ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾತುಕತೆ | ಭಟ್ರ ‘ಗರಡಿ’ಯ ಸೋನಲ್‌ ಮೊಂತೆರೋ

ಎಪಿಎಸ್‌
Published 9 ನವೆಂಬರ್ 2023, 23:30 IST
Last Updated 9 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡ ನಟಿ ಸೋನಲ್‌ ಮೊಂತೆರೋ, ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಸಿನಿಬ್ಯಾಂಕ್‌ ಹೊಂದಿರುವವರು. ಭಟ್ರು ಸಾಮಾನ್ಯವಾಗಿ ತಮ್ಮ ಹೊಸ ಸಿನಿಮಾಗಳಲ್ಲಿ ಬೇರೆ ಬೇರೆ ನಟಿಯರನ್ನೇ ತೆರೆ ಮೇಲೆ ತರುತ್ತಾರೆ. ಆದರೆ ‘ಗರಡಿ’ ಸಿನಿಮಾಗಾಗಿ ತಮ್ಮ ‘ಪಂಚತಂತ್ರ’ದ ‘ಸಾಹಿತ್ಯ’ಳನ್ನೇ ಭಟ್ರು ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾ ಇಂದು(ನ.10) ತೆರೆಕಂಡಿದೆ. ‘ನರ್ಸಮ್ಮ’, ‘ಸಾಹಿತ್ಯ’ ಹೀಗೆ ಹಲವು ನಾಮಧೇಯಗಳನ್ನು ಹೊಂದಿರುವ ಸೋನಲ್‌ ‘ಗರಡಿ’ಯ ಅನುಭವಗಳನ್ನು ‘ಸಿನಿಮಾ ಪುರವಣಿ’ ಜೊತೆ ಹಂಚಿಕೊಂಡಿದ್ದಾರೆ. 

‘ನಟರ ಬದುಕಿನಲ್ಲಿ ಒಂದು ಬ್ರೇಕ್‌ ಇರುತ್ತದೆ. ನನಗದು ಸಿಕ್ಕಿದ್ದು ಯೋಗರಾಜ್‌ ಭಟ್‌ ಅವರ ‘ಪಂಚತಂತ್ರ’ ಸಿನಿಮಾದಲ್ಲಿ. ಅಲ್ಲಿಂದ ಸೋನಲ್‌, ಯಾರೆಂಬುದು ಗಾಂಧಿನಗರಕ್ಕೆ ತಿಳಿಯಿತು. ಇದಾದ ಬಳಿಕ ‘ಗಾಳಿಪಟ–2’ ಚಿತ್ರದಲ್ಲೇ ನಾನು ನಟಿಸಬೇಕಿತ್ತು. ಆದರೆ ಅದರ ಸಂಪೂರ್ಣ ಪಾತ್ರವರ್ಗವೇ ಬದಲಾಯಿತು. ನಂತರದಲ್ಲಿ ಅವರ ಸಿನಿಮಾಗಳಲ್ಲಿ ಅವಕಾಶ ಸಿಗಲಿದೆ ಎನ್ನುವ ಯಾವ ಸುಳಿವೂ ನನಗೆ ಇರಲಿಲ್ಲ. ‘ಗರಡಿ’ ಚಿತ್ರಕ್ಕೂ ಮೊದಲು ಬೇರೊಬ್ಬರು ನಾಯಕಿ ಇದ್ದರು. ಕೊನೆಯ ಕ್ಷಣದಲ್ಲಿ ಈ ಅವಕಾಶ ನನಗೆ ದೊರೆಯಿತು. ನನ್ನ ನಟನಾ ಸಾಮರ್ಥ್ಯದ ಮೇಲಿನ ನಂಬಿಕೆ ಹಾಗೂ ಸಂಭಾಷಣೆಯನ್ನು ಒಪ್ಪಿಸುವ ರೀತಿ ಅವರಿಗೆ ಇಷ್ಟವೆಂದು ಸಂದರ್ಶನವೊಂದರಲ್ಲಿ ಯೋಗರಾಜ್‌ ಭಟ್‌ ಹೇಳಿದ್ದರು. ಭಟ್ರ ಗರಡಿಯಿಂದ ಬಂದವಳು ನಾನು. ಹೀಗಾಗಿ ಒಂದೊಳ್ಳೆಯ ಪ್ರಾಜೆಕ್ಟ್‌ನಲ್ಲಿ ಅವಕಾಶ ನೀಡಿರುವುದಕ್ಕೆ ಖುಷಿ ಇದೆ’. 

‘ಈ ಸಿನಿಮಾ ನಿರೂಪಣೆ ಮಾಡುವ ಸಂದರ್ಭದಲ್ಲಿ ಈ ಪಾತ್ರವನ್ನು ನಿರ್ವಹಿಸಲು ಸಾಧ್ಯವೇ ಎನ್ನುವ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡಿದ್ದೆ. ಏಕೆಂದರೆ ಇದು ತೆರೆಯ ಮೇಲೆ ನೋಡುವಷ್ಟು ಸುಲಭವಿಲ್ಲ. ಸಿಟಿ ಹುಡುಗಿಯಂತೆ ವರ್ತಿಸುವ ಪಾತ್ರ ನನ್ನದು. ನನ್ನ ಪಾತ್ರಕ್ಕೆ ಎರಡು ಶೇಡ್ಸ್‌ ಇವೆ. ಚಿತ್ರದ ಮೊದಲಾರ್ಧದಲ್ಲಿ ಎಷ್ಟು ಬಬ್ಲಿಯಾಗಿರುತ್ತೇನೋ, ದ್ವಿತೀಯಾರ್ಧದಲ್ಲಿ ಅಷ್ಟೇ ಗಾಢವಾಗಿ ಪರಿಣಾಮ ಬೀರುವ ಅಂಶಗಳು ನನ್ನ ಪಾತ್ರದಲ್ಲಿವೆ. ನಟರಾದ ಬಿ.ಸಿ. ಪಾಟೀಲ್‌ ಹಾಗೂ ರವಿಶಂಕರ್‌ ಅವರ ಜೊತೆ ತೆರೆಹಂಚಿಕೊಂಡಿದ್ದು ವಿಭಿನ್ನ ಅನುಭವ’ ಎನ್ನುತ್ತಾರೆ ಸೋನಲ್‌.          

‘ಸಿನಿಮಾ ಮಾಡಬೇಕು ಎನ್ನುವುದಷ್ಟೇ ನನ್ನ ಗುರಿ. ‘ಬನಾರಸ್‌’ನಲ್ಲಿ ಝೈದ್‌ ಖಾನ್‌, ‘ಗರಡಿ’ಯಲ್ಲಿ ಯಶಸ್‌ ಸೂರ್ಯ ಇಬ್ಬರೂ ಹೊಸ ಹೀರೊಗಳು. ನಾನು ಅವರಿಗಿಂತ ಹೆಚ್ಚಿನ ಸಿನಿಮಾ ಮಾಡಿದ್ದೇನೆ ಎನ್ನುವ ಅಹಂ ನನಗೆ ಇಲ್ಲ. ಹೀಗೆ ಅಹಂ ಇದ್ದರೆ ಮನೆಯಲ್ಲೇ ಇರಬೇಕಷ್ಟೆ! ನಾನು ನೋಡುವುದು ನನ್ನ ಪಾತ್ರದ ಬರವಣಿಗೆಯನ್ನು. ಅದನ್ನು ನಿರ್ದೇಶಕರು ಹೆಣೆದ ರೀತಿಯನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಆ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡಲು ಆಗುತ್ತದೆಯೇ ಎನ್ನುವುದನ್ನು ನೋಡುತ್ತೇನೆ. ‘ಗರಡಿ’ ಸಿನಿಮಾದಲ್ಲಿ ಯೋಗರಾಜ್‌ ಭಟ್‌ ಅವರು ನನ್ನ ಪಾತ್ರವನ್ನು ಅದ್ಭುತವಾಗಿ ಬರೆದಿದ್ದಾರೆ. ನನ್ನ ನಟನೆಯ ಸಾಮರ್ಥ್ಯವನ್ನು ಪ್ರದರ್ಶಿಸಲು ಇಲ್ಲಿ ಸಾಧ್ಯವಾಗಿದೆ’. 

‘ಕನ್ನಡದ ಇಂಡಸ್ಟ್ರಿಗೆ ಇನ್ನೊಂದು ಸ್ಟಾರ್‌ ಸಿಕ್ಕಿದ್ದಾರೆ ಎನ್ನಬಹುದು. ಸೂರ್ಯ ಅದ್ಭುತವಾದ ನಟ. ನನಗೆ ಹೇಗೆ ‘ಪಂಚತಂತ್ರ’ ಬ್ರೇಕ್‌ ನೀಡಿತೋ, ಅದೇ ರೀತಿ ಸೂರ್ಯನಿಗೆ ಈ ಸಿನಿಮಾ ಬ್ರೇಕ್‌ ನೀಡಲಿದೆ ಎನ್ನುವ ಭರವಸೆ ನನಗಿದೆ. ನಾನು ಮೂರು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದೇನೆ. ಸ್ಯಾಂಡಲ್‌ವುಡ್‌ನಲ್ಲೇ ನನಗೆ ಸಾಲು ಸಾಲು ಅವಕಾಶಗಳು ಬರುತ್ತಿವೆ. ‘ಬನಾರಸ್‌’ ಸಿನಿಮಾ ಬಳಿಕ ಇತರೆ ಇಂಡಸ್ಟ್ರಿಗಳಿಂದಲೂ ಅವಕಾಶಗಳು ಬರುತ್ತಿವೆ’ ಎಂದ ಸೋನಲ್‌, ತಮ್ಮ ಮುಂದಿನ ಸಿನಿಮಾಗಳ ಪಟ್ಟಿ ಬಿಚ್ಚಿಟ್ಟರು. ‘‘ಗರಡಿ’ ಬಳಿಕ, ‘ರೋಲೆಕ್ಸ್‌’, ‘ಬುದ್ಧಿವಂತ–2’, ‘ಶುಗರ್‌ ಫ್ಯಾಕ್ಟರಿ’, ‘ಮಾದೇವ’, ‘ಮಿ.ನಟವರ್‌ಲಾಲ್‌’, ‘ಸರೋಜಿನಿ’, ‘ತಲ್ವಾರ್‌ ಪೇಟೆ’, ‘ಭಗವಾನ್‌ ಶ್ರೀ ಕೃಷ್ಣ ಪರಮಾತ್ಮ’, ‘ಮಾರ್ಗರೇಟ್ ಲವರ್ ಆಫ್ ರಾಮಾಚಾರಿ’ ಸಿನಿಮಾಗಳು ಬಿಡುಗಡೆಗೆ ಸಜ್ಜಾಗುತ್ತಿವೆ’’ ಎಂದರು.

ಯಶಸ್‌ ಭವಿಷ್ಯ ‘ಗರಡಿ’ಯಲ್ಲಿ
‘ಗರಡಿ’ ಸಿನಿಮಾ ಮೂಲಕ ನಟ ಯಶಸ್‌ ಸೂರ್ಯ ಬೆಳ್ಳಿತೆರೆಯಲ್ಲಿ ನಾಯಕನಾಗಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. 15 ವರ್ಷಗಳಿಂದ ಚಿತ್ರರಂಗದಲ್ಲಿರುವ ಚನ್ನಪಟ್ಟಣ ಮೂಲದ ಯಶಸ್‌, ಬೆಂಗಳೂರಿನಲ್ಲಿ ಬೆಳೆದವರು. ಬಿ.ಕಾಂ. ವಿದ್ಯಾಭ್ಯಾಸದ ಬಳಿಕ ಮಾಡೆಲಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟು, ನಂತರ ಸಿನಿಮಾ ಕ್ಷೇತ್ರದಲ್ಲಿ ಬೆಳೆದವರು. ‘ಓ ಗುಲಾಬಿ’, ‘ಸೈನೈಡ್‌’ ಮುಂತಾದ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಸೂರ್ಯ, ‘ಯುಗ ಯುಗಗಳೇ ಸಾಗಲಿ’ ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಂಡರು. ನಂತರ ‘ಶಿಶಿರ’, ‘ತೂಫಾನ್‌’, ‘ಶ್ರಾವಣಿ ಸುಬ್ರಮಣ್ಯ’, ‘ಸಂಗಮ’, ‘ಮೈಲಾರಿ’, ‘ಚಿಂಗಾರಿ’, ‘ಚಕ್ರವರ್ತಿ’, ‘ಕುರುಕ್ಷೇತ್ರ’ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದರು. ನಟ ದರ್ಶನ್‌ ಅವರಿಂದಾಗಿ ‘ಗರಡಿ’ ಸಿನಿಮಾದಲ್ಲಿ ನಾಯಕನ ಪಾತ್ರ ಸಿಕ್ಕಿತು ಅನ್ನುವ ಯಶಸ್‌ ಸೂರ್ಯ, ಈ ಸಿನಿಮಾ ತಮ್ಮ ಸಿನಿಪಯಣಕ್ಕೆ ಒಳ್ಳೆಯ ಮುನ್ನುಡಿ ಬರೆಯಲಿದೆ ಎಂದು ನಂಬಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT