ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಮನೋಹರ್‌ ಸಂದರ್ಶನ: ಸಿನಿ ಪಯಣದ ಸಿಹಿ–ಕಹಿ ನೆನಪುಗಳು

Published 8 ಜೂನ್ 2023, 19:30 IST
Last Updated 8 ಜೂನ್ 2023, 19:30 IST
ಅಕ್ಷರ ಗಾತ್ರ

ಸಂದರ್ಶನ: ವಿನಾಯಕ ಕೆ.ಎಸ್‌.

ಈ ಹಿಂದೆ ‘ಓ ಮಲ್ಲಿಗೆ’, ‘ಇಂದ್ರಧನುಷ್‌’ ಚಿತ್ರಗಳನ್ನು ನಿರ್ದೇಶಿಸಿದ್ದ ಸಂಗೀತ ನಿರ್ದೇಶಕ ವಿ.ಮನೋಹರ್ 23 ವರ್ಷಗಳ ನಂತರ ಸಿನಿಮಾ ನಿರ್ದೇಶನಕ್ಕೆ ಮತ್ತೆ ಮರಳಿದ್ದಾರೆ. ಹೊಸಬರಿಂದಲೇ ಕೂಡಿರುವ ಅವರ ‘ದರ್ಬಾರ್‌’ ಸಿನಿಮಾ ಇಂದು(ಜೂನ್‌ 9) ತೆರೆ ಕಾಣುತ್ತಿದೆ. ಈ ಹೊತ್ತಿನಲ್ಲಿ ಮನೋಹರ್‌ ತಮ್ಮ ನಾಲ್ಕು ದಶಕಗಳ ಸಿನಿ ಪಯಣದ ಒಂದಷ್ಟು ಸಿಹಿ–ಕಹಿ ನೆನಪುಗಳನ್ನಿಲ್ಲಿ ಹಂಚಿಕೊಂಡಿದ್ದಾರೆ...
ಪ್ರ

ಸಂಗೀತದಲ್ಲಿ ಸಾಕಷ್ಟು ಹೆಸರು ಗಳಿಸಿದವರು ನೀವು. 23 ವರ್ಷಗಳ ನಂತರ ಮತ್ತೆ ನಿರ್ದೇಶನದ ಆಯ್ಕೆ ಏಕೆ?

ನಿರ್ದೇಶಕನಾಗಬೇಕು ಎಂಬ ಕನಸಿನೊಂದಿಗೆ ಚಿತ್ರರಂಗಕ್ಕೆ ಬಂದೆ. ಆದರೆ ಸಂಗೀತದಲ್ಲಿ ನನಗಿದ್ದ ಆಸಕ್ತಿ ಗಮನಿಸಿ ಆವತ್ತು ನಟ ಉಪೇಂದ್ರ ಮ್ಯೂಸಿಕ್‌ ಮಾಡಲು ಅವಕಾಶ ನೀಡಿದರು. ಒಂದು ರೀತಿಯಲ್ಲಿ ‘ತರ್ಲೆ ನನ್ಮಗ’ ಸಿನಿಮಾದಿಂದ ಆಕಸ್ಮಿಕವಾಗಿ ಸಂಗೀತ ನಿರ್ದೇಶಕನಾದೆ. ಸಾಮರ್ಥ್ಯದಿಂದಾಗಿ ಸಂಗೀತದಲ್ಲಿ ಗೆಲ್ಲುತ್ತ ಬಂದೆ. ನಂತರ ಜಗ್ಗೇಶ್‌ ಅವರ ಸಿನಿಮಾಗಳಲ್ಲಿ ಅವಕಾಶ ನೀಡಿ ನನ್ನನ್ನು ಪ್ರೋತ್ಸಾಹಿಸಿದರು. ‘ಜನುಮದ ಜೋಡಿ’ ಸೂಪರ್‌ ಹಿಟ್‌ ಆಗಿತ್ತು. ಇದೆಲ್ಲದರ ನಡುವೆ 1997ರಲ್ಲಿ ನಿರ್ದೇಶಕನಾಗಿ ‘ಓ ಮಲ್ಲಿಗೆ’ ಸಿನಿಮಾ ಮಾಡುವ ಅವಕಾಶ ಸಿಕ್ಕಿತು. ಸಿನಿಮಾ ತುಂಬ ಯಶಸ್ವಿಯಾಯಿತು. ಆಗ ಒಂದಷ್ಟು ನಿರ್ಮಾಪಕರು ಹುಡುಕಿಕೊಂಡು ಬರಬಹುದು ಅಂದುಕೊಂಡೆ. ಆದರೆ ಯಾರೂ ಬರಲಿಲ್ಲ. ಎರಡು ವರ್ಷಗಳ ಬಳಿಕ ‘ಇಂದ್ರ ಧನುಷ್‌’ ಚಿತ್ರ ಮಾಡಲು ನಿರ್ಮಾಪಕರು ಸಿಕ್ಕರು. ಆ ಸಿನಿಮಾ ಯಶಸ್ವಿಯಾಗಲಿಲ್ಲ. ನಂತರ ಸರಿಯಾದ ನಿರ್ಮಾಪಕರು ಸಿಗಲಿಲ್ಲ. ಆಗ ‘ಓಂ’ ಸಿನಿಮಾ ಬಿಡುಗಡೆಯಾಗಿತ್ತು. ಹೀಗಾಗಿ ಬಂದ ನಿರ್ಮಾಪ‍ಕರೆಲ್ಲ ಮಚ್ಚು, ಲಾಂಗ್‌ನ ಕಥೆ ನಿರೀಕ್ಷೆ ಮಾಡುತ್ತಿದ್ದರು.

ಪ್ರ

ನಂತರ ನಿರ್ದೇಶನಕ್ಕೆ ಮತ್ತೆ ಪ್ರಯತ್ನ ಮಾಡಲಿಲ್ಲವೆ?

ಪ್ರಯತ್ನ ಜಾರಿಯಲ್ಲಿತ್ತು. ಆದರೆ ನನ್ನ ಅಭಿರುಚಿಗೆ ತಕ್ಕ ನಿರ್ಮಾಪಕರು ಸಿಗಲಿಲ್ಲ. ನಾನು ನಂತರ ಧಾರಾವಾಹಿಗಳಲ್ಲಿ ತೊಡಗಿಸಿಕೊಂಡೆ. ‘ಚಿಗುರಿದ ಕನಸು’, ‘ದುನಿಯಾ’, ‘ಮೆರವಣಿಗೆ’, ‘ಕಿರಾತಕ’ ಸಿನಿಮಾಗಳ ಹಾಡುಗಳು ಹಿಟ್‌ ಆದವು. ಹೀಗಾಗಿ ಸಂಗೀತ ಬಿಟ್ಟು ಹೊರಬರಲು ಸಾಧ್ಯವಾಗಲಿಲ್ಲ. ಆದರೆ ನನ್ನೊಳಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಹಾಗೆಯೇ ಇತ್ತು. ‘ದಿಲ್‌ದಾರ್‌’ ಸಿನಿಮಾಕ್ಕೆ ಪಾಲುದಾರರಾಗಿದ್ದ ಸತೀಶ್‌ ಪರಿಚಯವಾಯ್ತು. ಅವರ ಬಳಿ ರಾಜಕೀಯ ವಿಡಂಬನೆ ಕಥೆಯಿತ್ತು. ನಾನು ಈ ಹಿಂದೆ ವ್ಯಂಗಚಿತ್ರಕಾರನಾಗಿದ್ದರಿಂದ ಕಥೆ ನನ್ನ ಅಭಿರುಚಿಗೆ ತಕ್ಕಹಾಗೆ ಇದೆ ಎನ್ನಿಸಿತು. ಹೀಗಾಗಿ ಮೂರನೆ ಸಿನಿಮಾ ನಿರ್ದೇಶನ ಮಾಡುವ ಅವಕಾಶವಾಯ್ತು.

ಪ್ರ

ಸಂಗೀತದ ಕೆಲಸಗಳನ್ನು ನಿಲ್ಲಿಸಿದ್ದೀರಾ?

ಈ ಚಿತ್ರ ಯಶಸ್ವಿಯಾದರೆ ಮತ್ತೆ ಒಂದಷ್ಟು ನಿರ್ಮಾಪಕರು ಬರಬಹುದು ಎಂದುಕೊಂಡಿದ್ದೇನೆ. ಸಂಗೀತದ ಕೆಲಸಗಳು ನಿಂತಿಲ್ಲ. ಆದರೆ ಸ್ಟಾರ್‌ ನಟರ ಸಿನಿಮಾಗಳು ಬರುತ್ತಿಲ್ಲ. ಎಲ್ಲವೂ ಸಣ್ಣ ಬಜೆಟ್‌ನ ಸಿನಿಮಾಗಳು. ಇವುಗಳಲ್ಲಿ ಹಾಡು, ಸಂಗೀತ ಉತ್ತಮವಾಗಿದ್ದರೂ ಜನರಿಗೆ ತಲುಪುತ್ತಿಲ್ಲ.

ಪ್ರ

40 ವರ್ಷಗಳ ನಿಮ್ಮ ಈ ಸಿನಿ ಪಯಣ ಹೇಗಿತ್ತು?

ಹಿಂದೆ ತಿರುಗಿ ನೋಡಿದರೆ ಕಲರ್‌ಫುಲ್‌ ಆಗಿದೆ. ಎಷ್ಟೊಂದು ಜನ ಕೈ ಹಿಡಿದು ನಡೆಸಿದರು. ಉಪೇಂದ್ರ, ಕಾಶಿನಾಥ್‌, ಸುಂದರನಾಥ್‌ ಸುವರ್ಣ...ಹೀಗೆ ಸಹಾಯ ಮಾಡಿದವರ ದೊಡ್ಡ ಪಟ್ಟಿ ಇದೆ. ಇಲ್ಲಿ ಗೆಲ್ಲುವ ಕುದುರೆ ಮುಖ್ಯ. ಹಾಗಂತ ನಾವು ಸುಮ್ಮನೆ ನಿಂತರೆ ಜೀವನ ಸಾಗದು. ಓಡೋ ಥರ ನಟನೆಯನ್ನಾದರೂ ಮಾಡಬೇಕು. ಸಿನಿಮಾ ಬಿಟ್ಟು ಬೇರೆ ಜಗತ್ತು ನನಗೆ ಗೊತ್ತಿಲ್ಲ.

ಪ್ರ

‘ದರ್ಬಾರ್‌’ ಸಿನಿಮಾ ಇವತ್ತಿಗೆ ಎಷ್ಟು ಪ್ರಸ್ತುತವಾಗಿದೆ?

ನಾನು ಬಹಳ ವರ್ಷಗಳ ಹಿಂದೆಯೇ ಅಪ್‌ಡೇಟ್‌ ಆಗಿರುವೆ. ‘ದರ್ಬಾರ್‌’ ನೋಡಿದರೆ ಅಪ್‌ಡೇಟ್‌ ಆಗಿರುವುದು ತಿಳಿಯುತ್ತದೆ. ಈಗಿನ ರಾಜಕೀಯ ವಿಡಂಬನೆ ಕಥೆಯಿದು. ಇವತ್ತು ಜನ ಚಿತ್ರಮಂದಿರಗಳಿಗೆ ಬರಬೇಕೆಂದರೆ, ಅವರಿಗೆ ಒಂದೊಳ್ಳೆ ಟೈಂಪಾಸ್‌ ಮಾಡುವ ಪ್ಯಾಕೇಜ್‌ ಬೇಕು. ಮನರಂಜನೆ ಜೊತೆಗೆ ಮನೆಗೆ ಹೋದ ನಂತರ ನೆನಪಿರುವ ಅಂಶಗಳು ಬೇಕು. ಅದು ಈ ಸಿನಿಮಾದಲ್ಲಿದೆ.

ಪ್ರ

ಒಂದು ಹೊಸ ನಾಯಕನಿಗೆ ಸಿನಿಮಾ ಮಾಡುವಾಗಿನ ಸವಾಲು ಹೇಗಿತ್ತು?

ನಾಯಕ, ನಿರ್ಮಾಪಕ ಸತೀಶ್‌ ಅವರೇ ಕಥೆ, ಚಿತ್ರಕಥೆ ಚೆನ್ನಾಗಿ ಮಾಡಿಕೊಂಡಿದ್ದರು. ಅವರಲ್ಲಿ ಹಾಸ್ಯಪ್ರಜ್ಞೆ ಇದೆ. ನಟನೆಯಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ ಅನುಭವ ಇರುವುದರಿಂದ ನನ್ನ ಕೆಲಸ ಸುಲಭವಾಯ್ತು. ಸಿನಿಮಾ ಚೆನ್ನಾಗಿ ಬಂದಿರೋದರಿಂದ ಆತ್ಮವಿಶ್ವಾಸವಿದೆ. ಗೆಲ್ಲುವ ಭರವಸೆಯಿದೆ. ಒಳ್ಳೆ ಕಂಟೆಂಟ್‌ ಇದೆ.

ಪ್ರ

ಈ ಸಿನಿಮಾದ ಸಂಗೀತದಲ್ಲಿ ಏನು ನಿರೀಕ್ಷೆ ಮಾಡಬಹುದು?

‘ಬಂದೇಬುಡ್ತು ಊರಹಬ್ಬದಂಗೆ’ ಎಂಬ ರಾಜಕೀಯ ವಿಡಂಬನೆಯ ಹಾಡೊಂದನ್ನು ಉಪೇಂದ್ರ ಹಾಡಿದ್ದು, ಚುನಾವಣೆ ಸಮಯದಲ್ಲಿ ಬಿಡುಗಡೆ ಮಾಡಿದ್ದೆವು. ಅದನ್ನು ತುಂಬ ಜನ ಕೇಳಿ ಇಷ್ಟಪಟ್ಟರು. ಚಂದನ್‌ ಶೆಟ್ಟಿ ಹಾಡಿರುವ ಟೈಟಲ್‌ ಸಾಂಗ್‌ ಕೂಡ ಜನಪ್ರಿಯತೆ ಪಡೆಯುತ್ತಿದೆ.

ವಿ.ಮನೋಹರ್‌
ವಿ.ಮನೋಹರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT