ಗುರುವಾರ , ಜೂನ್ 17, 2021
24 °C

ಸಿದ್ಧಾರ್ಥ್ ಚತುರ್ವೇದಿ ಜೊತೆ ದೀಪಿಕಾ ಪಡುಕೋಣೆ ಹೊಸ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾನಗರದಲ್ಲಿನ ಹೊಸ ಪೀಳಿಗೆಯ ಒಳತೋಟಿಗಳನ್ನು ಬಿಚ್ಚಿಡುವ ‘ಗಲ್ಲಿ ಬಾಯ್’ ಸಾಕಷ್ಟು ಸದ್ದು ಮಾಡಿತ್ತು. ಜೋಯಾ ಅಖ್ತರ್ ನಿರ್ದೇಶನದ ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್, ಅಲಿಯಾ ಭಟ್ ಜೊತೆ ಗಮನಸೆಳೆದ ಇನ್ನೊಬ್ಬ ಹುಡುಗ ಸಿದ್ಧಾರ್ಥ್ ಚತುರ್ವೇದಿ. ನಟನೆಯ ದೈತ್ಯರಾದ ರಣ್‌ವೀರ್ ಸಿಂಗ್ ಎದುರೂ ತೆರೆಯ ಮೇಲೆ ತನ್ನ ಪಾತ್ರದ ಪ್ರಭೆ ಮಾಸದ ಹಾಗೆ ನಟಿಸಿದ ಈ ಹುಡುಗನ ನಟನಾಪ್ರತಿಭೆಯನ್ನು ಕಂಡವರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ‘ಇವ್ನು ಮುಂದೆ ಬೆಳೀತಾನೆ’ ಎಂದು ಭವಿಷ್ಯವನ್ನು ನುಡಿದವರೂ ಕಮ್ಮಿಯಿಲ್ಲ. ಅವರ ನಂಬಿಕೆ ಹುಸಿಹೋಗಿಲ್ಲ. ಸಿದ್ಧಾರ್ಥ ತಮ್ಮ ವೃತ್ತಿಜೀವನದಲ್ಲಿ ಎರಡನೇ ಮೆಟ್ಟಿಲಿಗೇ ದೊಡ್ಡ ಜಿಗಿತವನ್ನು ಕಂಡಿದ್ದಾರೆ. ಆ ಜಿಗಿತದ ತುದಿಯಲ್ಲಿ ಖ್ಯಾತ ನಟಿ ದೀಪಿಕಾ ಪಡುಕೋಣೆ ಇದ್ದಾರೆ!

ಹೌದು, ಬಾಲಿವುಡ್ ಸುದ್ದಿಮೂಲಗಳ ಪ್ರಕಾರ, ಸಿದ್ಧಾರ್ಥ್ ತಮ್ಮ ಮುಂದಿನ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರ ಜತೆ ತೆರೆಯನ್ನು ಹಂಚಿಕೊಳ್ಳಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಶಕೂನ್ ಬಾತ್ರಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕರಣ್ ಜೋಹರ್ ಅವರ ಧರ್ಮಾ ಪ್ರೊಡಕ್ಷನ್‌ ಅಡಿಯಲ್ಲಿ ನಿರ್ಮಾಣವಾಗಲಿದೆ. ಸಿನಿಮಾದ ಕುರಿತ ಮಿಕ್ಕ ವಿವರಗಳು ಇನ್ನೂ ಗುಟ್ಟಿನ ಮನೆಯಲ್ಲಿಯೇ ಗಟ್ಟಿಯಾಗಿ ಅಡಗಿವೆ. 

 ‘ಗಲ್ಲಿ ಬಾಯ್’ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸಿನ ರುಚಿ ಉಂಡಿರುವ ಸಿದ್ಧಾರ್ಥ್ ಚತುರ್ವೇದಿ, ‘ಇನ್‌ಸೈಡ್ ಎಡ್ಜ್’ ಎಂಬ ವೆಬ್‌ ಸಿರೀಸ್‌ನಲ್ಲೂ ನಟಿಸಿದ್ದಾರೆ. 

ಇದನ್ನೂ ಓದಿ: ದೀಪಿಕಾ ಪಡುಕೋಣೆ ಗರ್ಭಿಣಿ?!

ಇತ್ತ ದೀಪಿಕಾ ಹಿರಿತೆರೆಯ ಮೇಲೆ ಬರದೆ ಹತ್ತಿರ ಹತ್ತಿರ ಎರಡು ವರ್ಷಗಳು ಸಂದುಹೋಗಿವೆ. 2018 ಜನವರಿಯಲ್ಲಿ ಬಿಡುಗಡೆಯಾದ ‘ಪದ್ಮಾವತ್’, ದೀಪಿಕಾ ತೆರೆಯ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾ. ‘ಛಪ್ಪಾಕ್’ ಸಿನಿಮಾ ಮೂಲಕ ಎರಡು ವರ್ಷದ ಅಂತರವನ್ನು ಮುಚ್ಚಿ ಸಹೃದಯರ ಹೃದಯಕ್ಕೆ ಲಗ್ಗೆಯಿಡಲು ಅವರು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಸಿಡ್ ದಾಳಿಗೆ ಒಳಗಾಗಿ ಬದುಕುಳಿದ ಹೆಣ್ಣುಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್ ಜೊತೆಗೆ ಅವರು ನಟಿಸುತ್ತಿರುವ ಚಿತ್ರದಲ್ಲಿ ದೀಪಿಕಾ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ತಣಿಯಲು ಇನ್ನಷ್ಟು ಕಾಲ ಕಾಯಲೇಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು