ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಳಿಪಟ’ ಗುಂಗಿನಲ್ಲಿ ಶರ್ಮಿಳಾ

Last Updated 30 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

‘ಇಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗಲ್ಲ. ಆದರೆ ನಮಗೆ ಅದೊಂದು ಕೊರತೆಯಾಗಿ ಕಾಣುತ್ತಿಲ್ಲ. ಯಾಕೆಂದರೆ ನಮ್ಮದೇ ಹೊಸದೊಂದು ನೆಟ್‌ವರ್ಕ್‌ ಸೃಷ್ಟಿಯಾಗಿದೆ. ಎಲ್ಲರೂ ಕೂತು ಮಾತಾಡುತ್ತೇವೆ. ಸಿನಿಮಾ ಬಗ್ಗೆ, ಸ್ಕ್ರಿಪ್ಟ್ ಬಗ್ಗೆ ಮಾತಾಡುತ್ತೇವೆ. ತಮಾಷೆ ಮಾಡಿಕೊಂಡು, ನಕ್ಕು ನಲಿಯುತ್ತಾ ಆರಾಮಾಗಿ ಇದ್ದೇವೆ’ ಕುದುರೆಮುಖದ ತುದಿಯಲ್ಲಿ ಕೂತು ನಗುನಗುತ್ತಲೇ ಹೀಗೆಂದರು ಶರ್ಮಿಳಾ ಮಾಂಡ್ರೆ.

ಅವರು ಮಾತಾಡುತ್ತಿದ್ದದ್ದು ‘ಗಾಳಿಪಟ 2’ ಸಿನಿಮಾ ಕುರಿತು. ನಿರ್ದೇಶಕ ಯೋಗರಾಜ ಭಟ್, ಗಣೇಶ್, ಪವನ್, ದಿಗಂತ್, ಅನಂತ್‌ನಾಗ್ ಹೀಗೆ ಎಲ್ಲರನ್ನೂ ಸುತ್ತಿ ಸುಳಿದು ಅವರ ಮಾತಿನ ಸರಣಿ ಬೆಳೆಯುತ್ತಲೇ ಹೋಗುತ್ತಿತ್ತು. ಈ ಚಿತ್ರದಲ್ಲಿ ನಟಿಸುತ್ತಿರುವುದರ ಕುರಿತು ಅವರ ಮನಸಲ್ಲೊಂದು ಸಾರ್ಥಕ ಭಾವವಿದೆ.

‘ಹತ್ತು ವರ್ಷಗಳ ಹಿಂದೆ ‘ಗಾಳಿಪಟ’ ಚಿತ್ರದಲ್ಲಿ ನಟಿಸುವಂತೆ ಭಟ್ಟರು ನನಗೆ ಕರೆದಿದ್ದರು. ಆಗ ನಾನು ಬೇರೆ ಸಿನಿಮಾದಲ್ಲಿ ಬ್ಯುಸಿ ಇದ್ದೆ. ಹಾಗಾಗಿ ನಟಿಸಲು ಸಾಧ್ಯ ಆಗಿರಲಿಲ್ಲ. ಇವರ ಸಿನಿಮಾದಲ್ಲಿ ನಟಿಸುವ ಅವಕಾಶ ಕಳೆದುಕೊಂಡೆನಲ್ಲ ಎಂಬ ಕೊರಗು ಮನಸಲ್ಲಿ ಇದ್ದೇ ಇತ್ತು. ಆದರೆ ಅದೃಷ್ಟವೋ ಏನೋ ಈಗ ‘ಗಾಳಿಪಟ 2’ದಲ್ಲಿ ನಟಿಸುವ ಅವಕಾಶ ಬಂತು. ಕಥೆ ಏನು ಎಂದೂ ಕೇಳದೆ ಒಪ್ಪಿಕೊಂಡುಬಿಟ್ಟೆ. ಭಟ್ಟರೇ ಒತ್ತಾಯ ಮಾಡಿ ಕಥೆ ಹೇಳಿದರು. ಅವರ ಸಿನಿಮಾದಲ್ಲಿ ನಾಯಕಿಯರಿಗೆ ಸಾಕಷ್ಟು ಪ್ರಾಮುಖ್ಯ ಇರುತ್ತದೆ ಎಂದು ನನಗೆ ಗೊತ್ತಿತ್ತು. ನನ್ನ ನಂಬಿಕೆ ಹುಸಿ ಆಗಲಿಲ್ಲ’ ಹೀಗೆ ಒಂದೇ ಉಸುರಿಗೆ ಈ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂದಿದ್ದರ ಕುರಿತು ಹೇಳಿದರು ಅವರು.

ಯೋಗರಾಜ ಭಟ್ಟರು ಪ್ರತಿಯೊಂದು ದೃಶ್ಯ ಕಟ್ಟುವಾಗಲೂ ಪಡುವ ಶ್ರಮ, ಅವರ ಸೂಕ್ಷ್ಮ ಗ್ರಹಿಕೆ ಶರ್ಮಿಳಾಗೆ ಬೆರಗು ಮೂಡಿಸಿದೆ. ‘ಯೋಗರಾಜ ಭಟ್ಟರು ಪರ್ಪೆಕ್ಷನಿಸ್ಟ್. ಒಂದು ವೈಡ್ ಆ್ಯಂಗಲ್ ಸೀನ್ ಇತ್ತು. ಭಟ್ಟರು ಕ್ಯಾಮೆರಾ ಹಿಂದೆ ಕೂತಿದ್ದರು. ಕ್ಯಾಮೆರಾದಲ್ಲಿಯೇ ನೋಡಿ ’ಶರ್ಮಿಳಾ ನಿಮ್ಮ ಹಣೆಯ ಬಿಂದಿ ಕೊಂಚ ಬಲಬದಿಗೆ ವಾರಿದೆ’ ಎಂದರು. ನನಗೆ ನಂಬಿಕೆಯಾಗಲಿಲ್ಲ. ‘ಸರಿಯೇ ಇದೆಯಲ್ಲ’ ಎಂದೆ. ಅವರು ‘ಇಲ್ಲ, ಇನ್ನೊಮ್ಮೆ ನೋಡಿಕೊಳ್ಳಿ’ ಎಂದರು. ಮೇಕಪ್ ಹುಡುಗ ಬಂದು ನೋಡಿದಾಗ ಅವರು ಹೇಳಿದ್ದು ಸರಿಯಾಗಿತ್ತು’’ ಎಂದು ಭಟ್ಟರ ಸೂಕ್ಷ್ಮಗ್ರಾಹಿತ್ವದ ಕುರಿತು ಉದಾಹರಣೆ ಸಮೇತ ಹೇಳುತ್ತಾರೆ ಅವರು.

ಸೆಟ್‌ನಲ್ಲಿ ದಿಗಂತ್, ಪವನ್ ಮತ್ತು ಗಣೇಶ್ ಜೊತೆಗಿನ ಒಡನಾಟವನ್ನೂ ಅಷ್ಟೇ ಹುರುಪಿನಿಂದ ಹಂಚಿಕೊಳ್ಳುತ್ತಾರೆ. ‘ಕೃಷ್ಣ ಸಿನಿಮಾದಲ್ಲಿ ನಾನು ಮತ್ತು ಗಣೇಶ್ ಒಟ್ಟಿಗೆ ನಟಿಸಿದ್ದೆವು. ಅಂದಿಂದ ಇಂದಿಗೆ ಅವರು ಒಂದು ಚೂರೂ ಬದಲಾಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ನಿಮಗೆ ಒಂದು ವರ್ಷವೂ ಹೆಚ್ಚಾಗಿಲ್ಲ ಎಂದು ಅವರನ್ನು ರೇಗಿಸುತ್ತಿರುತ್ತೇನೆ’ ಎನ್ನುವ ಅವರು, ಪವನ್ ಸಿನಿಮಾ ತಿಳಿವಳಿಕೆಯ ಕುರಿತು ಬೆರಗಿನಿಂದ ಹೇಳುತ್ತಾರೆ.

‘ಪವನ್ ಸ್ವಲ್ಪ ಅಂತರ್ಮುಖಿ. ಅವರ ಪಾತ್ರವೂ ಹಾಗೆಯೇ ಇದೆ. ಚಿತ್ರೀಕರಣದ ಮೊದಲ ಮೂರು ನಾಲ್ಕು ದಿನಗಳು ಅವರನ್ನು ನೋಡಿ ವಿಚಿತ್ರ ಅನಿಸುತ್ತಿತ್ತು. ನಂತರ ಸಿನಿಮಾ ಕುರಿತು ಅವರಿಗೆ ಇರುವ ಅಗಾಧ ತಿಳಿವಳಿಕೆ ನೋಡಿ ನಿಜಕ್ಕೂ ಅಚ್ಚರಿಯಾಯ್ತು’ ಎನ್ನುತ್ತಾರೆ. ‘ದಿಗ್ಗಿ ಅಂತೂ ಯಾವ ಕಾಲಕ್ಕೂ ತಮ್ಮ ಎಂದಿನ ಜಾಲಿಮೂಡ್‌ನಿಂದ ಹೊರಗೆ ಬರುವ ಹುಡುಗನೇ ಅಲ್ಲ’ ಎಂದು ನಗುತ್ತಾರೆ ಅವರು.

‘ಗಾಳಿಪಟ ಸಿನಿಮಾದಲ್ಲಿ ಮೂರು ಹುಡುಗರ ಕಥೆ ಇತ್ತು. ಇಲ್ಲಿ ಕೂಡ ಮೂವರು ಹುಡುಗರ ಕಥೆಯೇ ಇದೆ. ಆದರೆ ಅದರ ನಿರೂಪಣೆ ವಿಧಾನ, ಕಥೆಯ ವಸ್ತು ಎಲ್ಲವೂ ಪೂರ್ತಿ ಬದಲಾಗಿದೆ. ‘ಗಾಳಿಪಟ 2’ ತಾಜಾ ಕಥೆ’ ಎಂದು ಸಿನಿಮಾ ಕುರಿತು ಹೇಳುತ್ತಾರೆ.

ಸದ್ಯಕ್ಕೆ ಕುದುರೆಮುಖದಲ್ಲಿ ‘ಗಾಳಿಪಟ 2’ ಚಿತ್ರದ ಮೊದಲನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಅನಂತ್‌ನಾಗ್, ರಂಗಾಯಣ ರಘು, ಪದ್ಮಜಾ, ಸುಧಾ ಬೆಳವಾಡಿ, ಶ್ರೀನಾಥ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT