ಭಾನುವಾರ, ಮೇ 29, 2022
20 °C

ಆರ್‌ಆರ್‌ಆರ್‌ ಚಿತ್ರದ ಹೊಸ ನಾಯಕ ಯಾರು ಗೊತ್ತಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದಲ್ಲಿ ನಾಯಕ ಅಂದರೆ ಕಥೆಯ ಹಿಂದಿರುವ ಚಿಂತನೆಗಳು (ಐಡಿಯಾ). ಅದೇ ಇಡೀ ಕಥೆಯ ಜೀವಾಳ. ಹೀಗಾಗಿ ಆರ್‌ಆರ್‌ಆರ್‌ ಸಿನಿಮಾದಲ್ಲಿ ಅದೇ ನಾಯಕ. 

– ಹೀಗೆಂದು ಆರ್‌ಆರ್‌ಆರ್‌ ಚಿತ್ರದ ಹಿಂದಿನ ಸೂತ್ರವನ್ನು ವಿವರಿಸಿದವರು ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ. ಬೆಂಗಳೂರಿನಲ್ಲಿ ಶುಕ್ರವಾರ ಆರ್‌ಆರ್‌ಆರ್‌ ಚಿತ್ರದ ಕನ್ನಡ ಟ್ರೈಲರ್‌ನ್ನು ಮಾಧ್ಯಮಗಳ ಮುಂದೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. 

ಏನಿದ್ದರೂ ಜನವರಿ 7ರವರೆಗೆ ಆರ್‌ಆರ್‌ಆರ್‌ ವೈಭವ ನೋಡಲು ಕಾಯಬೇಕು.

ಇಷ್ಟಕ್ಕೂ ರಾಜಮೌಳಿ ಯಶಸ್ಸಿನ ಗುಟ್ಟು ಏನಂತೀರಾ?

ರಾಜಮೌಳಿ ಅವರೇ ಹೇಳುವಂತೆ, ‘ಯಶಸ್ಸಿನ ಸೂತ್ರ ಏನೋ ಗೊತ್ತಿಲ್ಲ. ಆದರೆ, ಪ್ರತಿ ಚಿತ್ರವೂ ನನ್ನ ಮೊದಲ ಚಿತ್ರ ಎಂದು ಭಾವಿಸುತ್ತೇನೆ ಮತ್ತು ಸರಿಯಾದ ನಟರನ್ನೇ ಆಯ್ಕೆ ಮಾಡುತ್ತೇನೆ. ಪ್ರತಿ ಆ್ಯಕ್ಷನ್‌ ಸನ್ನಿವೇಶ ನನ್ನ ಕಲ್ಪನೆಯಲ್ಲಿ ಮೂಡಿದಾಗ ಅದು ಮೊದಲು ನನಗೇ ವಾಹ್‌ ಅನ್ನುವ ಅನುಭವ ಕೊಡಬೇಕು. ಆ ಬಳಿಕವಷ್ಟೇ ಅತ್ಯನ್ನತಮಟ್ಟದ ಪ್ರಸ್ತುತಿ (ಹೈ ಮೂವ್‌ಮೆಂಟ್‌)ಗೆ ಪ್ರಯತ್ನಿಸುತ್ತೇನೆ’ ಎಂದರು ರಾಜಮೌಳಿ. 

ಆರ್‌ಆರ್‌ಆರ್‌ ನೈಜ ಕಥೆಯೇ?

ಆರ್‌ಆರ್‌ಆರ್‌ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಸ್ಫೂರ್ತಿ ಪಡೆದಿದೆ. ಆ ಚೈತನ್ಯ ಈ ಕಥೆಯಲ್ಲಿದೆ. ಹಾಗೆಂದು ಈ ಕಥೆ ಐತಿಹಾಸಿಕ ಅಲ್ಲ. ಸಂಪೂರ್ಣ ಕಾಲ್ಪನಿಕ ಎಂದು ಚರ್ಚೆಗೆ ತೆರೆಯೆಳೆದರು ರಾಜಮೌಳಿ.

ಆರ್‌ಆರ್‌ಆರ್‌ನಲ್ಲಿ ಪ್ರೇಮ, ರೊಮ್ಯಾನ್ಸ್‌ ಇದೆಯೇ?

‘ನಟ ನಟಿಯರು ಸುಂದರವಾಗಿದ್ದಾರೆ ಎಂದ ಮಾತ್ರಕ್ಕೆ ಪ್ರೇಮ ಸನ್ನಿವೇಶವನ್ನು ತೋರಿಸಲೇಬೇಕೆಂದೇನೂ ಇಲ್ಲ. ನವರಸಗಳಲ್ಲಿ ಒಂದಾದ ನಂತರ ಒಂದನ್ನು ಬರುವಂತೆ ಹೆಣೆದಿದ್ದೇನೆ. ಕಥೆಗೆ ಅಗತ್ಯವೆನಿಸಿದರೆ ಮಾತ್ರ ಪ್ರೇಮ ಸನ್ನಿವೇಶವನ್ನು ಅಳವಡಿಸಬಹುದು’ ಎಂದರು ರಾಜಮೌಳಿ. 

ಕನ್ನಡದಲ್ಲೇಕೆ ಆರ್‌ಆರ್‌ಆರ್‌?

‘ಬಾಹುಬಲಿ ಚಿತ್ರವನ್ನು ನಾವು ಕನ್ನಡ, ಹಿಂದಿ ಮಲಯಾಳಂ ಮತ್ತು ತಮಿಳಿನಲ್ಲಿ ಬಿಡುಗಡೆ ಮಾಡಿದೆವು. ಆಗ ಕನ್ನಡಿಗರು ನಮಗೆ ಶಾಪ ಹಾಕಿದರು. ಕನ್ನಡದಲ್ಲಿ ಈ ಚಿತ್ರವನ್ನು ತರಲು ಹಿಂಜರಿಯುವುದೇಕೆ? ಕನ್ನಡವೆಂದರೆ ತಾತ್ಸಾರವೇಕೆ ಎಂದೆಲ್ಲಾ ಜರೆದಿದ್ದರು. ಆಗ ಇಲ್ಲಿ (ಕನ್ನಡದಲ್ಲಿ) ಡಬ್ಬಿಂಗ್‌ ಮಾಡಬಾರದು ಎಂಬ ನಿಯಮವೂ ಇತ್ತು. ಆ ವಿರೋಧದ ನಡುವೆ ನಾವು ಕನ್ನಡದಲ್ಲಿ ಚಿತ್ರ ಕೊಡಲಾಗಲಿಲ್ಲ. ಈಗ ಕನ್ನಡದಲ್ಲಿ ಈ ಸಿನಿಮಾ ಅನುಭವ ಕೊಡುತ್ತಿದ್ದೇವೆ’ ಎಂದು ರಾಜಮೌಳಿ ವಿವರಿಸಿದರು. 

‘ಡಬ್ಬಿಂಗ್‌ ವೇಳೆ ತುಂಬಾ ಕಾಳಜಿ ವಹಿಸಿದ್ದೇವೆ. ತೆಲುಗಿನವರು ಇಲ್ಲಿ ಕನ್ನಡ ಉಚ್ಚಾರದಲ್ಲಿ ಸ್ವಲ್ಪ ತಪ್ಪು ಮಾಡಿದರೂ ಜನರು ಸಹಿಸಿಕೊಳ್ಳುವುದಿಲ್ಲ. ಹಾಗಾಗಿ ಪ್ರತಿ ಹಂತದಲ್ಲೂ ಎಚ್ಚರ ವಹಿಸಿದ್ದೇವೆ. ಹಾಗಿದ್ದೂ ಸಣ್ಣಪುಟ್ಟ ತಪ್ಪುಗಳು ಗೋಚರಿಸಿದಲ್ಲಿ ಕ್ಷಮಿಸಿ’ ಎಂದರು ಅವರು.

ವಿತರಕ ವೆಂಕಟೇಶ್‌ ಮಾತನಾಡಿ, ‘ಕನ್ನಡದಲ್ಲಿ ಆರ್‌ಆರ್‌ಆರ್‌ ಚಿತ್ರ ಕೊಡಬೇಕು ಎಂದು ಒಂದು ಸೆಕೆಂಡ್‌ನಲ್ಲಿ ಮಾಡಿದ ನಿರ್ಧಾರ. ಕನ್ನಡಿಗರಿಗೆ ಕನ್ನಡದಲ್ಲೇ ಆರ್‌ಆರ್‌ಆರ್‌ನ ಅನುಭವ ಕೊಡಬೇಕು ಎಂಬ ಆಶಯವೇ ಇಲ್ಲಿಯದ್ದು’ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು