ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ: ಸಮಿತಿ ರಚನೆಗೆ ಆಗ್ರಹ

Published 4 ಸೆಪ್ಟೆಂಬರ್ 2024, 3:33 IST
Last Updated 4 ಸೆಪ್ಟೆಂಬರ್ 2024, 3:33 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಚಲನಚಿತ್ರೋದ್ಯಮದಲ್ಲಿ ಕಲಾವಿದೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ಸಂಸ್ಥೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. 

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಬಿಡುಗಡೆಯ ನಂತರ ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಕರ್ನಾಟಕದಲ್ಲಿಯೂ ಅಂತಹದೇ ಸಮಿತಿ ರಚಿಸಬೇಕು ಎಂಬ ಕೂಗು ಜೋರಾಗಿದೆ. 

‘ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಇತರ ಅನೇಕ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇವೆ. ಲಿಂಗ ಸಮಾನತೆ ಬೆಂಬಲಿಸುವ ಕನ್ನಡ ಚಲನಚಿತ್ರೋದ್ಯಮ ಮತ್ತು ವಿವಿಧ ಕ್ಷೇತ್ರಗಳ 153 ಗಣ್ಯರು ಈ ಮನವಿ ಪತ್ರಕ್ಕೆ ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ’ ಎಂದು ಸಂಸ್ಥೆ ತಿಳಿಸಿದೆ. 

ಎಲ್ಲ ಮಹಿಳಾ ಕಲಾವಿದರಿಗೆ ತಾರತಮ್ಯವಿಲ್ಲದಂತೆ, ಆರೋಗ್ಯಯುತವಾದ ಕೆಲಸದ ವಾತಾವರಣ ಸೃಷ್ಟಿಸಲು ಅಗತ್ಯ ನೀತಿಗಳನ್ನು ರೂಪಿಸಬೇಕು. ಚಿತ್ರೀಕರಣ ಸ್ಥಳದಲ್ಲಿ ಕಲಾವಿದೆಯರಿಗೆ ಸುರಕ್ಷತೆ ಮತ್ತು ಕನಿಷ್ಠ ಸವಲತ್ತುಗಳನ್ನು ಒದಗಿಸಬೇಕೆಂದು ಸಂಸ್ಥೆ ಪತ್ರದಲ್ಲಿ ಸರ್ಕಾರವನ್ನು ಒತ್ತಾಯಿಸಿದೆ. 

ಕವಿತಾ ಲಂಕೇಶ್‌ ಅಧ್ಯಕ್ಷತೆಯ ಸಂಸ್ಥೆಯ ಈ ನಡೆಗೆ ನಟರಾದ ಸುದೀಪ್‌, ಕಿಶೋರ್‌, ದಿಗಂತ್‌, ಸಿಹಿ ಕಹಿ ಚಂದ್ರು, ವಿನಯ್‌ ರಾಜ್‌ಕುಮಾರ್‌ ನಟಿಯರಾದ ಪೂಜಾ ಗಾಂಧಿ, ಶ್ರುತಿ ಹರಿಹರನ್‌, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್‌, ಚೈತ್ರಾ ಜೆ.ಆಚಾರ್‌, ನಿರ್ದೇಶಕರಾದ ಬಿ.ಸುರೇಶ್‌, ಪವನ್‌ಕುಮಾರ್‌, ಚೈತನ್ಯ ಕೆ.ಎಂ, ಗಿರಿರಾಜ್‌ ಬಿ.ಎಂ, ಜಯತೀರ್ಥ, ಸಾಹಿತಿಗಳಾದ ವಿಜಯ್‌ ಶಂಕರ್‌, ರಹಮತ್‌ ತರಿಕೇರೆ, ಬಂಜಗೆರೆ ಜಯಪ್ರಕಾಶ್‌, ಕಲಾವಿದರಾದ ವಿಜಯಮ್ಮ, ಚಂಪಾ ಶೆಟ್ಟಿ, ಜಯಲಕ್ಷ್ಮಿ ಪಾಟೀಲ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ನಿರ್ದೇಶಕರು, ಬರಹಗಾರರು, ಸಾಹಿತಿಗಳು ಬೆಂಬಲ ಸೂಚಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT