ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Interview | ರಾಮನ ಅವತಾರವೆತ್ತಿದ ರಿಷಿ!

Published 18 ಏಪ್ರಿಲ್ 2024, 23:53 IST
Last Updated 18 ಏಪ್ರಿಲ್ 2024, 23:53 IST
ಅಕ್ಷರ ಗಾತ್ರ

ಹಲವು ವರ್ಷಗಳ ಬಳಿಕ ನಿಮ್ಮ ಸಿನಿಮಾವೊಂದು ಬಿಡುಗಡೆಯಾಗುತ್ತಿದೆ. ವಿಳಂಬಕ್ಕೆ ಕಾರಣ?

ಕೆಲವೊಂದಿಷ್ಟು ವಿಚಾರಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಮೊದಲ ಸಿನಿಮಾ ಮಾಡಿದಾಗ ‘ನನ್ನನ್ನು ಜನ ಗುರುತಿಸಬೇಕು’ ಎಂದು ನಟನೆಯ ಬಗ್ಗೆಯಷ್ಟೇ ಯೋಚನೆ ಮಾಡುತ್ತಿದ್ದೆ. ಇದೀಗ ಜನರಿಗೆ ಒಂದೊಳ್ಳೆಯ ಸಿನಿಮಾ ನೀಡಬೇಕು ಎನ್ನುವ ಉದ್ದೇಶ ಹೊತ್ತು ಹೆಜ್ಜೆ ಹಾಕುತ್ತಿದ್ದೇನೆ. ಕುಟುಂಬವೊಂದು ಒಟ್ಟಾಗಿ ಕುಳಿತು ವೀಕ್ಷಿಸಲು ಮಾಡಿರುವ ಸಿನಿಮಾ ‘ರಾಮನ ಅವತಾರ’. ಈ ಉದ್ದೇಶವಿಟ್ಟುಕೊಂಡೇ ಸಿನಿಮಾ ಆರಂಭಿಸಿದ್ದೆವು. ಇದನ್ನು ಸಾಧಿಸಿದ್ದೇವೆ ಎನ್ನುವ ಭರವಸೆ ಇದೆ. ಕಳೆದ ಫೆಬ್ರುವರಿಯಲ್ಲೇ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದ್ದ ಕಾರಣ, ನಮ್ಮ ಸಿನಿಮಾವನ್ನು ಮುಂದೂಡಿದೆವು. 

‘ಕವಲುದಾರಿ’ ಆದ ಬಳಿಕ ಒಪ್ಪಿಕೊಂಡಿದ್ದ ಸಿನಿಮಾ ಇದು. ಕೋವಿಡ್‌ ಲಾಕ್‌ಡೌನ್‌ ಬಳಿಕ ‘ರಾಮನ ಅವತಾರ’ ಸಿನಿಮಾದ ತಂಡವೇ ಬದಲಾಯಿತು. ಪೋಸ್ಟ್‌ ಪ್ರೊಡಕ್ಷನ್‌ ಸಂದರ್ಭದಲ್ಲೂ ಕೊಂಚ ವಿಳಂಬವಾಯಿತು. ಈ ಇಡೀ ಸಿನಿಮಾದ ಪಯಣದಲ್ಲಿ ಮೂರು ವರ್ಷ ಕಳೆದೆ. ಪಾತ್ರದ ಆಯ್ಕೆ ವಿಚಾರದಲ್ಲಿ ಕಠಿಣ ನಿಯಮಗಳನ್ನು ನಾನು ಹಾಕಿಕೊಂಡಿಲ್ಲ. ಪಾತ್ರಕ್ಕೆ ಇರುವ ಉದ್ದೇಶವನ್ನಷ್ಟೇ ನೋಡುತ್ತೇನೆ. ಒಬ್ಬ ನಟ, ಸ್ಕ್ರಿಪ್ಟ್‌ ಮತ್ತು ಪಾತ್ರದ ರಚನೆ ಮೇಲೆ ಅವಲಂಬಿತವಾಗಿರುತ್ತಾನೆ. ಇದು ಸರಿಯಾಗಿದ್ದಲ್ಲಿ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಕಥೆಯ ಉದ್ದೇಶ ಮತ್ತು ಪಾತ್ರದ ಉದ್ದೇಶ ಹೊಂದಾಣಿಕೆಯಾದಲ್ಲಿ ನಾನು ಎಲ್ಲ ಜಾನರ್‌ನ ಪಾತ್ರಗಳನ್ನು ಮಾಡಲು ತೆರೆದುಕೊಂಡಿದ್ದೇನೆ. ನನಗೆ ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎಂದಿದೆ. ಆದರೆ ಹಲವು ಬಾರಿ ನಮಗೆ ಬೇಕಾದ ಪಾತ್ರಗಳು ಸಿಗುವುದಿಲ್ಲ. ಮಾಡಿರುವ ಸಿನಿಮಾ ವಿಳಂಬವಾದರೂ ತೊಂದರೆ ಇಲ್ಲ. ನನ್ನ ನಟನೆಯ ಮೇಲೆ ನಿರೀಕ್ಷೆ ಇಟ್ಟುಕೊಂಡು ಬರುವ ಪ್ರೇಕ್ಷಕರ ನಂಬಿಕೆ ಉಳಿಸಿಕೊಳ್ಳಬೇಕು ಎನ್ನುವುದಷ್ಟೇ ನನ್ನ ಗುರಿ.     

‘ರಾಮನ ಅವತಾರ’ವೆತ್ತಲು ಕಾರಣ? 

ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ನಿರ್ದೇಶಕ ವಿಕಾಸ್‌ ಪಂಪಾಪತಿ. ಅವರ ನಾಟಿ ಫ್ಯಾಕ್ಟರಿ ಯೂಟ್ಯೂಬ್‌ ಚಾನೆಲ್‌ ಗಮನಿಸಿರಬಹುದು. ಅವರ ಬರವಣಿಗೆ ನನಗೆ ಇಷ್ಟವಾಯಿತು. ಅದರಲ್ಲಿ ಯಾವುದೇ ಕೀಳು ಅಭಿರುಚಿ ಇಲ್ಲ. ಹಾಸ್ಯವು ಯಾರನ್ನೂ ನಿಂದಿಸಬಾರದು. ಇಡೀ ಕುಟುಂಬವನ್ನು ನಗಿಸುವ ಅಂಶ ಆ ಬರವಣಿಗೆಯಲ್ಲಿ ಇರಬೇಕು. ವಿಕಾಸ್‌ ಅವರ ಕಥೆಯಲ್ಲಿ ಇಂತಹ ಅಂಶಗಳಿದ್ದವು. ರಾಮಾಯಣದಲ್ಲಿ ಇರುವ ಕೆಲ ವಿಷಯಗಳನ್ನು ಪ್ರಸ್ತುತ ಸಮಯದಲ್ಲಿ ಹೇಳುವ ಕಥೆ ಇದಾಗಿದೆ. ಸಿನಿಮಾದ ಉದ್ದೇಶ ನನಗೆ ಹಿಡಿಸಿತು. ಸ್ಕ್ರೀನ್‌ಪ್ಲೇ ಆಕರ್ಷಿಸಿತು. ಹಾಸ್ಯ ಪ್ರಧಾನ ಸಿನಿಮಾ ಮಾಡಬೇಕು ಎಂದು ಈ ಸಿನಿಮಾವನ್ನು ಆರಂಭಿಸಿರಲಿಲ್ಲ. ಹಾಸ್ಯ ಎನ್ನುವುದು ನಮ್ಮಿಬ್ಬರ ಶಕ್ತಿಯೂ ಆದ ಕಾರಣ, ಸಿನಿಮಾದಲ್ಲಿ ಹಾಸ್ಯ ಮುನ್ನೆಲೆಗೆ ಬಂದಿದೆ.

‘ರಾಮಕೃಷ್ಣ’ ಎನ್ನುವುದು ನನ್ನ ಪಾತ್ರದ ಹೆಸರು. ಊರಿಗೆ ಒಬ್ಬ ನಾಯಕನಾಗಬೇಕು, ಆ ಊರಿಗೆ ಸಹಾಯ ಮಾಡಬೇಕು ಎನ್ನುವುದು ಆತನ ಗುರಿ. ಊರಿನ ಯುವಜನರು ಊರು ಬಿಟ್ಟು ಹೋಗಬಾರದು, ಇದ್ದಲ್ಲೇ ಅವರಿಗೆ ಕೆಲಸದ ಅವಕಾಶ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಆತನ ಪಯಣ ಆರಂಭವಾಗುತ್ತದೆ. ಆತನಿಗೆ ಎದುರಾಗುವ ಅಡೆತಡೆಗಳು, ಅದನ್ನು ಆತ ಹೇಗೆ ಎದುರಿಸುತ್ತಾನೆ ಎನ್ನುವುದೇ ಕಥೆ. 

ರಿಷಿಗೆ ಯಾವ ಜಾನರ್‌ ಇಷ್ಟ?

‘ರಾಮನ ಅವತಾರ’ದಂತಹ ಸಿನಿಮಾ ಮಾಡಿದಾಗ ನಟನಾಗಿ ಬಹಳ ಉತ್ಸಾಹದಿಂದ ತೊಡಗಿಸಿಕೊಳ್ಳುತ್ತೇನೆ. ಪ್ರತಿ ದೃಶ್ಯದಲ್ಲೂ ಖುಷಿ ಇರುತ್ತದೆ. ಈ ಮಾದರಿ ಸಿನಿಮಾಗಳಲ್ಲಿ ನಾನು ಜೀವಿಸುತ್ತೇನೆ. ‘ಶೈತಾನ್‌’ನಂತಹ ಕಥಾಹಂದರದ ಪಾತ್ರಗಳಲ್ಲಿ ಬಹಳ ಕಾಲ ಉಳಿಯುವುದು ಕಷ್ಟ. ಅದು ಸವಾಲು ಕೂಡಾ ಹೌದು. ನಟನಾಗಿ ಎಲ್ಲ ಜಾನರ್‌ಗಳನ್ನು ಇಷ್ಟಪಡುತ್ತೇನೆ. ಹಾಸ್ಯ ಪ್ರಧಾನ ಚಿತ್ರಗಳನ್ನೇ ಮಾಡುತ್ತಿರುವುದೂ ಕಷ್ಟ. 

ನಿಮ್ಮ ಜೊತೆಗೆ ಶರಣ್‌ ಅವರಿಗೆ ತೆರೆ ಹಂಚಿಕೊಳ್ಳಬೇಕಂತೆ...

ಶರಣ್‌ ಅವರು ನನ್ನ ನೆಚ್ಚಿನ ನಟರಲ್ಲಿ ಒಬ್ಬರು. ಇಡೀ ಚಿತ್ರರಂಗದಲ್ಲಿ ಒಬ್ಬ ಅದ್ಭುತ ಕಲಾವಿದ ಅವರು. ಈ ರೀತಿ ಮನರಂಜನೆ ನೀಡುವ ಕಲಾವಿದರನ್ನು ನಾವು ಹೆಚ್ಚು ಪ್ರಶಂಸೆ ಮಾಡುವುದಿಲ್ಲ. ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಸಿನಿಮಾಗಳಲ್ಲಿ ಒಬ್ಬ ನಟನಿಗೆ ಸಿಗುವ ಪ್ರಶಂಸೆ, ಒಬ್ಬ ಹಾಸ್ಯನಟನಿಗೆ ಸಿಗುವುದಿಲ್ಲ. ಒಬ್ಬರನ್ನು ನಗಿಸುವುದು ಸುಲಭವಲ್ಲ. ಅದೊಂದು ಗಂಭೀರವಾದ ಕಲೆ. ಶರಣ್‌ ಅವರು ಅದನ್ನು ಸುಲಭವಾಗಿ ಕಾಣುವಂತೆ ಮಾಡುತ್ತಾರೆ. ಅವರಿಗಿರುವ ಕಲೆಯನ್ನು ನಾವು ಗೌರವಿಸಬೇಕು. ವೇದಿಕೆಯೊಂದರಲ್ಲಿ ಅವರು ನನ್ನ ಜೊತೆ ನಟಿಸಬೇಕು ಎಂದಿದ್ದರು. ಮುಗ್ಧ ಮನಸ್ಸಿನಿಂದ ಅವರು ಹಾಗೆ ಹೇಳಿರುವುದು ಅವರ ದೊಡ್ಡ ಗುಣ ತೋರಿಸುತ್ತದೆ. ಅವಕಾಶ ಬಂದರೆ ಖಂಡಿತವಾಗಿಯೂ ಅವರೊಂದಿಗೆ ನಟಿಸುತ್ತೇನೆ.  

ಕನ್ನಡದಲ್ಲಿ ಹೊಸ ಪ್ರಾಜೆಕ್ಟ್‌ಗಳು...

‘ರಾಮನ ಅವತಾರ’ ಸಿನಿಮಾ ಮೇ 10ಕ್ಕೆ ತೆರೆಕಾಣುತ್ತಿದೆ. ಕೆ.ಎಸ್‌. ನಂದೀಶ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ರುದ್ರ ಗರುಡ ಪುರಾಣ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದೆ. ಇದು ಡಬ್ಬಿಂಗ್‌ ಹಂತದಲ್ಲಿದೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಹೊಸ ಪ್ರಾಜೆಕ್ಟ್‌ ಒಪ್ಪಿಕೊಂಡಿದ್ದೇನೆ. ಇದರಲ್ಲಿ ನಾನು ಹಾಗೂ ಪ್ರಕಾಶ್‌ ಬೆಳವಾಡಿ ಅವರು ಮುಖ್ಯಭೂಮಿಕೆಯಲ್ಲಿ ಇದ್ದೇವೆ. ಇದರ ಶೂಟಿಂಗ್‌ ಶೇಕಡ 90ರಷ್ಟು ಪೂರ್ಣಗೊಂಡಿದೆ. ಈ ಸಿನಿಮಾಗಳೂ ಇದೇ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ.

‘ಶೈತಾನ್‌’ ಬಳಿಕ ಟಾಲಿವುಡ್‌ ಪಯಣ ಹೇಗಿದೆ?

ಸದ್ಯ ಎರಡು ತೆಲುಗು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಒಂದು ರವಿ ಪಸನ ಫಿಲ್ಮ್‌ ಕಾರ್ಪೊರೇಷನ್‌ನಡಿ ನಿರ್ಮಾಣವಾಗುತ್ತಿರುವ, ಗೋಪಿ ವಿಹಾನಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾ. ಇದರ ಶೂಟಿಂಗ್‌ ಶೇಕಡ 50ರಷ್ಟು ಮುಗಿದಿದೆ. ಮತ್ತೊಂದು ನಂದಮೂರಿ ಬಾಲಕೃಷ್ಣ(ಬಾಲಯ್ಯ) ಅವರ ಸಿನಿಮಾದಲ್ಲಿ ನೆಗೆಟಿವ್‌ ಲೀಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದರ ಶೂಟಿಂಗ್‌ ಕೂಡಾ ನಡೆಯುತ್ತಿದೆ. ಇವೆರಡರ ಶೀರ್ಷಿಕೆಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಎರಡೂ ಪ್ರಾಜೆಕ್ಟ್‌ ಸಿಗಲು ‘ಶೈತಾನ್‌’ ವೆಬ್‌ ಸರಣಿಯ ಪಾತ್ರವೇ ಕಾರಣ.   

ರಿಷಿ 
ರಿಷಿ 
‘ಶೈತಾನ್‌’ ಬಳಿಕ ಟಾಲಿವುಡ್‌ ಪಯಣ ಹೇಗಿದೆ?
ಸದ್ಯ ಎರಡು ತೆಲುಗು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಒಂದು ರವಿ ಪಸನ ಫಿಲ್ಮ್‌ ಕಾರ್ಪೊರೇಷನ್‌ನಡಿ ನಿರ್ಮಾಣವಾಗುತ್ತಿರುವ ಗೋಪಿ ವಿಹಾನಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಸಿನಿಮಾ. ಇದರ ಶೂಟಿಂಗ್‌ ಶೇಕಡ 50ರಷ್ಟು ಮುಗಿದಿದೆ. ಮತ್ತೊಂದು ನಂದಮೂರಿ ಬಾಲಕೃಷ್ಣ(ಬಾಲಯ್ಯ) ಅವರ ಸಿನಿಮಾದಲ್ಲಿ ನೆಗೆಟಿವ್‌ ಲೀಡ್‌ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದರ ಶೂಟಿಂಗ್‌ ಕೂಡಾ ನಡೆಯುತ್ತಿದೆ. ಇವೆರಡರ ಶೀರ್ಷಿಕೆಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಈ ಎರಡೂ ಪ್ರಾಜೆಕ್ಟ್‌ ಸಿಗಲು ‘ಶೈತಾನ್‌’ ವೆಬ್‌ ಸರಣಿಯ ಪಾತ್ರವೇ ಕಾರಣ.    

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT