ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಮಾನ್‌ @ 25

Last Updated 22 ಜುಲೈ 2020, 13:30 IST
ಅಕ್ಷರ ಗಾತ್ರ

ಮುಂಗಾರು ಮಳೆ–2 ಸಿನಿಮಾದಲ್ಲಿ ‘ಸರಿಯಾಗಿ ನೆನಪಿದೆ ನನಗೆ ...’ ಎಂದು ಹಾಡಿದ ಬಾಲಿವುಡ್‌ನ ಖ್ಯಾತ ಯುವ ಹಿನ್ನೆಲೆ ಗಾಯಕ ಅರ್ಮಾನ್‌ ಮಲಿಕ್‌ಗೆ ಇವತ್ತು 25ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ಹಿಂದಿ, ಇಂಗ್ಲಿಷ್‌ ಜತೆಗೆ, ಭಾರತದ ಹಲವು ಪ್ರಾದೇಶಿಕ ಭಾಷೆಗಳ ಸಿನಿಮಾಗಳಿಗೆ ಹಾಡುವ ಮೂಲಕ ಕಿರಿಯ ವಯಸ್ಸಿನಲ್ಲಿ ಬಹುಭಾಷಾ ಗಾಯಕನಾಗಿ ಹೊರಹೊಮ್ಮಿರುವ ಅರ್ಮಾನ್‌ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯದ ಮಳೆ ಸುರಿಸಿದ್ದಾರೆ.

‘ನಿಮ್ಮ ಅಭಿಮಾನದ ಹೊಳೆಗೆ ಪ್ರತಿಕ್ರಿಯಿಸಲು ಸಮಯ ಬೇಕು. ಆದರೆ ನಾನು ನಿಮ್ಮನ್ನೆಲ್ಲ ತುಂಬಾ ಪ್ರೀತಿಸುತ್ತೇನೆ. ಲವ್ ಯು ಆಲ್‌ ಸೋ ಮಚ್‌.. ಬಿಗ್‌ ವಾಲಾ ಹಗ್ಗಿ‘ ಎಂದು ಅರ್ಮಾನ್ ಮಲಿಕ್ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಅರ್ಮಾನ್ ಹೆಸರು ಹೇಳಿದರೆ ಸಾಕು ಕನ್ನಡದ ಯುವ ಸಮೂಹದಲ್ಲಿ ‘ಒಂದು ಮಳೆ ಬಿಲ್ಲು.. ಒಂದು ಮಳೆ ಮೋಡ..’ ಹಾಡಿನ ಗುನಗು ಶುರುವಾಗುತ್ತದೆ. ಅಷ್ಟರಮಟ್ಟಿಗೆ ಕನ್ನಡದ ಸಂಗೀತ ಪ್ರೇಮಿಗಳೊಂದಿಗೆ ನಂಟು ಉಳಿಸಿಕೊಂಡಿದ್ದಾರೆ ಅರ್ಮಾನ್‌.

‘ಮುಂಗಾರು ಮಳೆ‘ ಸಿನಿಮಾದಲ್ಲಿ ಗಾಯಕ ಸೋನು ನಿಗಂ ಹಾಡಿದ ‘ಅನಿಸುತಿದೆ ಯಾಕೋ ಇಂದು‘ ಹಾಡು ಕೇಳಿದ ಅರ್ಮಾನ್‌, ‘ಎಷ್ಟು ಚೆನ್ನಾಗಿದೆ ಈ ಹಾಡು’ ಎಂದು ಅವರ ತಂದೆ ಎದುರು ಹೇಳಿಕೊಂಡಿದ್ದರಂತೆ. ಮುಂದೆ ಹತ್ತು ವರ್ಷಗಳ ನಂತರ ‘ಮುಂಗಾರು ಮಳೆ –2‘ ಸಿನಿಮಾದಲ್ಲಿ ‘ಸರಿಯಾಗಿ ನೆನಪಿದೆ ನನಗೆ.. ಇದಕ್ಕೆಲ್ಲ ಕಾರಣ ಕಿರುನಗೆ..’ ಹಾಡಿಗೆ ಅವರು ಧ್ವನಿಯಾದರು. ಕನ್ನಡ ಸಿನಿಮಾ ಇಂಡಸ್ಟ್ರಿ ಜತೆಗಿನ ಇಂಥ ಪಯಣವನ್ನು ಸಂದರ್ಶನವೊಂದರಲ್ಲಿ ಅರ್ಮಾನ್ ನೆನಪಿಸಿಕೊಂಡಿದ್ದಾರೆ.

ಸುಂದರ ಯುವಕ, ಅಷ್ಟೇ ಚಂದವಾಗಿ ಹಾಡುವ ಅರ್ಮಾನ್‌, ಉರ್ದು, ಗುಜರಾತಿ, ಬಂಗಾಳಿ, ಮಲಯಾಳಂ, ಕನ್ನಡ, ತೆಲುಗು, ತಮಿಳು, ಮರಾಠಿ ಸಿನಿಮಾ ಇಂಡಸ್ಟ್ರಿಯಲ್ಲೂ ಹಿನ್ನೆಲೆ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದಲ್ಲಿ ಹಾಡಿರುವ ಹಲವು ಹಾಡುಗಳು ಸಿಕ್ಕಾಪಟ್ಟೆ ಫೇಮಸ್‌ ಆಗಿವೆ.

ಸಂಗೀತಗಾರರ ಕುಟುಂಬ
ಅಜ್ಜ ಸರ್ದಾರ್ ಮಲ್ಲಿಕ್‌ ಗಾಯಕ. ಅಪ್ಪ ದ.ಬೂ ಮಲಿಕ್‌ ಪ್ರಸಿದ್ಧ ನಿರ್ದೇಶಕ, ತಾಯಿ ಜ್ಯೂತಿ ಮಲಿಕ್‌. ಅಣ್ಣ ಅಮಾಲ್‌ ಮಲಿಕ್ ಕೂಡ ಪ್ರಸಿದ್ಧ ಸಂಗೀತ ನಿರ್ದೇಶಕ ಮತ್ತು ಹಿನ್ನೆಲೆ ಗಾಯಕ. ಇಂಥ ಮೂರು ತಲೆಮಾರಿನ ಸಂಗೀತದ ಕುಟುಂಬದಲ್ಲಿ ಜುಲೈ 22, 1995ರಂದು ಜನಿಸಿದ ಅರ್ಮಾನ್‌ ಮಲಿಕ್‌, ಬಾಲ್ಯದಿಂದಲೇ ಗಾಯನದ ಬಗ್ಗೆ ಆಸಕ್ತಿ ಬೆಳೆಸಿಕೊಂಡವರು. ನಾಲ್ಕನೇ ವರ್ಷದಿಂದಲೇ ಹಾಡಲು ಆರಂಭಿಸಿದರು. ರೀತು ಕೌಲ್ ಮತ್ತು ಖಾದಿರ್ ಮುಸ್ತಾಫ ಅವರಿಂದ ಸಂಗೀತ ಕಲಿತರು. ಬೆರ್ಕೇ ಮ್ಯೂಸಿಕ್‌ ಕಾಲೇಜು ಮೆಚಾಸ್ಯುಚೆಟ್ಸ್‌ನಲ್ಲಿ ಹಾಡುವುದನ್ನು ಕಲಿತರು.

ಬಾಲ್ಯದಿಂದಲೇ ಗಾಯನದ ನಂಟು
ಏಳೆಂಟು ವರ್ಷದಿಂದಲೇ ಹಾಡಲು ಆರಂಭಿಸಿದ್ದ ಅರ್ಮಾನ್, 2006ರಲ್ಲಿ ಸರಿಗಮಪ ಲಿಟ್ಲ್‌ ಚಾಂಪ್ಸ್‌ ಸ್ಪರ್ಧೆ ಫೈನಲ್ಸ್‌ನಲ್ಲಿ 8ನೇ ಸ್ಥಾನ ಪಡೆದರು. ಮುಂದೆ, ಇದೇ ಅರ್ಮಾನ್ ಕೆಲವು ಹಾಡುಗಳ ರಿಯಾಲಿಟಿ ಷೊಗೆ ತೀರ್ಪುಗಾರನಾಗುವ ಹಂತಕ್ಕೆ ಬೆಳೆದರು. ಲಿಟ್ಲ್ ಸ್ಟಾರ್‌ ಅಂತಾಕ್ಷರಿ ಕಾರ್ಯಕ್ರಮದಲ್ಲಿ ಅನು ಮಲಿಕ್‌ ಮತ್ತು ಜೂಹಿ ಪಾರ್ಮರ್ ಅವರೊಂದಿಗೆ ತೀರ್ಪುಗಾರರಾಗಿಯೂ ಪಾಲ್ಗೊಂಡಿದ್ದರು.

ಅರ್ಮಾನ್, 2008ರಲ್ಲಿ ತೆರೆಕಂಡ ಬಿಗ್‌ ಬಿ ಅಮಿತಾಭ್ ಬಚ್ಚನ್ ನಟನೆಯ ‘ಭೂತನಾಥ್’ ಸಿನಿಮಾಗೆ ಹಾಡುವ ಮೂಲಕ ಸಿನಿಮಾ ಗಾಯನ ಕ್ಷೇತ್ರವನ್ನು ಪ್ರವೇಶಿಸಿದರು. 2010ರಲ್ಲಿ ತೆರೆಕಂಡ ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ರಕ್ತ ಚರಿತ‘ ಸಿನಿಮಾದ ಮೂಲಕ ಪ್ರಸಿದ್ಧಿಪಡೆದರು. ಸಲ್ಮಾನ್‍ಖಾನ್ ಅಭಿನಯದ ‘ಜೈ ಹೋ’ ಚಿತ್ರದಿಂದ ಭಾರಿ ಮನ್ನಣೆ ಪಡೆದ ಟೈಟಲ್‍ಟ್ರಾಕ್ ಅರ್ಮಾನ್ ಮಲ್ಲಿಕ್ ಜೀವನಕ್ಕೆ ಹೊಸ ತಿರುವು ನೀಡಿತ್ತು. ನಂತರ ಬೇರೆ ಬೇರೆ ಭಾಷೆಯ ಸಿನಿಮಾಗಳಿಗೆ, ಹಿಂದಿಯ ಹಲವು ಆಲ್ಬಂಗಳಿಗೆ ಹಾಡಿದ್ದಾರೆ.

ಕನ್ನಡದ ‘ಸಿದ್ಧಾರ್ಥ’ ಸಿನಿಮಾಕ್ಕೆ ಹಾಡುವುದರ ಮೂಲಕ 2015ರಲ್ಲಿ ಸ್ಯಾಂಡಲ್‍ವುಡ್‍ಗೆ ಪ್ರವೇಶಿಸಿದರು. ಇಲ್ಲಿವರೆಗೂ ಒಟ್ಟು 9 ಕನ್ನಡ ಚಿತ್ರಗಳಿಗೆ ಹಾಡಿದ್ದಾರೆ. ಆನಂತರ ಮುಂಗಾರು ಮಳೆ –2, ಇತ್ತೀಚೆಗೆ ನಿಖಿಲ್ ನಟನೆಯ ‘ಸೀತಾರಾಮ ಕಲ್ಯಾಣ’ ಸಿನಿಮಾದ ‘ನಿನ್ನ ರಾಜಾ ನಾನು.. ನನ್ನ ರಾಣಿ ನೀನು..’ ಹಾಡು ಹಾಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು ಹಲವು..

ಅರ್ಮಾನ್ ಮೊದಲ ಕಿರಿಯವಯಸ್ಸಿನ ಹಿನ್ನೆಲೆ ಗಾಯಕ ಅಷ್ಟೇ ಅಲ್ಲ, ಕಿರಿಯ ವಯಸ್ಸಿನಲ್ಲೇ ದಾದಾಸಾಹೇಬ್‌ ಫಾಲ್ಕೆ ಮತ್ತು ಆರ್‌.ಡಿ ಬರ್ಮನ್ ಅವಾರ್ಡ್‌ ಪಡೆದ ಯುವ ಗಾಯಕರೂ ಹೌದು. ಇದರ ಜತೆಗೆ ಎರಡು ಬಾರಿ ‘ಗಿಮಾ‘ ಪ್ರಶಸ್ತಿ, ಭಾರತದ ಅಂತರಾಷ್ಟ್ರೀಯ ಚಿತ್ರ ಪ್ರಶಸ್ತಿ ಕಾರ್ಯಕ್ರಮದಲ್ಲಿ ಬೆಸ್ಟ್ಪ್ಲೇ ಬ್ಯಾಕ್ ಸಿಂಗರ್ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ.


(ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT