ಮಂಗಳವಾರ, ಆಗಸ್ಟ್ 3, 2021
27 °C

ಬಾಲಿವುಡ್‌ ನೃತ್ಯಕ್ಕೆ ಹೊಳಪು ಕೊಟ್ಟ ಸರೋಜ್‌ ಖಾನ್‌

ಬಿ.ಎಂ. ಹನೀಫ್‌ Updated:

ಅಕ್ಷರ ಗಾತ್ರ : | |

Prajavani

80ರ ದಶಕದ ಬಳಿಕ ಬಾಲಿವುಡ್‌ ಅನ್ನು ಅಕ್ಷರಶಃ ಆಳಿದ ಇಬ್ಬರು ನಾಯಕಿಯರೆಂದರೆ ಶ್ರೀದೇವಿ ಮತ್ತು ಮಾಧುರಿ ದೀಕ್ಷಿತ್‌. ಈ ಇಬ್ಬರೂ ‘ಸೂಪರ್‌ ಹಿರೋಯಿನ್’ಗಳಾಗಿ ಬೆಳೆಯುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದು ಅವರ ಅಭಿನಯ ಮತ್ತು ಡ್ಯಾನ್ಸ್‌ ಸಾಮರ್ಥ್ಯ. ಇಬ್ಬರನ್ನೂ ಬೆಳ್ಳಿತೆರೆಯ ಮೇಲೆ ಅದ್ಭುತ, ಲಾವಣ್ಯವತಿ ನರ್ತಕಿಯರಂತೆ ತೋರಿಸಿಕೊಟ್ಟವರು ಕೊರಿಯೊಗ್ರಾಫರ್‌ ಸರೋಜ್‌ ಖಾನ್‌.

ತಮ್ಮ 71ರ ಹರೆಯದಲ್ಲಿ ಶುಕ್ರವಾರ ಮುಂಬೈಯಲ್ಲಿ ವಿಧಿವಶರಾದ ಸರೋಜ್‌ ಖಾನ್‌ ನಾಲ್ಕು ದಶಕಗಳಲ್ಲಿ 2000ಕ್ಕೂ ಹೆಚ್ಚು ಡಾನ್ಸ್‌ಗಳಿಗೆ ಕೊರಿಯೊಗ್ರಾಫರ್‌ ಆಗಿದ್ದರು. 70ರ ದಶಕ ಮುಗಿಯುವವರೆಗೂ ಕಣ್ಣೀರು ಮತ್ತು ಭಾವಾಭಿನಯಗಳಲ್ಲೇ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚುತ್ತಿದ್ದ ಬಾಲಿವುಡ್‌ ನಾಯಕಿಯರಿಗೆ, ದೇಹದ ಬಳುಕು ಮತ್ತು ಮುಖದ ಮೇಲಿನ ಮಂದಹಾಸದ ಮಧ್ಯೆ ಅವಿನಾಭಾವ ಸಂಬಂಧವಿದೆ ಎನ್ನುವುದನ್ನು ತೋರಿಸಿಕೊಟ್ಟು, ಅವರ ಸಿನಿಮಾಗಳಿಗೆ ಹೊಸ ಸ್ಟಾರ್‌ವ್ಯಾಲ್ಯೂ ತಂದುಕೊಟ್ಟಿದ್ದು ಸರೋಜ್‌ ಖಾನ್‌ ಹೆಗ್ಗಳಿಕೆ. ಅದಕ್ಕೆಂದೇ ಅವರು ಎಲ್ಲರಿಗೂ ಪ್ರೀತಿಯ ‘ಮಾಸ್ಟರ್‌ಜೀ’ ಆಗಿದ್ದರು. ಬಾಲಿವುಡ್‌ನಲ್ಲಿ ಡ್ಯಾನ್ಸ್‌ಮಾಸ್ಟರ್‌ಗಳು ಕೊರಿಯೊಗ್ರಾಫರ್‌ಗಳಾಗಿ ಬದಲಾದ ಸಂಧಿಘಟ್ಟದಲ್ಲಿ ಸಾಧನೆ ಮೆರೆದವರು.

ಇದು ಬಾಲಿವುಡ್‌ನ ಇಬ್ಬರು ನಾಯಕಿಯರ ಕಥೆ ಮಾತ್ರವಲ್ಲ. ‘ತಾಲ್‌’ ಚಿತ್ರದ ಐಶ್ವರ್ಯ ರೈಯನ್ನೇ ತೆಗೆದುಕೊಳ್ಳಿ. ‘ದಿಲ್‌ ಎ ಬೇಚೈನ್‌ ಹೈ...’ ಎಂದು ಮಳೆಯಲ್ಲಿ ಶುರುವಾಗುವ ಮೂವರು ನಾಯಕಿಯರ ನೃತ್ಯದ ಕೊರಿಯೊಗ್ರಾಫ್‌ ಇಡೀ ಮಳೆ ಮತ್ತು ತೋಯ್ದ ಪ್ರಕೃತಿಯನ್ನೂ ಒಟ್ಟಾಗಿ ಸೆರೆಹಿಡಿದಿದೆ. ಅಥವಾ ‘ತೇಜಾಬ್’ ಚಿತ್ರದ ಮಾಧುರಿಯ ‘ಏಕ್‌ ದೋ ತೀನ್‌...’ ನೃತ್ಯ ಕಟ್ಟಿಕೊಡುವ  ಸಮೀಕರಣವೊಂದನ್ನು ಗಮನಿಸಿ. ಗುಂಪು ನೃತ್ಯ, ಹಿರೋಯಿನ್‌ನ ಪದಚಲನೆ ಮತ್ತು ತುಟಿ, ಕಣ್ಣುಗಳ ಚಲನೆ ಎಲ್ಲವೂ ಏಕತ್ರಗೊಳ್ಳುವ ಪರಿಯೇ ವಿಶಿಷ್ಟ.

ಸರೋಜ್‌ ಖಾನ್‌ ಖ್ಯಾತಿಯ ತುದಿಗೇರಿದ್ದು 1986ರಲ್ಲಿ ಬಂದ ‘ನಗೀನಾ’ ಚಿತ್ರದ ಕೊರಿಯೊಗ್ರಾಫ್‌ನಲ್ಲಿ. ‘ನಾಗಿನ್’ ಎನ್ನುವ ಚಿತ್ರವೊಂದು 1954ರಲ್ಲಿಯೇ ತೆರೆ ಕಂಡಿತ್ತು. ನಾಗರಹಾವು ಹೆಣ್ಣಾಗಿ ಬಂದು ಸೇಡು ತೀರಿಸಿಕೊಳ್ಳುವ ಈ ಕಥೆ, ಮುಂದೆ 50 ವರ್ಷಗಳ ಕಾಲ ಭಾರತೀಯ ಚಿತ್ರರಂಗವನ್ನು ಬೆನ್ನುಬಿಡದಂತೆ ಕಾಡಿತು. ಅದರಲ್ಲಿ ಲತಾ ದೀದಿ ಹಾಡಿದ ‘ಮನ್‌ ಡೋಲೇ ಮೇರಾ ತನ್‌ ಡೋಲೆ...  ಕೌನ್‌ ಬಜಾಯೆ ಬಾನ್ಸುರಿಯಾ’ ಎನ್ನುವ ಹಾಡಿಗೆ ವೈಜಯಂತಿಮಾಲಾ ಕುಣಿದದ್ದನ್ನು ಒಂದಿಡೀ ತಲೆಮಾರು ಮರೆಯಲೇ ಇಲ್ಲ. ಆ ಹಾಡನ್ನೂ ಮರೆಸುವಂತೆ ಮಾಡಿದ್ದು 1986ರಲ್ಲಿ ಬಂದ ‘ನಗೀನಾ’. ಅದೇ ಕಥೆ. ಆದರೆ ಹಾಡು ಬೇರೆ. ‘ಮೈ ನಾಗನ್‌, ತೂ ಸಪೇರಾ...’ ಎನ್ನುವ ಹಾಡಿಗೆ ಶ್ರೀದೇವಿ ಎಂಬ ದೊನ್ನೆಮೂಗಿನ ಸುಂದರಿ, ನಾಗರಹಾವನ್ನೂ ನಾಚಿಸುವಂತೆ ಕುಣಿಯಲು ಕಾರಣರಾದದ್ದು ಇದೇ ಸರೋಜ್‌ ಖಾನ್‌.  ಅಲ್ಲಿಂದೀಚೆಗೆ ಈಕೆ ಬಾಲಿವುಡ್‌ನ ಫೇವರೆಟ್‌ ಮಾಸ್ಟರ್‌ಜೀ. 87ರಲ್ಲಿ ಬಂದ ‘ಮಿಸ್ಟರ್‌ ಇಂಡಿಯಾ’ದ ‘ಹವಾ ಹವಾಯಿ...’,  89ರಲ್ಲಿ  ಬಂದ ‘ಚಾಂದ್‌ನಿ’ಯ ‘ತೂ ಮೇರೆ ಚಾಂದ್‌ನೀ...’ ಹಾಡು ಮತ್ತು ನೃತ್ಯಗಳು ಶ್ರೀದೇವಿಯನ್ನು ಶಿಖರಕ್ಕೇರಿಸಿದವು. ಇದೇ ಕಾಲ್ದಾರಿಯಲ್ಲಿ ಸರೋಜ್‌ ಖಾನ್‌ ಕೈಹಿಡಿದು ಮೇಲಕ್ಕೆ ಬಂದಾಕೆ ಮಾಧುರಿ. ‘ಚೋಲಿ ಕೆ ಪೀಚೇ ಕ್ಯಾ ಹೈ’, ‘ತಮ್ಮಾ ತಮ್ಮಾ ಲೋಗೇ...’, ‘ಧಕ್ ಧಕ್‌ ಕರ್‌ನೇ ಲಗೇ...’ ಹಾಡುಗಳು ಸೂಪರ್‌ಹಿಟ್ ಆಗಲು ಅವರ ಕೊರಿಯೊಗ್ರಫಿಯೂ ಕಾರಣ.

ಇವತ್ತಿಗೂ ಮರೆಯಲಾಗದ್ದು, ಬನ್ಸಾಲಿ ನಿರ್ದೇಶನದ ‘ದೇವದಾಸ್‌’ ಚಿತ್ರದ ‘ಡೋಲರೆ ಡೋಲರೆ...’ ಹಾಡು. ಮಾಧುರಿ ಮತ್ತು ಐಶ್ವರ್ಯ ರೈ ಇಬ್ಬರೂ ಪೈಪೋಟಿಗೆ ಬಿದ್ದಂತೆ ಮಿಂಚಿದ ನೃತ್ಯವದು. ಅವರ ಯಶಸ್ಸಿನ ಪಟ್ಟಿ ಕಂಗನಾ‌ರ ‘ಮಣಿಕರ್ಣಿಕಾ’ವನ್ನೂ ದಾಟಿ ಮುಂದುವರಿದಿದೆ. ಹಾಗೆಂದೇ ಕೊರಿಯೊಗ್ರಫಿಗೆ ಮೂರು ಸಲ ‘ರಾಷ್ಟ್ರಪ್ರಶಸ್ತಿ’ಯೂ ಲಭಿಸಿದೆ.

ನಿರ್ಮಲಾ ಕಿಶನ್‌ಚಂದ್‌ ಸಾಧುಸಿಂಗ್‌ ನಾಗ್‌ಪಾಲ್‌ ಎನ್ನುವುದು ಅವರ ಬಾಲ್ಯದ ಹೆಸರು.  ‘ನಜ್ರಾನಾ’ ಚಿತ್ರದಲ್ಲಿ ಎಳೆಯ ಕೃಷ್ಣನ ‍ಪಾತ್ರ ಮಾಡಿದ್ದರು. ಆಗಲೇ ನೃತ್ಯಪ್ರತಿಭೆ ಎಲ್ಲರ ಕಣ್ಸೆಳೆದಿತ್ತು. 13ರ ಹರೆಯದಲ್ಲಿ ಡಾನ್ಸ್‌ ಡೈರೆಕ್ಟರ್‌ ಬಿ.ಸೋಹನ್‌ಲಾಲ್‌ ಅವರ ಸಹಾಯಕಿಯಾದರು. ಗುರುಗಳ ಮೇಲೆ ಪ್ರೇಮವೂ ಆಯಿತು. ‘ಅದೊಂದು ದಿನ ಗುರುಗಳು ಮನೆಗೆ ಬಂದು ಕಪ್ಪು ದಾರವೊಂದನ್ನು ಕೊರಳಿಗೆ ಕಟ್ಟಿದರು. ಮದುವೆಯಾಯಿತು’ ಎಂದು ಅವರೇ ಸಂದರ್ಶನವೊಂದರಲ್ಲಿ ಹೇಳಿದ್ದರು. ಆಗ ಸೋಹನ್‌ಲಾಲ್‌ ವಯಸ್ಸು 41. ಮದುವೆಯಾಗಿ ಇಬ್ಬರು ಮಕ್ಕಳೂ ಇದ್ದರು. ಈ ಬಂಧ ಬಹಳ ವರ್ಷ ಮುಂದುವರಿಯಿತು. ಇಬ್ಬರು ಮಕ್ಕಳಾದ ಬಳಿಕ ಜಗಳವಾಗಿ ಮನೆ ಬಿಟ್ಟು ಹೊರಬಂದಿದ್ದರು. ಆದರೆ, ಪತಿಗೆ ಹೃದಯಾಘಾತವಾದಾಗ ಮನೆಗೆ ಮರಳಿ ದರು. ಕೆಲವು ವರ್ಷಗಳ ಬಳಿಕ ಸೋಹನ್‌ಲಾಲ್‌ ಹೆಂಡತಿ ಮಕ್ಕಳನ್ನು ಬಿಟ್ಟು ಮದ್ರಾಸ್ ಸೇರಿದರು. ಬಳಿಕ ಕೈಹಿಡಿದವರು ಸರ್ದಾರ್‌ ರೋಷನ್‌ ಖಾನ್‌. ಅವರ  ಮಗಳು ಸುಖೈನಾ ಖಾನ್ ದುಬೈಯಲ್ಲಿ ಡಾನ್ಸ್‌ ಇನ್‌ಸ್ಟಿಟ್ಯೂಟ್‌ ನಡೆಸುತ್ತಿದ್ದಾರೆ. ಮೊದಲ ಮಗ (ಹಮೀದ್‌ ಖಾನ್)‌ ಈಗ ಬಾಲಿವುಡ್‌ನ ಜನಪ್ರಿಯ ಕೊರಿಯೊಗ್ರಾಫರ್‌ ರಾಜು ಖಾನ್.

‘ಕಾಲಲ್ಲಿ ನೃತ್ಯ ಮಾಡಲು ಆಗದಿದ್ದರೆ ಮುಖದಲ್ಲಿ, ಕಣ್ಣಿನಲ್ಲಿ ನೃತ್ಯ ಮಾಡು’ ಎಂದು ಸರೋಜ್‌ ಖಾನ್‌ ಒಮ್ಮೆ ಕರೀನಾ ಕಪೂರ್‌ಗೆ ಬುದ್ಧಿ ಹೇಳಿದ್ದರಂತೆ. ಹಾಗೆಂದೇ ಸರೋಜ್‌ ಖಾನ್ ಕೊರಿಯೊಗ್ರಫಿಯಲ್ಲಿ ಹಿರೋಯಿನ್‌ಗಳ ಕ್ಲೋಸಪ್‌ ಶಾಟ್ಸ್‌ ಹೇರಳ ವಾಗಿರುತ್ತಿದ್ದವು. ‘ಖಳನಾಯಕ್‌’ ಚಿತ್ರದಲ್ಲಿ ಸಂಜಯ್‌ ದತ್‌ನಿಂದಲೂ ಡಾನ್ಸ್‌ ಮಾಡಿಸಿದ್ದರು ಅವರು! ಹಲವು ಯಶಸ್ವಿ ಟಿ.ವಿ ರಿಯಾಲಿಟಿ ಷೋಗಳಲ್ಲಿ ಜಡ್ಜ್‌ ಆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು