ಗುರುವಾರ , ಆಗಸ್ಟ್ 11, 2022
24 °C

ಕ್ರಿಸ್‌ಮಸ್‌ಗೆ ‘ಶಕೀಲಾ’ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಲಯಾಳಂ ನಟಿ ಶಕೀಲಾ ಯಾರಿಗೆ ಗೊತ್ತಿಲ್ಲ, ಆದರೆ, ಅವರ ತೆರೆಯ ಹಿಂದಿನ ಬದುಕು ಎಷ್ಟೊ ಮಂದಿಗೆ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. 90ರ ದಶಕದಲ್ಲಿ ಕಾಮಪ್ರಚೋದಕ ಚಿತ್ರಗಳಲ್ಲಿ ಹಸಿಬಿಸಿ ದೃಶ್ಯಗಳಲ್ಲೇ ಹೆಚ್ಚು ಕಾಣಿಸಿಕೊಂಡು ಹರೆಯದವರ ಮೈ ಬಿಸಿ ಏರಿಸಿದ ಖ್ಯಾತ ನಟಿ ಇವರು. ಒಂದು ಕಾಲದಲ್ಲಿ ಮಾಲಿವುಡ್‌ನಲ್ಲಿ ಶಕೀಲಾ ನಟನೆಯ ಚಿತ್ರಗಳು ಬಿಡುಗಡೆಯಾದರೆ ದೊಡ್ಡ ಸ್ಟಾರ್‌ ನಟರು ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಅಳುಕುತ್ತಿದ್ದರು. ಖ್ಯಾತ ನಟಿಯ ಆತ್ಮಕಥೆಯನ್ನು ಆಧರಿಸಿದ ‘ಶಕೀಲಾ’ ಚಿತ್ರ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿದೆ. ‘ಶಕೀಲಾ’ಗೆ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಇದೇ ಡಿಸೆಂಬರ್‌ನ ಕ್ರಿಸ್‌ಮಸ್‌ಗೆ ‘ಶಕೀಲಾ’ ಸಿನಿಪ್ರಿಯರ ಮನಸೂರೆಗೊಳ್ಳಲು ದೇಶದಾದ್ಯಂತ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ಈ ಸುದ್ದಿಯನ್ನು ಹಂಚಿಕೊಳ್ಳಲು ಇಂದ್ರಜಿತ್‌ ಚಿತ್ರತಂಡದೊಂದಿಗೆ ಸುದ್ದಿಗೋಷ್ಠಿಗೆ ಬಂದಿದ್ದರು. ಜತೆಗೆ ಶಕೀಲಾ ಕೂಡ ಇದ್ದರು. ತಮ್ಮ ಆತ್ಮಕಥೆ ಚಿತ್ರವಾಗಿ ತೆರೆಮೇಲೆ ಬರುತ್ತಿರುವ ಸಂಭ್ರಮವನ್ನು ಶಕೀಲಾ ಕೂಡ ಖುಷಿಯಿಂದ ಹೇಳಿಕೊಂಡಿದ್ದಾರೆ. ಹಾಗೆಯೇ ತಾವು ಪಟ್ಟ ಹಳೆಯ ಕಷ್ಟದ ದಿನಗಳನ್ನು ನೆನೆದು ಭಾವುಕರು ಕೂಡ ಆಗಿದ್ದಾರೆ.

ನೈಜ ಘಟನೆಗಳ ಮೇಲೆ ಆಧರಿಸಿ ಈ ಆತ್ಮಕಥೆಯನ್ನು ಇಂದ್ರಜಿತ್‌ ಅವರೇ ರಚಿಸಿದ್ದು, ವಯಸ್ಕರ ಮನರಂಜಿತ ಚಿತ್ರಗಳಲ್ಲಿ ನಟಿಸುತ್ತಿದ್ದ ಈ ನಟಿ ಪಟ್ಟ ಕಷ್ಟ, ಎದುರಿಸಿದ ಟೀಕೆ, ಅವಮಾನ, ಅವರ ಕುಟುಂಬದ ಸದಸ್ಯರಿಂದಲೇ ಆದ ವಂಚನೆ, ಪುರುಷ ಪ್ರಾಬಲ್ಯ ಚಿತ್ರರಂಗ ಈ ನಟಿಯನ್ನು ಚಿತ್ರರಂಗದಿಂದ ನಿಷೇಧಿಸಿದ್ದು ಇವೆಲ್ಲವನ್ನೂ ತೆರೆಯ ಮೇಲೆ ಸಹಜವಾಗಿ ತರಲಾಗಿದೆಯಂತೆ.

ಚಿತ್ರದಲ್ಲಿ ಸಾಮಾಜಿಕ ಸಂದೇಶವಿದೆ ಎನ್ನುವ ಇಂದ್ರಜಿತ್‌, ಕನ್ನಡ, ಹಿಂದಿಯ ಜತೆಗೆ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಈ ಚಿತ್ರವನ್ನು ಏಕಕಾಲಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಕೇರಳದ ನೇಟಿವಿಟಿಗೆ ಚಿತ್ರದ ದೃಶ್ಯಗಳು ಹೊಂದಿಕೊಳ್ಳುವಂತೆ ಚಿತ್ರದ ಹಲವು ಭಾಗವನ್ನು ತೀರ್ಥಹಳ್ಳಿ ಪರಿಸರ ಹಾಗೂ ಇನ್ನೋವೇಟಿವ್‌ ಫಿಲ್ಮ್‌ ಸಿಟಿಯಲ್ಲಿ ಚಿತ್ರಿಕರಿಸಲಾಗಿದೆ ಎನ್ನುತ್ತಾರೆ.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಭಾಷೆಯ ಬಳಕೆ, ವಸ್ತು ವಿಷಯ ಹಾಗೂ ಹಸಿಬಿಸಿ ದೃಶ್ಯಗಳ ಕಾರಣಕ್ಕಾಗಿ ಈ ಚಿತ್ರಕ್ಕೆ ಸೆನ್ಸಾರ್‌ ಮಂಡಳಿ ‘ಎ’ ಪ್ರಮಾಣ ಪತ್ರ ನೀಡಿದೆ.

ಮುಖ್ಯಭೂಮಿಕೆಯಲ್ಲಿ ಶಕೀಲಾ ನಟಿಸಿದ್ದು ಇವರ ಜತೆಗೆ ಬಾಲಿವುಡ್‌ ತಾರೆಗಳಾದ ನಟಿ ರಿಚಾ ಚಡ್ಡಾ, ಪಂಕಜ್‌ ತ್ರಿಪಾಠಿ, ಎಸ್ತರ್‌ ನೊರೊನ್ಹಾ, ರಾಜೀವ್‌ ಪಿಳ್ಳೈ, ಶೀವಾ ರಾಣಾ, ವಿವೇಕ್‌ ಮದನ್‌, ಅಶೀಶ್‌ ಅಟಾವಲೆ, ಕಾಜೋಲ್‌ ಚುಗ್‌, ಸ್ಯಾಂಡಲ್‌ವುಡ್‌ ನಟರಾದ ಸುಚೇಂದ್ರ ಪ್ರಸಾದ್‌, ಸಂದೀಪ್‌ ಮಲಾನಿ ಹಾಗೂ ಸಮರ್‌ಜಿತ್‌ ಲಂಕೇಶ್‌ ತೆರೆ ಹಂಚಿಕೊಂಡಿದ್ದಾರೆ.

ಶೀರ್ಷಿಕೆಗೆ ಗೀತೆಗೆ ಮೀತ್‌ ಬ್ರದರ್ಸ್‌ ಧ್ವನಿಯಾಗಿದ್ದರೆ, ಇನ್ನೆರಡು ಹಾಡುಗಳಿಗೆ ವೀರ್‌ ಸಮರ್ಥ್‌ ರಾಂಗ ಸಂಯೋಜಿಸಿದ್ದಾರೆ.

ಸ್ಯಾಮಿ ನಾನ್ವಾನಿ ಮತ್ತು ಸರವಣ ಪ್ರಸಾದ್‌ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಛಾಯಾಗ್ರಹಣ ಸಂತೋಷ್‌ ರೈ ಪತಾಜೆ, ಸಂಕಲ ಬಲ್ಲೂ ಸಲುಜಾ ಅವರದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು