ಸೋಮವಾರ, ಮಾರ್ಚ್ 27, 2023
29 °C

ಬಿಗ್‌ಬಜೆಟ್‌ ಸಿನಿಮಾ ಒಪ್ಪಿಕೊಂಡ ಸತೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಭಿನ್ನ ಪಾತ್ರ ಪ್ರಿಯ ನಟ ನೀನಾಸಂ ಸತೀಶ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು 12 ವಸಂತಗಳು ತುಂಬಿವೆ. ಸದಾ ಪ್ರಯೋಗಾತ್ಮಕ ಪಾತ್ರಗಳನ್ನು ಅರಸುವಿಕೆ ಅವರ ಗುಣ. ಕ್ರಾಂತಿಕಾರಿಯ ಪಾತ್ರಕ್ಕೆ ಅವರು ಬಣ್ಣ ಹಚ್ಚಿರುವ ‘ಗೋದ್ರಾ’ ಸಿನಿಮಾ ಪೂರ್ಣಗೊಂಡು ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇನ್ನು ಶರ್ಮಿಳಾ ಮಾಂಡ್ರೆ ಜತೆಗೆ ತೆರೆ ಹಂಚಿಕೊಂಡಿರುವ ‘ದಸರಾ’ ಸಿನಿಮಾದ ಒಂದಿಷ್ಟು ಭಾಗದ ಚಿತ್ರೀಕರಣ ಬಾಕಿ ಇದೆಯಂತೆ. ಈ ಎರಡು ಸಿನಿಮಾಗಳ ಬಗ್ಗೆ ಸತೀಶ್‌ ಬಹು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ತಾವೇ ಆ್ಯಕ್ಷನ್‌ ಕಟ್‌ ಹೇಳಬೇಕಿರುವ ‘ಮೈ ನೇಮ್‌ ಈಸ್‌ ಸಿದ್ದೇಗೌಡ’ ಸಿನಿಮಾ ಕೂಡ ಅವರ ಕೈಯಲ್ಲಿದೆ. ಕೊರೊನಾ ಲಾಕ್‌ಡೌನ್‌ ಇರದಿದ್ದರೆ ಈ ಸಿನಿಮಾ ಕೂಡ ಇಷ್ಟೊತ್ತಿಗೆ ಚಿತ್ರೀಕರಣ ಆರಂಭಿಸಲಿತ್ತು. ಈ ಸಿನಿಮಾದ ಬಹುತೇಕ ಭಾಗ ಅಮೆರಿಕದಲ್ಲಿ ಚಿತ್ರೀಕರಣವಾಗಬೇಕಿರುವ ಕಾರಣಕ್ಕೆ ‘ಮೈ ನೇಮ್‌ ಈಸ್‌ ಸಿದ್ದೇಗೌಡ’ ಪ್ರಾಜೆಕ್ಟ್‌ 2021ಕ್ಕೆ ಮುಂದೂಡಲ್ಪಟ್ಟಿದೆಯಂತೆ.

ಈಗ ಸತೀಶ್‌ ಬಿಗ್‌ ಬಜೆಟ್‌ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಸಿನಿಮಾದ ಟೈಟಲ್‌ ಇನ್ನೂ ಅಂತಿಮವಾಗಿಲ್ಲ. ‘ನನಗಾಗಿ ಕಥೆ ಬರೆಯುವ ನಿರ್ದೇಶಕರು, ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದಾರೆ. ಈ ವರ್ಷ ಮನೋಹರ್ ಕಾಂಪಲ್ಲಿ ಅವರ ಕಥೆಗೆ, ಕೇಳಿದ ತಕ್ಷಣ ಓಕೆ ಎಂದಿದ್ದೇನೆ. ಅವರ 15 ವರ್ಷಗಳ ಅನುಭವಕ್ಕೆ ಜೊತೆಯಾಗಿ ಬಂಡವಾಳ ಹೂಡುತ್ತಿರುವ ನಿರ್ಮಾಪಕಿ ಪಾರ್ವತಿ ಅವರ ಜೊತೆಗೆ ನಾನು ನಿಂತಿದ್ದೇನೆ. ಸದ್ಯದಲ್ಲೇ ಶೀರ್ಷಿಕೆಯೂ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಪ್ರೀತಿ ಎಂದಿನಂತೆ ಇರಲಿ, ಹರಸಿ’ ಎಂದು ಸತೀಶ್‌ ಟ್ವಿಟರ್‌ನಲ್ಲೂ ಮಾಹಿತಿ ಹಂಚಿಕೊಂಡಿದ್ದರು.

‘ಇದೊಂದಿ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯ ಸಿನಿಮಾ. ಕಥೆ ತುಂಬಾ ಚೆನ್ನಾಗಿದೆ. ನಿರ್ದೇಶಕರಿಗೆ ಮೊದಲ ಸಿನಿಮಾ ಆಗಿದ್ದರೂ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಅನುಭವವಿದೆ. ಅವರು ಕಥೆ ಹೇಳಿದ ಶೈಲಿಯನ್ನು ನೋಡಿದಾಗಲೇ ಈ ಸಿನಿಮಾ ಅದ್ಭುತವಾಗಿ ಮಾಡಲಿದ್ದಾರೆ ಎನ್ನುವ ವಿಶ್ವಾಸ ಮೂಡಿತು. ನವೆಂಬರ್‌ಗೆ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆಯೂ ಸದ್ಯದಲ್ಲೇ ನಡೆಯಲಿದೆ’ ಎನ್ನುವ ಮಾತು ಸೇರಿಸಿದರು ನೀನಾಸಂ ಸತೀಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು