ ನಟಿಸಲು ಅವರು ವಿಶೇಷ ತಯಾರಿಯನ್ನು ಮಾಡಿಕೊಳ್ಳುವುದಿಲ್ಲವಂತೆ. ಎರಡು ವರ್ಷಗಳಲ್ಲಿ ಸಿಕ್ಕಿರುವ ಪಾತ್ರಗಳಿಗೆ ನ್ಯಾಯ ಒದಗಿಸಿರುವ ಖುಷಿಯೂ ಅವರಲ್ಲಿದೆ.

‘ಶೋಕಿವಾಲ’, ‘ಸಲಗ’ದಲ್ಲಿ ಭಿನ್ನವಾದ ಪಾತ್ರದಲ್ಲಿ ನಟಿಸಿದ್ದೇನೆ. ಆದರೆ, ಪಾತ್ರಕ್ಕೆಂದೇ ನಾನು ವಿಶೇಷ ತಯಾರಿ ಮಾಡಿಕೊಳ್ಳುವುದಿಲ್ಲ. ನಿರ್ದೇಶಕರ ತಲೆಯಲ್ಲಿ ಸಿನಿಮಾದ ಹೀರೊಯಿನ್‌ ಪಾತ್ರದ ಬಗ್ಗೆ ಕಲ್ಪನೆಯೊಂದು ಇರುತ್ತದೆ. ಸೆಟ್‌ಗೆ ಹೋಗುವುದಕ್ಕೂ ಮೊದಲೇ ನನಗೆ ಸ್ಕ್ರಿಪ್ಟ್ ನೀಡಿರುತ್ತಾರೆ. ಡೈಲಾಗ್‌ ಕೂಡ ಇರುತ್ತದೆ. ನಿರ್ದೇಶಕರು ಹೇಳಿದಂತೆ ನಟಿಸುವುದಷ್ಟೇ ನನ್ನ ಗುರಿ’ ಎಂದು ವಿವರಿಸುತ್ತಾರೆ.

‘ನಾನು ಈಗಷ್ಟೇ ಚಿತ್ರರಂಗದಲ್ಲಿ ಅಂಬೆಗಾಲು ಇಡುತ್ತಿರುವೆ. ಬಣ್ಣದಲೋಕದ ಎಬಿಸಿಡಿ ಈಗ ಅರ್ಥವಾಗುತ್ತಿದೆ. ನನಗೆ ಕನಸಿನ ಪಾತ್ರ ಎಂಬುದು ಯಾವುದೂ ಇಲ್ಲ. ಆದರೆ, ಭಿನ್ನವಾದ ‍ಪಾತ್ರಗಳೇ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಅಂತಹ ಕನಸು ಮೂಡಬಹುದೇ; ಅದು ನನಗೆ ಗೊತ್ತಿಲ್ಲ. ನಾನು ನಟಿಸುವ ಪಾತ್ರಗಳು ಮೌಲ್ಯಯುತವಾಗಿರಬೇಕು. ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿರಬೇಕು ಎಂಬುದಷ್ಟೇ ನನ್ನ ಕನಸು. ಸಿಕ್ಕಿದ ಪಾತ್ರಗಳಿಗೆ ಪರದೆ ಮೇಲೆ ನ್ಯಾಯ ನೀಡುವುದಷ್ಟೇ ನನ್ನ ಆದ್ಯತೆ’ ಎನ್ನುತ್ತಾರೆ ಅವರು.

ಲಾಕ್‌ಡೌನ್‌ ಅವಧಿಯಲ್ಲಿ ಅವರು ಸಾಕಷ್ಟು ಕಥೆಗಳನ್ನು ಕೇಳಿದ್ದಾರಂತೆ. ಆದರೆ, ಯಾವುದೇ ಸಿನಿಮಾಗಳನ್ನು ಅವರು ಒಪ್ಪಿಕೊಂಡಿಲ್ಲ. ‘ಮಹಿಳಾ ಕೇಂದ್ರಿತ ಸಿನಿಮಾ ಸ್ಕ್ರಿಪ್ಟ್‌ಗಳು ಬಂದಿಲ್ಲ. ಅವಕಾಶ ಲಭಿಸಿದರೆ ಅಂತಹ ಸಿನಿಮಾಗಳಲ್ಲೂ ನಟಿಸಲು ಸಿದ್ಧ. ಇಂತಹದ್ದೇ ಪಾತ್ರ ಮಾಡಬೇಕು ಎಂಬ ಆಸೆ ನನಗಿಲ್ಲ. ಪ್ರತಿಯೊಂದು ಪಾತ್ರದಲ್ಲೂ ಇಷ್ಟಪಟ್ಟೆ ನಟಿಸುತ್ತೇನೆ’ ಎನ್ನುತ್ತಾರೆ.

ಸಂಜನಾ ನಟನೆಯ ‘ಅದ್ದೂರಿ ಲವ್’ ಚಿತ್ರದ ಶೂಟಿಂಗ್‌ ನವೆಂಬರ್‌ನಲ್ಲಿ ಶುರುವಾಗಲಿದೆಯಂತೆ. ಶೀತಲ್‌ ಶೆಟ್ಟಿ ನಿರ್ದೇಶನದ ‘ವಿಂಡೋ ಸೀಟ್’‌ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಕ್ರೈಮ್‌ ಥ್ರಿಲ್ಲರ್‌ ಚಿತ್ರ ಇದು. ಇದರಲ್ಲಿ ಅವರು‌ ನಿರೂಪ್‌ ಭಂಡಾರಿಗೆ ನಾಯಕಿಯಾಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT