ಪ್ರೀತ್ಸೆ ಪ್ರೀತ್ಸೆ ಎಂದು ಸಮಂತಾ ಹಿಂದೆ ಬಿದ್ದ ಪೋರ!

ನಟಿ ಸಮಂತಾ ಅಕ್ಕಿನೇನಿ ಸೌಂದರ್ಯದ ಖನಿ. ಪ್ರತಿಭಾವಂತ ನಟಿಯೂ ಹೌದು. ಆಕೆ ಬಣ್ಣದಲೋಕ ಪ್ರವೇಶಿಸಿದ್ದು, ತೆಲುಗಿನ ‘ಯೇ ಮಾಯಾ ಚೆಸಾವೆ’ ಚಿತ್ರದ ಮೂಲಕ. ಈ ಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಯೂ ಆಕೆಯ ಮುಡಿಗೇರಿತು. ನಾಗಚೈತನ್ಯ ನಾಯಕರಾಗಿದ್ದ ಈ ಸಿನಿಮಾ ಆಕೆಯ ವೃತ್ತಿಬದುಕಿಗೂ ಭದ್ರ ಬುನಾದಿ ಹಾಕಿತು. ಕೊನೆಗೆ, ನಾಗಚೈತನ್ಯ ಅವರೇ ಆಕೆಯ ಬಾಳಸಂಗಾತಿಯಾದರು.
ಪ್ರಯೋಗಾತ್ಮಕ ಚಿತ್ರಗಳಿಗೆ ಒಗ್ಗಿಕೊಳ್ಳುವುದರಲ್ಲೂ ಸಮಂತಾ ಹಿಂದಡಿ ಇಟ್ಟವರಲ್ಲ. ಮದುವೆ ಬಳಿಕವೂ ಅವರು ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯದು ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ವೃತ್ತಿಬದುಕು, ವೈಯಕ್ತಿಕ ಬದುಕಿನ ಬಗ್ಗೆ ಮಾಹಿತಿ ಹಂಚಿಕೊಳ್ಳುವುದರಲ್ಲಿಯೂ ಆಕೆಗೆ ಯಾವುದೇ ಮುಜುಗರವಿಲ್ಲ.
ಪ್ರಸ್ತುತ ಸಮಂತಾ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ ತುಣುಕು ಈಗ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಪೋರನೊಬ್ಬ ಆಕೆಗೆ ‘ಪ್ರೀತಿಯ ನಿವೇದನೆ’ ಮಾಡಿಕೊಂಡಿರುವ ವಿಡಿಯೊ ಇದಾಗಿದೆ. ನೋಟ್‌ಬುಕ್‌ನ ಪುಟ ಪುಟಗಳಲ್ಲೂ ಆ ಪೋರ ‘i love you sam' ಎಂದು ಬರೆದಿದ್ದಾನೆ. ಪ್ರೀತಿಯ ಚಿಹ್ನೆಯೊಟ್ಟಿಗೆ ‘ಜಾನು’ ಎಂದೂ ಬರೆದಿದ್ದಾನೆ(ಜಾನು –ಸಮಂತಾ ನಟನೆಯ ಹೊಸ ಚಿತ್ರದ ಹೆಸರು).
Oh gosh your mom must be angry with me .. Thankyou for your love but please study 🤗❤️ https://t.co/b9J3o5rWXu
— Samantha Akkineni (@Samanthaprabhu2) January 27, 2020
ಇದನ್ನು ಬರೆಯಲು ಆತ 3ಗಂಟೆ 15 ನಿಮಿಷ ವ್ಯಯಿಸಿದ್ದಾನಂತೆ. ಜೊತೆಗೆ, ಇದನ್ನು ಬರೆಯುವಾಗ ನನ್ನ ಅಮ್ಮನಿಂದಲೂ ಬೈಯಿಸಿಕೊಂಡಿದ್ದೇನೆ ಎಂದಿದ್ದಾನೆ. ‘ಸಮಂತಾ ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನನ್ನ ಪ್ರೀತಿಯ ಪಯಣ ಈಗ ಆರಂಭಗೊಂಡಿದೆ. ಇದು ಮುಗಿಯದ ಪಯಣ’ ಎಂದು ಭಾವುಕವಾಗಿ ಬರೆದುಕೊಂಡಿದ್ದಾನೆ.
‘ನಿನ್ನ ಈ ವರ್ತನೆಯಿಂದ ನಿಮ್ಮ ಅಮ್ಮ ನನ್ನ ಮೇಲೆ ಕೋಪಗೊಳ್ಳುತ್ತಾರೆ’ ಎಂದು ಈ ಪೋರನ ಹುಚ್ಚಾಟಕ್ಕೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. ‘ನಿನ್ನ ಪ್ರೀತಿಗೆ ಅಭಿನಂದನೆ ಸಲ್ಲಿಸುತ್ತೇನೆ. ಓದಿನ ಕಡೆಗೆ ಗಮನಹರಿಸು’ ಎಂದು ಬುದ್ಧಿವಾದವನ್ನೂ ಅವರು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.