ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಸಂಚಾರಿ ವಿಜಯ್‌ ಜನ್ಮದಿನ: ಅಗಲಿದ ಗೆಳೆಯನನ್ನು ನೆನೆದ ನಟರು

Last Updated 17 ಜುಲೈ 2021, 5:48 IST
ಅಕ್ಷರ ಗಾತ್ರ

ಬೆಂಗಳೂರು: ಇಂದು ರಾಷ್ಟ್ರಪ್ರಶಸ್ತಿ ವಿಜೇತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನ. ಈ ಸಂದರ್ಭದಲ್ಲಿ ನೂರಾರು ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿದ್ದ ಅವರ ಗೆಳೆಯರು ವಿಜಯ್‌ ಜೊತೆಗಿನ ಒಡನಾಟವನ್ನು ಸಾಮಾಜಿಕ ಜಾಲತಾಣಗಳ ಮುಖಾಂತರ ನೆನಪಿಸಿಕೊಂಡಿದ್ದಾರೆ.

ಕಳೆದ ಜೂನ್‌ 12ರ ರಾತ್ರಿ ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಜಯ್‌ ಜೂನ್‌ 15ರ ಮುಂಜಾನೆ 3.44ಕ್ಕೆ ಮೃತಪಟ್ಟಿದ್ದರು. ಅಪಘಾತದ ನಂತರ ಮಿದುಳು ನಿಷ್ಕ್ರಿಯಗೊಂಡ ಕಾರಣ, ಅಂಗಾಂಗ ದಾನಕ್ಕೆ ಕುಟುಂಬದ ಸದಸ್ಯರು ಒಪ್ಪಿಗೆ ನೀಡಿದ್ದರು. ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದ ವಿಜಯ್‌, ಅವರ ಏಳು ಅಂಗಾಂಗಳನ್ನು ದಾನ ಮಾಡಲಾಗಿತ್ತು. ಏಳು ಜನರಿಗೆ ವಿಜಯ್‌ ಜೀವ ನೀಡಿದ್ದರು. ವಿಜಯ್‌ ಅವರ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಪಂಚೇನಹಳ್ಳಿ ಗ್ರಾಮದಲ್ಲಿ ವಿಜಯ್‌ ಅಂತ್ಯಕ್ರಿಯೆ ನಡೆದಿತ್ತು.

‘ನಿನ್ನ ವಿಚಾರಗಳು, ನಿನ್ನ ಪ್ರೀತಿ, ನಿನ್ನ ಗೆಳೆತನ ಎಂದೆಂದಿಗೂ ಅಮರ...’ ಎಂದು ನಟ ಸತೀಶ್‌ ನೀನಾಸಂ ಆತ್ಮೀಯ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ. ‘ಜನ್ಮದಿನದ ಶುಭಾಶಯಗಳು ಗೆಳೆಯ..Miss you’ ಎಂದು ನಟ ನೆನಪಿರಲಿ ಪ್ರೇಮ್‌ ಟ್ವೀಟ್‌ ಮಾಡಿದ್ದಾರೆ. ನೂರಾರು ಅಭಿಮಾನಿಗಳೂ ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

‘ಲಂಕೆ’ ಪೋಸ್ಟರ್‌ ಬಿಡುಗಡೆ

ನಟ ಲೂಸ್‌ಮಾದ ಯೋಗೇಶ್ ನಾಯಕನಾಗಿ ನಟಿಸಿರುವ ‘ಲಂಕೆ’ ಚಿತ್ರದ ಪ್ರಮುಖ ಪಾತ್ರದಲ್ಲಿ ಸಂಚಾರಿ ವಿಜಯ್ ನಟಿಸಿದ್ದಾರೆ. ವಿಜಯ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡವು ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ. ಸರ್ಕಾರ ಚಿತ್ರಮಂದಿರಗಳ ಆರಂಭಕ್ಕೆ ಅನುಮತಿ ನೀಡಿದರೆ, ಸೆಪ್ಟೆಂಬರ್‌ನಲ್ಲಿ ‘ಲಂಕೆ’ ಚಿತ್ರ ತೆರೆಗೆ ಬರಲಿದೆ. ಸಾಹಸ ಪ್ರಧಾನ ಈ ಚಿತ್ರವನ್ನು ರಾಮ್ ಪ್ರಸಾದ್ ಎಂ.ಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

‘ಪಿರಂಗಿಪುರ’ ವಿಡಿಯೊ ಅನಾವರಣ

ಪಂಚ ಭಾಷೆಯಲ್ಲಿ ತಯಾರಾಗುತ್ತಿರುವಸಂಚಾರಿ ವಿಜಯ್‌ ಅವರ ಬಹುನಿರೀಕ್ಷಿತಾ ‘ಪಿರಂಗಿಪುರ’ ಚಿತ್ರದ, ಮೊದಲ ಪಾತ್ರ ಪರಿಚಯದ ಒಂದು ವಿಡಿಯೊ ಮತ್ತು ಪೋಸ್ಟರ್ ಬಿಡುಗಡೆ ಜೊತೆ ‘ಸೈಲೆಂಟ್ ಸ್ಟಾರ್’ ಎಂಬ ಬಿರುದನ್ನು ನೀಡಲು ಚಿತ್ರತಂಡ ನಿರ್ಧರಿಸಿದೆ. ಪ್ರಿಸ್ವಿಸ್ ಸ್ಟುಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಶನಿವಾರ ಸಂಜೆ 6ಕ್ಕೆ ವಿಡಿಯೊ ಅನಾವರಣಗೊಳ್ಳಲಿದೆ.

‘ಈ ಚಿತ್ರದಲ್ಲಿ ಸಂಚಾರಿ ವಿಜಯ್ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಿತ್ರದ ಶೇ30 ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಚಿತ್ರೀಕರಣ ಲಾಕ್‌ಡೌನ್‌ನಿಂದಾಗಿ ಮುಂದೂಡಲ್ಪಟ್ಟಿತ್ತು. ಈ ನಡುವೆ ವಿಜಯ್‌ ಆಕಸ್ಮಿಕವಾಗಿ ವಿಧಿವಶರಾದರು. ಈ ಚಿತ್ರದಲ್ಲಿ ಬಹಳ ದೊಡ್ಡ ತಾರಾಗಣವಿದೆ, ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗುತ್ತಿರುವ, ಅತಿ ದೊಡ್ಡ ಬಜೆಟ್‌ನ ಚಿತ್ರ ಇದಾಗಿದೆ. ವಿಜಯ್ ವಿಧಿವಶರಾದ ಮೇಲೆ, ಚಿತ್ರತಂಡ ಸದ್ಯದಲ್ಲಿ ಅವರ ಪಾತ್ರಕ್ಕೆ ಅರ್ಥ ಕೊಡುವ ಪಾತ್ರದಾರಿಯನ್ನು ಹುಡುಕುತ್ತಿದ್ದೇವೆ’ ಎಂದು ನಿರ್ದೇಶಕರಾದ ಜನಾರ್ಧನ್ ರೆಡ್ಡಿ ಅವರು ತಿಳಿಸಿದ್ದಾರೆ.

ಕೃತಿ ರೂಪದಲ್ಲಿ ವಿಜಯ್‌ ಜೀವನ ಕಥನ

ವಿಜಯ್‌ ಜನ್ಮದಿನದಂದು ಆತ್ಮಕಥೆ ಮಾದರಿಯಲ್ಲೇ ರೂಪಗೊಂಡ ಕೃತಿ ‘ಅನಂತವಾಗಿರು’ ಬಿಡುಗಡೆಯಾಗಿದೆ. ವಿಜಯ್ ಅವರ ಬಾಲ್ಯ ಮತ್ತು ಜೀವನದ ಬಗ್ಗೆ ವಿಜಯ್ ಸಹೋದರರು ಮತ್ತು ಕುಟುಂಬ ಸದಸ್ಯರು, ವಿಜಯ್‌ ಬಾಲ್ಯದ ಗೆಳೆಯರು, ಶಾಲಾ ಗೆಳೆಯರು, ಜತೆಗಿದ್ದವರು ನೆನೆಪುಗಳನ್ನು ಹಂಚಿಕೊಂಡಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾ, ಸಂಗೀತ ಹೀಗೆ ವಿಜಯ್ ಅವರು ಸಾಗಿ ಬಂದ ನಾನಾ ಕ್ಷೇತ್ರಗಳ ಬಗ್ಗೆ ಅವರ ಒಡನಾಡಿಗಳು, ಸಿನಿಮಾ ನಿರ್ದೇಶಕರು, ರಂಗಭೂಮಿ ಗೆಳೆಯರು, ಸಂಗೀತದ ಸಹಪಾಠಿಗಳು ಹೀಗೆ 32ಕ್ಕೂ ಅಧಿಕ ಲೇಖಕರು ವಿಜಯ್‌ ಅವರನ್ನು ನೆನಪಿಸಿಕೊಂಡಿದ್ದಾರೆ. ಬರಹಗಾರ ಮತ್ತು ಪತ್ರಕರ್ತ ಡಾ.ಶರಣು ಹುಲ್ಲೂರು ಅವರ ಸಂಪಾದಕತ್ವದಲ್ಲಿ ಈ ಕೃತಿ ಮೂಡಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT