ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೆಗಾಲಿಡುತ್ತ ಕನ್ನಡಕ್ಕೆ ಬಂದ ‘ಗುಂಟೂರ್‌ ಟಾಕೀಸ್‌’ ಅಮ್ಮಾಯಿ

Last Updated 1 ಮಾರ್ಚ್ 2019, 11:28 IST
ಅಕ್ಷರ ಗಾತ್ರ

ಪತ್ರಿಕೋದ್ಯಮ ಓದಿರುವ, ನ್ಯೂಸ್ ಆ್ಯಂಕರ್ ಆಗುವ ಆಸೆ ಹೊಂದಿದ್ದ ಶ್ರದ್ಧಾ ದಾಸ್‌ ಈಗ ಬೆಳ್ಳಿತೆರೆ ಬೆಡಗಿ. ಮುಂಬೈ ಮೂಲದ ಈ ಬೋಲ್ಡ್ ಹುಡುಗಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ಸುನೀಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ‘ಮುಮುಸೊ’ ಮಳಿಗೆಯ ಉದ್ಘಾಟನೆಗೆ ಬಂದಿದ್ದಾಗ ಮಾತಿಗೆ ಸಿಕ್ಕ ಶ್ರದ್ಧಾ‘ಸುಧಾ’ ಜೊತೆಮಾತನಾಡಿದ್ದಾರೆ.

*ನೀವು ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕವಾ? ಯೋಜಿತವಾ?
ಆಕಸ್ಮಿಕವಾಗಿ ಹಾಗೂ ಯೋಜಿತವಾಗಿ ಸಿನಿಮಾ ರಂಗಕ್ಕೆ ಬಂದೆ ಎನ್ನಬಹುದು. ಎಂಜಿನಿಯರ್ ಆಗಬೇಕು ಎಂಬುದು ನನ್ನ ಆಸೆಯಾಗಿತ್ತು. ಆದರೆ, ಎಂಜಿನಿಯರಿಂಗ್ ಬದಲು ಪತ್ರಿಕೋದ್ಯಮ ಕೋರ್ಸ್‌ಗೆ ಆಕಸ್ಮಿಕವಾಗಿ ಸೇರಿಕೊಂಡು ವ್ಯಾಸಂಗ ಮಾಡಬೇಕಾಯಿತು. ನಟನೆಯ ಬಗ್ಗೆ ಚಿಕ್ಕವಳಿದ್ದಾಗಿನಿಂದಲೂ ಒಲವಿತ್ತು. ಅವಕಾಶ ಸಿಕ್ಕಾಗಲೆಲ್ಲ ವೇದಿಕೆಗಳ ಮೇಲೆ ನಟಿಸುತ್ತಿದ್ದೆ. ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾಗ ನಟನೆಯ ಬಗ್ಗೆ ತೀವ್ರ ಆಸಕ್ತಿ ಬೆಳೆಯತೊಡಗಿತು. ಚಿತ್ರರಂಗಕ್ಕೆ ಕಾಲಿಡಬೇಕು ಎಂದು ನಿರ್ಧರಿಸಿದೆ. ಅದಕ್ಕೆ ಪೂರಕವಾಗಿ ಸ್ನೇಹಿತರ ಜೊತೆಗೂಡಿ ಶಾರ್ಟ್‌ ಮೂವಿಗಳನ್ನು ಮಾಡುತ್ತಿದ್ದೆ. ಚಿತ್ರರಂಗದ ನಂಟು ಬೆಳೆಯತೊಡಗಿತು. ತೆಲುಗಿನ ‘ಸಿದ್ದು ಫ್ರಮ್ ಸಿಕಾಕುಳಂ’ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಸಿನಿ ಜರ್ನಿ ಪ್ರಾರಂಭವಾಯಿತು.

*ಓದಿದ್ದು ಪತ್ರಿಕೋದ್ಯಮ. ಅದೇ ಕ್ಷೇತ್ರದಲ್ಲಿ ಏಕೆ ಮುಂದುವರೆಯಲಿಲ್ಲ?
ಪತ್ರಿಕೋದ್ಯಮ ನನಗೆ ಇಷ್ಟವಾದ ಕ್ಷೇತ್ರ, ಈಗಲೂ. ನ್ಯೂಸ್ ಆ್ಯಂಕರ್ ಆಗಿ ಮಿಂಚಬೇಕು ಎಂಬ ಆಸೆ ನನಗಿತ್ತು. ಅದಕ್ಕಾಗಿ ಸಾಕಷ್ಟು ತಯಾರಿಯೂ ಮಾಡಿಕೊಂಡಿದ್ದೆ. ಆದರೆ, ಸಿನಿಮಾ ಕ್ಷೇತ್ರದಿಂದ ಅವಕಾಶ ಹುಡುಕಿಕೊಂಡು ಬಂತು. ಹಾಗಾಗಿ ಈ ರಂಗದಲ್ಲಿ ತೊಡಗಿಕೊಂಡೆ. ಸಿನಿಮಾಗಳಲ್ಲಿ ಪತ್ರಕರ್ತೆಯಾಗಿ ನಟಿಸುವ ಅವಕಾಶ ಸಿಕ್ಕರೆ ಹಿಂದುಮುಂದು ನೋಡದೆ ಒಪ್ಪಿಕೊಳ್ಳುವೆ.

* ‘ರಿವಾಲ್ವರ್ ರಾಣಿ’ಯಂತಹ ಬೋಲ್ಡ್ ಪಾತ್ರಗಳಲ್ಲಿ ಮತ್ತೆ ನಟಿಸುವಾಸೆ ಇದೆಯೇ ?
ತೆಲುಗಿನಲ್ಲಿ ನನಗೆ ಖ್ಯಾತಿ ತಂದುಕೊಟ್ಟ ಪಾತ್ರ ‘ಗುಂಟೂರ್ ಟಾಕೀಸ್‌’ ಸಿನಿಮಾದ ‘ರಿವಾಲ್ವರ್ ರಾಣಿ’. ಬೋಲ್ಡ್ ಆಗಿರುವ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ. ಆ ಪಾತ್ರವೂ ಬೋಲ್ಡ್ ಹಾಗೂ ವಿಭಿನ್ನವಾಗಿದ್ದಿದ್ದರಿಂದ ಅದನ್ನು ಆಯ್ಕೆ ಮಾಡಿಕೊಂಡಿದ್ದೆ. ಆ ಪಾತ್ರದಿಂದಾಗಿಯೇ ಹಲವು ಪಾತ್ರಗಳು ನನ್ನನ್ನು ಅರಸಿಬಂದವು. ಆ ಸಿನಿಮಾದ ನನ್ನ ಪಾತ್ರವನ್ನು ನೋಡಿದಾಗಲೆಲ್ಲ ಖುಷಿಯಾಗುತ್ತದೆ. ಮರಾಠಿ ಹಾಗೂ ತಮಿಳಿಗೆ ‘ಗುಂಟೂರ್ ಟಾಕೀಸ್‌’ ರೀಮೇಕ್ ಆಗಿದ್ದು, ‘ರಿವಾಲ್ವರ್ ರಾಣಿ’ ಪಾತ್ರದಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಆದರೆ, ಆ ಸಮಯದಲ್ಲಿ ನಾನು ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿದ್ದರಿಂದ ನಟಿಸಲಾಗಲಿಲ್ಲ. ಬಹುಶಃ ‘ಗುಂಟೂರ್ ಟಾಕೀಸ್‌’ ಕನ್ನಡದಲ್ಲಿ ರೀಮೇಕ್ ಆಗಬಹುದೇನೋ ಗೊತ್ತಿಲ್ಲ. ಅವಕಾಶ ಸಿಕ್ಕರೆ ಕನ್ನಡದಲ್ಲಿ ಅದೇ ಪಾತ್ರದಲ್ಲಿ ನಟಿಸುತ್ತೇನೆ.

*‘ಕೋಟಿಗೊಬ್ಬ 3’ ಸಿನಿಮಾದಲ್ಲಿ ನಿಮ್ಮ ಪಾತ್ರವೇನು ?
ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಜೊತೆ ‘ಕೋಟಿಗೊಬ್ಬ 3’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರಲ್ಲಿ ನನ್ನದು ಇಂಟರ್ಪೋಲ್ ಆಫೀಸರ್ ಪಾತ್ರ. ಸಿನಿಮಾದಲ್ಲದು ಮಹತ್ವದ ಪಾತ್ರ. ಚಿತ್ರೀಕರಣ ನಡೆಯುತ್ತಿದ್ದು, ಕನ್ನಡಿಗರು ಕಿಚ್ಚ ಸುದೀಪ್ ಜೊತೆ ನನ್ನನ್ನೂ ತೆರೆಯ ಮೇಲೆ ನೋಡಬಹುದು.

*ಸುದೀಪ್ ಜೊತೆಗಿನ ಒಡನಾಟ ಹೇಗಿತ್ತು?
ಕಿಚ್ಚ ಸುದೀಪ್ ಒಂದು ರೀತಿಯಲ್ಲಿ ‘ಪ್ರಾಫರ್ ಸೂಪರ್ ಸ್ಟಾರ್’ ಇದ್ದಂತೆ. ನಿಜ ಜೀವನದಲ್ಲೂ ಅವರು ಹಾಗೆಯೇ ಇದ್ದಾರೆ. ಅವರ ವ್ಯಕ್ತಿತ್ವ, ನಡೆ ನುಡಿ ಎಲ್ಲವೂ ನಾನು ಕಂಡಂತೆ ಎಲ್ಲರಿಗೂ ಇಷ್ಟವಾಗುವಂತಹದ್ದು. ಸದ್ಯ ‘ಕೋಟಿಗೊಬ್ಬ 3’ ಜೊತೆಜೊತೆಗೆ ‘ಪೈಲ್ವಾನ್’ ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಒತ್ತಡಗಳ ನಡುವೆಯೂ ಅವರು ಸಹಜವಾಗಿ, ಮನಮೋಹಕವಾಗಿ ಅಭಿನಯಿಸುವ ಚಾತುರ್ಯ ನನಗೆ ಇಷ್ಟ. ಸೃಜನಾತ್ಮಕ ವ್ಯಕ್ತಿತ್ವದ ಅವರದು ಬಹುಮುಖ ಪ್ರತಿಭೆ. ಅವರು ಲೀಡ್ ರೋಲ್‌ನಲ್ಲಿ ನಟಿಸುತ್ತಿರುವ ಸಿನಿಮಾದಲ್ಲಿ ನಾನೂ ಒಂದು ಭಾಗವಾಗಿರುವುದೇ ಹೆಮ್ಮೆಯ ವಿಚಾರ.

*‘ಉದ್ಘರ್ಷ’ ಸಿನಿಮಾದ ಚಿತ್ರೀಕರಣ ಎಲ್ಲಿಯವರೆಗೆ ಬಂತು ?
ಕನ್ನಡದ ಸಿನಿಮಾ ರಂಗದ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ‘ಉದ್ಘರ್ಷ’ ಚಿತ್ರದ ನಿರ್ದೇಶಕರು. ಚಿತ್ರೀಕರಣ ಭರದಿಂದ ಸಾಗುತ್ತಿದೆ. ಸುನೀಲ್ ಕುಮಾರ್ ದೇಸಾಯಿ ಅವರೊಂದಿಗೆ ಕೆಲಸ ಮಾಡುವುದು ಥ್ರಿಲ್ಲಿಂಗ್ ಅನುಭವ. ‘ಉದ್ಘರ್ಷ’ದಲ್ಲಿ ನನ್ನದು ಚಿಕ್ಕ ರೋಲ್ ಆದರೂ ಅದರು ಔಚಿತ್ಯ ದೊಡ್ಡದು. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಪಾತ್ರವಾಗಿದ್ದು, ಅದರ ಬಗ್ಗೆ ಹೆಚ್ಚೇನೂ ಹೇಳಲಾರೆ.

* ‘ಮೀ ಟೂ’ ಅಭಿಯಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಮೀ–ಟೂ ಅಭಿಯಾನ ಉತ್ತಮವಾದ ವೇದಿಕೆ. ಅದು ಯಾವಾಗಲೂ ಚಾಲ್ತಿಯಲ್ಲಿರಬೇಕು. ಸಿನಿಮಾ ಕ್ಷೇತ್ರಕ್ಕೆ ಮಾತ್ರ ಅದು ಸೀಮಿತವಾಗಿರಬಾರದು. ಎಲ್ಲ ರಂಗಗಳಲ್ಲಿಯೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗುತ್ತಿರುತ್ತವೆ. ಅದರ ಬಗ್ಗೆ ಮುಕ್ತವಾಗಿ ಹಾಗೂ ಧೈರ್ಯದಿಂದ ಮಾತನಾಡುವವರ ಸಂಖ್ಯೆ ಕಡಿಮೆಯಿದೆ. ಈಗೀಗ, ಮುಕ್ತವಾಗಿ ಮಾತನಾಡುವವರ ಸಂಖ್ಯೆ ಬೆಳೆಯುತ್ತಿದೆ. ಇದು ಉತ್ತಮ ಬೆಳವಣಿಗೆಯೂ ಹೌದು.

* ನಿಮಗೆ ಅಂತಹ ಅನುಭವ ಆಗಿತ್ತೇ?
ನನ್ನೊಂದಿಗೆ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿದ್ದ. ಆ ವ್ಯಕ್ತಿಯ ವಿರುದ್ಧ ತಕ್ಷಣವೇ ನಾನು ಸಿಡಿದೆದ್ದು ಪಾಠ ಕಲಿಸಿದ್ದೆ. ಕೆಟ್ಟ ಅನುಭವಗಳು ಎದುರಾದ ಕೂಡಲೇ ಅದರ ಬಗ್ಗೆ ಪ್ರತಿರೋಧ ವ್ಯಕ್ತಪಡಿಸುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT