ಗುರುವಾರ , ಅಕ್ಟೋಬರ್ 1, 2020
25 °C

ನಟ ಶಿವರಾಜ್‌ಕುಮಾರ್‌ ನೇತೃತ್ವದ ನಿಯೋಗದಿಂದ ಡಿಸಿಎಂ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಗುರುವಾರ ನಟ ಶಿವರಾಜ್‌ಕುಮಾರ್ ನೇತೃತ್ವದ ಚಿತ್ರರಂಗದ ನಿಯೋಗವು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವಥ್‌ನಾರಾಯಣ ಅವರನ್ನು ಭೇಟಿ ಮಾಡಿತು‌

ಕೋವಿಡ್‌–19 ಪರಿಣಾಮ ಕನ್ನಡ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಈ ಉದ್ಯಮ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ನೂರಾರು ಕಲಾವಿದರು, ಕಾರ್ಮಿಕರ ಬದುಕು ದಿಕ್ಕೆಟ್ಟಿದೆ. ಚಿತ್ರಮಂದಿರಗಳ ಪ್ರದರ್ಶನಕ್ಕೆ ಇನ್ನೂ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿಲ್ಲ. ಹಾಗಾಗಿ, ಚಿತ್ರೋದ್ಯಮದ ಚೇತರಿಕೆಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸುತ್ತದೆಯೇ ಎಂದು ಕನ್ನಡ ಚಿತ್ರರಂಗ ಎದುರು ನೋಡುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿರುವ ನಟ ಶಿವರಾಜ್‌ಕುಮಾರ್‌ ಅವರ ನಿವಾಸದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರು ಮತ್ತು ನಿರ್ಮಾಪಕರ ಸಂಘದ ನೇತೃತ್ವದಡಿ ಸಭೆ ನಡೆದಿತ್ತು. ಸಭೆಯಲ್ಲಿ ಶಿವಣ್ಣ ಅವರಿಗೆ ಚಿತ್ರರಂಗದ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು.

ಈ ಸಭೆಯ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ. ರವಿ ಸಮ್ಮುಖದಲ್ಲಿ ಶಿವಣ್ಣ ಅವರ ನಿವಾಸದಲ್ಲಿಯೇ ಮತ್ತೊಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿತ್ತು.

ಶಿವರಾಜ್‌ಕುಮಾರ್‌ ಅವರು ಚಿತ್ರರಂಗದ ಸಾರಥ್ಯವಹಿಸಿಕೊಂಡ ಬಳಿಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದರು. ಆದರೆ, ಯಡಿಯೂರಪ್ಪ ಅವರಿಗೆ ಕೋವಿಡ್‌–19 ಸೋಂಕು ಕಾಣಿಸಿಕೊಂಡ ಪರಿಣಾಮ ಭೇಟಿ ಸಾಧ್ಯವಾಗಿರಲಿಲ್ಲ.

ಗುರುವಾರ ಬೆಂಗಳೂರಿನ ರೇಸ್‌ಕೋರ್ಸ್‌ ರಸ್ತೆಯಲ್ಲಿರುವ ಉಪ ಮುಖ್ಯಮಂತ್ರಿ ನಿವಾಸದಲ್ಲಿ ಡಿಸಿಎಂ.ಡಾ.ಸಿ.ಎನ್‌. ಅಶ್ವಥ್‌ ನಾರಾಯಣ ಅವರನ್ನು ಶಿವರಾಜ್‌ಕುಮಾರ್‌ ನೇತೃತ್ವದ ಚಿತ್ರರಂಗದ ನಿಯೋಗ ಭೇಟಿ ಮಾಡಿ ಸುದೀರ್ಘವಾಗಿ ಚರ್ಚಿಸಿತು. ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳನ್ನು ಡಿಸಿಎಂ ಗಮನಕ್ಕೆ ತರಲಾಯಿತು.

‘ಕಳೆದ ಮಾರ್ಚ್‌ನಿಂದಲೂ ಚಿತ್ರೋದ್ಯಮದ ಚಟುವಟಿಕೆ ಸ್ಥಗಿತಗೊಂಡಿದೆ. ಇದರಿಂದ ಆರ್ಥಿಕ ಸಮಸ್ಯೆಯ ಸುಳಿಗೆ ಸಿಲುಕಿದೆ. ಹಾಗಾಗಿ, ವಿಶೇಷ ಪ್ಯಾಜೇಕ್‌ ಘೋಷಿಸುವ ಮೂಲಕ ಚಿತ್ರರಂಗದ ನೆರವಿಗೆ ಸರ್ಕಾರ ಕ್ರಮವಹಿಸಬೇಕು’ ಎಂದು ಡಿಸಿಎಂ ಅವರಿಗೆ ಶಿವಣ್ಣ ಮನವರಿಕೆ ಮಾಡಿಕೊಟ್ಟರು.

‘ಕೋವಿಡ್‌–19 ಹಿನ್ನೆಲೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕನ್ನಡ ಚಿತ್ರರಂಗದ ಹಲವು ವಿಚಾರಗಳ ಬಗ್ಗೆ ಚರ್ಚಿಸಲು ನಟ ಶಿವರಾಜ್‌ಕುಮಾರ್‌ ಅವರ ನೇತೃತ್ವದಲ್ಲಿ ಚಿತ್ರರಂಗದ ನಿಯೋಗ ನನ್ನನ್ನು ಭೇಟಿ ಮಾಡಿತು. ಕಲಾವಿದರು, ತಂತ್ರಜ್ಞರು ಮತ್ತು ನೌಕರರಿಗೆ ತಲೆದೋರಿರುವ ಸಂಕಷ್ಟಗಳ ಪರಿಹಾರದ ಕುರಿತು ಚರ್ಚಿಸಲಾಯಿತು’ ಎಂದು ಅಶ್ವಥ್‌ನಾರಾಯಣ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು