ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋನಾಲಿ ಬುಕ್ ಕ್ಲಬ್

ಪುಸ್ತಕ ಪ್ರಿಯರ ಮೆಚ್ಚಿನ ತಾಣ
Last Updated 4 ಡಿಸೆಂಬರ್ 2019, 8:53 IST
ಅಕ್ಷರ ಗಾತ್ರ

ಚೆಂದನೆಯ ನಟಿ ಸೋನಾಲಿ ಬೇಂದ್ರೆ . ಆಕೆಯನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡು ಸದ್ದಿಲ್ಲದೇ ಹೊರಡಲು ಹೊಂಚು ಹಾಕಿದ್ದ ಕ್ಯಾನ್ಸರ್ ಕೊನೆಗೂ ಸೋಲುಂಡಿತು.

ಜೀವನೋತ್ಸಾಹ ಮತ್ತು ಆತ್ಮವಿಶ್ವಾಸದ ರೂಪದಲ್ಲಿ ಆಕೆ ಒಡ್ಡಿದ ಸವಾಲಿಗೆ ಸ್ವತಃ ಕ್ಯಾನ್ಸರ್ ತತ್ತರಿಸಿತು. ಕಿಮೋಥೆರಪಿಯಂತಹ ಯಾತನೆಯನ್ನೇ ಸಹಿಸಿಕೊಂಡ ಆಕೆ ಸುಂದರ ಮುಗುಳ್ನಗು ಮೂಲಕ ಎಲ್ಲದಕ್ಕೂ ತಕ್ಕ ಉತ್ತರ ನೀಡಿದರು.

ದೈಹಿಕ ಮತ್ತು ಮಾನಸಿಕವಾಗಿ ಸಾಕಷ್ಟು ನರಳುವಂತೆ ಮಾಡಿದ ಕ್ಯಾನ್ಸರ್‌ನ್ನು ಸೋನಾಲಿ ದೃಢವಾಗಿ ಎದುರಿಸಿದರು. ಆಕೆಯ ಧೈರ್ಯಕ್ಕೆ ಒಂದೆಡೆ ಪತಿ ಗೋಲ್ಡಿ ಬೆಹ್ಲ್ ಮತ್ತು ಪುತ್ರ ರಣವೀರ್ ಸಾಥ್ ನೀಡಿದರೆ, ಮತ್ತೊಂದೆಡೆ ರಾಶಿಗಟ್ಟಲೇ ಪುಸ್ತಕಗಳು ಆಕೆಯಲ್ಲಿ ಮನೋಬಲ ತುಂಬಿದವು. ಕುಟುಂಬದ ಸಹಕಾರದ ಜೊತೆಗೆ ನಿರಂತರ ಓದುವಿಕೆಯು ಆಕೆಯ ಬದುಕಿನಲ್ಲಿ ಪರಿವರ್ತನೆಗೆ ಕಾರಣವಾಯಿತು.

ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಹೆಚ್ಚು ಆಕ್ಟಿವ್ ಇರುವ ಸೋನಾಲಿ ತಮ್ಮ ದೈನಂದಿನ ಪೋಸ್ಟ್‌ಗಳ ಮೂಲಕ ಬರೀ ತಮ್ಮ ಕ್ಯಾನ್ಸರ್ ಚಿಕಿತ್ಸಾ ಪದ್ಧತಿ ಬಗ್ಗೆಯಷ್ಟೇ ಹಂಚಿಕೊಳ್ಳಲಿಲ್ಲ. ಆಸ್ಪತ್ರೆಯಲ್ಲಿ ಕಾಲ ಕಳೆಯಲು ಮತ್ತು ನೋವನ್ನು ಮರೆಯಲು ತಾವು ಓದುತ್ತಿರುವ ಆಸಕ್ತಿದಾಯಕ ಪುಸ್ತಕಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಪುಸ್ತಕದ ಪ್ರತಿ, ಮುಖಪುಟ ಸಮೇತ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, ಆ ಪುಸ್ತಕದ ಲೇಖಕ ಮತ್ತು ಅದರ ವಿಶೇಷತೆಯನ್ನು ವಿವರಿಸಿತೊಡಗಿದರು.

ರೋಗವನ್ನು ಆತ್ಮವಿಶ್ವಾಸದಿಂದ ಮಣಿಸುವ ಸೋನಾಲಿಯ ವಿಧಾನದ ಬಗ್ಗೆ ಪ್ರೇರಿತಗೊಂಡ ಎಷ್ಟೋ ಮಂದಿ ಇದೇ ಮಾರ್ಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳತೊಡಗಿದರು. ನಿಧಾನವಾಗಿ ಆರಂಭಗೊಂಡ ಈ ಪ್ರಕ್ರಿಯೆ ಈಗ ಕೊಂಚ ವೇಗ ಪಡೆದುಕೊಂಡಿದೆ. ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿರಲಿ ಅಥವಾ ಬಿಡುವಿನಲ್ಲಿ ಇರಲಿ, ಸೋನಾಲಿ ತಾವು ಓದಿದ ಪುಸ್ತಕದ ಬಗ್ಗೆ ವಿಷಯ ಹಂಚಿಕೊಳ್ಳಲು ತಡ ಮಾಡುವುದಿಲ್ಲ. ಸಾಕಷ್ಟು ಒತ್ತಡದ ಮಧ್ಯೆಯೂ ಅವರು ಪುಸ್ತಕಗಳೊಂದಿಗೆ ಸಾಂಗತ್ಯ ಮುಂದುವರೆಸಿದ್ದಾರೆ.

ಆಸಕ್ತಿಕರ ಸಂಗತಿಯೆಂದರೆ, ಸೋನಾಲಿ ಅವರು ತಮ್ಮ ಹೆಸರಿನ ಬುಕ್ ಕ್ಲಬ್‌ನ್ನೇ ಹೊಂದಿದ್ದಾರೆ. ಫೇಸ್‌ಬುಕ್‌ನಲ್ಲಿ ಗ್ರೂಪ್ ತೆರೆದಿರುವ ಅವರು ಸ್ವತಃ ಅಡ್ಮಿನ್ ಆಗಿದ್ದಾರೆ. ಕ್ಲಬ್‌ನಲ್ಲಿ 18 ಮಂದಿ ಸದಸ್ಯರಿದ್ದು, ಪ್ರತಿ ದಿನವೂ ಅವರು ಪುಸ್ತಕಗಳ ಬಗ್ಗೆಯೇ ಚರ್ಚಿಸುತ್ತಾರೆ. ಹೊಸದಾಗಿ ಬಿಡುಗಡೆಯಾದ ಪುಸ್ತಕ, ರಸ್ತೆ ಬದಿಯ ಸಿಕ್ಕ ಪುಸ್ತಕ, ಸ್ಫೂತಿದಾಯಕ ಪುಸ್ತಕ ಹೀಗೆ ಹತ್ತು ಹಲವು ಬಗೆಯ ಪುಸ್ತಕಗಳ ಬಗ್ಗೆ ಚರ್ಚೆ, ವಿಮರ್ಶೆ, ಅಭಿಪ್ರಾಯ ಮಂಡನೆ ಎಲ್ಲವೂ ನೆರವೇರುತ್ತದೆ. ಪುಸ್ತಕಗಳ ಬಗ್ಗೆ ಅಲ್ಲಲ್ಲಿ ನಡೆಯುವ ಚರ್ಚಾಗೋಷ್ಠಿಯ ಲೈವ್ ಕೂಡ ಇರುತ್ತದೆ.

2017ರ ಮಾರ್ಚ್‌ 20ರಂದು ಅಸ್ತಿತಕ್ಕೆ ಬಂದ ಈ ಗ್ರೂಪ್‌ಗೆ ಸಾಹಿತ್ಯಾಸಕ್ತಿ ಹೊಂದಿರುವ ಯಾರು ಬೇಕಾದರೂ ಸದಸ್ಯರಾಗಬಹುದು ಮತ್ತು ಅನಿಸಿಕೆ ವ್ಯಕ್ತಪಡಿಸಬಹುದು. ದಿನದಿಂದ ದಿನಕ್ಕೆ ಸದಸ್ಯತ್ವದ ಸಂಖ್ಯೆ ಹೆಚ್ಚುತ್ತಿದ್ದು, ಕಳೆದ 28 ದಿನಗಳ ಅವಧಿಯಲ್ಲಿ 504 ಮಂದಿ ಸದಸ್ಯತ್ವ ಪಡೆದಿದ್ದಾರೆ. ಬಹುತೇಕ ಇಂಗ್ಲಿಷ್ ಪುಸ್ತಕಗಳ ಬಗ್ಗೆಯೇ ಚರ್ಚೆ, ಸಂವಾದ ನಡೆಯುವ ಈ ಗ್ರೂಪ್ ಸಾಹಿತ್ಯದ ಹಲವು ಪ್ರಕಾರದ ಚಿಂತನೆಗೂ ವೇದಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT