ಭಾನುವಾರ, ಡಿಸೆಂಬರ್ 8, 2019
21 °C

‘ಭಜರಂಗಿ 2’ ಸಿನಿಮಾ: ಏಪ್ರಿಲ್‌ನಲ್ಲಿ ಬಿಡುಗಡೆಗೆ ಸಿದ್ಧತೆ

Published:
Updated:
Prajavani

ಎ. ಹರ್ಷ ಮತ್ತು ಶಿವರಾಜ್‌ಕುಮಾರ್‌ ಕಾಂಬಿನೇಷನ್‌ನಡಿ ಆರು ವರ್ಷದ ಹಿಂದೆ ತೆರೆಕಂಡ ‘ಭಜರಂಗಿ’ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಆಂಜನೇಯನ ಭಕ್ತನಾಗಿ ಸೆಂಚುರಿ ಸ್ಟಾರ್‌ ಶಿವಣ್ಣ ಭರ್ಜರಿ ಆ್ಯಕ್ಷನ್ ದೃಶ್ಯಗಳ ಮೂಲಕ ಮಿಂಚಿದ್ದರು. ಅವರ ಹೊಸ ಗೆಟಪ್ ಚಿತ್ರಕ್ಕೊಂದು ಗಟ್ಟಿತನ ತಂದುಕೊಟ್ಟಿತ್ತು.

ಪ್ರಸ್ತುತ ಈ ಜೋಡಿ ‘ಭಜರಂಗಿ 2’ ಚಿತ್ರದಲ್ಲಿ ಬ್ಯುಸಿಯಾಗಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.

ಇಂಗ್ಲೆಂಡ್‌ನಲ್ಲಿ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಶಿವಣ್ಣ ನಟಿಸುತ್ತಿರುವ ಚಿತ್ರ ಇದಾಗಿದೆ. ಸೆಪ್ಟೆಂಬರ್‌ನಿಂದ ಶೂಟಿಂಗ್ ಆರಂಭಿಸಿರುವ ಚಿತ್ರತಂಡ ಡಿಸೆಂಬರ್‌ 15ರೊಳಗೆ ಶೇಕಡ 70ರಷ್ಟು ಚಿತ್ರೀಕರಣ ಪೂರ್ಣಗೊಳಿಸುವ ಗುರಿ ಹೊಂದಿದೆ. ಜನವರಿಗೆ ಇಡೀ ಶೂಟಿಂಗ್‌ ಪೂರ್ಣಗೊಳಿಸಿ 2020ರ ಏಪ್ರಿಲ್‌ನ ರಜೆ ವೇಳೆಗೆ ಥಿಯೇಟರ್‌ಗೆ ಲಗ್ಗೆ ಇರುವ ಯೋಚನೆ ಚಿತ್ರತಂಡದ್ದು.

ಇದೇ ಹಾದಿಯಲ್ಲಿ ಸಾಗಿರುವ ಚಿತ್ರತಂಡ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭರದಿಂದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದೆ. ಜಯಣ್ಣ ಕಂಬೈನ್ಸ್‌ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ‘ಟಗರು’ ಚಿತ್ರದ ಬಳಿಕ ಶಿವಣ್ಣಗೆ ನಟಿ ಭಾವನಾ ಜೋಡಿಯಾಗುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

ಚಿತ್ರದಲ್ಲಿ ನಟಿಸುತ್ತಿರುವ ಕಲಾವಿದರು, ಮೇಕಿಂಗ್‌, ಕಥೆಯ ಬಗ್ಗೆ ನಿರ್ದೇಶಕ ಹರ್ಷ ಎಲ್ಲಿಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಆದರೆ, ಈ ಚಿತ್ರದ ‘ಭಜರಂಗಿ’ಯ ಮುಂದುವರಿದ ಕಥೆಯಲ್ಲ. ಈ ಚಿತ್ರದ ಕಥೆಯ ಎಳೆಯೇ ವಿಭಿನ್ನವಾದುದು. ಸೂಕ್ತ ಸಮಯದಲ್ಲಿ ಕಥೆ, ಕಲಾವಿದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇವೆ ಎನ್ನುತ್ತಾರೆ ಹರ್ಷ.

ಅರ್ಜುನ್‌ ಜನ್ಯ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಜೆ. ಸ್ವಾಮಿ ಅವರ ಕ್ಯಾಮೆರಾ ಕೈಚಳಕವಿದೆ. ದೀಪು ಎಸ್‌. ಕುಮಾರ್‌ ಅವರ ಸಂಕಲನವಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು