ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೇಮ್ಸ್‌’ ನೋಡಿ ಗಳಗಳನೆ ಅತ್ತ ಶಿವರಾಜ್‌ಕುಮಾರ್

‘ಚಿತ್ರನಗರಿಗೆ ಪುನೀತ್ ಹೆಸರಿಡಲು ಒತ್ತಾಯಿಸುವುದಿಲ್ಲ'
Last Updated 17 ಮಾರ್ಚ್ 2022, 21:49 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಗುರುವಾರ ರಾತ್ರಿ ‘ಜೇಮ್ಸ್’ ಸಿನಿಮಾವನ್ನು ವೀಕ್ಷಿಸಿ ಹೊರಬಂದ ಶಿವರಾಜಕುಮಾರ್‌ ಭಾವುಕರಾಗಿ ಗಳಗಳನೆ ಅತ್ತರು. ಅವರ ದುಃಖ ಮೇರೆ ಮೀರಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನಿಜಕ್ಕೂ ತುಂಬಾ ಕಷ್ಟವಾಗುತ್ತಿದೆ. ನಮಗೆಲ್ಲಿ ಶಕ್ತಿ ಹೋಗುತ್ತದೋ ಎಂದು ಭಯವಾಗುತ್ತಿದೆ. ನಮಗೂ ದೇವರು ಶಕ್ತಿ ಕೊಡಲಿ. ನಮ್ಮ ಕುಟುಂಬಕ್ಕೆ ನೈತಿಕ ಬೆಂಬಲ ನೀಡಿರುವ ಅಭಿಮಾನಿಗಳು, ಸಿನಿಮಾ ರಂಗಕ್ಕೆ ಆಭಾರಿಗಳಾಗಿದ್ದೇವೆ’ ಎಂದರು.

‘ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಬೆಳಿಗ್ಗೆಯೇ ಅಪ್ಪು ಕರೆ ಮಾಡಿ ಚೆನ್ನಾಗಿದೆ ಎನ್ನುತ್ತಿದ್ದ. ಈಗ ಅವನ ಕರೆ ಬರುತ್ತಿಲ್ಲವಲ್ಲ ಎಂಬ ನೋವು ಕಾಡುತ್ತಿದೆ. ಇಷ್ಟು ದಿನ ಅವನ ಎಲ್ಲ ಸಿನಿಮಾವನ್ನು ಎಂಜಾಯ್‌ ಮಾಡಿಕೊಂಡು ನೋಡುತ್ತಿದ್ದೆ. ಆದರೆ, ಈ ಸಿನಿಮಾ ನೋಡುವಾಗ ಕಣ್ಣೀರು ಹಾಕಿದೆ’ ಎಂದು ಭಾವುಕರಾದರು.

‘ಅಪ್ಪಾಜಿಗಿಂತ ದೊಡ್ಡ ಹೆಸರು ಗಳಿಸಿದ್ದಾನೆ ಎಂದರೆ ಅದು ನಮ್ಮ ಭಾಗ್ಯ, ಪುಣ್ಯ. ಅವನು ಯಾವಾಗಲೂ ತುಂಬ ಉನ್ನತವಾಗಿ ಯೋಚಿಸುತ್ತಿದ್ದ. ಕನ್ನಡ ಸಿನಿಮಾಗಳನ್ನು ಹಾಲಿವುಡ್ ಸಿನಿಮಾದಂತೆ ತೆಗೆಯಬೇಕು ಎನ್ನುತ್ತಿದ್ದ. ಅವನ ಚಿಂತನೆಯಂತೆ ಜೇಮ್ಸ್ ತಯಾರಾಯಿತು. ಶಬ್ದವೇಧಿ‌ ಸಿನಿಮಾವೂ ಮಾದಕವಸ್ತುಗಳಿಗೆ ಸಂಬಂಧಿಸಿತ್ತು. ನಂತರ ತಂದೆ ರಾಜಕುಮಾರ್ ಹೋದರು. ಜೇಮ್ಸ್ ಸಿನಿಮಾ ಸಹ ಮಾದಕದ್ರವ್ಯಕ್ಕೆ ಸಂಬಂಧಿಸಿದ್ದು. ನಿಜಕ್ಕೂ ಮಾದಕವಸ್ತು ದೇಶವನ್ನು ನಾಶ ಮಾಡುತ್ತಿದೆ’ ಎಂದರು.

‘ಜೇಮ್ಸ್‌ ಚಿತ್ರದಲ್ಲಿ ಪುನೀತ್‌ ಪಾತ್ರಕ್ಕೆ ಧ್ವನಿ ನೀಡುವಾಗ ಮನಸ್ಸಿಗೆ ತುಂಬಾ ನೋವಾಗುತ್ತಿತ್ತು. ಅಪ್ಪು ಇಲ್ಲದ ಹುಟ್ಟುಹಬ್ಬ ಆಚರಣೆ ತುಂಬಾ ದುಃಖದ ವಿಚಾರ. ಹುಟ್ಟುಹಬ್ಬಕ್ಕೆ ಇಬ್ಬರೂ ಪರಸ್ಪರ ಉಡುಗೊರೆಗಳನ್ನು ನೀಡುತ್ತಿದ್ದೆವು. ಅಪ್ಪುಗೆ ಸಾಕಷ್ಟು ಸಲ ವಾಚ್, ಬೆಲ್ಟ್, ಗಾಗಲ್ ಕೊಟ್ಟಿದ್ದೇನೆ. ಅಪ್ಪು ಎಲ್ಲರ ಹೃದಯದಲ್ಲಿ ಇದ್ದಾನೆ‌’ ಎಂದು ಭಾವುಕರಾಗಿ ನುಡಿದರು.

ಹೆಲಿಕಾಪ್ಟರ್‌ನಿಂದ ಹೂಮಳೆ
ಮೈಸೂರು: ಇಲ್ಲಿನ ಬಿ.ಎಂ.ಹ್ಯಾಬಿಟ್ಯಾಟ್ ಮಾಲ್‌ ಮುಂದೆ 70 ಅಡಿ ಎತ್ತರದ ಪುನೀತ್‌ ರಾಜ್‌ಕುಮಾರ್ ಕಟೌಟ್‌ಗೆ ಹೆಲಿಕಾಪ್ಟರ್‌ ಮೂಲಕ ಹೂಮಳೆಗರೆದಿದ್ದು ವಿಶೇಷವಾಗಿತ್ತು. ಅಭಿಮಾನಿಗಳಾದ ಎಸ್.ನಾಗೇಂದ್ರ, ಎಂ.ಕೆ.ವಿವೇಕ್, ಕೆ.ಹರ್ಷಿತ್, ಲಕ್ಷ್ಮೀಕಾಂತ್ ಹಾಗೂ ಎಂ.ಎನ್.ಈಶ್ವರ್ ಅವರು ಬೆಂಗಳೂರಿನಿಂದ ಹೆಲಿಕಾಪ್ಟರ್‌ ಕರೆಸಿದ್ದರು. ಇಲ್ಲಿನ ಡಿಆರ್‌ಸಿ ಚಿತ್ರಮಂದಿರದಲ್ಲಿ ಜೇಮ್ಸ್‌ ಚಿತ್ರ ಒಂದೇ ದಿನದಲ್ಲಿ 18 ಪ್ರದರ್ಶನ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT