ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಿ ವಿಜಯ್ ನೆನಪು: ಒಲ್ಲದ ಕ್ಷೇತ್ರದಲ್ಲಿ ನಲ್ಮೆಯ ‘ಸಂಚಾರಿ’

Last Updated 14 ಜೂನ್ 2021, 8:22 IST
ಅಕ್ಷರ ಗಾತ್ರ

{ಮರು ಓದಿಗೆ: 2020, ನವೆಂಬರ್‌ 20ರಂದು ಪ್ರಕಟವಾದ ಸಂದರ್ಶನ}

ಪೋಷಕ ಅಥವಾ ಹಾಸ್ಯ ಪಾತ್ರಗಳಲ್ಲಿ ಹೊಸ ಸವಾಲು ಮತ್ತು ಭಿನ್ನತೆ ಇರುತ್ತದೆ. ಆದರೆ, ನಾಯಕನಾಗಿಯೇ ಕಾಣಿಸಿಕೊಂಡೆ. ನನ್ನದೇ ದಾರಿಯಲ್ಲಿ ಮುಂದುವರಿಯುತ್ತಲೇ ಇರುತ್ತೇನೆ ಎನ್ನುತ್ತಾರೆ ಸಂಚಾರಿ ವಿಜಯ್‌.

ಕಲಾ ಕ್ಷೇತ್ರಕ್ಕೆ ನಿಮ್ಮ ಪ್ರವೇಶ ಹೇಗೆ?

ನನಗೆ ಹಾಡು, ಸಂಗೀತ ಕಂಡರಾಗುತ್ತಿರಲಿಲ್ಲ. ಬೈಯುತ್ತಿದ್ದೆ. ಆದರೂ ಈ ಕ್ಷೇತ್ರಕ್ಕೆ ಬಂದೆ ನೋಡಿ. ನನ್ನ ತಂದೆಯವರು ಬಹುಮುಖ ಪ್ರತಿಭೆ. ಚಿತ್ರ, ಬೋರ್ಡ್‌ ಬರೆಯುವುದು, ಟೈಲರಿಂಗ್, ವರ್ಷಕ್ಕೊಮ್ಮೆ ನಾಟಕ ಮಾಡಿಸುವುದು, ಆಗಾಗ ಮನೆಯಲ್ಲಿ ಸಂಗೀತ ಕಚೇರಿ ನಡೆಸುವುದು ಇತ್ತು.

ಪಿಯುಸಿ ಓದಲು ತಿಪಟೂರಿಗೆ ಬಂದಾಗ ಅಲ್ಲಿನ ಜೀವನ ಶೈಲಿ ಬೆರಗುಗೊಳಿಸಿತು. ಅಲ್ಲಿನ ಗೆಳೆಯರು ಹಲವು ರೀತಿಯಲ್ಲಿ ಪ್ರತಿಭೆ ಗುರುತಿಸಿದರು. ನನಗೆ ಗೊತ್ತಿಲ್ಲದಂತೆ ಕ್ಯಾಲಿಗ್ರಫಿ ಬರಹ ಒಲಿದಿತ್ತು. ವ್ಯಾಲೆಂಟೈನ್‌ ದಿನದಂದಂತೂ ನೂರಾರು ಗ್ರೀಟಿಂಗ್‌ ಕಾರ್ಡ್‌ಗಳಿಗೆ ಅಕ್ಷರ ಬರೆದುಕೊಡಲು ಗೆಳೆಯರು ದುಂಬಾಲು ಬೀಳುತ್ತಿದ್ದರು. ಹಾಗೆಯೇ ಹಾಡುಗಳನ್ನೂ ಹಾಡಿಸುತ್ತಿದ್ದರು. ಹೀಗಾಗಿ ನನ್ನನ್ನು ಎಫ್‌ಎಂ ಎಂದು ಪ್ರೀತಿಯಿಂದ ಕರೆಯುತ್ತಿದ್ದವರೂ ಇದ್ದರು. ಮುಂದೆ ಎಂಜಿನಿಯರಿಂಗ್‌ಗೆ ಸೇರಿದಾಗ ಇದೆಲ್ಲವನ್ನೂ ಬಿಟ್ಟು ಶಿಕ್ಷಣದ ಮೇಲೆ ಗಮನಹರಿಸಿದೆ. ಆದರೂ ಕೊನೆಯ ವರ್ಷದಲ್ಲಿದ್ದಾಗ ಗೆಳೆಯರೊಬ್ಬರು ನಿರ್ದೇಶಕ ಕೆ. ಶ್ರೀನಿವಾಸ್‌ ಅವರ ಮೂಲಕ ರಂಗಭೂಮಿಗೆ ಪರಿಚಯಿಸಿದರು. ಈ ಕಲಾ ಅಭಿರುಚಿ ರಕ್ತದಲ್ಲೇ ಇತ್ತೇನೋ‌.

ಇದಿಷ್ಟೇ ಸಿನಿಮಾ ಪ್ರವೇಶಕ್ಕೆ ಸಾಕಾಯಿತೇ?

ಖಂಡಿತಾ ಇಲ್ಲ. ಯಾವುದಾದರೂ ಒಂದು ಡಿಗ್ರಿಯನ್ನು ಕೈಯಲ್ಲಿ ಹಿಡಿದುಕೊಂಡೇ ಇಂಥ ಕ್ಷೇತ್ರಗಳಿಗೆ ಬರಬೇಕು. ಸುಮ್ಮನೆ ಧುಮುಕಬಾರದು. ನನ್ನಲ್ಲಿ ಹಣ ಅಥವಾ ಹಿನ್ನೆಲೆ ಇರಲಿಲ್ಲ. ಹಾಗಿದ್ದರೆ ಅಗಾಧವಾದ ಪ್ರತಿಭೆ ಇರಬೇಕು ಎಂದು ಯಾರೋ ಕೆಣಕಿದ ನೆನಪು. ಅದನ್ನು ಈಗಲೂ ನನ್ನೊಳಗೆ ಹುಡುಕುತ್ತಲೇ ಇದ್ದೇನೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ರಂಗಭೂಮಿಯಲ್ಲಿದ್ದಾಗ ನಾನು ಸರಿಯಾಗಿ ರಿಹರ್ಸಲ್‌ನಲ್ಲಿ ತೊಡಗಲಿಲ್ಲ ಎಂಬ ಕಾರಣಕ್ಕೆ ನಿರ್ದೇಶಕರೊಬ್ಬರು ಸಿಕ್ಕಾಪಟ್ಟೆ ಬೈದಿದ್ದರು. ಈ ಕ್ಷೇತ್ರದ ಸಹವಾಸ ಬೇಡಪ್ಪಾ ಎಂದು ಅಲ್ಲಿಂದ ಬಂದು ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದೆ. ಮತ್ತೆ ಆ ನಿರ್ದೇಶಕರು ಕರೆದು ಒತ್ತಡ ತಂದು ಒಂದು ಪೋಷಕ ನಟ ಪಾತ್ರ ಕೊಟ್ಟರು. ಆ ಪಾತ್ರಕ್ಕೆ ಎರಡು ಪ್ರದರ್ಶನಗಳಲ್ಲಿ ಎರಡು ಪ್ರಶಸ್ತಿಗಳು ಬಂದವು. ಅವರು ಹಾಗೆ ತಿದ್ದದಿದ್ದರೆ ನಾನು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಸಂಚಾರಿ ತಂಡದಲ್ಲಂತೂ ಪ್ರತಿಬಾರಿಯೂಭಿನ್ನವಾದ ಪಾತ್ರ ಮಾಡಿಸಿದರು. ಹೀಗೆ ಇವೆಲ್ಲವೂ ಕಾರಣ.

ಯಾಕೆ ನಾಯಕ ಪಾತ್ರ, ಸ್ಟಾರ್‌ಗಿರಿ ಬೇಡ?

ಪೋಷಕ ನಟನಾದರೆ ಸಾಕಷ್ಟು ತೆರೆದುಕೊಳ್ಳುವ ಅವಕಾಶ ಇರುತ್ತದೆ. ಭಿನ್ನ ಪಾತ್ರಗಳೂ ಸಿಗುತ್ತವೆ. ಅದರಲ್ಲೂ ಹಾಸ್ಯ ಪಾತ್ರ ನನಗಿಷ್ಟ. ಮಾತ್ರವಲ್ಲ ಇನ್ನೊಂದು ಕಾರಣವೂ ಇದೆ. ಚಿತ್ರಕ್ಕೆ ಸೋಲಾದರೆ ಅದರ ಹೊಣೆಯನ್ನೂ ನಾಯಕ ಪಾತ್ರಧಾರಿ ಹೊರಬೇಕಾಗುತ್ತದೆ. ಜನ ನನ್ನ ಹೆಸರಿನ ಬದಲಾಗಿ ಪಾತ್ರದ ಮೂಲಕ ಗುರುತಿಸಬೇಕು. ಪಾತ್ರ ನಮ್ಮ ಶಕ್ತಿಯನ್ನು ತೆರೆದಿಡಬೇಕು. ಅದೇ ನನ್ನ ಆಸೆ.

ಹೊಸ ಸಿನಿಮಾ ‘ಆ್ಯಕ್ಟ್‌ 1978’ ಬಗ್ಗೆ ಹೇಳಿ

ಚಿತ್ರದಲ್ಲಿ ನನ್ನದು ಕಮಾಂಡೋ ಪಾತ್ರ. ಬಹುಶಃ ಕನ್ನಡದಲ್ಲಿ ಈ ರೀತಿಯವಸ್ತುಬಂದಿರುವುದು ಇದೇ ಮೊದಲು ಅಂತ ಭಾವಿಸಿದ್ದೇನೆ. ಕಮಾಂಡೋ ಪಾತ್ರಕ್ಕೆ ಬೇಕಾದ ಶಿಸ್ತು, ಎನ್‌ಸಿಸಿಯಹಿನ್ನೆಲೆ ನನಗಿರಲಿಲ್ಲ. ಆದರೆ, ನಿರ್ದೇಶಕ ಮಂಸೋರೆ ಅಲ್ಪಕಾಲದಲ್ಲಿ ಎಲ್ಲವನ್ನೂ ಕಲಿಸಿದರು. ಈ ಪಾತ್ರಕ್ಕೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ. ಇದರಲ್ಲಿ ನನ್ನನ್ನು ಕಮರ್ಷಿಯಲ್‌ ಸಿನಿಮಾದ ರೀತಿಯಲ್ಲೇ ಪರಿಚಯಿಸಿದ್ದಾರೆ. ಇದಕ್ಕೆ ಮಂಸೋರೆ ಮತ್ತು ಸತ್ಯ ಹೆಗಡೆ ಅವರಿಗೆ ಧನ್ಯವಾದ ಹೇಳಲೇಬೇಕು.

ಕೈಯಲ್ಲಿರುವ ಹೊಸ ಪ್ರಾಜೆಕ್ಟ್‌ಗಳು?

‘ತಲೆದಂಡ’ ಈಗ ಮುಕ್ತಾಯದ ಹಂತದಲ್ಲಿದೆ. ಇದರಲ್ಲಿ ನನ್ನದು ವಿಶೇಷ ಚೇತನದ ವ್ಯಕ್ತಿಯ ಪಾತ್ರ. ಜಾಗತಿಕ ತಾಪಮಾನ, ಪರಿಸರ ವಿನಾಶದ ಬಗ್ಗೆ ಚಿತ್ರ ಮಾತನಾಡಿದೆ. ನನ್ನ ಆಸಕ್ತಿಯ ವಿಷಯವೂ ಹೌದು. ಹಾಗಾಗಿ ಇದರಲ್ಲಿ ಗಾಢವಾಗಿ ತೊಡಗಿದ್ದೇನೆ.

ಅವಸ್ಥಾಂತರ ಅನ್ನುವ ಇನ್ನೊಂದು ಚಿತ್ರ ಸೆಟ್ಟೇರಬೇಕಿದೆ. ಸಾಂಪ್ರದಾಯಿಕ ಕುಟುಂಬದ ವ್ಯಕ್ತಿಯೊಬ್ಬ ಬೇರೆ ವಾತಾವರಣಕ್ಕೆ ಒಗ್ಗಿಕೊಂಡಾಗ ಕಾಮನೆಗಳಿಗೆ ಒಳಗಾಗುವುದು, ಹೇಳಿಕೊಳ್ಳಲಾಗದ ಸಂಕಟ ಅನುಭವಿಸುವುದು, ಅದರಿಂದ ಹೊರಬರುತ್ತಾನೋ ಇಲ್ಲವೋ ಎಂಬುದು ಇಲ್ಲಿನ ವಿಷಯ.

ನಿರ್ದೇಶನದ ಕನಸು ಇದೆಯಾ?

ಕನಸೇನೋ ಇದೆ. ಆದರೆ ಅದಕ್ಕೆ ಇನ್ನಷ್ಟು ಪಕ್ವತೆ ಬೇಕು. ಸುಮ್ಮನೆ ನನ್ನ ಸ್ವಾರ್ಥಕ್ಕಾಗಿ ನಿರ್ದೇಶನ ಮಾಡಬಾರದು. ಅದರಿಂದ ಸಮಾಜಕ್ಕೆ ಏನಾದರೂ ಒಳ್ಳೆಯ ಕೊಡುಗೆ ಸಿಗಬೇಕು. ಸದ್ಯ ನಟನೆಯನ್ನೇ ಗಟ್ಟಿಯಾಗಿ ನಂಬಿಕೊಂಡಿದ್ದೇನೆ. ಅದರಲ್ಲೇ ಬದ್ಧತೆಯಿಂದ ಮುಂದುವರಿಯುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT