ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಅಹಂಕಾರಿಅಲ್ಲ, ಚೂಸಿ

Last Updated 4 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ನಟ ಭುವನ್‌ ಪೊನ್ನಪ್ಪ ಹೆಚ್ಚು ಸುದ್ದಿಯಾಗಿದ್ದು ಅವರ ನಡವಳಿಕೆಯಿಂದ. ಸಿನಿಮಾ ಆಫರ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ, ಯಾರನ್ನೂ ಕೇರ್‌ ಮಾಡುವುದಿಲ್ಲ, ಅವರಿಗೆ ತುಂಬಾ ಅಹಂಕಾರ ಎಂಬ ಸುದ್ದಿಗಳು ಹರಿದಾಡಿದ್ದೇ ಹೆಚ್ಚು. ಕೆಲವೊಮ್ಮೆ ಅವರು ಟ್ರೋಲ್‌ ಆಗಿದ್ದೂ ಇದೆ.

ಈ ಆರೋಪಗಳಿಗೆ ಭುವನ್‌ ಸಮಜಾಯಿಷಿಯೇ ಬೇರೆ. ‘ನನಗೆ ಅಹಂಕಾರ ಅಂತಾರೆ. ಅದು ಸುಳ್ಳು. ಪಾತ್ರಗಳ ಆಯ್ಕೆಯಲ್ಲಿ ನಾನು ಚೂಸಿ ಅಷ್ಟೇ’ ಎಂದು ಅವರು ಹೇಳುತ್ತಾರೆ.

‘ಆ್ಯಟಿಟ್ಯೂಡ್‌ ಐಕಾನ್‌’ ಎಂಬ ‘ಹೆಗ್ಗಳಿಕೆ’ಯೂ ಅವರ ಹೆಸರಿಗೆ ತಳಕು ಹಾಕಿಕೊಂಡಿದೆ. ‘ಆ್ಯಟಿಟ್ಯೂಡ್ ಮತ್ತು ಅಹಂಕಾರವನ್ನು ಒಂದೇ ತಕ್ಕಡಿಯಲ್ಲಿ ತೂಗಲಾಗದು. ಆ್ಯಟಿಟ್ಯೂಡ್‌ ಆರೋಗ್ಯಕರ, ಅಹಂಕಾರ ಆರೋಗ್ಯಕರವಲ್ಲ. ಹಾಗಾಗಿ ಅದು ನನಗಿಲ್ಲ’ ಎಂದು ನಗುತ್ತಾರೆ.

ಭುವನ್‌ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಆರೋಗ್ಯಕರ ಕಾರಣಕ್ಕೆ! ಅವರು ನಟಿಸಿರುವ ‘ರಾಂಧವ’ ಚಿತ್ರದ ಟ್ರೇಲರ್‌ ಅವರನ್ನು ಚರ್ಚೆಯ ಕೇಂದ್ರವಾಗಿಸಿದೆ. ನಾಲ್ಕೂವರೆ ನಿಮಿಷಗಳ ಟ್ರೇಲರ್‌ ಭುವನ್‌ ನಟನೆ ಮತ್ತು ಚಿತ್ರದ ಗಟ್ಟಿತನಕ್ಕೆ ಕನ್ನಡಿ ಹಿಡಿಯುವಂತಿದೆ.

‘ನಾನು ಆಸೆಪಟ್ಟಿದ್ದ ಪಾತ್ರದಲ್ಲಿ ನನ್ನನ್ನು ಕಾಣುವ ಅವಕಾಶ ನನಗೆ ಕೊಟ್ಟಿರುವ ಸಿನಿಮಾ ‘ರಾಂಧವ’. ಮೇಕಿಂಗ್‌, ಚಿತ್ರಕತೆ, ನನ್ನ ಪಾತ್ರಕ್ಕೆ ಸ್ಕೋಪ್‌, ನಿರ್ದೇಶನ, ಛಾಯಾಗ್ರಹಣ, ಸೆಟ್‌... ಎಲ್ಲವೂ ಕನ್ನಡದಲ್ಲಿ ವಿರಳವಾದುದು ಎನ್ನಬಹುದು. ಈ ಚಿತ್ರವನ್ನು ‘ಕೆ.ಜಿ.ಎಫ್‌.ನಷ್ಟೇ ಸರ್ವಾಂಗ ಸುಂದರವಾಗಿ ಮೂಡಿಬರಲಿದೆ ಎಂಬುದು ನನ್ನ ಲೆಕ್ಕಾಚಾರ. ಟ್ರೇಲರ್‌ ನೋಡಿದವರ ಅಭಿಪ್ರಾಯವೂ ಹಾಗೇ ಇದೆ.ಮೇಕಿಂಗ್‌ಗೆ ಒಂದು ವರ್ಷ ತೆಗೆದುಕೊಂಡಿದ್ದೇವೆ.‌ ಸಖತ್ತಾಗಿ ಮೂಡಿಬಂದಿದೆ’ ಎಂಬುದು ಭುವನ್‌ ಸಮರ್ಥನೆ.

‘ರಾಂಧವ’ದನಾಲ್ಕೂವರೆ ನಿಮಿಷದ ಟ್ರೇಲರ್‌ ನೋಡಿದರೆ ಅವರ ಮಾತಿನಲ್ಲಿ ಹುರುಳಿದೆ ಅನಿಸುತ್ತದೆ. ನಾಯಕ ರಾಂಧವನ ಪಾತ್ರಕ್ಕೆಮೂರು ಆಯಾಮಗಳಿವೆ. ಪೌರಾಣಿಕ, ವನ್ಯಜೀವಿ ಛಾಯಾಗ್ರಾಹಕ ಮತ್ತು ರಾಣಾ ಎಂಬ ಯುವಕನ ಪಾತ್ರ. ಈ ಮೂರೂ ಛಾಯೆಗಳಲ್ಲಿಭುವನ್‌ ಅದ್ಭುತವಾಗಿ ನಟಿಸಿದ್ದಾರೆ. ಪಳಗಿದ ನಾಯಕ ನಟ ಮತ್ತು ಖಳನಟನ ಸಮಪಾಕದಂತಿದೆ ಅವರ ಪಾತ್ರ.
‘ಟ್ರೇಲರ್‌ ನೋಡಿದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಮತ್ತು ರಾಘವೇಂದ್ರ ರಾಜ್‌ಕುಮಾರ್‌ ಮೆಚ್ಚುಗೆ ಸೂಚಿಸಿರುವುದು ನನಗೆ ಬಹಳ ಖುಷಿ ಕೊಟ್ಟಿದೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಸಹಜ ಅಭಿನಯವನ್ನು ಭುವನ್‌ ಕರಗತ ಮಾಡಿಕೊಂಡಿದ್ದಾರೆ. ಈ ಹುಡುಗನಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ’ ಎಂದು ಶಿವಣ್ಣ ಹೇಳಿರುವುದರಿಂದ ಚಿತ್ರತಂಡದ ಆತ್ಮವಿಶ್ವಾಸ ಹೆಚ್ಚಿದೆ’ ಎನ್ನುತ್ತಾರೆ ಭುವನ್‌.

ಭುವನ್‌ ಇದುವರೆಗೆ ಮಾಡಿರುವುದು ಮೂರು ಸಿನಿಮಾ.ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರ ‘ಕೂಲ್‌’, ಜಗ್ಗೇಶ್‌ ನಟನೆಯ ‘ಮಂಜುನಾಥ ಬಿಎ ಎಲ್‌ಎಲ್‌ಬಿ’, ಡಿ. ರಾಜೇಂದ್ರಬಾಬು ಅವರ ‘ಕುಚಿಕೂ ಕುಚಿಕೂ’. ಈ ಪೈಕಿ ಮೊದಲ ಎರಡೂ ಸಿನಿಮಾಗಳಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದರು.

ಕೆಲವರ್ಷಗಳ ಹಿಂದೆ, ನಟನೆಯ ಬೇರು ಹುಡುಕುತ್ತಾ ಹಾಲಿವುಡ್‌ಗೆ ಹಾರಿದ್ದರು ಭುವನ್‌. ಸಹಜ ಅಭಿನಯ, ಕ್ಯಾಮೆರಾ ಎದುರಿಸುವ ಕಲೆ ಮತ್ತು ಯಾವ ರೀತಿ ಅಭಿನಯಿಸಬಾರದು ಎಂಬ ಹಾಲಿವುಡ್‌ ಪಾಠಗಳನ್ನು ಕರಗತ ಮಾಡಿಕೊಂಡು ಊರಿಗೆ ಬಂದಾಗಲೇ ಕನ್ನಡದ ‘ಬಿಗ್‌ಬಾಸ್‌’ ರಿಯಾಲಿಟಿ ಶೋಗೆ ಹೋಗಬೇಕಾಗಿ ಬಂತಂತೆ. ‘ಒಂದೇ ವಾರದಲ್ಲಿ ವಾಪಸ್ ಬಂದರಾಯಿತು ಎಂದುಕೊಂಡು ಹೋಗಿದ್ದವನು ಅಲ್ಲಿ ದೀರ್ಘಾವಧಿ ಉಳಿಯಬೇಕಾಯಿತು’ ಎಂದು ಅವರು ಹೇಳುತ್ತಾರೆ.

ಎಲ್ಲಾ ಓಕೆ, ನಿಮಗೆ ದುರಹಂಕಾರಿ ಎನ್ನುತ್ತಾರಲ್ಲ ಎಂದರೆ ಭುವನ್ ಮಂಕಾಗುತ್ತಾರೆ. ‘ವರ್ಷಕ್ಕೆ 200 ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ಹಿಟ್‌ ಆಗುವುದು ಅಥವಾ ಸರಾಸರಿ ಲಾಭ ಗಳಿಸುವುದು ಬೆರಳೆಣಿಕೆಯವು ಮಾತ್ರ. ಆಗ ನಾಯಕ ನಟನತ್ತ ಬೆಟ್ಟು ಮಾಡುವುದೇ ಹೆಚ್ಚು. ಹಾಗಿರುವಾಗ ಉತ್ತಮ ಚಿತ್ರವನ್ನಷ್ಟೇ ಆಯ್ಕೆ ಮಾಡಿಕೊಳ್ಳಬೇಕು ಎಂದು ನಟನೊಬ್ಬ ತೀರ್ಮಾನಿಸಿದರೆ ತಪ್ಪೇ’ ಎಂಬುದು ಅವರ ಪ್ರಶ್ನೆ.

ಅಂತೂ ಇಂತೂ ಭುವನ್‌ ಪೊನ್ನಪ್ಪ ಹೊಸ ಜೋಶ್‌ನಿಂದ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ‘ರಾಂಧವ’ಕ್ಕಾಗಿ ಹಾಕಿದ ಶ್ರಮ ಚಿತ್ರರಂಗದಲ್ಲಿ ಅದೃಷ್ಟದ ಬಾಗಿಲು ತೆರೆಸುವಂತೆ ಮಾಡುತ್ತದೆ ಎಂಬುದು ಅವರ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT