ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿತೆರೆಯತ್ತ ‘ಸಮೀಕ್ಷೆ’

Last Updated 18 ಏಪ್ರಿಲ್ 2019, 19:49 IST
ಅಕ್ಷರ ಗಾತ್ರ

ಗಂಡ, ಹೆಂಡತಿ ಮತ್ತು ಅವಳು... ತ್ರಿಕೋನ ಪ್ರೇಮ ಕಥೆಯುಳ್ಳ ಧಾರಾವಾಹಿ ಸುಬ್ಬಲಕ್ಷ್ಮೀ ಸಂಸಾರ. ದಾಂಪತ್ಯದ ನಡುವೆ ಅಡಿಯಿಟ್ಟು, ತಲ್ಲಣ ಸೃಷ್ಟಿಸುವ ಪಾತ್ರಧಾರಿಯಾಗಿ ಶನಾಯಾ ಜನಮೆಚ್ಚುಗೆ ಗಳಿಸಿದ್ದಾರೆ.

ಮುಖದಲ್ಲಿ ಸಿಡುಕು, ಮಾತು ಮಾತಿಗೂ ಮುನಿಸು, ಕಿಡಿಕಾರುವ ಕಣ್ಣೋಟ, ಸಂಸಾರದಲ್ಲಿ ಹುಳಿ ಹಿಂಡಲು ಸದಾ ಒಂದಿಲ್ಲೊಂದು ತಂತ್ರ ಹೆಣೆಯುವ ಇವರ ನಿಜ ನಾಮಧೇಯ ಸಮೀಕ್ಷಾ.

ಮಲೆನಾಡಿನ ಈ ಮುದ್ದು ಚೆಲುವೆ, ಚಿಕ್ಕಂದಿನಿಂದಲೂ ಕಾಣುತ್ತಿದ್ದುದು ಸಿನಿಮಾ ಕನಸು. ಪಾತ್ರಗಳಲ್ಲಿ ಒಂದಾಗಬೇಕು, ಹಾಡಿಗೆ ಹೆಜ್ಜೆ ಇಟ್ಟು ಚಪ್ಪಾಳೆ ಗಿಟ್ಟಿಸಬೇಕು, ಬೆಳ್ಳಿ ತೆರೆಯಲ್ಲಿ ಮಿಂಚಬೇಕು ಮುಂತಾಗಿ ಆಸೆ ಇರಿಸಿಕೊಂಡಿದ್ದ ಸಮೀಕ್ಷಾ, ಕಡೆಗೂ ತಮ್ಮ ಕನಸು ನನಸು ಮಾಡಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ನಟನೆ ಹೊರತಾಗಿ ಬೇರೆ ವೃತ್ತಿಯ ಆಯ್ಕೆಬಗ್ಗೆ ಇವರು ಯೋಚಿಸಿದ್ದೇ ಇಲ್ಲ. ಅಷ್ಟರ ಮಟ್ಟಿಗೆ ಸಿನಿಮಾ ಗೀಳು ಹತ್ತಿಸಿಕೊಂಡಿದ್ದರು.

ಎಲ್ಲಿಯೂ ನಟನಾ ತರಬೇತಿಯನ್ನು ಪಡೆಯದ ಇವರು, ನೆಚ್ಚಿನ ನಟಿಯರನ್ನು ಅನುಕರಿಸುತ್ತಲೇ ನಟನೆಯ ಪಟ್ಟುಗಳನ್ನು ಕಲಿತರು. ಅಭಿನಯದ ಪ್ರೇರಣೆ ದೊರಕಿದ್ದು ಬೆಂಗಳೂರಿಗೆ ಬಂದ ಮೇಲೆಯೇ. ಪದವಿ ಓದುತ್ತಿದ್ದಾಗಲೇ ಹಲವು ಆಡಿಷನ್‌ಗಳನ್ನು ನೀಡಿದರು. ಕಿರುತೆರೆ ಇವರ ಕನಸಿಗೆ ವೇದಿಕೆಯಾಯಿತು. ‘ಮೀನಾಕ್ಷಿ ಮದುವೆ’ ಧಾರಾವಾಹಿಯ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿದರು.

ಈ ಧಾರಾವಾಹಿ ಮುಗಿಯುತ್ತಿದ್ದಂತೆ ‘ಸುಬ್ಬಲಕ್ಷ್ಮೀ ಸಂಸಾರ’ದಲ್ಲಿ ಅವಕಾಶ ದೊರಕಿತು. ಇದರಲ್ಲಿ ನೆಗೆಟಿವ್‌ ಪಾತ್ರದಲ್ಲಿ ನಟಿಸಿರುವ ಇವರಿಗೆ, ಸಾಕಷ್ಟು ಜನಪ್ರಿಯತೆ ದೊರಕಿದೆ. ಅದು ಎಷ್ಟರ ಮಟ್ಟಿಗೆಂದರೆ ಜನ ಇವರಿಗೆ ಬಾಯಿಗೆ ಬಂದಂತೆ ಬೈದಿರುವ ಉದಾಹರಣೆಯೂ ಸಾಕಷ್ಟಿದೆ! ಆದರೆ ಈ ಬೈಗುಳ ಇವರಿಗೆ ಬೇಸರ ತರಿಸಿಲ್ಲ. ಶನಾಯಾ ಪಾತ್ರ ಅಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಬೇರೂರಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ.

‘ನನ್ನ ವೃತ್ತಿ ಜೀವನದಲ್ಲಿ ಸುಬ್ಬಲಕ್ಷ್ಮೀ ಸಂಸಾರ ನೂತನ ಮೈಲಿಗಲ್ಲು. ಒಮ್ಮೆ ಪಾಂಡವಪುರಕ್ಕೆ ವಾಹಿನಿ ವತಿಯಿಂದ ನಡೆದ ಕಾರ್ಯಕ್ರಮಕ್ಕೆ ಹೋಗಿದ್ದೆವು. ನನ್ನನ್ನು ಕಂಡ ಜನ ಬೈಯಲು ಶುರು ಮಾಡಿಕೊಂಡರು. ಆಗ ಸುಬ್ಬಲಕ್ಷ್ಮೀ ಅವರೇ ಬಂದು ಅವರನ್ನು ಸಮಾಧಾನ ಮಾಡಿದರು. ಅಷ್ಟರ ಮಟ್ಟಿಗೆ ನನ್ನ ಪಾತ್ರ ಜನಪ್ರಿಯವಾಗಿದೆ’ ಎನ್ನುತ್ತಾರೆ ಸಮೀಕ್ಷಾ.

ಪ್ರತಿಭೆಯ ಜೊತೆಗೆ ಸೌಂದರ್ಯವೂ ಇರುವ ಕಾರಣ ಸಾಲುಸಾಲು ಅವಕಾಶಗಳೂ ಇವರನ್ನು ಅರಸಿ ಬರುತ್ತಿವೆ. ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಲು ಇವರು ಸಿದ್ಧರಾಗಿದ್ದಾರೆ.

‘ದಿ ಟೆರರಿಸ್ಟ್‌’ ಚಿತ್ರದಲ್ಲಿ ರಾಗಿಣಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದ ಹುಡುಗಿಯ ಪೋಷಾಕು ತೊಟ್ಟಿದ್ದರು. ‌‌‌‌ಪ್ರೀತಂ ಗುಬ್ಬಿ ನಿರ್ದೇಶನದ, ತೆರೆ ಕಾಣಲು ಸಜ್ಜಾಗಿರುವ ‘99’ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

‘ಕಿರುತೆರೆಯೇ ನನಗೆ ನಟನೆಯ ಮೊದಲ ಪಾಠ ಶಾಲೆ. ಕಲಿಕೆಗೆ ಇಲ್ಲಿಯೂ ಸಾಕಷ್ಟು ಅವಕಾಶಗಳಿವೆ’ ಎಂದು ಕಿರುತೆರೆ ಹಾಗೂ ಹಿರಿತೆರೆ ಎರಡರ ವ್ಯತ್ಯಾಸವನ್ನು ಅವರು ಬಣ್ಣಿಸುತ್ತಾರೆ.

‘ಕಲಿಕೆಗೆ ಧಾರಾವಾಹಿ, ಸಿನಿಮಾ ಎಂಬ ಯಾವುದೇ ತಾರತಮ್ಯ ಸಲ್ಲದು. ಕಲಾವಿದರು ಕಲಿಕೆಗಷ್ಟೇ ಪ್ರಾಧಾನ್ಯ ನೀಡಬೇಕು. ಕಿರುತೆರೆ ನಟನೆಗೆ ಭದ್ರ ಅಡಿಪಾಯ ನೀಡಿದೆ. ಹಾಗಾಗಿ ಎಷ್ಟೇ ಸಿನಿಮಾಗಳಲ್ಲಿ ನಟಿಸಿದರೂ, ಸುಬ್ಬಲಕ್ಷ್ಮೀ ಧಾರಾವಾಹಿ ಮುಗಿಯುವರೆಗೂ ತಂಡದ ಜೊತೆಗಿರುತ್ತೇನೆ’ ಎನ್ನುತ್ತಾರೆ.

‘ಇಲ್ಲಿಯವರೆಗೆ ನಾನು ನಟಿಸಿರುವ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆ. ಮುಂದೆಯೂ ಇಂತಹ ಪಾತ್ರಗಳೇ ನನ್ನ ಆಯ್ಕೆಯಾಗಿರುತ್ತವೆ. ನನ್ನೊಳಗಿನ ಕಲಾವಿದೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ನಟಿಸಬೇಕು. ನನ್ನ ಪಾತ್ರದಲ್ಲಿಯೂ ಭಿನ್ನತೆ ಇರಬೇಕು. ಜನ ನೋಡಿ ಮೆಚ್ಚಿಕೊಳ್ಳಬೇಕು’ ಎಂದು ಸ್ಪಷ್ಟವಾಗಿಯೇ ಹೇಳುತ್ತಾರೆ ಸಮೀಕ್ಷಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT