ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಸಬ್ಸಿಡಿ: ನಿಯಮ ಬದಲಿಸಿದರೆ ₹5 ಕೋಟಿ ಹೊರೆ

ಅನರ್ಹ, ಕಳಪೆ ಚಿತ್ರಗಳಿಗೆ ಸಹಾಯಧನ ಕೊಡಿಸುವ ಹುನ್ನಾರ
Last Updated 28 ಡಿಸೆಂಬರ್ 2019, 19:37 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಗುಣಾತ್ಮಕ ಚಲನಚಿತ್ರಗಳಿಗೆ ನೀಡುವ ಸಹಾಯಧನದ ದುರ್ಬಳಕೆ ತಡೆಯಲು ರಾಜ್ಯಸರ್ಕಾರವು ಡಿಸೆಂಬರ್‌ 2ರಂದು ಹೊರಡಿಸಿದ್ದ ಆದೇಶವನ್ನು ಕೆಲವು ನಿರ್ಮಾಪಕರ ಒತ್ತಡಕ್ಕೆ ಮಣಿದು ಈಗ ಮಾರ್ಪಡಿಸಲು ಹೊರಟಿದೆ. ಈ ಆದೇಶ ಬದಲಿಸಿದರೆ ಸರ್ಕಾರಕ್ಕೆ ಹೆಚ್ಚುವರಿ ₹ 5 ಕೋಟಿ ಹೊರೆ ಬೀಳಲಿದೆ. ಅಲ್ಲದೆ, 2019ರ ಸಾಲಿನಲ್ಲಿ26 ಅರ್ಹ ಚಿತ್ರಗಳು ಸಹಾಯ ಧನದಿಂದ ವಂಚಿತವಾಗಲಿವೆ.

‘ಸಬ್ಸಿಡಿ ಉದ್ದೇಶದಿಂದಲೇ ಅತಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿರುವ ಚಿತ್ರಗಳು ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕಂಡಿವೆ. ಈಕಾರಣಕ್ಕೆ ತಲಾ ₹18.75 ಲಕ್ಷ ಸಬ್ಸಿಡಿಯನ್ನು ಅವು ಸುಲಭವಾಗಿ ಪಡೆದುಕೊಳ್ಳಲಿವೆ’ ಎನ್ನುವ ಆಕ್ಷೇಪ ನಿರ್ಮಾಪಕರ ವಲಯದಿಂದಲೂ ವ್ಯಕ್ತವಾಗಿದೆ.

ಅಂತರರಾಷ್ಟ್ರೀಯಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆದ ಚಲನಚಿತ್ರಗಳು; ಭಾರತೀಯ ಪನೋರಮ ಮತ್ತು ಯಾವುದೇ ಅಧಿಕೃತ (ಎಫ್‌ಐಎಪಿಎಫ್‌ನಿಂದ ಮನ್ನಣೆ ಪಡೆದ) ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿ ಪ್ರದರ್ಶನಗೊಂಡ ಚಿತ್ರಗಳು ವಿಶೇಷ ಸಹಾಯಧನಕ್ಕೆ ಗುಣಾತ್ಮಕ ಚಲನಚಿತ್ರಗಳ ಆಯ್ಕೆ ಸಮಿತಿಯ ವೀಕ್ಷಣೆಗೆ ಒಳಪಡದೆ ನೇರವಾಗಿ ಅರ್ಹತೆ ಹೊಂದುವ ನಿಯಮ ಈ ಮೊದಲು ಜಾರಿಯಲ್ಲಿತ್ತು.

ಈ ನಿಯಮದಲ್ಲಿದ್ದ ದೋಷವನ್ನು ಬಂಡವಾಳ ಮಾಡಿಕೊಂಡಿದ್ದ ಕೆಲವು ನಿರ್ಮಾಪಕರು, ಏಜೆಂಟರ ಮೂಲಕಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರದರ್ಶನಕ್ಕೆ ಕಳಪೆ ಚಿತ್ರಗಳನ್ನು ಕಳುಹಿಸಿ, ಸಬ್ಸಿಡಿ ಪಡೆಯುತ್ತಿದ್ದರು. ಈ ಬಗ್ಗೆ ‘ಪ್ರಜಾವಾಣಿ’ಯೂ ಸೆಪ್ಟೆಂಬರ್‌ 8ರ ಸಂಚಿಕೆಯ ‘ಒಳನೋಟ’ದಲ್ಲಿ ವಿಸ್ತೃತ ವರದಿ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಡಿ.2ರಂದು ರಾಜ್ಯ ಸರ್ಕಾರ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳ ‘ಸ್ಪರ್ಧಾ ವಿಭಾಗ’ದಲ್ಲಿ ಪ್ರದರ್ಶನ ಕಂಡಿದ್ದರೆ ಮಾತ್ರ ಸಹಾಯ ಧನಕ್ಕೆ ಅರ್ಹತೆ ಎಂದು ನಿಯಮಮಾರ್ಪಡಿಸಿ, ಇದನ್ನು2019ರ ಜನವರಿಯಿಂದಲೇ ಜಾರಿಗೊಳಿಸಿ ಆದೇಶಿಸಿತ್ತು.

‘ವಾರ್ತಾ ಇಲಾಖೆ ಆಯುಕ್ತರು, ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ನಿರ್ದೇಶಕರಿಗೆ ಡಿ. 9ರಂದು ಪತ್ರ ಬರೆದು, 25ನೇ ಚಲನಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಯಾವುದಾದರು ಚಿತ್ರಗಳು ಪ್ರದರ್ಶನ ಕಂಡಿವೆಯೇ ಎನ್ನುವ ಮಾಹಿತಿ ಕೇಳಿದ್ದರು. ‘ಕನ್ನಡದ ಚಿತ್ರಗಳು ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡಿಲ್ಲ’ವೆಂಬ ಸ್ಪಷ್ಟನೆ ನಿರ್ದೇಶಕರಿಂದ ಬಂದಿತ್ತು. ಈ ಬೆಳವಣಿಗೆಯ ನಂತರವು, ಹೊಸ ಆದೇಶ ಮಾರ್ಪಡಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಮೂಲಗಳು ತಿಳಿಸಿವೆ.

‘ಹೊಸಆದೇಶ ಜಾರಿಯಾದರೆ, ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿರುವ 2019ರ ಸಾಲಿನ 26 ಚಿತ್ರಗಳಿಗೆ ವಿಶೇಷ ನೇರ ಸಬ್ಸಿಡಿ ಸಿಗುವುದಿಲ್ಲ. ಈ ಚಿತ್ರಗಳಿಗೆ ಸಂಬಂಧಿಸಿದ ಕೆಲವು ನಿರ್ಮಾಪಕರುಇಲಾಖೆಯ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಹೀಗಾಗಿ ಹೊಸ ಆದೇಶ 2020ರಿಂದ ಜಾರಿಗೆ ಬರುವಂತೆ ಅಧಿಕಾರಿಗಳು ಈ ಹಿಂದಿನ ಆದೇಶ ಮಾರ್ಪಡಿಸಲು ಹೊರಟಿದ್ದಾರೆ’ ಎಂದು ಹೆಸರು ಬಹಿರಂಗಪಡಿಸದ ನಿರ್ಮಾಪಕರು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ತಾ ಇಲಾಖೆ ಆಯುಕ್ತ ಎಸ್‌.ಎನ್‌. ಸಿದ್ದರಾಮಪ್ಪ‘ಹೊಸ ಆದೇಶ ಜಾರಿಗೆ ಬರುವ ಮೊದಲು 2019ರ ಸಾಲಿನ ಕೆಲವು ಚಿತ್ರಗಳು ಕೋಲ್ಕತ್ತ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿವೆ. ಹಾಗಾಗಿ ಹೊಸ ಆದೇಶವನ್ನು ಯಾವ ದಿನಾಂಕದಿಂದ ಜಾರಿ ಮಾಡಬೇಕೆನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.ಇಲಾಖಾ ಕಾರ್ಯದರ್ಶಿ ಮಣಿವಣ್ಣನ್‌ ಅವರು ರಜೆಯಲ್ಲಿದ್ದಾರೆ. ಅವರು ರಜೆಯಿಂದ ಬಂದ ನಂತರನಿರ್ಧಾರವಾಗಲಿದೆ’ ಎಂದು ತಿಳಿಸಿದ್ದಾರೆ.

109 ಚಲನಚಿತ್ರಗಳು ಸಬ್ಸಿಡಿಗೆ ಆಯ್ಕೆ
ಬೆಂಗಳೂರು: ಕನ್ನಡ ಹಾಗೂ ಪ್ರಾದೇಶಿಕ ಭಾಷೆಗಳ ಗುಣಾತ್ಮಕ ಚಲನಚಿತ್ರಗಳ ಸಹಾಯಧನಕ್ಕಾಗಿ2017ನೇ ಸಾಲಿನಲ್ಲಿ ಸಲ್ಲಿಕೆಯಾಗಿದ್ದ 203 ಚಿತ್ರಗಳ ಪೈಕಿ 109 ಚಲನಚಿತ್ರಗಳು ಸಬ್ಸಿಡಿಗೆ ಆಯ್ಕೆಯಾಗಿವೆ.

ರಾಜ್ಯದ ಪ್ರವಾಸಿ ತಾಣಗಳು ಹಾಗೂ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಚಲನಚಿತ್ರಗಳಿಗೆ ನೀಡಲಾಗುವ ಸಬ್ಸಿಡಿಗೆ ಈ ಸಾಲಿನಲ್ಲಿ ಯಾವುದೇ ಚಿತ್ರವು ಆಯ್ಕೆಯಾಗಿಲ್ಲ.

‌ಅತ್ಯುತ್ತಮ ಮಕ್ಕಳ ಚಲನಚಿತ್ರಗಳ ಪಟ್ಟಿಯಲ್ಲಿ‘ಕಲರ್ಸ್‌’, ‘ಆಶ್ರಯಧಾಮ’, ‘ಸಮ್ಮರ್‌ ಹಾಲಿಡೇಸ್‌’ ಸಿನಿಮಾಗಳಿಗೆ ತಲಾ ₹25 ಲಕ್ಷ ಸಹಾಯ ಧನ ಸಿಗಲಿದೆ. 2017ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿ ಪಡೆದ ‘ಎಳೆಯರು ನಾವು ಗೆಳೆಯರು’ ಕನ್ನಡ ಚಿತ್ರವು ಸಬ್ಸಿಡಿ ಸಲಹಾ ಸಮಿತಿಯ ವೀಕ್ಷಣೆಗೆ ಒಳಪಡದೆ ನೇರ ವಿಶೇಷ ಸಹಾಯಧನಕ್ಕೆ ಆಯ್ಕೆಗೊಂಡಿದೆ.

ಕಾದಂಬರಿ ಮತ್ತು ಸಾಹಿತ್ಯಾಧಾರಿತ ಚಲನಚಿತ್ರಗಳ ವಿಭಾಗದಲ್ಲಿ‘ಅಕ್ಕಮ್ಮನ ಭಾಗ್ಯ’, ‘ನೀರು ತಂದವರು’, ‘ನೇಮದ ಬೂಳ್ಯ’, ‘ಸೂರ್ಯ ಇವ ವೃಕ್ಷಮಿತ್ರ’, ‘ಮನ್ವಂತರ’ ಚಿತ್ರಗಳಿಗೆ ತಲಾ ₹15 ಲಕ್ಷ ಅನುದಾನ ದೊರೆಯಲಿದೆ.

ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರಗಳು ಮತ್ತು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಚಿತ್ರಗಳನ್ನು ಹೊರತುಪಡಿಸಿ, ಸಬ್ಸಿಡಿಗೆ 115 ಚಿತ್ರಗಳನ್ನು ಸಬ್ಸಿಡಿ ಸಲಹಾ ಸಮಿತಿ ಆಯ್ಕೆ ಮಾಡಿತ್ತು. ಆದರೆ, ಇದರಲ್ಲಿ ‘ಮದರ್‌ ಸವಿತಾ’, ‘ಮೆಟಡೇರ್‌’, ಓಂ ಬಾಲ ಸಾಯಿ, ‘ಬೆಸ್ಟ್‌ಫ್ರೆಂಡ್‌– ಇದು ತೀರ್ಪು ನೀಡಲಾಗದ ಪ್ರೇಮಕಥೆ’,‘ಕೆಂಗುಲಾಬಿ’, ‘ನಮ್ಮ ಮಗು’ (2017ರಲ್ಲಿ ಚಿತ್ರೀಕರಣಗೊಂಡು, 2018ರ ಜನವರಿಯಲ್ಲಿ ಸೆನ್ಸಾರ್‌ ಮಂಡಳಿ ಪ್ರಮಾಣ ಪತ್ರ ಪಡೆದಿವೆ) ಹೊರತುಪಡಿಸಿ 101 ಚಿತ್ರಗಳಿಗೆ ತಲಾ ₹10 ಲಕ್ಷದಂತೆ ಒಟ್ಟು 109 ಚಲನಚಿತ್ರಗಳಿಗೆ ಸಹಾಯ ಧನ ನೀಡಲು ಡಿಸೆಂಬರ್‌ 21ರಂದು ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಆದೇಶ ಹೊರಡಿಸಿದೆ.

ಚಿತ್ರಗಳುಸೆನ್ಸಾರ್‌ ಆದ ಸಾಲಿನಲ್ಲೇ ಸಬ್ಸಿಡಿಗೆ ಪರಿಗಣಿಸಬೇಕೆಂದು ನಿರ್ಮಾಪಕರೊಬ್ಬರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ತೀರ್ಪಿನ ನಂತರ ಆರು ಸಿನಿಮಾಗಳನ್ನು ಸಬ್ಸಿಡಿಗೆ ಪರಿಗಣಿಸಲು ಸಮಿತಿ ತೀರ್ಮಾನಿಸಿದೆ.

*
ಕೋಲ್ಕತ್ತ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಕಾರಣಕ್ಕೆ ಅಂತಹ ಚಿತ್ರಗಳನ್ನು ನೇರವಾಗಿ ಸಬ್ಸಿಡಿಗೆ ಪರಿಗಣಿಸುವುದು ಸರಿಯಲ್ಲ.
-ನರಸಿಂಹರಾಜು, ನಿರ್ಮಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT