ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆಯಿಂದ ‘ಜೇಮ್ಸ್‌’ ಹಬ್ಬ ಆರಂಭ; ಅಪ್ಪು ಅಭಿಮಾನಿಗಳಿಗೆ ಸಂಭ್ರಮ

ಜನ್ಮದಿನದ ಜೊತೆಗೆ ಸಿನಿಮಾ ಬಿಡುಗಡೆ
Last Updated 15 ಮಾರ್ಚ್ 2022, 21:34 IST
ಅಕ್ಷರ ಗಾತ್ರ

ಬೆಂಗಳೂರು: ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳಿಗೆ ಗುರುವಾರ (ಮಾ.17) ಹಬ್ಬದ ಸಂಭ್ರಮ. ಒಂದೆಡೆ ನೆಚ್ಚಿನ ನಟ ‘ಅಪ್ಪು’ವಿನ ಜನ್ಮದಿನ, ಇನ್ನೊಂದೆಡೆ ಅಪ್ಪು ನಟನೆಯ ಕೊನೆಯ ಸಿನಿಮಾ ‘ಜೇಮ್ಸ್‌’ ಬಿಡುಗಡೆ. ಇವೆರಡನ್ನೂ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಚೇತನ್‌ ಕುಮಾರ್‌ ನಿರ್ದೇಶನದ ‘ಜೇಮ್ಸ್‌’, ಕರ್ನಾಟಕದಲ್ಲೇ 400ಕ್ಕೂ ಅಧಿಕ ಏಕಪರದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ‘ಜೇಮ್ಸ್‌’ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ‘ತಮ್ಮ ಜನ್ಮದಿನದಂದೇ ಈ ಚಿತ್ರ ಬಿಡುಗಡೆಯ ಆಸೆಯನ್ನು ಪುನೀತ್‌ ಅವರು ಹೊಂದಿದ್ದರು. ಈ ಆಸೆ ಪೂರೈಸುವುದು ನಮ್ಮ ಜವಾಬ್ದಾರಿಯಾಗಿತ್ತು. ಅಮೆರಿಕದಲ್ಲಿ 72 ಕೇಂದ್ರಗಳು, ಕೆನಡಾದಲ್ಲಿ 40 ಕೇಂದ್ರಗಳು ಸೇರಿದಂತೆ 21 ದೇಶಗಳಲ್ಲಿ ‘ಜೇಮ್ಸ್‌’ ಬಿಡುಗಡೆಯಾಗುತ್ತಿದೆ. ಮೈಸೂರಿನಲ್ಲಿ ಇರುವ ಐದು ಏಕಪರದೆ ಚಿತ್ರಮಂದಿರಗಳಲ್ಲಿ ಹಾಗೂ ಮೂರು ಮಲ್ಟಿಪ್ಲೆಕ್ಸ್‌ನಲ್ಲಿ ದಿನಕ್ಕೆ 17–18 ಪ್ರದರ್ಶನಗಳ ಟಿಕೆಟ್‌ ಮಾರಾಟವಾಗಿವೆ’ ಎಂದಿದ್ದಾರೆ ಚೇತನ್‌ ಕುಮಾರ್‌.

ಕಲೆಕ್ಷನ್‌ನಲ್ಲಿ ಹೊಸ ದಾಖಲೆ: ಬೆಳಗ್ಗೆ 4ರಿಂದಲೇ ಹಲವು ಚಿತ್ರಮಂದಿರಗಳಲ್ಲಿ ‘ಫ್ಯಾನ್ಸ್‌ ಶೋ’ ಆರಂಭವಾಗಲಿದ್ದು, ತಡರಾತ್ರಿಯವರೆಗಿನ ಪ್ರದರ್ಶನಗಳೂ ನಿಗದಿಯಾಗಿವೆ. ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ಫಸ್ಟ್‌ ಶೋಗಳ ಟಿಕೆಟ್‌ ಪೂರ್ಣವಾಗಿ ಬಿಕರಿಯಾಗಿವೆ. ನಗರದ ಕೆಲವು ಮಲ್ಟಿಪ್ಲೆಕ್ಸ್‌ಗಳಲ್ಲಿ ದಿನಕ್ಕೆ 20–22 ಪ್ರದರ್ಶನಗಳಿವೆ. ‘ಜೇಮ್ಸ್‌’ ಮೊದಲ ದಿನದ ಗಳಿಕೆ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವುದು ಖಚಿತ ಎನ್ನುತ್ತಿದೆ ಗಾಂಧಿನಗರ.

‘ಜೇಮ್ಸ್‌’ ಬಿಡುಗಡೆಯನ್ನು ಹಬ್ಬವನ್ನಾಗಿ ಆಚರಿಸಲು ಈಗಾಗಲೇ ಅಭಿಮಾನಿಗಳು ಸಿದ್ಧತೆ ಆರಂಭಿಸಿದ್ದು, ಚಿತ್ರಮಂದಿರಗಳ ಮುಂದೆ ‘ಅಪ್ಪು’ ಕಟೌಟ್‌ಗಳು ರಾರಾಜಿಸುತ್ತಿವೆ. ಬೆಂಗಳೂರಿನ ವೀರೇಶ್‌ ಚಿತ್ರಮಂದಿರದ ಎದುರು ಪುನೀತ್‌ ನಟನೆಯ ಎಲ್ಲ ಸಿನಿಮಾಗಳ ಕಟೌಟ್‌ ನಿಲ್ಲಿಸಲಾಗಿದೆ. ರಾಜ್ಯದೆಲ್ಲೆಡೆ ಚಿತ್ರಮಂದಿರಕ್ಕೆ ಸಾಗುವ ದಾರಿಯಲ್ಲಿ ಅಪ್ಪು ಜನ್ಮದಿನಕ್ಕೆ ಶುಭಾಶಯ ಕೋರಿ, ‘ಜೇಮ್ಸ್‌’ ಚಿತ್ರಕ್ಕೆ ಹಾರೈಸಿ ಫ್ಲೆಕ್ಸ್‌ಗಳ ತೋರಣವೇ ಕಾಣಿಸುತ್ತಿದೆ. ಹಲವು ಚಿತ್ರಮಂದಿರಗಳಲ್ಲಿ ಗುರುವಾರ ಬೆಳಗ್ಗಿನಿಂದ ರಾತ್ರಿಯವರೆಗೂ ಪ್ರೇಕ್ಷಕರಿಗೆ ಹಲವು ಬಗೆಯ ಭಕ್ಷ್ಯ ಭೋಜನವನ್ನು ಉಣಬಡಿಸಲುಅಭಿಮಾನಿಗಳು ನಿರ್ಧರಿಸಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪುನೀತ್‌ ಅವರ ಜನ್ಮದಿನದ ಅಂಗವಾಗಿ ಅನ್ನಸಂತರ್ಪಣೆ, ರಕ್ತದಾನ ಶಿಬಿರ ನಡೆಸಲು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.

ಒಂದೇ ತೆರೆಯಲ್ಲಿ ‘ದೊಡ್ಮನೆ’:ಈ ಸಿನಿಮಾ ಮುಖಾಂತರ ಇದೇ ಮೊದಲ ಬಾರಿಗೆ ಯೋಧನ ಪಾತ್ರದಲ್ಲಿ ‘ಅಪ್ಪು’ ಕಾಣಿಸಿಕೊಳ್ಳುತ್ತಿರುವುದೂ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟುವುದಕ್ಕೆ ಇನ್ನೊಂದು ಕಾರಣ. ಚಿತ್ರದ ‘ಸಲಾಂ ಸೋಲ್ಜರ್‌’ ಹಾಗೂ ‘ಟ್ರೇಡ್‌ ಮಾರ್ಕ್‌’ ಹಾಡುಗಳು ಈಗಾಗಲೇ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿವೆ. ಅಪ್ಪು ಅಭಿಮಾನಿಗಳಿಗಷ್ಟೇ ಅಲ್ಲದೆ, ನಟ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳಿಗೂ ಜೇಮ್ಸ್‌ ವಿಶೇಷ ಚಿತ್ರ. ಏಕೆಂದರೆ, ಶಿವರಾಜ್‌ಕುಮಾರ್‌, ರಾಘವೇಂದ್ರ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡುವ ಅಭಿಮಾನಿಗಳ ಆಸೆಯೂ ಈ ಸಿನಿಮಾ ಮುಖಾಂತರಈಡೇರುತ್ತಿದೆ. ಮಾ.17ರಂದೇ ‘ಜೇಮ್ಸ್‌’ ಬಿಡುಗಡೆಯಾಗುತ್ತಿರುವ ಎಲ್ಲ ಚಿತ್ರಮಂದಿರಗಳಲ್ಲಿ ಶಿವರಾಜ್‌ಕುಮಾರ್‌ ನಟನೆಯ 123ನೇ ಸಿನಿಮಾ ‘ಬೈರಾಗಿ’ಯ ಟೀಸರ್‌ ಬಿಡುಗಡೆಯಾಗಲಿದೆ. ಟೀಸರ್ ಅನ್ನು ಚಿತ್ರತಂಡವು ಅಪ್ಪುಗೆಅರ್ಪಿಸಿದೆ.

ಹೀಗೆ ಚಂದನವನದಲ್ಲಿ ಹಿಂದೆಂದೂ ನೋಡದ ಸಿನಿಮಾ ಹಬ್ಬ ಗುರುವಾರ ಆರಂಭವಾಗಲಿದೆ.

***

ಅಪ್ಪು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಆತ ನಮ್ಮೆಲ್ಲರ ಹೃದಯದಲ್ಲಿದ್ದಾನೆ. ನಾವು ಅವನನ್ನು ಜೀವಂತವಾಗಿ ಜೊತೆಯಾಗಿ ಕರೆದುಕೊಂಡು ಹೋಗೋಣ.
-ಶಿವರಾಜ್‌ಕುಮಾರ್‌, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT