ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖುಷಿಯಾಗಿರಿ.. ವಯಸ್ಸಾಗಲ್ಲ... ಇದು ಸಿಮ್ರನ್‌ ಸೂತ್ರ!

Last Updated 28 ಜನವರಿ 2019, 20:15 IST
ಅಕ್ಷರ ಗಾತ್ರ

‘ಪೆಟ್ಟಾ’ ಸಿನಿಮಾದ ನಾಯಕಿ ಸಿಮ್ರನ್‌ ಸಖತ್‌ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ತ್ರಿಭಾಷಾ ಚಿತ್ರ‘ರಾಕೆಟ್ರಿ: ದಿ ನಂಬಿ ಎಫೆಕ್ಟ್‌’ನಲ್ಲಿ ಸಿಕ್ಕಿರುವ ಅವಕಾಶ.

2001ರಲ್ಲಿ ಕೆ.ಬಾಲಚಂದರ್‌ ನಿರ್ದೇಶನದ ‘ಪಾರ್ಥಲೆ ಪರವಶಂ’, 2002ರಲ್ಲಿ ಮಣಿರತ್ನಂ ಅವರ ‘ಕಣ್ಣತ್ತಿಲ್‌ ಮುತ್ತಾಮಿತ್ತಲ್‌’ನಲ್ಲಿ ಮಾಧವನ್‌ಗೆ ಜೋಡಿಯಾಗಿ ಅಭಿನಯಿಸಿದ್ದ ಸಿಮ್ರನ್‌, ಸುದೀರ್ಘ ಅಂತರದ ಬಳಿಕ ಅವರೊಂದಿಗೆ ಮತ್ತೆ ತೆರೆ ಹಂಚಿಕೊಳ್ಳಲಿದ್ದಾರೆ.

ಮನೋಜ್ಞ ನಟನೆ, ಪಾತ್ರದ ಒಳಹೊಕ್ಕು ನಟಿಸುವ ಬಗೆ ಮತ್ತು ವೃತ್ತಿಪರತೆ ಸಿಮ್ರನ್‌ ಅವರನ್ನು ಯಶಸ್ವಿ ನಟಿಯಾಗಿಸಿದ ಸೂತ್ರಗಳು. 1997ರಲ್ಲಿ ಡ್ಯಾನ್ಸಿಂಗ್‌ ಸ್ಟಾರ್‌ ಪ್ರಭುದೇವ ನಟನೆಯ ಸೂಪರ್ ಹಿಟ್‌ ಚಿತ್ರ ‘ವಿಐಪಿ’ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದವರು ಈ ಸರಳ ಸುಂದರಿ.

2008ರ ಸೂಪರ್‌ ಹಿಟ್‌ ತಮಿಳು ಚಿತ್ರ ‘ವಾರನಮ್‌ ಆಯಿರಮ್‌’ ನಾಯಕ ನಟ ಸೂರ್ಯ ಅವರಂತೆ ಸಿಮ್ರನ್‌ ಅವರಿಗೂ ತಾರಾ ವರ್ಚಸ್ಸು ಹೆಚ್ಚಿಸಿತು. ತೆಲುಗು ಮತ್ತು ಹಿಂದಿಯಲ್ಲೂ ಈ ಚಿತ್ರ ರೀಮೇಕ್‌ ಆಗಿತ್ತು. ಪ್ರಸಿದ್ಧಿ ಮತ್ತು ಪ್ರಚಾರದ ಉತ್ತುಂಗದಲ್ಲಿರುವಾಗಲೇ ಸಿಮ್ರನ್‌ ಚಿತ್ರರಂಗದಿಂದ ದೂರವಾದುದು ಅಭಿಮಾನಿಗಳಿಗೂ, ನಿರ್ಮಾಪಕ ನಿರ್ದೇಶಕರಿಗೂ ಬೇಸರ ತಂದಿತ್ತು. ಅದುವರೆಗೂ ‘ಕಾಲಿವುಡ್‌ ಕ್ವೀನ್‌’ ಆಗಿ ಮೆರೆದವರು ಸಿಮ್ರನ್‌.

2009ರಿಂದ 2014ವರೆಗೂ ಅವರು ಮರೆಯಾಗಿದ್ದರು. ಬಳಿಕ ಸಿಕ್ಕಿದ ಸಣ್ಣ‍ಪುಟ್ಟ ಅವಕಾಶಗಳಲ್ಲೂ ಬೆಳಗುತ್ತಿದ್ದರು. ‌2014ರಲ್ಲಿ ‘ಆಹಾ ಕಲ್ಯಾಣಂ’ನಲ್ಲಿ ಸಿಮ್ರನ್‌ ಮತ್ತೆ ನಾಯಕನಟಿಯಾಗಿ ಮಿಂಚಿದರು. ಈ ಚಿತ್ರದ ನಟನೆ ಅವಿಸ್ಮರಣೀಯವೆನಿಸುವಷ್ಟು ಪ್ರಭಾವಶಾಲಿಯಾಗಿತ್ತು.

ವಿಕ್ರಮ್‌ ಅವರ ‘ಧ್ರುವ ನಚ್ಚತ್ತಿರಂ’ ಅವರ ಎರಡನೇ ಇನಿಂಗ್ಸ್‌ನ ದೊಡ್ಡ ಸಿನಿಮಾ. ಆದರೆ ಇದಕ್ಕೆ ಹಲವು ವಿಘ್ನಗಳು ಎದುರಾದವು. ಇದೇ ಕಾರಣಕ್ಕೋ, ಚಿತ್ರದ ತಾರಾ ಮೌಲ್ಯಕ್ಕೋ ಏನೋ ಸಿಮ್ರನ್‌ ಪ್ರಕಾರ ರಜನಿಕಾಂತ್ ಜೊತೆಗಿನ ‘ಪೆಟ್ಟಾ’ವನ್ನೇ ತಮ್ಮ ಎರಡನೇ ಇನಿಂಗ್ಸ್‌ನ ಚಿತ್ರ ಎಂದು ಅವರು ಪರಿಗಣಿಸುವುದಂತೆ. ಈ ಎರಡು ಚಿತ್ರಗಳ ಮಧ್ಯೆ ‘ಸೀಮರಾಜ’ ಕೂಡಾ ಬಿಡುಗಡೆಯಾಗಿತ್ತು. ಆದರೆ ಸಿಮ್ರನ್‌ ಮನಸ್ಸು ಗೆದ್ದಿರುವುದು ಸೂಪರ್‌ ಸ್ಟಾರ್‌ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್‌– ರಜನಿಕಾಂತ್‌ ಜೋಡಿಯ ‘ಪೆಟ್ಟಾ’.

ತಿನ್ನು, ನಿದ್ರಿಸು, ಚೆನ್ನಾಗಿ ಬದುಕು...

ಸಿಮ್ರನ್‌ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 22 ವರ್ಷಗಳಾಗಿವೆ. ಈಗ ಅವರಿಗೆ 42. ಅಂದರೆ, ವಿಐಪಿ ಚಿತ್ರದಲ್ಲಿ ನಟಿಸುವಾಗ ಸಿಮ್ರನ್‌ ಇನ್ನೂ 20ರ ಯುವತಿ. ನಟನೆ, ನೃತ್ಯ, ಕಠಿಣ ಪರಿಶ್ರಮ, ಸ್ನೇಹಭಾವದಿಂದ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಿಂದ ಒಂದಾದ ಮೇಲೊಂದು ಅವಕಾಶಗಳು ಹುಡುಕಿಬರುತ್ತಿದ್ದವು.

ಚಿತ್ರರಂಗದಲ್ಲಿ ನಟಿಸುವ ಹಂಬಲವಿದ್ದರೂ ಮಹತ್ವದ ಪಾತ್ರಗಳು ಸಿಗದೇ ಇದ್ದಾಗಲೂ ಸಿಮ್ರನ್‌ ಖಿನ್ನರಾಗಿರಲಿಲ್ಲ. ಯಾಕೆಂದರೆ ಕೌಟುಂಬಿಕ ಬದುಕೂ ವೃತ್ತಿಬದುಕಿನಷ್ಟೇ ಮೌಲಿಕ ಎಂಬುದು ಅವರ ನಂಬಿಕೆ. ಹಾಗಾಗಿ ತಮ್ಮ ಸಾಂಸಾರಿಕ ಬದುಕನ್ನು ಕಟ್ಟಿಕೊಂಡರು.ಬದುಕನ್ನು ಬಂದಂತೆ ಸ್ವೀಕರಿಸುವುದು ಅವರ ಜಾಯಮಾನ. ಅವರ ಮಾತುಗಳಲ್ಲೇ ಹೇಳುವುದಾದರೆ, ‘ಖುಷಿಯಾಗಿರಿ, ವಯಸ್ಸೇ ಗೊತ್ತಾಗುವುದಿಲ್ಲ’.

ಸಿನಿಯಾನಕ್ಕೆ 22 ವರ್ಷಗಳಾಗಿದ್ದರೂ ಇಂದಿಗೂ ಅವರ ಸೌಂದರ್ಯ ಕುಂದಿಲ್ಲ. ವಯಸ್ಸನ್ನು ಮರೆಮಾಚುವಂತಹ ಮೈಮಾಟ ಅವರದು. ಮದುವೆಯಾಗಿ ಮಕ್ಕಳಾದ ಬಳಿಕ ಬೊಜ್ಜು ಬೆಳೆಸಿಕೊಂಡು ಅಮ್ಮ, ಅತ್ತೆ, ಅಜ್ಜಿಯ ಪಾತ್ರಕ್ಕಷ್ಟೇ ಲಾಯಕ್ಕು ಎಂಬಂತಾಗುವ ನಟಿಯರಿಗೆ ಸಿಮ್ರನ್‌ ಸಡ್ಡು ಹೊಡೆದಿದ್ದಾರೆ.

ಅವರು ಚಿತ್ರರಂಗಕ್ಕೆ ಮರಳುವ ನಿರ್ಧಾರ ಮಾಡಿದ್ದು ಎರಡನೇ ಮಗುವಾದ ಬಳಿಕ. ಹಾಗಾಗಿ ನಿರ್ದೇಶಕರ ಮುಂದೆ ನಿಲ್ಲುವುದಕ್ಕೂ ಮೊದಲು ಸಿಮ್ರನ್‌ ಸಾಕಷ್ಟು ತೂಕ ಇಳಿಸಿಕೊಂಡಿದ್ದರು. ಮನೋಬಲವಿದ್ದಲ್ಲಿ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂದು ನಗುತ್ತಾರೆ ಸಿಮ್ರನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT