ಶುಕ್ರವಾರ, ಮೇ 29, 2020
27 °C

ವೀಲ್‌ಚೇರ್‌ನಲ್ಲಿ ಮಯೂರಿಯ ಭಿನ್ನ ಪಾತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಕೃಷ್ಣಲೀಲಾ’ ಚಿತ್ರದ ಮೂಲಕ ಹಿರಿತೆರೆ ಪ್ರವೇಶಿಸಿದ ಮಯೂರಿ ಕ್ಯಾತರಿ ಅವರು ಈಗ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ‘ವೀಲ್‌ಚೇರ್‌ ರೋಮಿಯೊ’ ಎಂಬ ಸಿನಿಮಾದಲ್ಲಿ ಮಯೂರಿ ಅವರು ಅಂಧ ಹೆಣ್ಣಿನ ಪಾತ್ರ ನಿಭಾಯಿಸಿದ್ದಾರೆ.

‘ಇದು ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ರವಾನಿಸುವ ಪಾತ್ರ. ರೆಡ್‌ ಲೈಟ್‌ ಏರಿಯಾದಲ್ಲಿ ಜೀವಿಸುವವಳು ಈಕೆ. ಅಲ್ಲಿನ ಹೆಣ್ಣುಮಕ್ಕಳ ಜೀವನ ಹೇಗಿರುತ್ತದೆ, ಅಂಥ ಕಡೆ ಇರುವವರೆಲ್ಲ ಕೆಟ್ಟವರಾ, ಅವರ ಬದುಕಿನ ಸಂದರ್ಭಗಳು ಹೇಗಿರುತ್ತವೆ ಎಂಬುದನ್ನು ನನ್ನ ಪಾತ್ರ ಕಟ್ಟಿಕೊಡುತ್ತದೆ. ಅಲ್ಲಿ ಬದುಕುತ್ತಿರುವ  ಅವಳ ಜೀವನದಲ್ಲಿ ಪ್ರೀತಿಯ ಮೊಳಕೆ ಒಡೆದಾಗ ಏನಾಗುತ್ತೆ ಎಂಬುದು ಚಿತ್ರದ ಕಥೆ’ ಎಂದು ಮಯೂರಿ ವಿವರಿಸಿದರು.

‘ನಾನು ಇಂತಹ ಪಾತ್ರವನ್ನು ಹಿಂದೆ ಯಾವತ್ತೂ ಮಾಡಿಲ್ಲ. ಬಹಳ ಗಾಢವಾಗಿ ಆವರಿಸಿಕೊಳ್ಳುವ ಪಾತ್ರ ಇದು. ಕಲಾವಿದೆಯಾಗಿ ಬೇರೆ ಬೇರೆ ಪಾತ್ರಗಳನ್ನು ನಿಭಾಯಿಸಬೇಕು ಎಂಬ ಆಸೆಯಿಂದ ಇದನ್ನು ಒಪ್ಪಿಕೊಂಡೆ’ ಎನ್ನುವುದು ಈ ಪಾತ್ರವನ್ನು ತಾವು ಒಪ್ಪಿಕೊಂಡಿದ್ದಕ್ಕೆ ಮಯೂರಿ ನೀಡುವ ಕಾರಣ. ಚಿತ್ರವನ್ನು ನಟರಾಜ್ ಅವರು ನಿರ್ದೇಶಿಸಿದ್ದಾರೆ.

ಲಾಕ್‌ಡೌನ್‌ ಬದುಕು: ಮಯೂರಿ ಅವರು ಲಾಕ್‌ಡೌನ್‌ ಅವಧಿಯನ್ನು ಮನೆಯಲ್ಲಿ ಬಹಳ ಖುಷಿಯಿಂದ ಕಳೆಯುತ್ತಿದ್ದಾರೆ.

‘ಮನೆಯಲ್ಲಿ ಇರಲು ಆಗುವುದಿಲ್ಲ ಎಂದು ನನಗೆ ಕರೆ ಮಾಡುವ ಕೆಲವರು ಹೇಳುವುದುಂಟು. ಆದರೆ, ಇದನ್ನು ಕೇಳಿ ನನಗೆ ಆಶ್ಚರ್ಯವಾಗುತ್ತದೆ. ಮನೆಯಲ್ಲಿ ಇರಲು ಆಗದವರು ಇನ್ನೆಲ್ಲಿ ಇರುತ್ತಾರೆ?! ನಾವು ಇಲ್ಲೇ ಬಾಳಬೇಕು, ಬದುಕಬೇಕು. ಮನೆಯೆಂಬುದು ದೇವಾಲಯವಿದ್ದಂತೆ’ ಎಂದು ತಮ್ಮ ನಿಲುವು ಹೇಳುತ್ತಾರೆ ಮಯೂರಿ.

‘ಶೂಟಿಂಗ್ ಇಲ್ಲದ ಅವಧಿಯನ್ನು ನಾನು ಮನೆಯಲ್ಲೇ ಕಳೆಯುತ್ತಿದ್ದೆ. ಮನೆಯಲ್ಲಿ ಇರುವ ಅಭ್ಯಾಸ ನನಗೆ ಮೊದಲಿನಿಂದಲೂ ಇದೆ. ಹಾಗಾಗಿ, ಈ ಅವಧಿಯನ್ನು ನಾನು ಖುಷಿಯಿಂದಲೇ ಕಳೆಯುತ್ತಿದ್ದೇನೆ. ಶೂಟಿಂಗ್ ಇದ್ದಾಗ ಗಡಿಬಿಡಿಯಲ್ಲಿ ವ್ಯಾಯಾಮ ಮಾಡುತ್ತಿದ್ದೆ. ಈಗ ಬಿಡುವು ಸಿಕ್ಕಿರುವ ಕಾರಣ ನಾನು ಆರೋಗ್ಯದ ಕಡೆ ಹೆಚ್ಚು ಗಮನ ನೀಡುತ್ತಿದ್ದೇನೆ. ಡಯಟ್ ಮಾಡುತ್ತಿದ್ದೇನೆ. ಡಯಟ್ ಅಂದರೆ ಊಟ ಮಾಡದೆ ಇರುವುದಲ್ಲ; ಏನು ಊಟ ಮಾಡುತ್ತೇವೆ ಎಂಬುದನ್ನು ಗಮನಿಸುವ ಕೆಲಸ ಅದು’ ಎಂದು ಪ್ರಜಾಪ್ಲಸ್ ಜೊತೆ ಮಾತಿಗೆ ಸಿಕ್ಕಿದ್ದ ಅವರು ತಮ್ಮ ದಿನಚರಿ ಕುರಿತು ಹೇಳಿದರು.

ಪೊಗರು ಸಿನಿಮಾದಲ್ಲಿ ಮಯೂರಿ ವಿಶೇಷ ಪಾತ್ರ ನಿಭಾಯಿಸಿದ್ದಾರೆ. ‘ಆದ್ಯಂತ’ ಎನ್ನುವ ಮಹಿಳಾ ಕೇಂದ್ರಿತ ಸಿನಿಮಾದಲ್ಲಿ ನಟಿಸಿದ್ದು, ಇದರ ಚಿತ್ರೀಕರಣ ಪೂರ್ಣಗೊಂಡಿದೆ. ಡಬ್ಬಿಂಗ್ ಕೆಲಸ ಬಾಕಿ ಇದೆ. ‘ಇದೊಂದು ಥ್ರಿಲ್ಲರ್ ಸಿನಿಮಾ. ಪುನೀತ್ ಶರ್ಮನ್ ಇದರ ನಿರ್ದೇಶಕರು. ಬಹಳ ಪ್ರತಿಭಾನ್ವಿತ ತಂಡ ಈ ಸಿನಿಮಾದ ಹಿಂದಿದೆ’ ಎಂದು ಮಯೂರಿ ತಿಳಿಸಿದರು.

ಲಾಕ್‌ಡೌನ್‌ ಅವಧಿಯಲ್ಲಿ ಅಶ್ವಿನಿ ನಕ್ಷತ್ರ ಧಾರಾವಾಹಿ ಪುನಃ ಪ್ರಸಾರವಾಗುತ್ತಿದೆ. ಈ ಧಾರಾವಾಹಿ ಮೂಲಕವೇ ಮಯೂರಿ ಬಣ್ಣದ ಲೋಕ ಪ್ರವೇಶಿಸಿದ್ದು. ‘ವಾಪಸ್ ಕಿರುತೆರೆಗೆ ಬರುವಿರಾ ಎಂಬ ಆಹ್ವಾನ ಕೂಡ ನನಗೆ ಬರುತ್ತಿದೆ. ಧಾರಾವಾಹಿಗಳು ಜನರಿಗೆ ಬಹಳ ಹತ್ತಿರವಾಗುತ್ತವೆ. ಏನು ಮಾಡುತ್ತೇನೆ ಎಂಬುದನ್ನು ಕಾದು ನೋಡಬೇಕು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.