ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ನೋ ಆಡಿಷನ್‌, ನೇರ ಆ್ಯಕ್ಷನ್

ಸಂದರ್ಶನ: ಅಭಿಲಾಷ್‌ ಪಿ.ಎಸ್‌.
Published 4 ಜನವರಿ 2024, 23:30 IST
Last Updated 4 ಜನವರಿ 2024, 23:30 IST
ಅಕ್ಷರ ಗಾತ್ರ
ಕಿರುತೆರೆಯಿಂದ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ನಟಿ ಅಂಕಿತಾ ಅಮರ್‌ ಕೈಯಲ್ಲಿ ಒಟ್ಟು ನಾಲ್ಕು ಪ್ರಾಜೆಕ್ಟ್‌ಗಳಿವೆ. ಈ ಪೈಕಿ ಮೂರು ಸಿನಿಮಾಗಳು ಈ ವರ್ಷ ತೆರೆಕಾಣುತ್ತಿವೆ. ವಿಶೇಷ ಏನಂದರೆ, ಅಂಕಿತಾ ಇಲ್ಲಿಯವರೆಗೂ ಯಾವ ಸಿನಿಮಾಗೂ ಆಡಿಷನ್‌ ನೀಡಿಲ್ಲ. ಈ ಬಗ್ಗೆ ಅವರಿಗೆ ಆತಂಕವೂ ಇದೆಯಂತೆ...
ಪ್ರ

ಎರಡು ವರ್ಷಗಳ ಸಿನಿಮಾ ಅನುಭವ ಹೇಗಿತ್ತು?

ಧಾರಾವಾಹಿಗಳಲ್ಲಿ ನಟಿಸುವುದು ಒಂದು ರೀತಿ 9–5ರ ಕಚೇರಿ ಕೆಲಸದಂತೆ. ಸಿನಿಮಾದಲ್ಲಿ ಎಷ್ಟು ದಿನ ಶೂಟಿಂಗ್‌ ಹೋಗಿದ್ದೆ ಎನ್ನುವುದಕ್ಕಿಂತ, ಆ ಪಾತ್ರಕ್ಕೆ ಬೇಕಿರುವ ತಯಾರಿ ಮುಖ್ಯವಾಗುತ್ತದೆ. ಆ ಪಯಣವನ್ನು ನಾನು ಇನ್ನೂ ಕಲಿಯುತ್ತಿದ್ದೇನೆ. ಪಾತ್ರಗಳನ್ನು ಅರ್ಥ ಮಾಡಿಕೊಂಡು ಜೀವಿಸುವ ಪ್ರಯತ್ನವಿದು. ಧಾರಾವಾಹಿಗಳಲ್ಲಿ ತಿಂಗಳುಗಳ ಕಾಲ ನೀವು ಜನರೆದುರಿಗೆ ಇರುತ್ತೀರಿ. ಆದರೆ ಸಿನಿಮಾಗಳಲ್ಲಿ ಕೇವಲ ಐದಾರು ದೃಶ್ಯಗಳಲ್ಲಿ ನೀವು ಏನು ಎನ್ನುವುದನ್ನು ಪ್ರೇಕ್ಷಕರ ಎದುರಿಗೆ ಇಡಬೇಕು. ಇದನ್ನು ಕಲಿಯುತ್ತಿದ್ದೇನೆ. ಪ್ರತಿಭಾವಂತ ತಂತ್ರಜ್ಞರು, ಸಿನಿಮಾವನ್ನೇ ಉಸಿರಾಡುವ ಜನರೊಂದಿಗೆ ಬೆರೆತಿದ್ದೇನೆ. ಇಂತಹ ಪಯಣ ಬಹಳ ಖುಷಿ ನೀಡಿದೆ. 

ಪ್ರ

ನಿಮ್ಮ ಮೊದಲ ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ನಾಲ್ಕೈದು ಸಿನಿಮಾಗಳು ಕೈಯಲ್ಲಿವೆ ಅಲ್ಲವೇ?

ಹೌದು. 2024ರಲ್ಲಿ ನನ್ನ ಮೂರು ಸಿನಿಮಾಗಳು ತೆರೆಗೆ ಬರಲಿವೆ. ನನ್ನ ಮೊದಲ ಸಿನಿಮಾ, ಪೃಥ್ವಿ ಅಂಬಾರ್‌ ಜೊತೆಗಿನ ‘ಅಬಜಬದಬ’. ಅದರ ಹಾಗೂ ಚಂದ್ರಜಿತ್‌ ಬೆಳ್ಳಿಯಪ್ಪ ನಿರ್ದೇಶನದ ‘ಇಬ್ಬನಿ ತಬ್ಬಿದ ಇಳೆಯಲಿ’ ಸಿನಿಮಾಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇವೆರಡರಲ್ಲಿ ‘ಇಬ್ಬನಿ ತಬ್ಬಿದ..’ ನನ್ನ ಚೊಚ್ಚಲ ಚಿತ್ರವಾಗಿ ಬಿಡುಗಡೆಯಾಗಲಿದೆ. ಸಿ.ಆರ್. ಬಾಬಿ ನಿರ್ದೇಶನದ, ರೂಪೇಶ್‌ ಶೆಟ್ಟಿ ನಟನೆಯ ‘ಜಸ್ಟ್ ಮ್ಯಾರೀಡ್’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಸಚಿನ್ ವಾಲಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ, ನಿರೂಪ್‌ ಭಂಡಾರಿ ನಟನೆಯ ಹೊಸ ಸಿನಿಮಾದಲ್ಲಿ ನಾನು ನಟಿಸುತ್ತಿದ್ದು, ಇದರ ಚಿತ್ರೀಕರಣ ಆರಂಭವಾಗಿದೆ. ಹೀಗೆ ಎರಡು ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೇನೆ. 

ನಾನು ಇಲ್ಲಿಯವರೆಗೂ ಒಂದೂ ಸಿನಿಮಾಗೂ ಆಡಿಷನ್‌ ನೀಡಿಲ್ಲ. ಎಲ್ಲವೂ ನೇರವಾಗಿ ಬಂದ ಅವಕಾಶಗಳೇ. ಹಲವು ಅವಕಾಶಗಳು ಬಂದರೂ ನಾನು ಎಲ್ಲವನ್ನೂ ಒಪ್ಪಿಲ್ಲ. ಬಂದಂತಹ ಪಾತ್ರಕ್ಕೆ ನ್ಯಾಯ ನೀಡಬಲ್ಲನೇ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು, ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಕೆಲವೊಮ್ಮೆ ಜೀವನ ಎಲ್ಲಿಗೆ ಕರೆದುಕೊಂಡು ಹೋಗುತ್ತಿದೆ ಎನ್ನುವ ಯೋಚನೆ ಬರುತ್ತದೆ. ಯಾವುದೇ ಫಲಿತಾಂಶಗಳು ಇಲ್ಲದೆ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದೇನೆ. ಹೀಗಾಗಿ ಎರಡು ವಿಷಯಗಳಲ್ಲಿ ನನಗೆ ಆತಂಕವಿದೆ– ಸಿನಿಮಾಗಳ ಸಂಖ್ಯೆ ಮತ್ತು ಪಾತ್ರದ ಗುಣಮಟ್ಟ. ಒಂದು ಗುಂಪು, ಎಷ್ಟು ಇಂಡಸ್ಟ್ರಿಯಲ್ಲಿ ಇರುತ್ತಿಯೋ ಅಷ್ಟು ಸಿನಿಮಾಗಳು ಬರುತ್ತವೆ ಎನ್ನುತ್ತದೆ. ಇನ್ನೊಂದು ಗುಂಪು, ಎಷ್ಟು ವರ್ಷಗಳಾದರೂ ತೊಂದರೆ ಇಲ್ಲ, ಆಯ್ಕೆ ಮಾಡಿಕೊಳ್ಳುವಾಗ ಒಳ್ಳೆಯ ಪಾತ್ರಗಳನ್ನೇ ಆಯ್ಕೆ ಮಾಡಿಕೋ ಎನ್ನುತ್ತದೆ. ಇದು ಒಂದು ರೀತಿಯ ಗೊಂದಲ ಮೂಡಿಸುತ್ತದೆ. 

ಪ್ರ

‘ಇಬ್ಬನಿ ತಬ್ಬಿದ..’ ಸಿನಿಮಾದ ಅನುಭವ...

ಈ ಸಿನಿಮಾ ಬಗ್ಗೆ ನನಗೆ ಹೆಚ್ಚಿನ ನಿರೀಕ್ಷೆ ಇದೆ. ‘ಅಬಜಬದಬ’ ನಾನು ನಟಿಸಿದ ಮೊದಲ ಸಿನಿಮಾವಾದರೂ, ‘ಇಬ್ಬನಿ ತಬ್ಬಿದ..’ ತಂಡದೊಂದಿಗೆ ನಾನು ಕಲಿತ ಪಾಠ ಅನೇಕ. ಹೊಸ ಮಗು ಶಾಲೆಗೆ ಸೇರಿದ ಅನುಭವ. ನಟನೆಯ ಭಿನ್ನ ಆಯಾಮಗಳನ್ನು ಇಲ್ಲಿ ಕಲಿತೆ. ಇಲ್ಲಿ ಕಲಿತ ಪಾಠವನ್ನು ನಾನು ನನ್ನ ಮುಂದಿನ ಸಿನಿಮಾಗಳಿಗೆ ಅಳವಡಿಸಿಕೊಳ್ಳುತ್ತಾ ಬಂದಿದ್ದೇನೆ. ಈ ಸಿನಿಮಾದಲ್ಲಿ ಒಬ್ಬರ ಕನಸಿಗೆ ಇನ್ನೊಬ್ಬರ ಕನಸು ಹೆಗಲಾಗಿದೆ. ನಿರ್ದೇಶಕರಾದ ಚಂದ್ರಜಿತ್‌, ನನಗೆ, ಚಿತ್ರದ ತಾಂತ್ರಿಕ ವರ್ಗದ ಹಲವರಿಗೆ ಇದು ಚೊಚ್ಚಲ ಸಿನಿಮಾ. ಎಲ್ಲರೂ ಸೇರಿ ಒಂದೊಳ್ಳೆ ಸಿನಿಮಾವನ್ನು ತಯಾರಿಸಿದ್ದೇವೆ. 

ಪ್ರ

‘ಜಸ್ಟ್‌ ಮ್ಯಾರೀಡ್‌’ ಎಲ್ಲಿಯವರೆಗೆ ಬಂತು? ಹೊಸ ಪ್ರಾಜೆಕ್ಟ್ಸ್‌?

ಈ ಸಿನಿಮಾದ ಶೇ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್‌. ನನ್ನ ಪಾತ್ರದ ಹೆಸರು ‘ಸಹನ’. ಒಂದು ರೀತಿ ‘ಇಬ್ಬನಿ ತಬ್ಬಿದ..’ ಸಿನಿಮಾದ ‘ಅನಾಹಿತ’ ಪಾತ್ರಕ್ಕೆ ತದ್ವಿರುದ್ಧವಾದ ಪಾತ್ರ. ‘ಅನಾಹಿತ’ಗೆ ಸಂಯಮ ಹೆಚ್ಚು. ಜೀವನದಲ್ಲಿ ತಾನು ಏನು ಅಂದುಕೊಳ್ಳುತ್ತಾಳೋ ಅದನ್ನು ಸಾಧಿಸಲು ಯಾವ ಆಪತ್ತನ್ನೂ ಎದುರು ಹಾಕಿಕೊಳ್ಳಲು ಸಿದ್ಧವಿರುವಾಕೆ ‘ಸಹನ’.

ಇದರ ಜೊತೆಗೆ ನಿರೂಪ್‌ ಭಂಡಾರಿ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣವೂ ನಡೆಯುತ್ತಿದೆ. ಹೊಸ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿಲ್ಲ.       

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT