ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸುದೀಪ್: KFCC ಎದುರು ನಿರ್ಮಾಪಕ ಕುಮಾರ್ ಧರಣಿ

Published 17 ಜುಲೈ 2023, 9:52 IST
Last Updated 17 ಜುಲೈ 2023, 9:52 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಮಾಪಕ ಎಂ.ಎನ್‌.ಕುಮಾರ್‌ ಅವರ ವಿರುದ್ಧ ಎಸಿಎಂಎಂ ನ್ಯಾಯಾಲಯದಲ್ಲಿ ನಟ ಸುದೀಪ್‌ ಅವರು ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೇ ಎಂ.ಎನ್‌.ಕುಮಾರ್‌ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಎದುರು ಸೋಮವಾರದಿಂದ ಧರಣಿ ಆರಂಭಿಸಿದ್ದಾರೆ.

ಧರಣಿ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕುಮಾರ್‌, ‘ನನಗೆ ಎದುರಾಗಿರುವ ಸಮಸ್ಯೆಯನ್ನು ವಾಣಿಜ್ಯ ಮಂಡಳಿ ಮುಖಾಂತರವೇ ಬಗೆಹರಿಸಿಕೊಳ್ಳಬೇಕು. ಈ ಮಂಡಳಿ ಚಿತ್ರರಂಗಕ್ಕೆ ಮಾತೃಸಂಸ್ಥೆ. ನಾವು ನೀಡಿದ ಮನವಿಗೆ ಸರಿಯಾದ ಸ್ಪಂದನ ಮಂಡಳಿ ಮುಖಾಂತರ ಸಿಕ್ಕಿಲ್ಲ. ಹೀಗಾಗಿ ಧರಣಿ ಆರಂಭಿಸಿದ್ದೇನೆ. ನನಗೆ ಆಗಿರುವ ಅನ್ಯಾಯ ಮುಂದೆ ಯಾವ ನಿರ್ಮಾಪಕರಿಗೂ ಆಗಬಾರದು. ವಾಣಿಜ್ಯ ಮಂಡಳಿ ನನ್ನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಧರಣಿ ಕೂತಿದ್ದೇನೆ’ ಎಂದರು.

‘ನಾನು ಸುದೀಪ್‌ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನನಗೆ ಅವರಿಂದ ಸ್ಪಂದನೆ ಸಿಗುತ್ತಿಲ್ಲ ಎಂದಿದ್ದೆ. ಏನು ಸಮಸ್ಯೆ ಇದೆಯೋ ಅದನ್ನು ಮಂಡಳಿಯಲ್ಲೇ ಬಗೆಹರಿಸಿಕೊಳ್ಳೋಣ. ವಾಣಿಜ್ಯ ಮಂಡಳಿ ಅಧ್ಯಕ್ಷರು ಈ ಸಮಸ್ಯೆಯನ್ನು ಹಿರಿಯ ಕಲಾವಿದರ ಗಮನಕ್ಕೆ ತರಬೇಕು. ಸುದೀಪ್‌ ಅವರು ಸಭೆಗೆ ಬಂದರೆ ಅವರಿಗೆ ದಾಖಲೆ ನೀಡುತ್ತೇನೆ. ರಾಜಿ ಸಂಧಾನಕ್ಕೆ ನಾವು ತಯಾರಿದ್ದೇವೆ. ಇಂಥ ಸಮಸ್ಯೆ ಬಗೆಹರಿಸಲು ವಾಣಿಜ್ಯ ಮಂಡಳಿ ಇದೆ. ಇಲ್ಲಿ ಈ ಸಮಸ್ಯೆಗೆ ಪರಿಹಾರ ಸಾಧ್ಯವಾಗದೇ ಇದ್ದರೆ ನ್ಯಾಯಾಲಯದ ಮೆಟ್ಟಿಲೇರುವುದು ಅನಿವಾರ್ಯ’ ಎಂದರು ಕುಮಾರ್‌.

‘ಜುಲೈ 13ಕ್ಕೆ ನನಗೆ ಸುದೀಪ್‌ ಅವರಿಂದ ನೋಟಿಸ್‌ ಸಿಕ್ಕಿದೆ. ಇದಕ್ಕೆ ಜುಲೈ 14ಕ್ಕೆ ಪ್ರತಿಕ್ರಿಯೆ ನೀಡಿದ್ದೇನೆ. ಅವರು ಕಳುಹಿಸಿದ ನೋಟಿಸ್‌ ಆಂಗ್ಲ ಭಾಷೆಯಲ್ಲಿದ್ದ ಕಾರಣ, ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ. ಹೀಗಾಗಿ ಕನ್ನಡದಲ್ಲಿ ಕಳುಹಿಸಿ ಎಂದು ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದೇನೆ. ಶಿವರಾಜ್‌ಕುಮಾರ್‌ ಅವರು ಮಧ್ಯಸ್ಥಿಕೆ ವಹಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬೇಡಿಕೊಳ್ಳುತ್ತೇನೆ. ಅವರು ಬರುವವರೆಗೂ ಧರಣಿ ಮುಂದುವರಿಸುತ್ತೇನೆ. ನನ್ನ ಬಳಿ ಮೂರು ದಾಖಲೆಗಳಿದ್ದು, ದಾಖಲೆಗಳನ್ನು ಮಂಗಳವಾರ ಮಾಧ್ಯಮಗಳಿಗೆ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT