ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವದಾದ್ಯಂತ ತೆರೆಕಂಡ ವಿಕ್ರಾಂತ್​ ರೋಣ: ಸುದೀಪ್​ಗೆ ಶುಭ ಹಾರೈಸಿದ ರಾಜಮೌಳಿ

ಅಕ್ಷರ ಗಾತ್ರ

ಬೆಂಗಳೂರು: ನಟ ಕಿಚ್ಚ ಸುದೀಪ್‌ ನಟನೆಯ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಬಿಗ್‌ ಬಜೆಟ್‌ ಸಿನಿಮಾ ‘ವಿಕ್ರಾಂತ್‌ ರೋಣ’ ಇಂದು (ಗುರುವಾರ) ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆ ಕಂಡಿದೆ.

ಚಿತ್ರದಲ್ಲಿ ಸ್ವತಃ ಸುದೀಪ್‌ ಅವರೇ ಡಬ್ಬಿಂಗ್‌ ಮಾಡಿರುವ ಈ ಚಿತ್ರ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಇಂಗ್ಲಿಷ್‌ನಲ್ಲಿ ‘3ಡಿ’ ಯಲ್ಲಿ ತೆರೆ ಕಂಡಿದ್ದು, ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಿಚ್ಚ ಸುದೀಪ್​ ಅವರನ್ನು ತೆರೆ ಮೇಲೆ ನೋಡುತ್ತಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. ಎಲ್ಲ ಚಿತ್ರಮಂದಿರಗಳ ಬಳಿ ಪಟಾಕಿ ಸಿಡಿಸಿ ಪ್ರೇಕ್ಷಕರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ವಿಶ್ವದಾದ್ಯಂತ ಮೂರುಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭಗೊಂಡಿದೆ.

‘ವಿಕ್ರಾಂತ್‌ ರೋಣ’ ಬಿಡುಗಡೆ ಹಿನ್ನೆಲೆಯಲ್ಲಿ ತೆಲುಗು ನಿರ್ದೇಶಕ ಎಸ್​.ಎಸ್​. ರಾಜಮೌಳಿ ಸೇರಿದಂತೆ ಸೆಲೆಬ್ರಿಟಿಗಳು ಕಿಚ್ಚ ಸುದೀಪ್​ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶುಭ ಕೋರಿದ್ದಾರೆ.

‘ಹೊಸ ಪ್ರಯೋಗಗಳನ್ನು ಮಾಡುವಲ್ಲಿ ಮತ್ತು ಸವಾಲುಗಳನ್ನು ಸ್ವೀಕರಿಸುವಲ್ಲಿ ಸುದೀಪ್ ಯಾವಾಗಲೂ ಮೊದಲಿಗರು. ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೋಡಲು ಕಾತುರನಾಗಿದ್ದೇನೆ. ವಿಶ್ಯುವಲ್ಸ್​ ಅದ್ಭುತವಾಗಿದೆ. ಸುದೀಪ್​ ಹಾಗೂ ಅವರ ತಂಡಕ್ಕೆ ನನ್ನ ಶುಭಾಶಯ’ ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

ರಾಜಮೌಳಿ ನಿರ್ದೇಶನದ ‘ಈಗ’ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ‘ಬಾಹುಬಲಿ’ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದರು. ರಾಜಮೌಳಿ ಹಾಗೂ ಸುದೀಪ್ ನಡುವೆ ಉತ್ತಮ ಬಾಂಧವ್ಯವಿದೆ.

‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಅನೂಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ. ನಿರೂಪ್​ ಭಂಡಾರಿ, ನೀತಾ ಅಶೋಕ್,ಜಾಕ್ವೆಲಿನ್‌ ಫರ್ನಾಂಡಿಸ್‌ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ಮಾಪಕ ಜಾಕ್ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT