ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಹದಾರಿ’ ಚಿತ್ರದಲ್ಲಿ ಬ್ಯೂಟಿಪುಲ್‌ ಸೂಪರ್‌ಕಾಪ್‌

ಏಳು ಮಲ್ಲಿಗೆ ತೂಕದ ಚೆಲುವೆ ಶ್ವೇತಾ!
Last Updated 13 ಜನವರಿ 2020, 8:59 IST
ಅಕ್ಷರ ಗಾತ್ರ

ಬರೋಬ್ಬರಿ 27 ಕೆ.ಜಿ. ತೂಕ ಇಳಿಸಿಕೊಂಡಿರುವ ನಟಿ ಶ್ವೇತಾ ಶ್ರೀವಾತ್ಸವ್‌ ಈಚೆಗಷ್ಟೇ ಫೋಟೊಶೂಟ್‌ ಮಾಡಿಸಿ, ಆ ಚಿತ್ರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೊಗ್ರಾಫರ್‌ ಅಭಿಷೇಕ್‌ ಶಾಸ್ತ್ರಿ ಅವರ ಕ್ಯಾಮೆರಾ ಕಣ್ಣಿನಲ್ಲಿ ಶ್ವೇತಾ ಅವರ ಚೆಲುವು ಮೊದಲಿನಂತೆ ಕಂಗೊಳಿಸುತ್ತಿದ್ದು, ಫೋಟೊ ನೋಡಿ ಮೆಚ್ಚಿದ ಅಭಿಮಾನಿಗಳು ಮೆಚ್ಚುಗೆಯ ಮಹಾಪೂರ ಹರಿಸಿದ್ದಾರೆ.

‌ತಾಯಿ ಆದ ನಂತರ ಸಹಜವಾಗಿಯೇ ದಪ್ಪ ಆಗಿದ್ದ ಶ್ವೇತಾ, ‘ಅಯ್ಯಯ್ಯೋ ದಪ್ಪ ಆಗಿ ಬಿಟ್ಟೆನಲ್ಲಾ’ ಎಂದು ಯಾವತ್ತಿಗೂ ಕೊರಗಿದವರಲ್ಲ. ತಾಯ್ತನದ ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಅನುಭವಿಸಿದವರು. ಮಗಳು ಅಶ್ಮಿತಾಗೆ ಈಗ ಎರಡು ವರ್ಷಗಳು ತುಂಬಿವೆ. ಇದೇ ವೇಳೆ ಶ್ವೇತಾ ಅವರಿಗೂ ಬಿಡುವು ಲಭಿಸಿದೆ. ಈ ಹಿನ್ನೆಲೆಯಲ್ಲಿ ಯೋಗ, ಡಯೆಟ್‌ ಇವೆರಡರ ಕಾಂಬಿನೇಷನ್‌ನಲ್ಲಿ ತೂಕ ಇಳಿಸಿಕೊಂಡು ಮೊದಲಿನಂತೆ ಏಳು ಮಲ್ಲಿಗೆ ತೂಕದ ಸುಂದರಿಯಾಗಿರುವ ಶ್ವೇತಾ, ಬೆಳ್ಳಿತೆರೆ ಮೇಲೆ ಅಭಿಮಾನಿಗಳನ್ನು ರಂಜಿಸಲು ಮತ್ತೆ ಸಜ್ಜಾಗಿದ್ದಾರೆ.

‘ಮಗು ಆದ ನಂತರ ಮೆಟರ್ನಿಟಿ ಬ್ರೇಕ್‌ ತೆಗೆದುಕೊಂಡಿದ್ದೆ. ಪ್ರೆಗ್ನೆಸ್ಸಿ ಸಂದರ್ಭದಲ್ಲಿ 30 ಕೆ.ಜಿ. ದಪ್ಪ ಆಗಿದ್ದೆ. ತಾಯಿ ಆದ ನಂತರ ಮಗುವಿನ ಲಾಲನೆ ಪಾಲನೆಯಲ್ಲೇ 15 ಕೆ.ಜಿ. ಸಣ್ಣ ಆದೆ. ಮಗಳು ಸ್ವಲ್ಪ ದೊಡ್ಡವಳಾದ ನಂತರ ನನಗೂ ಬಿಡುವು ಸಿಕ್ಕಿತು. ಮತ್ತೇ ಚಿತ್ರರಂಗಕ್ಕೆ ಮರಳುವ ಇಚ್ಛೆ ಮೂಡಿತು. ಅದಕ್ಕಾಗಿ ಮತ್ತಷ್ಟು ತೂಕ ಇಳಿಸಿಕೊಳ್ಳುವ ಯೋಚನೆ ಮಾಡಿದೆ. ಈಗ ಒಟ್ಟು 27 ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ’ ಎಂದು ನಕ್ಕರು ಶ್ವೇತಾ.

ಫೋಟೊಶೂಟ್‌ ಕುರಿತು ಹೇಳಿ ಎಂಬ ಪ್ರಶ್ನೆಗೆ ಶ್ವೇತಾ ಉತ್ತರಿಸಿದ್ದು ಹೀಗೆ: ‘ನಾನು ಪ್ರೆಗ್ನೆಂಟ್‌ ಆಗುವುದಕ್ಕೂ ಮುನ್ನ ಎಷ್ಟು ತೂಕ ಇದ್ದೆನೋ ಈಗ ಅಷ್ಟೇ ತೂಕ ಇದ್ದೇನೆ. ತೂಕ ಇಳಿಸಿಕೊಂಡ ನಂತರ ಹೇಗೆ ಕಾಣಿಸುತ್ತೇನೆ ಎಂಬ ಕುತೂಹಲ ಮೂಡಿತ್ತು. ಅಲ್ಲದೇ ಫೋಟೊಶೂಟ್‌ ಮಾಡಿಸಿ ಎಂದು ಅನೇಕರು ತುಂಬ ದಿನಗಳಿಂದಲೂ ಒತ್ತಾಯಿಸುತ್ತಿದ್ದರು. ಹಾಗಾಗಿ, ನನ್ನ ರಿಯಾಲಿಟಿ ಚೆಕ್‌ಗಾಗಿಯೇ ನಾನು ಈ ಫೋಟೊಶೂಟ್‌ ಮಾಡಿಸಿದೆ. ಚಿತ್ರಗಳನ್ನು ನೋಡಿದ ಅಭಿಮಾನಿಗಳು, ಸ್ನೇಹಿತರು ತುಂಬ ಇಷ್ಟಪಟ್ಟರು. ಮೆಚ್ಚುಗೆ ವ್ಯಕ್ತಪಡಿಸಿದರು’.

‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಶ್ವೇತಾ ಶ್ರೀವಾತ್ಸವ್‌ ಒಪ್ಪಿಕೊಂಡಿರುವ ಸಿನಿಮಾ ‘ರಹದಾರಿ’. ‘ಒಂದ್‌ ಕತೆ ಹೇಳ್ಲಾ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಗಿರೀಶ್‌ ವೈರಮುಡಿ ಈ ಸಿನಿಮಾದ ನಿರ್ದೇಶಕರು. ರಾಬರ್‌, ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಶ್ವೇತಾ ಸೂಪರ್‌ಕಾಪ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಭಿನ್ನ ಪಾತ್ರಗಳ ನಿರ್ವಹಣೆಯಿಂದಲೇ ಜನರ ಮನಗೆದ್ದಿರುವ ಶ್ವೇತಾ, ಎರಡು ವರ್ಷಗಳ ಬಿಡುವಿನ ನಂತರ ಈಗ ಮತ್ತೊಂದು ವಿಭಿನ್ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳುತ್ತಿದ್ದಾರೆ.

‌‘ಈ ಎರಡು ವರ್ಷಗಳಲ್ಲಿ ಏಳೆಂಟು ಸಿನಿಮಾಗಳಿಗೆ ಆಫರ್‌ ಬಂದಿದ್ದವು. ಇದು ದೊಡ್ಡ ವಿಷಯ ನನಗೆ. ಏಕೆಂದರೆ, ಈಗಿನ ಕಾಲದಲ್ಲಿ ಅವಕಾಶಗಳು ಸಿಗುವುದೇ ಕಷ್ಟ. ಅದರಲ್ಲೂ ತಾಯಿ ಆದ ನಂತರ ಅವಕಾಶಗಳು ಸಿಗುವುದು ತೀರಾ ಕಡಿಮೆ. ಇಂತಹ ಸನ್ನಿವೇಶದಲ್ಲಿ ನನಗೆ ಆಫರ್‌ಗಳು ಅರಸಿ ಬಂದದ್ದು ಖುಷಿ ಕೊಟ್ಟಿತು. ಆದರೆ, ಎಲ್ಲ ಚಿತ್ರಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ’ ಎಂದರು ಶ್ವೇತಾ.

‘ಕಾರಣ ಏನು’ ಎಂದು ಕೇಳಿದ್ದಕ್ಕೆ ಮಾತು ಮುಂದುವರಿಸಿದ ಅವರು; ‘ಒಬ್ಬ ಕನ್ನಡದ ನಟಿಯಾಗಿ ಜನತೆಗೆ ಒಳ್ಳೆ ಸಿನಿಮಾ ಕೊಡಬೇಕು ಎಂಬುದರ ಜತೆಗೆ ಸ್ಕ್ರಿಪ್ಟ್‌, ಟೀಂ ಇವೆಲ್ಲದರ ಬಗ್ಗೆಯೂ ಈಗ ತುಂಬ ಕೇರ್‌ಫುಲ್‌ ಆಗಿ ಯೋಚಿಸಿ ಹೆಜ್ಜೆ ಇಡಬೇಕಿದೆ. ಈಗ ಒಂದು ಸಿನಿಮಾ ಒಪ್ಪಿಕೊಳ್ಳಬೇಕು ಎಂದರೆ ತಾಯಿಯಾಗಿಯೂ ಯೋಚಿಸಬೇಕಾಗುತ್ತದೆ’ ಎಂದರು.

‘ನನ್ನ ಮಗಳು ಇನ್ನೂ ಚಿಕ್ಕವಳು. 20–30 ದಿನ ಬೆಂಗಳೂರಿನಿಂದ ಹೊರಗೆ ಚಿತ್ರೀಕರಣ ಇದ್ದರೆ ಮಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಜತೆಯಲ್ಲಿ ಕರೆದುಕೊಂಡು ಹೋಗೋಣವೆಂದರೆ ಇನ್ನೂ ಚಿಕ್ಕವಳು. ಇದರಿಂದ ಚಿತ್ರತಂಡದವರಿಗೆ ತೊಂದರೆ. ನಾನು ತೊಂದರೆ ಅನುಭವಿಸುತ್ತಾ, ಬೇರೆಯವರಿಗೂ ತೊಂದರೆ ಕೊಡಬಾರದು ಎಂಬ ಉದ್ದೇಶದಿಂದ ನಾಲ್ಕೈದು ಸಿನಿಮಾಗಳನ್ನು ಕೈಬಿಟ್ಟೆ’ ಎಂದರು.

‘ತಾಯಿ ಆದ ನಂತರ ಮತ್ತೇ ಚಿತ್ರರಂಗಕ್ಕೆ ಮರಳುತ್ತಿದ್ದೇನೆ. ಹಾಗಂತ ಇನ್ನು ಮುಂದೆ ಗ್ಲಾಮರಸ್‌ ರೋಲ್‌ ಮಾಡುವುದಿಲ್ಲ, ಆ ಬಟ್ಟೆ ಈ ಬಟ್ಟೆ ಹಾಕುವುದಿಲ್ಲ ಅಂತ ಅಲ್ಲ’ ಎಂದು ‘ತಾಯಿಯಾಗಿಯೂ ಯೋಚಿಸಬೇಕು’ ಎಂಬ ಮಾತಿಗೆ ಅವರು ಸ್ಪಷ್ಟನೆ ನೀಡಿದರು.

ಎಲ್ಲ ಬಗೆಯ ಪಾತ್ರಗಳಲ್ಲೂ ನಟಿಸುವ ಇಚ್ಛೆ ಹೊಂದಿರುವ ಶ್ವೇತಾ ಅವರಿಗೆ ‘ರಹದಾರಿ’ ಸಿನಿಮಾ ಎಲ್ಲ ದೃಷ್ಟಿಕೋನದಿಂದಲೂ ಹೊಸ ಬಗೆಯ ಚಿತ್ರ ಅಂತ ಅನಿಸಿದೆ. ಯಂಗ್‌ ಟೀಂ ಬಗ್ಗೆ ತುಂಬ ನಂಬಿಕೆ ಇಟ್ಟಿರುವ ಶ್ವೇತಾ, ನಿರ್ದೇಶಕ ಗಿರೀಶ್‌ ಚಿತ್ರವನ್ನು ಅದ್ಭುತವಾಗಿ ನಿರೂಪಿಸುತ್ತಾರೆ ಎಂಬ ವಿಶ್ವಾಸದಲ್ಲಿದ್ದಾರೆ.

‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ, ನನಗೆ ಅದೇ ಮಾದರಿಯ ಪಾತ್ರಗಳು ಅರಸಿ ಬಂದವು. ನಾನು ಒಪ್ಪಿಕೊಳ್ಳಲಿಲ್ಲ. ‘ರಹದಾರಿ’ ಸಿನಿಮಾದಲ್ಲಿನ ನನ್ನ ಪಾತ್ರ ತುಂಬ ಎಂಟರ್‌ಟೈನಿಂಗ್‌ ಆಗಿದೆ. ಫೀಮೇಲ್‌ ಪ್ರೋಟ್ಯಾಗನಿಸ್ಟ್‌ ರೋಲ್‌ ಅಂತ ತಕ್ಷಣ ಇದು ಬರೀ ಮಹಿಳೆಯರಿಗೆ ಸಂಬಂಧಿದ ಸಿನಿಮಾ ಅಲ್ಲ. ಎಲ್ಲ ಕಮರ್ಷಿಯಲ್‌ ಅಂಶಗಳೂ ಇರುವ ಈ ಚಿತ್ರದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ಚಿತ್ರದ ನಾಯಕ. ಅದಕ್ಕಾಗಿ ರಹದಾರಿ ತುಂಬ ಇಷ್ಟ ಆಯಿತು’ ಎನ್ನುತ್ತಾರೆ ಶ್ವೇತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT