ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರದಾನ ಪ್ರತಿಜ್ಞೆ ತೆಗೆದುಕೊಂಡ ನಟ ಶಿವರಾಜ್‌ಕುಮಾರ್‌

Last Updated 30 ಮಾರ್ಚ್ 2021, 15:21 IST
ಅಕ್ಷರ ಗಾತ್ರ

ಬೆಂಗಳೂರು: ತಂದೆ ವರನಟ ಡಾ.ರಾಜ್‌ಕುಮಾರ್‌ ಅವರಂತೆಯೇ ನೇತ್ರದಾನಕ್ಕೆ ಮುಂದಾಗಿರುವ ನಟ ಶಿವರಾಜ್‌ಕುಮಾರ್‌ ಅವರು ಮಂಗಳವಾರ ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡ ಚಿತ್ರ ‘ಅಕ್ಷಿ’ಯ ತಂಡವನ್ನು, ನಾರಾಯಣ ನೇತ್ರಾಲಯ ಹಾಗೂ ಡಾ.ರಾಜ್‌ಕುಮಾರ್‌ ಕಣ್ಣಿನ ಬ್ಯಾಂಕ್‌ ಮಂಗಳವಾರ ಸನ್ಮಾನಿಸಿತು. ಇದೇ ವೇಳೆ ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡ ಶಿವರಾಜ್‌ಕುಮಾರ್‌ ಅವರಿಗೆ ‘ಐ ಡೋನರ್‌ ಕಾರ್ಡ್‌’ ಅನ್ನು ಆಸ್ಪತ್ರೆಯು ನೀಡಿತು.

‘ಈ ಹಿಂದೆಯೇ ನೇತ್ರದಾನದ ಪ್ರತಿಜ್ಞೆ ತೆಗೆದುಕೊಂಡಿದ್ದೆ. ಅಧಿಕೃತವಾಗಿ ಇಂದು ಕಾರ್ಡ್‌ ಪಡೆದಿದ್ದೇನೆ. ನೇತ್ರದಾನ ಮಾಡಿರುವುದು ಖುಷಿಯಾಗಿದೆ. ಇದು ಎಲ್ಲರ ಕರ್ತವ್ಯ. ನೇತ್ರದಾನದ ಕುರಿತು ಅಪ್ಪಾಜಿ ಹೇಳಿದ ಮಾತು ಎಲ್ಲರಿಗೂ ದೊಡ್ಡ ಸ್ಫೂರ್ತಿ. ಬದುಕನ್ನು ಚೆನ್ನಾಗಿ ನೋಡಿದವರು ಅವರು. ಅವರು ಹೇಳಿದ ಮಾತನ್ನು ನಾವು ಪಾಲಿಸಲೇಬೇಕು. ಬಹಳ ಪ್ರೀತಿಯಿಂದ, ಭಾವನಾತ್ಮಕವಾಗಿ ಅವರು ನೇತ್ರದಾನದ ಕರೆ ನೀಡಿದ್ದರು. ಇಂದೂ ಕೂಡಾ ನೇತ್ರದಾನ ಮಾಡಿ ಎಂದು ಕೇಳಿಕೊಳ್ಳುವ ಅವರ ಆ ವಿಡಿಯೊ ನೋಡಿದಾಗ ಹಳೇ ನೆನಪುಗಳು ಮರುಕಳಿಸಿ, ಅಪ್ಪಾಜಿ ಇಲ್ಲೇ ಇದ್ದಾರೆ ಎಂದೆನಿಸಿತು’ ಶಿವರಾಜ್‌ಕುಮಾರ್‌ ಹೇಳಿದರು.

‘ನಮ್ಮ ಸಿನಿಮಾಕ್ಕೆ ಪ್ರಚಾರಕೊಡಿ ಎಂದು ನಾವು ಮಾಧ್ಯಮದ ಬಳಿ ಹೋಗುತ್ತೇವೆ. ಆದರೆ ಅಕ್ಷಿ ಚಿತ್ರತಂಡವನ್ನು ಮಾಧ್ಯಮವೇ ಹುಡುಕಿಕೊಂಡು ಬಂದಿದೆ.ಅಕ್ಷಿ ಸಮಾಜಕ್ಕೆ ಒಂದು ಸಂದೇಶ ನೀಡುವ ಸಿನಿಮಾ.ರಾಜ್‌ಕುಮಾರ್‌ ಅವರು ನೇತ್ರದಾನ ಮಾಡಿರುವುದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಅಕ್ಷಿ ಚಿತ್ರತಂಡವು ಸಿನಿಮಾವನ್ನು ಮಾಡಿದೆ’ ಎಂದು ಅಭಿಪ್ರಾಯಪಟ್ಟರು.

1994ರಲ್ಲಿ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್ ಅನ್ನು ಸ್ವತಃ ಡಾ.ರಾಜ್‌ಕುಮಾರ್ ಉದ್ಘಾಟಿಸಿದ್ದರು. 2006ರಲ್ಲಿ ಅವರು ಮೃತಪಟ್ಟಾಗ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ನೀಡಲಾಗಿತ್ತು. ದಿವಂಗತ ಪಾರ್ವತಮ್ಮ ರಾಜ್‌ಕುಮಾರ್ ಕೂಡಾ ತಮ್ಮ ನೇತ್ರಗಳನ್ನು ದಾನ ಮಾಡಿದ್ದರು.

‘ಅಕ್ಷಿ ಚಿತ್ರತಂಡದೊಂದಿಗೆ ವೇದಿಕೆ ಹಂಚಿಕೊಂಡಿರುವುದಕ್ಕೆ ಹೆಮ್ಮೆ ಇದೆ. ಈ ಚಲನಚಿತ್ರದ ವಿಷಯವು ನನ್ನ ಹೃದಯಕ್ಕೆ ಬಹಳ ಹತ್ತಿರವಾಗಿದೆ ಮತ್ತು ನಾರಾಯಣ ನೇತ್ರಾಲಯದ ಧ್ಯೇಯೋದ್ದೇಶವನ್ನು ಇದು ಪ್ರತಿಪಾದಿಸುತ್ತಿದೆ. ನೇತ್ರದಾನ ಕುರಿತು ಸಿನಿಮಾ ಮುಖಾಂತರ ಜನರಿಗೆ ಜಾಗೃತಿ, ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವ ಈ ಪ್ರಯತ್ನ ಶ್ಲಾಘನೀಯ’ ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಭುಜಂಗ ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT