ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರೀಶ ಕಾರ್ನಾಡ, ಕಮಲಹಾಸನ್, ರಜನಿ ಪಾತ್ರಗಳಿಗೆ ಡಬ್ಬಿಂಗ್‌ ಮಾಡಿದ್ದ ಎಸ್‌ಪಿಬಿ

ಮೋಹನ್‌ಲಾಲ್‌, ಅರ್ಜುನ್‌ ಸರ್ಜಾ, ಅನಿಲ್‌ ಕಪೂರ್‌, ನಂದಮೂರಿ ಬಾಲಕೃಷ್ಣ ಪಾತ್ರಗಳಿಗೂ ಧ್ವನಿಯಾಗಿದ್ದರು...
Last Updated 25 ಸೆಪ್ಟೆಂಬರ್ 2020, 10:51 IST
ಅಕ್ಷರ ಗಾತ್ರ

ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಗಾಯನದ ಜೊತೆಗೆ ಪರದೆ ಮೇಲೂ ನಟನೆಯ ಚಾಪು ಮೂಡಿಸಿದ್ದು ಎಲ್ಲರಿಗೂ ಗೊತ್ತಿದೆ. ಅಲ್ಲದೇ ಹಲವು ಸ್ಟಾರ್‌ ನಟರಿಗೆ ತೆರೆಯ ಹಿಂದೆಯೂ ಅವರು ಧ್ವನಿಯಾಗಿದ್ದರು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ತಮ್ಮ ಕಂಚಿನ ಕಂಠದ ಮೂಲಕ ನಟರಾದ ಬೆನ್‌ ಕಿಂಗ್‌ಸ್ಲೇ, ಗಿರೀಶ ಕಾರ್ನಾಡ, ಕಮಲಹಾಸನ್, ಮೋಹನ್‌ಲಾಲ್‌, ಅರ್ಜುನ್‌ ಸರ್ಜಾ, ಅನಿಲ್‌ ಕಪೂರ್‌, ರಜನಿಕಾಂತ್‌, ನಂದಮೂರಿ ಬಾಲಕೃಷ್ಣ ಸೇರಿದಂತೆ ಹಲವು ನಟರ ಪಾತ್ರಗಳಿಗೆ ಡಬ್ಬಿಂಗ್‌ ಕೂಡ ಮಾಡಿದ್ದಾರೆ.

ಎಸ್‌ಪಿಬಿ ಮೊದಲಿಗೆ ಡಬ್ಬಿಂಗ್‌ ಮಾಡಿದ್ದು 1981ರಲ್ಲಿ ತೆರೆಕಂಡ ‘ನಲುಗು ಸ್ತಂಭಲತಾ’ ತೆಲುಗು ಚಿತ್ರಕ್ಕೆ. ಇದರಲ್ಲಿ ಅವರು ನರೇಶ್‌ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ್ದರು. 1982ರಲ್ಲಿ ಬಿಡುಗಡೆಯಾದ ‘ಗಾಂಧಿ’ ಚಿತ್ರದ ತೆಲುಗು ಅವತರಣಿಕೆಯಲ್ಲಿ ಬೆನ್‌ ಕಿಂಗ್‌ಸ್ಲೇ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ್ದರು. 1983ರಲ್ಲಿ ಗಿರೀಶ ಕಾರ್ನಾಡ ನಟಿಸಿದ ‘ಆನಂದ ಭೈರವಿ’ ಚಿತ್ರ ತೆಲುಗಿಗೆ ಡಬ್‌ ಆಗಿತ್ತು. ಕಾರ್ನಾಡ ಅವರ ಪಾತ್ರಕ್ಕೆ ಎಸ್‌ಪಿಬಿ ಡಬ್ಬಿಂಗ್‌ ಮಾಡಿದ್ದು ವಿಶೇಷ.

ತಮಿಳಿನಲ್ಲಿ ಅವರು ‘ಸ್ವಾತಿಮುತ್ಯಂ’ ಚಿತ್ರದಲ್ಲಿ ಕಮಲಹಾಸನ್‌ ಪಾತ್ರಕ್ಕೆ ಡಬ್ಬಿಂಗ್‌ ಮಾಡಿದ್ದು ಉಂಟು. 1985ರಲ್ಲಿ ತೆರೆಕಂಡ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ ಹಿಟ್ ಆಗಿತ್ತು.1988ರಲ್ಲಿ ತೆಲುಗಿನಲ್ಲಿ ಬಿಡುಗಡೆಯಾದ ‘ರುದ್ರವೀಣಾ’ ಚಿತ್ರದಲ್ಲಿ ಜೆಮಿನಿ ಗಣೇಶನ್‌ ಪಾತ್ರಕ್ಕೆ ಧ್ವನಿ ನೀಡಿದ್ದರು. 1997ರಲ್ಲಿ ತೆಲುಗಿನಲ್ಲೂ ತೆರೆಕಂಡ ‘ಇಡ್ಡಾರು’ ಚಿತ್ರದಲ್ಲಿ ಮಾಲಿವುಡ್‌ ನಟ ಮೋಹನ್‌ಲಾಲ್‌ ಪಾತ್ರಕ್ಕೆ ಧ್ವನಿಯಾಗಿದ್ದರು.

2004ರಲ್ಲಿ ಅರ್ಜುನ್‌ ಸರ್ಜಾ ನಟನೆಯ ‘ಶ್ರೀಆಂಜನೇಯಂ’ ಚಿತ್ರ ತೆಲುಗಿಗೆ ಡಬ್ ಆಯಿತು. ಇದರಲ್ಲಿ ಸರ್ಜಾ ಪಾತ್ರಕ್ಕೆ ಧ್ವನಿ ನೀಡಿದ್ದು ಎಸ್‌ಪಿಬಿ ಅವರೇ. 2008ರಲ್ಲಿ ತೆರೆಕಂಡ ಬಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರ ‘ಸ್ಲಂ ಡಾಗ್‌ ಮಿಲೇನಿಯರ್‌’ ತಮಿಳಿಗೆ ಡಬ್‌ ಆಯಿತು. ಇದರಲ್ಲಿ ನಟ ಅನಿಲ್‌ ಕಪೂರ್ ಪಾತ್ರಕ್ಕೆ ಅವರು ಡಬ್ಬಿಂಗ್‌ ಮಾಡಿದ್ದರು.

ಅಂದಹಾಗೆ ರಜನಿಕಾಂತ್‌ ಅವರ ಪಾತ್ರಕ್ಕೂ ಎಸ್‌ಪಿಬಿ ಧ್ವನಿಯಾಗಿರುವುದು ವಿಶೇಷ. 2008ರಲ್ಲಿ ತೆಲುಗಿನಲ್ಲಿ ತೆರೆಕಂಡ ‘ಸೂಪರ್‌ ಸ್ಟಾರ್‌’ ರಜನಿಕಾಂತ್‌ ನಟನೆಯ ‘ಕಥಾನಾಯಕುಡು’ ಚಿತ್ರದಲ್ಲಿ ತಲೈವನ ಪಾತ್ರಕ್ಕೆ ಎಸ್‌ಪಿಬಿ ಡಬ್ಬಿಂಗ್‌ ಮಾಡಿದ್ದರು. ಅವರು ಕೊನೆಯದಾಗಿ ಡಬ್ಬಿಂಗ್‌ ಮಾಡಿದ್ದು ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಣ ಪಾತ್ರಕ್ಕೆ. 2012ರಲ್ಲಿ ತೆರೆಕಂಡ ‘ಶ್ರೀರಾಮರಾಜ್ಯಂ’ ತಮಿಳು ಅವತರಣಿಕೆಯಲ್ಲಿ ಬಾಲಕೃಷ್ಣ ಪಾತ್ರಕ್ಕೆ ಧ್ವನಿ ನೀಡಿದ್ದರು.

ಒಟ್ಟು 26 ಸಿನಿಮಾಗಳಿಗೆ ಅವರು ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ. ಆ ಪೈಕಿ ಅವರು ಹೆಚ್ಚಾಗಿ ಕಮಲಹಾಸನ್‌ ಪಾತ್ರಗಳಿಗೆ ಡಬ್ಬಿಂಗ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT