ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪ್ರಿಯತೆ, ಜನಪರತೆ ಎರಡೂ ಬೇಕು: ನಿರ್ದೇಶಕ ಜಯತೀರ್ಥ ಸಂದರ್ಶನ

Last Updated 8 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಕನ್ನಡದ ಕ್ರಿಯಾಶೀಲ ನಿರ್ದೇಶಕರಲ್ಲೊಬ್ಬರು ಜಯತೀರ್ಥ ಬಿ.ವಿ. ತಮ್ಮ ಚಿತ್ರಗಳಲ್ಲಿ ಕಥೆ, ಕಲಾತ್ಮಕತೆ, ತತ್ವಗಳನ್ನು ಒಟ್ಟಾಗಿ ಕಟ್ಟಿಕೊಡುವ ಸೃಜನಶೀಲತೆ ಅವರ ವಿಶೇಷ. ‘ಒಲವೇ ಮಂದಾರ’ ದಿಂದ ಬನಾರಸ್‌ ವರೆಗೆ ಮತ್ತು ಇದೀಗ ಸೆಟ್ಟೇರಿರುವ ‘ಕೈವ’ದವರೆಗಿನ ಅವರ ನಿರ್ದೇಶನದ ಫ್ರೇಮುಗಳನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

* ‘ಒಲವೇ ಮಂದಾರ’ದಿಂದ ‘ಬನಾರಸ್‌’ವರೆಗಿನ ಆ್ಯಕ್ಷನ್‌ ಕಟ್‌ ಪ್ರಯಾಣ ಹೇಗಿದೆ?

– ಮೊದಲ ಚಿತ್ರ ‘ಒಲವೇ ಮಂದಾರ’ ಯಾವುದೇ ಅನುಭವ ಇಲ್ಲದೇ ತೋಚಿದಂತೆ ಮಾಡಿದ ಸಿನಿಮಾ. ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿ ಬಂದಿತು. ಅದನ್ನು ನೋಡಿದರೆ ಒಮ್ಮೊಮ್ಮೆ ಅನುಭವ ಕೆಲಸಕ್ಕೆ ಬರುವುದಿಲ್ಲ ಅನಿಸುವುದುಂಟು. ಅದರ ಯಶಸ್ಸಿನ ಬೆನ್ನಲ್ಲೇ ಟೋನಿ, ಬ್ಯೂಟಿಫುಲ್‌ ಮನಸುಗಳು ಇಂಥ ಚಿತ್ರಗಳನ್ನು ಮಾಡಿದೆ. ಒಟ್ಟಿನಲ್ಲಿ ಸೃಜನಶೀಲತೆ, ಸಂದೇಶ, ಒಂದು ಫಿಲಾಸಫಿ ಬೇಕು ಅನ್ನುವವನು ನಾನು.

* ಸೃಜನಶೀಲತೆ, ಸಂದೇಶ, ತತ್ವದ ಆಧಾರದಲ್ಲಿ ಹೋದರೆ ಇಂದಿನ ಪ್ರೇಕ್ಷಕ ಸ್ವೀಕರಿಸುತ್ತಾನೆಯೇ?

ನಿಜ ಹೇಳಲಾ, ಪ್ರೇಕ್ಷಕನಿಗೆ ಸಂದೇಶ, ತತ್ವ ಏನೂ ಬೇಡ. ಅವನಿಗೆ ಬೇಕಾದದ್ದು ಮನೋರಂಜನೆ. ಸರಿ. ಮೇಲ್ನೋಟಕ್ಕೆ ನಾವು ಅದನ್ನೇ ಕೊಡೋಣ. ಆ ಮನೋರಂಜನೆಯ ಒಳಗೆ ಒಂದಿಷ್ಟು ಸಂದೇಶವನ್ನು ಬುದ್ಧಿವಂತಿಕೆಯಿಂದ ಕಟ್ಟಿ ಕೊಡಬೇಕು. ಅವನು ಕೊಡುವ ಹಣಕ್ಕೆ ಮೋಸವಾಗಬಾರದು ಅಷ್ಟೇ. ಈಗಿನ ‘ಜನಪ್ರಿಯ’ತೆಯ ಅಲೆಯಲ್ಲಿ ಜನಪರತೆಯನ್ನು ಮರೆಯಬಾರದು. ಅದರ ಜೊತೆ ಹೃದಯವಂತಿಕೆಯೂ ಇರಬೇಕು. ಅವೆರಡರ ಸಮ್ಮಿಶ್ರಣವೇ ಕ್ರಿಯಾಶೀಲ ಸಿನಿಮಾ.

* ಹೊಸಬರನ್ನೇ ಹಾಕಿಕೊಂಡು ಸಿನಿಮಾ ಮಾಡುವುದರ ಉದ್ದೇಶ?

ಒಂದಿಷ್ಟು ತಾಜಾತನ ಇರುತ್ತದೆ. ಹೊಸ ಭರವಸೆಗಳು ಚಿತ್ರರಂಗಕ್ಕೆ ಬರುತ್ತಾರೆ ಅನ್ನುವ ಉದ್ದೇಶ. ಅವರನ್ನು ನಮಗೆ ಬೇಕಾದಂತೆ ರೂಪಿಸಬಹುದು. ಕಲಾವಿದ ಅವನಿಗೇನು ಬೇಕು ಅಥವಾ ನನಗೇನು ಬೇಕು ಅನ್ನುವುದು ಮುಖ್ಯವಲ್ಲ. ಸಿನಿಮಾಕ್ಕೇನು ಬೇಕು ಮತ್ತು ಪ್ರೇಕ್ಷಕನಿಗೇನು ಬೇಕೋ ಅದನ್ನು ಅಚ್ಚುಕಟ್ಟಾಗಿ ಕೊಡುವಂತವನಾಗಬೇಕು ಅಷ್ಟೇ. ಹಾಗಾಗಿ ನಾನು ಇಲ್ಲಿ ಹೀರೋಗಳನ್ನು ರೂಪಿಸುವುದಿಲ್ಲ. ಒಳ್ಳೆಯ ಕಲಾವಿದರನ್ನು ರೂಪಿಸುತ್ತೇನೆ ಅಷ್ಟೇ.

* ‘ಬನಾರಸ್‌’ನಲ್ಲಿ ಏನು ಹೇಳಲು ಹೊರಟಿದ್ದೀರಿ?

ಇದು ಕಾವೇರಿಯಿಂದ ಗಂಗಾನದಿವರೆಗಿನ ಸಿನಿಮಾ. ಬನಾರಸ್‌ನಲ್ಲಿ ಮೂಡುವ ಪ್ರೀತಿಯು ನಶ್ವರತೆ, ಸಾವು, ವೈರಾಗ್ಯ ಇತ್ಯಾದಿಗಳ ಹಿನ್ನೆಲೆಯಲ್ಲೇ ಹೊಸ ಹುಟ್ಟುವಿಕೆ (ಪ್ರೀತಿ)ಯನ್ನು ಹೇಳುತ್ತಾ ಹೋಗುತ್ತದೆ. ಒಂದಿಷ್ಟು ಲಾಜಿಕ್‌, ವಿಜ್ಞಾನ, ಕುತೂಹಲ ಎಲ್ಲವನ್ನೂ ಕಟ್ಟಿಕೊಡಲು ಹೋಗಿದ್ದೇವೆ.

* ನಾಯಕ ಝೈದ್‌ ಖಾನ್‌ ಬಗ್ಗೆ?

ಅವರಿಗೆ ಬದ್ಧತೆ ಸ್ವಲ್ಪ ಹೆಚ್ಚೇ ಇದೆ. ಸಾಕಷ್ಟು ಸಿದ್ಧತೆಯೊಂದಿಗೆ ಬಂದಿದ್ದಾರೆ. ಅದನ್ನು ಗಮನಿಸಿದ್ದೇನೆ. ದೀರ್ಘ ಚರ್ಚೆ, ಕಾರ್ಯಾಗಾರಗಳ ಬಳಿಕ ಸಿದ್ಧಗೊಂಡಿದ್ದಾರೆ. ಆಗಲೇ ಹೇಳಿದೆನಲ್ಲಾ, ಅವರನ್ನು ಒಬ್ಬ ಕಲಾವಿದನನ್ನಾಗಿ ರೂಪಿಸುವುದೇ ನನ್ನ ಗುರಿ. ನಾಯಕನಾಗಿ ಅಲ್ಲ. ಚಿತ್ರರಂಗದ ಅವರ ಸಮಕಾಲೀನರ ಜೊತೆ ನಿಲ್ಲುವಾಗಿ ಝೈದ್‌ ಒಬ್ಬ ಸಮರ್ಥ, ಸತ್ವಯುತ ವ್ಯಕ್ತಿಯಾಗಿಯೇ ಕಾಣಿಸಿಕೊಳ್ಳಬೇಕು. ಆ ರೀತಿ ಸಿದ್ಧಗೊಂಡಿದ್ದಾರೆ. ಅದು ಹಾಗೆಯೇ ಮುಂದುವರಿಯಬೇಕು ಅಷ್ಟೇ.

* ‘ಕೈವ’ ಸೆಟ್ಟೇರಿದೆ. ಅದರಲ್ಲೇನು ಹೇಳುತ್ತಿದ್ದೀರಿ?

ಅದು 1983ರ ಕಾಲಘಟ್ಟದ ಒಂದು ಘಟನೆ. ಬೆಂಗಳೂರಿನಲ್ಲಿ ಗಂಗಾರಾಮ್‌ ಕಟ್ಟಡ ಕುಸಿದಿತ್ತಲ್ಲಾ. ಅಂಥ ದುರಂತದ ಮಧ್ಯೆಯೂ ಹುಟ್ಟಿದ ಪ್ರೇಮ. ಅದರಲ್ಲೊಂದಿಷ್ಟು ದುರಂತಗಳು. ಅಪರಾಧ, ಪತ್ತೆಧಾರಿ ಅಂಶಗಳನ್ನಿಟ್ಟುಕೊಂಡು ಕಥೆ ಹೆಣೆದಿದ್ದೇನೆ. ಮುಂದಿನದ್ದನ್ನು ಸಿನಿಮಾದಲ್ಲೇ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT